Kabzaa Review : ಅರ್ಕೇಶ್ವರನ ಕೋಟೆಯಲ್ಲಿದ್ದ ಖದೀಮರೆಲ್ಲ ಖತಂ: ಕಿಚ್ಚ.. ಶಿವಣ್ಣನ ಎಂಟ್ರಿ ಚಿಂದಿ!
ಒಬ್ಬೊಬ್ಬ ನಿರ್ದೇಶಕ ಅಂಡರ್‌ವರ್ಲ್ಡ್ ಕಥೆಯನ್ನು ಒಂದೊಂದು ರೀತಿ ತೆರೆಮೇಲೆ ತಂದಿದ್ದಾರೆ. ಭೂಗತಲೋಕದ ಭಯಂಕರ ಇತಿಹಾಸ ನೋಡಿ ಮೆಚ್ಚಿಕೊಂಡಿದ್ದೂ ಇದೆ. ಸಮಾಜಕ್ಕೆ ಇಂತಹ ಸಿನಿಮಾಗಳ ಅಗತ್ಯವಿದೆಯೇ ಎಂದು ವಾದ ಮಾಡುತ್ತಲೇ ಅಂಡರ್‌ವರ್ಲ್ಡ್ ಚರಿತ್ರೆಯನ್ನು ಕಣ್ತುಂಬಿಕೊಂಡು ಬಂದ ಇತಿಹಾಸವೂ ಇದೆ. ಇದೇ ಭೂಗತಲೋಕದ ಸಿನಿಮಾಗಳು ಭಾರತೀಯ ಚಿತ್ರರಂಗದಲ್ಲಿ ಇತಿಹಾಸವನ್ನು ಸೃಷ್ಟಿಸಿವೆ.
ಸಿನಿಮಾ ಮಂದಿಗೆ ಭೂಗತಲೋಕದಲ್ಲಿ ಸಿಗುವಷ್ಟು ಕಥೆ ಬೇರೆಲ್ಲೂ ಸಿಕ್ಕಿರಲಿಕ್ಕೆ ಸಾಧ್ಯವಿಲ್ಲ. ಹೀಗಾಗಿ ನಿರಂತರವಾಗಿ ಈ ಕಗ್ಗತ್ತಲ ಜಗ್ಗತ್ತಿನಲ್ಲಿ ಹೊಸ ಹೊಸ ಕಥೆಗಳನ್ನು ಹುಡುಕುತ್ತಲೇ ಇರುತ್ತಾರೆ. ಈ ಬಾರಿ ನಿರ್ದೇಶಕ ಆರ್ ಚಂದ್ರು ಕೂಡ ಹಾಗೇ ಮಾಡಿದ್ದಾರೆ. ಒಂದ್ವೇಳೆ ಪ್ಯಾನ್ ಇಂಡಿಯಾ ಸಿನಿಮಾ ಕಲ್ಪನೆ ಇಲ್ಲದೆ ಹೋಗಿದ್ದಿದ್ದರೆ, 'ಕಬ್ಜ' ಬೇರೆ ರೂಪ ಪಡೆದುಕೊಳ್ಳುತ್ತಿತ್ತೋ ಏನೋ?
ಮೃದು ಸ್ವಭಾವ ಅಂದ್ಕೊಂಡು ಸವಾರಿ ಮಾಡೋಕೆ ಹೋದರೆ, ಸೈಲೆಂಟ್ ಆಗಿರೋನು ವೈಲೆಂಟ್ ಆಗುತ್ತಾನೆ. ಅವನು ವೈಲೆಂಟ್ ಆದರೆ, ಭೂಗತಲೋಕದಲ್ಲೊಂದು ಚರಿತ್ರೆ ಸೃಷ್ಟಿಯಾಗುತ್ತೆ. 'ಕಬ್ಜ' ಇದೇ ಎಳೆಯ ಮೇಲೆ ಸೃಷ್ಟಿಯಾದ ಕಥೆ. ಹಾಗಿದ್ದರೆ, ಆರ್ ಚಂದ್ರು ಸೃಷ್ಟಿಸಿದ 'ಕಬ್ಜ' ಕೋಟೆಯ ಚರಿತ್ರೆಯೇನು? ಪ್ಲಸ್ ಏನು? ಮೈನಸ್ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ.
'ಕಬ್ಜ' ಚರಿತ್ರೆಯೇನು?
