Junior Review:'ಜೂನಿಯರ್', ಕ್ರೇಜಿಸ್ಟಾರ್ ಓಕೆ.. ಉಳಿದಿದ್ದೆಲ್ಲಾ ನಾಟ್ ಓಕೆ.. ಯಾಕೆ?
/5
ಈ ವಾರ ಕನ್ನಡ ಚಿತ್ರರಂಗದಲ್ಲಿ ಎರಡು ಸಿನಿಮಾಗಳು ರಿಲೀಸ್ ಆಗಿದೆ. ಯುವ ರಾಜ್‌ಕುಮಾರ್ ನಟನೆಯ 'ಎಕ್ಕ'. ಇನ್ನೊಂದು ಗಾಲಿ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಅಭಿನಯದ ಚೊಚ್ಚಲ ಸಿನಿಮಾ 'ಜೂನಿಯರ್'. ಈ ಎರಡೂ ಸಿನಿಮಾಗಳು ಕನ್ನಡ ಚಿತ್ರರಂಗಕ್ಕೆ ಹೊಸ ಹುರುಷು ನೀಡಬಹುದು ಎಂದು ನಿರೀಕ್ಷೆಯಲ್ಲಿ ಸಿನಿಮಾ ಮಂದಿ ಇದ್ದಾರೆ. ಅದರಲ್ಲೂ ಕಿರೀಟಿ ಚೊಚ್ಚಲ ಸಿನಿಮಾ ಹೇಗಿರುತ್ತೆ? ಅನ್ನೋ ಕುತೂಹಲ ಎಲ್ಲರಲ್ಲೂ ಇದೆ.
'ಜೂನಿಯರ್' ಸಿನಿಮಾದ ಟೀಸರ್, ಟ್ರೈಲರ್, ಹಾಡುಗಳನ್ನು ನೋಡಿದಾಗ ಕಿರೀಟಿ ಸಂಪೂರ್ಣವಾಗಿ ಸಿದ್ಧರಾಗಿಯೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರೋದು ಗೊತ್ತಾಗುತ್ತೆ. ಆದರೆ, ಟೀಸರ್, ಟ್ರೈಲರ್ ಕೇವಲ ಆಕರ್ಷಣೆಯಷ್ಟೇ. ಅಸಲಿ ವಿಷಯ ಹೊರಗೆ ಬೀಳೋದು ಸಿನಿಮಾ ರಿಲೀಸ್ ಆದಾಗಲೇ. 'ಜೂನಿಯರ್' ಇಂತಹದ್ದೇ ಒಂದಿಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡು ಗ್ರ್ಯಾಂಡ್ ರಿಲೀಸ್ ಆಗಿದೆ.

ಕಿರೀಟಿ ಜೊತೆ ಶ್ರೀಲೀಲಾ, ಕ್ರೇಜಿಸ್ಟಾರ್ ರವಿಚಂದ್ರನ್, ಜೆನಿಲಿಯಾ ಸೇರಿದಂತೆ ದೊಡ್ಡ ಸ್ಟಾರ್‌ಕಾಸ್ಟ್ ಇದೆ. ಅದ್ಧೂರಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಆದರೆ, ಇದೆಲ್ಲವೂ ಪ್ರೇಕ್ಷಕರಿಗೆ ಹಿಡಿಸುತ್ತಾ? ಕಿರೀಟಿ ಮೊದಲ ಸಿನಿಮಾದಲ್ಲಿಯೇ ಪ್ರೇಕ್ಷಕರ ಮನಗೆದ್ದರೇ? 'ಜೂನಿಯರ್' ಕಥೆ ಏನು? ಈ ಸಿನಿಮಾದ ಪ್ಲಸ್ ಏನು? ಮೈನಸ್ ಏನು? ತಿಳಿಯುವುದಕ್ಕೆ ಮುಂದೆ ಓದಿ.
'ಜೂನಿಯರ್' ಕಥೆ ಏನು?
