Indian- 2 Review: ಭಷ್ಟ್ರಾಚಾರದ ವಿರುದ್ಧ ಮೊನಚು ಕಳೆದುಕೊಂಡ ಸೇನಾಪತಿ ಹೋರಾಟ
ಒಂದೇ ಕಥೆಯನ್ನು 2 ಭಾಗಗಳಾಗಿ ಹೇಳುವ ಟ್ರೆಂಡ್ ಈಗ ಚಾಲ್ತಿಯಲ್ಲಿದೆ. ಈ ಐಡಿಯಾ ವರ್ಕ್‌ಔಟ್ ಆಗುತ್ತಿದ್ದಂತೆ ಹಳೇ ಸೂಪರ್ ಹಿಟ್ ಸಿನಿಮಾ ಕಥೆಗಳನ್ನು ಮುಂದುವರೆಸಿ ಹೊಸ ಕಥೆ ಹೇಳುವ ಪ್ರಯತ್ನಗಳು ಶುರುವಾಗಿದೆ. 90ರ ದಶಕದ ತಮಿಳಿನ ಬ್ಲಾಕ್‌ಬಸ್ಟರ್ ಸಿನಿಮಾ 'ಇಂಡಿಯನ್'. ಬರೋಬ್ಬರಿ 28 ವರ್ಷಗಳ ಬಳಿಕ ಈ ಚಿತ್ರದ ಸೀಕ್ವೆಲ್ ಬಂದಿದೆ.
ಶಂಕರ್ ಹಾಗೂ ಕಮಲ್ ಹಾಸನ್ ಜೋಡಿಯ 'ಇಂಡಿಯನ್' ಸಿನಿಮಾ 1996ರಲ್ಲಿ ದಾಖಲೆ ಬರೆದಿತ್ತು. ಭ್ರಷ್ಟಾಚಾರದ ವಿರುದ್ಧ ಹಿಂಸಾತ್ಮಕ ಮಾರ್ಗದಲ್ಲಿ ತಿರುಗಿ ಬೀಳುವ ಸ್ವಾತಂತ್ರ್ಯ ಹೋರಾಟಗಾರ ಸೇನಾಪತಿ ಕಥೆ ಚಿತ್ರದಲ್ಲಿತ್ತು. ಡಬಲ್ ರೋಲ್‌ನಲ್ಲಿ ಕಮಲ್ ಅಭಿನಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಅವತ್ತಿನ ಕಾಲಕ್ಕೆ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿ ಸಂಚಲನ ಸೃಷ್ಟಿಸಿತ್ತು.

ಹೆಚ್ಚು ಕಮ್ಮಿ 3 ದಶಕಗಳ ಬಳಿಕ 'ಇಂಡಿಯನ್' ಸೀಕ್ವೆಲ್ ತೆರೆಗಪ್ಪಳಿಸಿದೆ. ಇನ್ನು ಭ್ರಷ್ಟಾಚಾರ ಇನ್ನು ನಾಶವಾಗಿಲ್ಲ. ಸೇನಾಪತಿ ಹೋರಾಟ ನಿಂತಿಲ್ಲ. ಇದೀಗ ಮತ್ತೊಂದು ಹಂತದಲ್ಲಿ ಆತನ ಸಮರ ಮುಂದುವರೆದಿದೆ. ಆದರೆ ಸೇನಾಪತಿಯ ಮೊದಲಿನ ಆ ಕೆಚ್ಚು, ಖದರ್ರು, ಆರ್ಭಟ ಹಾಗೆ ಇದ್ಯಾ? ಹೇಗಿದೆ 'ಇಂಡಿಯನ್'-2 ಮುಂದೆ ಓದಿ...
'ಇಂಡಿಯನ್-2' ಕಥೆ
ಸೇನಾಪತಿ (ಕಮಲ್ ಹಾಸನ್) ತನ್ನ ಭ್ರಷ್ಟ ಮಗನನ್ನು ಕೊಂದು ವಿದೇಶಕ್ಕೆ ತೆರಳುವುದರೊಂದಿಗೆ 28 ವರ್ಷಗಳ ಹಿಂದೆ ಮೊದಲ ಭಾಗ ಮುಕ್ತಾಯವಾಗಿತ್ತು. ಅಲ್ಲಿಂದ 'ಇಂಡಿಯನ್-2' ಕಥೆ ಶುರುವಾಗುತ್ತದೆ. ದೇಶದಲ್ಲಿ ಭ್ರಷ್ಟಾಚಾರ ಮತ್ತೆ ತಾಂಡವವಾಡುತ್ತಿರುತ್ತದೆ. ಯೂಟ್ಯೂಬ್ ಚಾನಲ್ ಹೊಂದಿರುವ ಚಿತ್ರಾ ಅರವಿಂದನ್ (ಸಿದ್ಧಾರ್ಥ್) ಸಾಮಾನ್ಯ ಜನರ ಧ್ವನಿಯಾಗಿರುತ್ತಾನೆ. ಭ್ರಷ್ಟ ಅಧಿಕಾರಿಯಿಂದ ಸಂಭವಿಸಿದ ದುರಂತವನ್ನು ಖುದ್ದಾಗಿ ನೋಡಿದ ನಂತರ, ಚಿತ್ರಾ ಇದು ಸೇನಾಪತಿ ವಾಪಸ್ ಬರುವ ಸಮಯ ಎಂದು ನಿರ್ಧರಿಸುತ್ತಾನೆ. ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಶುರು ಮಾಡುತ್ತಾನೆ.