1945 ಸ್ವಾತಂತ್ರ್ಯ ಪೂರ್ವಕ್ಕೂ ಮುನ್ನ ಅರ್ಕೇಶ್ವರನ ಚರಿತ್ರೆಗೆ ನಾಂದಿ ಹಾಡಲಾಗಿದೆ. ಅರ್ಕೇಶ್ವರನ ತಂದೆ ಸ್ವಾತಂತ್ರ್ಯ ಹೋರಾಟಗಾರ. ಉತ್ತರ ಭಾರತದಲ್ಲಿ ನೆಲೆಸಿದ್ದ ಅರ್ಕೇಶ್ವರನ ತಂದೆ ಬ್ರಿಟಿಷರ ಕತಂತ್ರಕ್ಕೆ ಬಲಿಯಾಗಬೇಕಾಗುತ್ತೆ. ಇಡೀ ಊರೇ ನಾಶವಾಗುತ್ತೆ. ಅಲ್ಲಿಂದ ಅರ್ಕೇಶ್ವರ ಹಾಗೂ ಸಂಕೇಶ್ವರ ಇಬ್ಬರು ಮಕ್ಕಳನ್ನು ಕರೆದುಕೊಂಡು ತಾಯಿ ದಕ್ಷಿಣ ಭಾರತದ ಅಮರಾಪುರದಲ್ಲಿ ಬಂದು ನೆಲೆಸುತ್ತಾರೆ. ಚರಕದಿಂದ ಬಟ್ಟೆ ನೇಯುತ್ತಾ? ಜೀವನ ಸಾಗಿಸುತ್ತಾ ಮಕ್ಕಳನ್ನು ಬೆಳೆಸುತ್ತಾರೆ. ಇಬ್ಬರು ಗಂಡು ಮಕ್ಕಳಲ್ಲಿ ಅರ್ಕೇಶ್ವರ ಚಿಕ್ಕವನು. ಹೀಗಾಗಿ ಅಣ್ಣನೇ ಮನೆ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ಇವರಿಬ್ಬರು ಬೆಳೆದು ನಿಲ್ಲುವಷ್ಟರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದಿರುತ್ತೆ. ಅಮರಾಪುರದಲ್ಲಿ ಡಾನ್ ಖಲೀಲ್ ಆರ್ಭಟ ಜೋರಾಗಿರುತ್ತೆ.
ಭೂಗತಲೋಕಕ್ಕೆ ಅರ್ಕೇಶ್ವರ ಎಂಟ್ರಿ
ಅರ್ಕೇಶ್ವರ ವಾಯುಸೇನೆಯಲ್ಲಿ ತರಬೇತಿ ಪಡೆದು ಪೋಸ್ಟಿಂಗ್ ಹೋಗುವ ಮುನ್ನ ಅಮರಾಪುರಕ್ಕೆ ಮರಳುತ್ತಾನೆ. ಆ ವೇಳೆ ಅಮರಾಪುರದಲ್ಲಿ ರಾಜಮನೆತನ, ರಾಜಕೀಯ ಮುಖಂಡರು ಹಾಗೂ ಭೂಗತಲೋಕದ ಮಧ್ಯೆ ಸಮರ ಶುರುವಾಗಿತ್ತೆ. ಅಂಡರ್‌ವರ್ಲ್ಡ್ ಡಾನ್‌ಗಳು ಒಳಗೊಳಗೆ ಕತ್ತಿ ಮಸೆಯುತ್ತಿರುತ್ತಾರೆ. ಈ ವೇಳೆ ಅಮರಾಪುರದಲ್ಲಿ ನಡೆದ ಒಂದು ಘಟನೆಯಿಂದ ಅಣ್ಣ ಸಂಕೇಶ್ವರನ ಕೊಲೆಯಾಗತ್ತೆ. ಇಲ್ಲಿಂದ ಅರ್ಕೇಶ್ವರನ ಆರ್ಭಟ ಶುರು.