ಕೋದಂಡಪಾಣಿ (ರವಿಚಂದ್ರನ್) ಹಾಗೂ ಪತ್ನಿ ಶ್ಯಾಮಲಾ (ಸುಧಾರಾಣಿ) ದಂಪತಿಗೆ ತಡವಾಗಿ ಮಗುವಾಗುತ್ತೆ. ಇದು ಗ್ರಾಮದಲ್ಲಿರು ಜನರ ಟೀಕೆಗಳನ್ನು ಎದುರಿಸಬೇಕಾಗುತ್ತೆ. ಹೀಗಾಗಿ ಆ ಗ್ರಾಮವನ್ನೇ ತೊರೆಯುವ ಪ್ರಯತ್ನಕ್ಕೆ ಮುಂದಾಗುತ್ತಾರೆ. ಆದರೆ, ಸಿನಿಮಾದ ಹೀರೋ ಅಭಿ (ಕಿರೀಟಿ)ಗೆ ಜನ್ಮ ನೀಡುವಾಗಲೇ ಶ್ಯಾಮಲಾ ತೀರಿಕೊಳ್ಳುತ್ತಾರೆ. ಇಲ್ಲಿಂದ ಮಗನನ್ನು ಕೋದಂಡಪಾಣಿ ಒಬ್ಬಂಟಿಯಾಗಿ ಬೆಳೆಸುತ್ತಾನೆ. ಅಮ್ಮ ಇಲ್ಲದೆ ಬೆಳೆದ ಅಭಿ ಎಂಜಿನಿಯರಿಂಗ್ ಕಾಲೇಜ್ ಸೇರಿಕೊಳ್ಳುತ್ತಾನೆ. ಅಲ್ಲಿ ಪ್ರೀತಿ ಹುಟ್ಟುತ್ತೆ. ಬಳಿಕ ಜೆನಿಲಿಯಾ ಕಂಪನಿಗೆ ಸೇರಿಕೊಳ್ಳುತ್ತಾನೆ. ಇಲ್ಲಿಂದ ಕಥೆ ತೆರೆದುಕೊಳ್ಳುತ್ತಾ ಹೋಗುತ್ತೆ. ತನ್ನ ಊರು ವಿಜಯನಗರ ಗ್ರಾಮದಲ್ಲಿ ನಡೆದ ದೊಡ್ಡ ಹಗರಣವನ್ನು ಅಭಿ ಭೇದಿಸುತ್ತಾರೆ. ಆಮೇಲೇ ಏನಾಗುತ್ತೆ? ವಿಜಯನಗರ ಗ್ರಾಮದಲ್ಲಿ ನಡೆದ ಭ್ರಷ್ಟಾಚಾರ ಏನು? ವಿಜಯ, ಸೌಜನ್ಯಾ ಮತ್ತು ಅಭಿ ನಡುವಿನ ಜಗಳ ಏನು? ವಿಜಯ ಮತ್ತು ಅಭಿ ನಡುವಿನ ಸಂಬಂಧ ಏನು? ಇಬ್ಬರನ್ನು ವಿಜಯನಗರ ಏಕೆ ಕಳುಹಿಸಲಾಯಿತು? ಎನ್ನುವುದನ್ನು ಸಿನಿಮಾದಲ್ಲಿ ನೋಡಬೇಕು.

ಇಷ್ಟ ಆಗ್ತಾನಾ 'ಜೂನಿಯರ್'?