ಅತ್ತ ತೈಪೆಯಲ್ಲಿ ಮಾರ್ಷಲ್ ಆರ್ಟ್ಸ್ ತರಬೇತಿ ಕೇಂದ್ರವನ್ನು ನಡೆಸುತ್ತಿರುವ ಸೇನಾಪತಿ ಭಾರತದಲ್ಲಿ ಹೆಚ್ಚಾದ ಭ್ರಷ್ಟಾಚಾರ ತಡೆಗೆ ಮರಳಿ ಬರ್ತಾನೆ. ಸಿನಿಮಾದ ಆರಂಭ ತುಂಬಾ ಚೆನ್ನಾಗಿದೆ. ಕೆಲವು ದೃಶ್ಯಗಳು ಭಾವನಾತ್ಮಕವಾಗಿ ಕನೆಕ್ಟ್ ಆಗಿದ್ದರೂ ಕಮಲ್ ಹಾಸನ್ ಎಂಟ್ರಿ ಬಳಿಕ ಸಿನಿಮಾ ಡಲ್ ಆಗುತ್ತದೆ.

ಇಂದಿನ ಸಮಾಜದಲ್ಲಿ ಬೇರೂರಿದ ಅನ್ಯಾಯ ಹಾಗೂ ಭ್ರಷ್ಟಾಚಾರದ ವಿರುದ್ಧ ಸೇನಾಪತಿ ಹೇಗೆ ಹೋರಾಡುತ್ತಾನೆ? ಈ ಹೋರಾಟದಲ್ಲಿ ಇಂದಿನ ಯುವಕರನ್ನು ಹೇಗೆ ಭಾಗಿಗಳನ್ನಾಗಿ ಮಾಡುತ್ತಾನೆ? ಸೇನಾಪತಿ ತಾತನ ಆಗಮನವನ್ನು ಇಂದಿನ ಸಮಾಜ ಹೇಗೆ ನೋಡುತ್ತದೆ? ಸಮಾಜದಲ್ಲಿ ನಾಗರಿಕರ ಜವಾಬ್ದಾರಿಗಳನ್ನು ಸೇನಾಪತಿ ಹೇಗೆ ನೆನಪಿಸಿಸುತ್ತಾನೆ? ಲಂಚಕೋರ ಹಾಗೂ ಭ್ರಷ್ಟ ಅಧಿಕಾರಿಗಳನ್ನು ಆತ ಹೇಗೆ ಕೊನೆಗಾಣಿಸುತ್ತಾನೆ? ಎನ್ನುವುದು ಮುಂದಿನ ಕಥೆ.
ಸಿನಿಮಾ ಹೇಗಿದೆ?
ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂದು ಸೇನಾಪತಿ ಅಂದು ಕಾನೂನು ಕೈಗೆ ತೆಗೆದುಕೊಂಡು ಭ್ರಷ್ಟರನ್ನು ಕೊಂದು ಮುಂದೆ ಆ ತಪ್ಪು ಯಾರು ಮಾಡದಂತೆ ಭಯ ಹುಟ್ಟಿಸಿದ್ದ ಕಥೆ ಸೊಗಸಾಗಿತ್ತು. ಬ್ರಿಟೀಷರ ವಿರುದ್ಧ ಹೋರಾಡಿದ್ದ ಸೇನಾಪತಿಯ ಭ್ರಷ್ಟಾಚಾರದ ವಿರುದ್ಧ ಸಮರ ಅಂದಿನ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಆದರೆ ಸೀಕ್ವೆಲ್‌ನಲ್ಲಿ ಆ ಕನೆಕ್ಟಿವಿಟಿ ಮಿಸ್ ಆಗಿದೆ. ಎಂದಿನಂತೆ ನಿರ್ದೇಶಕ ಶಂಕರ್ ಅದ್ಧೂರಿತನ, ಮ್ಯಾಜಿಕ್ ಅಲ್ಲಲ್ಲಿ ಕಾಣುತ್ತದೆ. ಆದರೆ ಎಮೋಷನ್ ಮಾತ್ರ ಕಾಣಿಸಲ್ಲ. ಭ್ರಷ್ಟಾಚಾರ ಅನ್ನೋದು ಈಗ ಸರ್ವೇಸಾಧಾರಣ ಎನ್ನುವಂತಾಗಿದೆ. ಅದನ್ನು ಪರಿಣಾಮಕಾರಿಯಾಗಿ ತೆರೆಗೆ ತಂದು ಪರಿಷ್ಕಾರ ನೀಡುವಲ್ಲಿ ಶಂಕರ್ ಅಂಡ್ ಟೀಂ ವಿಫಲವಾಗಿದೆ.