ಭೂಗತಲೋಕದ ಖದೀಮರು ಖತಂ
ಅರ್ಕೇಶ್ವರ ಅಲಿಯಾಸ್ ಅರ್ಕ ಅಂಡರ್‌ವರ್ಲ್ಡ್‌ಗೆ ಎಂಟ್ರಿ ಕೊಡುವವರೆಗೂ ಫಸ್ಟ್ ಹಾಫ್ ಮುಗಿದಿರುತ್ತೆ. ಅಸಲಿಗೆ ಇಂಟರ್‌ವಲ್‌ನಿಂದಲೇ 'ಕಬ್ಜ' ಆರಂಭ. ಅಣ್ಣ ಕೊಲೆ ಮಾಡಿದವರ ನಾಶ ಮಾಡಲು ಹೊರಟ ಅರ್ಕೇಶ್ವರ ಸೆಕೆಂಡ್ ಹಾಫ್‌ನಲ್ಲಿ ಭೂಗತಲೋಕವನ್ನೇ 'ಕಬ್ಜ' ಮಾಡಿತ್ತಾನೆ.ಇಲ್ಲಿಂದ ಮುಂದೆ ಅರ್ಕೇಶ್ವರನ ಏನಾದ? ಅವನ ಭವಿಷ್ಯ ಏನಾಯ್ತು? ಮಕ್ಕಳು, ಪತ್ನಿ ಏನಾದ್ರು? ಅನ್ನೋದು ಸಿನಿಮಾದ ಹೈಲೈಟ್.
ಶ್ರಿಯಾ ಶರಣ್ ಸೂಪರ್
ರೆಟ್ರೋ ಲುಕ್‌ನಲ್ಲಿ ಶ್ರಿಯಾ ಶರಣ್ ಸಹಜ ಸುಂದರಿ ಎನಿಸುತ್ತಾರೆ. ನಮಾಮಿ ನಮಾಮಿ ಹಾಡಿನಲ್ಲಿ ಶ್ರಿಯಾ ಶರಣ್ ಅದ್ಭುತವಾಗಿ ಕಾಣಿಸುತ್ತಾರೆ. ಸಿನಿಮಾದುದ್ದಕ್ಕೂ ಟ್ರೆಡಿಷನಲ್ ಲುಕ್‌ನಲ್ಲಿ ಪ್ರಬುದ್ಧರಾಗಿ ಕಾಣಿಸುತ್ತಾರೆ. ಮಧ್ಯೆದಲ್ಲಿ ಶ್ರಿಯಾ ತಂದೆ ವೀರ ಬಹದ್ದೂರ್ ಪಾತ್ರದಲ್ಲಿ ಮುರಳಿ ಶರ್ಮಾ ವಿರೋಧ.. ವಿಲನ್ ಸ್ವರೂಪ ಎದ್ದು ಕಾಣುತ್ತೆ.
ಕಥೆ ಹೇಳೋದೇ ಕಿಚ್ಚ
ಅಸಲಿಗೆ ಸಿನಿಮಾ ಆರಂಭ ಆಗೋದೇ ಕಿಚ್ಚ ಸುದೀಪ್ ಪಾತ್ರದಿಂದ. ಭಾರ್ಗವ್ ಭಕ್ಷಿ ಇಂಟ್ರುಡಕ್ಷನ್ ಒಬ್ಬರು ಕೊಟ್ಟರೆ, ಅರ್ಕೇಶ್ವರನ ಇಂಟ್ರುಡಕ್ಷನ್ ಕೊಡೋದು ಕಿಚ್ಚ ಸುದೀಪ್. ಪೊಲೀಸ್ ಅಧಿಕಾರಿಯಾಗಿ ಕಿಚ್ಚನ ಎಂಟ್ರಿಗೆ ಸಿಕ್ಕಾಪಟ್ಟೆ ಶಿಳ್ಳೆಗಳು ಬೀಳುತ್ತವೆ. ಸ್ಟೈಲಿಷ್ ಎಂಟ್ರಿ.. ಬೇಸ್ ವಾಯ್ಸ್‌ನಲ್ಲಿ ನಿರೂಪಣೆ ಸೂಪರ್.. ಸಿನಿಮಾದ ಉದ್ದಕ್ಕೂ ಆಗಾಗ ಕಿಚ್ಚ ಧ್ವನಿ ಕೇಳುತ್ತೆ.
ಪ್ಲಸ್ ಏನು?