ಸಿನಿಮಾ ಕಥೆ, ಚಿತ್ರಕಥೆಯಲ್ಲಿ ಹೊಸತೇನು ಕಾಣುವುದಿಲ್ಲ. ಆದರೆ, ಸಿನಿಮಾ ಮೇಕಿಂಗ್‌ನಲ್ಲಿ ಅದ್ಧೂರಿತನವಂತೂ ಎದ್ದು ಕಾಣುತ್ತೆ. ತೆಲುಗು ಸಿನಿಮಾಗಳನ್ನು ಗಮನದಲ್ಲಿ ಇಟ್ಟುಕೊಂಡು ಸಿನಿಮಾ ಮಾಡಿದಂತೆ ಭಾವವಾಗುತ್ತೆ. ಒಂದು ರೀತಿಯಲ್ಲಿ ಮಹೇಶ್ ಬಾಬು ಶೈಲಿಯ ಸಿನಿಮಾಗಳಲ್ಲಿ ಜೂ.ಎನ್‌ಟಿಆರ್ ನಟಿಸಿದಂತಹ ಅನುಭವ. ಹಾಗಂತ ಅವರ ರೇಂಜ್‌ಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಇನ್ನೂ 'ಜೂನಿಯರ್' ಅಂದರೆ, ಕಿರೀಟಿ ಇಷ್ಟ ಆಗುತ್ತಾರೆ. ಚೊಚ್ಚಲ ಸಿನಿಮಾ ಆಗಿದ್ದರೂ, ಡ್ಯಾನ್ಸ್, ಫೈಟ್‌ನಿಂದಲೇ ಪ್ರೇಕ್ಷಕರ ಮನಗೆದ್ದು ಬಿಡುತ್ತಾರೆ. ನಟನೆ ಅಂತ ಕೇಳಿದರೆ, ಇನ್ನೊಂದಿಷ್ಟು ಸಿನಿಮಾಗಳ ಅನುಭವ ಬೇಕು. ಆದರೂ ಚೊಚ್ಚಲ ಸಿನಿಮಾಗಾಗಿ ಅವರು ಹಾಕಿರುವ ಎಫರ್ಟ್ ಅನ್ನು ಮೆಚ್ಚಲೇ ಬೇಕು.
'ಜೂನಿಯರ್'ನಲ್ಲಿ ಸೀನಿಯರ್ ಅಬ್ಬರ
ಇಡೀ ಸಿನಿಮಾದಲ್ಲಿ ತುಂಬಾನೇ ಕಾಡುವುದು ಕೋದಂಡಪಾಣಿಯ ಪಾತ್ರ. 'ಜೂನಿಯರ್' ಜೊತೆ ಸಿನಿಮಾದ ಉದ್ದಕ್ಕೂ ಸೀನಿಯರ್ ಅಂದರೆ, ಕ್ರೇಜಿಸ್ಟಾರ್ ರವಿಚಂದ್ರನ್ ನಿಲ್ಲುತ್ತಾರೆ. ಅವರ ಪಾತ್ರ ತುಂಬನೇ ಕಾಡುತ್ತೆ. ಭಾವನಾತ್ಮಕ ಸನ್ನಿವೇಶಗಳಲ್ಲಿ ರವಿಚಂದ್ರನ್ ತುಂಬಾನೇ ಇಷ್ಟ ಆಗುತ್ತಾರೆ. ಇವರಿಗೆ ವ್ಯತಿರಿಕ್ತವಾಗಿ ಜೆನಿಲಿಯಾ ಪಾತ್ರವಿದೆ. ಪಾತ್ರ ಸೈಲೆಂಟ್ ಹಾಗೂ ಗಂಭೀರ ಎನಿಸಿದರೂ ಅವರೂ ಇಷ್ಟ ಆಗುತ್ತಾರೆ.
'ಜೂನಿಯರ್' ಪ್ಲಸ್ ಪಾಯಿಂಟ್ ಏನು?
'ಜೂನಿಯರ್' ಸಿನಿಮಾದಲ್ಲಿ ಹಲವು ಧನಾತ್ಮಕ ಅಂಶಗಳು ಇವೆ. ಕಿರೀಟಿಯ ನಟನೆಗಿಂತ ಪ್ರೇಕ್ಷಕರು ಡ್ಯಾನ್ಸ್ ಹಾಗೂ ಆಕ್ಷನ್ ಸೀಕ್ವೆನ್ಸ್ ಅನ್ನು ಎಂಜಾಯ್ ಮಾಡುತ್ತಾರೆ. ಮಾಸ್ ಆಡಿಯನ್ಸ್‌ಗೆ ಈ ಎರಡು ಅಂಶಗಳು ಖುಷಿ ಕೊಡುತ್ತವೆ. ಅದಕ್ಕೆ ತಕ್ಕಂತೆ ದೇವಿಶ್ರೀ ಪ್ರಸಾದ್ ಅವರ ಸಂಗೀತ ಅದ್ಭುತವಾಗಿದೆ. ವೈರಲ್ ವೈಯ್ಯಾರಿ ಸಾಂಗ್ ಜನರಿಗೆ ಹೆಜ್ಜೆ ಹಾಕುವಂತೆ ಪ್ರೇರೇಪಿಸುತ್ತೆ. ಸೆಂಥಿಲ್ ಕುಮಾರ್ ಕ್ಯಾಮರಾ ವರ್ಕ್ ಇಷ್ಟ ಚೆನ್ನಾಗಿದೆ. ರವಿಚಂದ್ರನ್ ನಟನೆ, ಶ್ರೀಲೀಲಾ ಡ್ಯಾನ್ಸ್ ಈ ಸಿನಿಮಾದ ಹೈಲೈಟ್.