ಸಿನಿಮಾ ಬಹಳ ಸ್ಲೋ ಎನಿಸುತ್ತದೆ. ಮೊದಲ ಭಾಗಕ್ಕೆ ಹೋಲಿಸಿದರೆ ಸಾಕಷ್ಟು ನ್ಯೂನತೆ ಸಿನಿಮಾದಲ್ಲಿ ಎದ್ದು ಕಾಣುತ್ತದೆ. ಸ್ಕ್ರೀನ್‌ಪ್ಲೇ ಕೆಲವೆಡೆ ವೀಕ್ ಎನಿಸುತ್ತದೆ. ಸೆಕೆಂಡ್ ಹಾಫ್ ಎಮೋಷನಲ್ ಸೀನ್ಸ್ ಕನೆಕ್ಟ್ ಆಗಲ್ಲ. ಇನ್ನು ಮ್ಯೂಸಿಕ್ ಕೂಡ ಚಿತ್ರದ ಹಿನ್ನಡೆಗೆ ಪ್ರಮುಖ ಕಾರಣ ಎನ್ನಬಹುದು. ಈ ಹಿಂದೆ ರಹಮಾನ್ ಮಾಡಿದ್ದ ಮ್ಯಾಜಿಕ್ ರಿಪೀಟ್ ಮಾಡುವಲ್ಲಿ ಅನಿರುದ್ಧ್ ವಿಫಲರಾಗಿದ್ದಾರೆ.
ಕಲಾವಿದರ ಅಭಿನಯ
ನಾಯಕ ನಟ ಕಮಲ್ ಹಾಸನ್ ನಟನೆ ಬಗ್ಗೆ ಮಾತನಾಡುವಂತಿಲ್ಲ. ಆದರೆ ಇಲ್ಲಿ ಅವರ ನಟನೆಗೆ ಪ್ರಾಸ್ಥೆಟಿಕ್ ಮೇಕಪ್ ಸಮಸ್ಯೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಇಂತಹ ಸಾಕಷ್ಟು ಗೆಟಪ್‌ಗಳನ್ನು ಖುದ್ದು ಕಮಲ್ ಹಾಗೂ ವಿಕ್ರಂ, ಅಜಿತ್, ಸೂರ್ಯ ಹಾಕಿಬಿಟ್ಟಿದ್ದಾರೆ. ಸೇನಾಪತಿ ತಾತನ ಕೆಲ ಗೆಟಪ್‌ಗಳು ಬಹಳ ಕೆಟ್ಟದಾಗಿದ್ದು ಟ್ರೋಲ್‌ಗೆ ಆಹಾರವಾಗುವಂತಿದೆ. ಇನ್ನು 106 ವರ್ಷ ವಯಸ್ಸಿನ ಸೇನಾಪತಿಯನ್ನು ಬಹಳ ಸ್ಟ್ರಾಂಗ್ ಎಂದು ತೋರಿಸಲು ಚಿತ್ರತಂಡ ಸಿಕ್ಕಾಪಟ್ಟೆ ಸರ್ಕಸ್ ಮಾಡಿರುವುದು ಗೊತ್ತಾಗುತ್ತದೆ. ಇನ್ನುಳಿದಂತೆ ಸಿದ್ದಾರ್ಥ್ ಅಭಿನಯ ಚೆನ್ನಾಗಿದೆ.
ಕೊನೆ ಮಾತು
'ಇಂಡಿಯನ್-2' ಚಿತ್ರದಲ್ಲಿ ನಿರ್ದೇಶಕ ಶಂಕರ್ ಮಾರ್ಕ್ ಕಾಣಿಸಲ್ಲ. ಪ್ರೀಕ್ವೆಲ್‌ಗೆ ಹೋಲಿಸಿದರೆ ಸೀಕ್ವೆಲ್ ಬಹಳ ಸಪ್ಪೆಯಾಗಿದೆ. ಇರುವುದರಲ್ಲಿ ಕಮಲ್ ಹಾಸನ್ ನಟನೆ ಚೆನ್ನಾಗಿದೆ. ಮುಂದಿನ ವರ್ಷ ಪಾರ್ಟ್-3 ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಅದರ ಟ್ರೈಲರ್ ಸಹ ಚಿತ್ರದ ಕೊನೆಗೆ ಪ್ರದರ್ಶನವಾಗುತ್ತದೆ. ಒಂದು ಚಿತ್ರಕ್ಕಾಗುವ ಕಥೆಯನ್ನು 2 ಭಾಗಗಳಲ್ಲಿ ಎಳೆಯಲು ಪ್ರಯತ್ನಿಸಿರುವುದು ಕಾಣುತ್ತದೆ. ನೀವು ಭಾರೀ ನಿರೀಕ್ಷೆಯೊಂದಿಗೆ 'ಇಂಡಿಯನ್-2' ನೋಡಲು ಚಿತ್ರಮಂದಿರಕ್ಕೆ ಹೋದರೆ ನಿರಾಸೆ ಕಟ್ಟಿಟ್ಟಬುತ್ತಿ.


Click it and Unblock the Notifications