ಅರ್ಕೇಶ್ವರನ ಪಾತ್ರದಲ್ಲಿ ಉಪೇಂದ್ರ ಶಿಳ್ಳೆ ಗಿಟ್ಟಿಸಿಕೊಳ್ಳುತ್ತಾರೆ. ಇದೇ ಮೊದಲ ಬಾರಿಗೆ ರೆಟ್ರೋ ಲುಕ್‌ನಲ್ಲಿ ಕಂಡಿರೋ ಉಪ್ಪಿ ಅಭಿಮಾನಿಗಳಿಗೆ ಇಷ್ಟ ಆಗುತ್ತಾರೆ. ಆಕ್ಷನ್ ಸೀಕ್ವೆನ್ ಅದ್ಧೂರಿಯಾಗಿದೆ. ಎಜೆ ಶೆಟ್ಟಿ ಸಿನಿಮ್ಯಾಟೋಗ್ರಫಿ ಕಣ್ಣುಗಳಿಗೆ ಖುಷಿ ಕೊಡುತ್ತೆ. ಹಾಡುಗಳು ಮಾಸ್ ಆಗಿವೆ. ಸುನೀಲ್ ಪುರಾಣಿಕ್, ಅನೂಪ್ ರೇವಣ್ಣ ಗಮನ ಸೆಳೆಯುತ್ತಾರೆ. ತಾನ್ಯ ಹೋಪ್ ಸ್ಪೆಷಲ್ ಸಾಂಗ್ ಪ್ರೇಕ್ಷಕರಿಗೆ ರಿಲೀಫ್ ಕೊಡುತ್ತೆ. ಸಿನಿಮಾ ಕ್ಲೈಮ್ಯಾಕ್ಸ್‌ನಲ್ಲಿ ಶಿವಣ್ಣನ ಎಂಟ್ರಿ ಚಿಂದಿ. ಇಡೀ ಸಿನಿಮಾಗೆ ಮಾಸ್ ಸೀನ್ ಇದೇ ಅಂತ ಅನಿಸಿದರೂ ಅಚ್ಚರಿ ಪಡಬೇಕಿಲ್ಲ.
ಮೈನಸ್ ಏನು?
'ಕಬ್ಜ' ಚರಿತ್ರೆ ದೊಡ್ಡದಿದೆ. ಆ ಚರಿತ್ರೆಯನ್ನು ಹೇಳಲು ಚಿತ್ರಕಥೆಗೆ ವೇಗ ಕೊಟ್ಟಿದ್ದಾರೆ. ಇದು ಕೆಲವೊಮ್ಮೆ ಪ್ರೇಕ್ಷಕನಿಗೆ ಕಸಿವಿಸಿ ಎನಿಸಬಹುದು. ಸಾಕಷ್ಟು ಪಾತ್ರಗಳು ಸಿನಿಮಾಗಳಲ್ಲಿ ಬರುವುದರಿಂದ ಪಾತ್ರಗಳು ಕನ್ಫ್ಯೂಸ್ ಆಗುತ್ತವೆ. ಇಲ್ಲಿ ಒಂದೆರಡು ಆಕ್ಷನ್ ಸೀನ್‌ಗಳನ್ನು ಕಡಿಮೆ ಮಾಡಿ, ಕಥೆಯನ್ನು ಹೇಳಬಹುದಿತ್ತು ಅನಿಸುತ್ತೆ. ಹಾಗೇ ಅಲ್ಲಲ್ಲಿ 'ಕೆಜಿಎಫ್','ಮಪ್ತಿ', 'ಅಗ್ನಿಪತ್' ಸಿನಿಮಾ ಸಂಜಯ್ ದತ್ ಪಾತ್ರ ಕಣ್ಮುಂದೆ ಪಾಸಾದಂತೆ ಅನಿಸುತ್ತೆ. ಒಟ್ಟಿನಲ್ಲಿ 'ಕಬ್ಜ' ಆರ್ ಚಂದ್ರು ಕಡೆಯಿಂದ ಉತ್ತಮ ಪ್ರಯತ್ನವೇ.. ಪ್ರೇಕ್ಷಕರ ತಲೆಗೆ 'ಕಬ್ಜ 2' ಹುಳ ಬಿಟ್ಟು ಕಳಿಸೋ ನಿರ್ದೇಶಕರು ಕೊನೆಯಲ್ಲಿ ಗೆದ್ದಿರೋದು ಅವರ ಜಾಣ್ಮೆಗೆ ಸಾಕ್ಷಿ.


Click it and Unblock the Notifications