'ಜೂನಿಯರ್' ಮೈನಸ್ ಪಾಯಿಂಟ್ ಏನು?
ಕಿರೀಟಿಯ ಚೊಚ್ಚಲ ಸಿನಿಮಾದಲ್ಲಿ ಸಾಕಷ್ಟು ಮೈನಸ್ ಪಾಯಿಂಟ್‌ಗಳು ಇವೆ. ಸಿನಿಮಾದ ಕಥೆಯಲ್ಲಿ ಹೊಸದೇನು ಇಲ್ಲ. ಅದೇ ಕಥೆ.. ಅದೇ ಸ್ಕ್ರೀನ್‌ಪ್ಲೇ. ಯುವ ನಟನನ್ನು ಪರಿಚಯಿಸುವುದಕ್ಕೆ ವಿಭಿನ್ನ ಎನ್ನುವಂತಹ ಕಥೆ ಸಿಕ್ಕಿಲ್ಲ ಎನಿಸುತ್ತೆ. ಕೆಲವು ಕಡೆಗಳಲ್ಲಿ ಸಿನಿಮಾ ದೃಶ್ಯಗಳು ಯಾಕೆ ಬೇಕಿತ್ತು ಎನಿಸುತ್ತವೆ. ಬೇಕಂತಲೇ ಈ ದೃಶ್ಯಗಳನ್ನು ತುರುಕಿದ್ದಾರಾ ಎನ್ನುವ ಭಾವನೆ ಬರುತ್ತೆ. ಆಗಲೇ ಹೇಳಿದ ಹಾಗೆ, ತೆಲುಗಿನ ಮಹೇಶ್ ಬಾಬು, ಜೂ.ಎನ್‌ಟಿಆರ್ ಸಿನಿಮಾಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಸಿನಿಮಾ ಮಾಡಿದಂತೆ ಇದೆ.
ಕೊನೆಯಲ್ಲಿ ಏನು?
'ಜೂನಿಯರ್' ಕಥೆಯಲ್ಲಿ ವಿಭಿನ್ನತೆ ಇಲ್ಲ ಅನ್ನೋದು ಪ್ರಮುಖ. ಅದು ಬಿಟ್ಟರೆ, ದೊಡ್ಡ ಸ್ಟಾರ್‌ಕಾಸ್ಟ್ ಇದೆ. ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಆಗಿದ್ದರಿಂದ ಕಣ್ಣಿಗೆ ಹಬ್ಬ. ಹಾಡುಗಳು ಮಸ್ತ್ ಆಗಿವೆ. ಕಿರೀಟಿ, ಶ್ರೀಲೀಲಾ ಡ್ಯಾನ್ಸ್ ಕಿಕ್ ಕೊಡುತ್ತೆ. ಕಿರೀಟಿ ಫೈಟ್ ಥ್ರಿಲ್ ಕೊಡುತ್ತೆ. ಸ್ಟೋರಿ, ಲಾಜಿಕ್ ಬಿಟ್ಟು ಮಾಸ್ ಮಸಾಲ ಸಿನಿಮಾ ನೋಡ್ಬೇಕು ಅಂತ ಮನಸಾಗಿದ್ದರೆ, 'ಜೂನಿಯರ್' ಸಿನಿಮಾ ನೋಡಬಹುದು.


Click it and Unblock the Notifications











