'ಒಂದು ಮುತ್ತಿನ ಕಥೆ'; ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಸಿನಿಮಾ ಯಾಕೆ?
ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಸಿನಿಮಾಗಳ ಸಾಲಿನಲ್ಲಿ 'ಒಂದು ಮುತ್ತಿನ ಕಥೆ' ಅಗ್ರಸ್ಥಾನದಲ್ಲಿ ನಿಲ್ಲುತ್ತೆ. ಡಾ.ರಾಜ್‌ಕುಮಾರ್ ಹಾಗೂ ಕರಾಟೆ ಕಿಂಗ್ ಶಂಕರ್‌ನಾಗ್ ಅವರ ಕಾಂಬಿನೇಷನ್‌ನಲ್ಲಿ ಬಂದ ಏಕೈಕ ಸಿನಿಮಾವಿದು. ಅಣ್ಣಾವ್ರ ನಟನೆ, ಆಟೋ ರಾಜನ ನಿರ್ದೇಶನ, ಇದಕ್ಕಿಂತ ಇನ್ನೊಂದು ಬೆಸ್ಟ್ ಕಾಂಬಿನೇಷನ್ ಸಿನಿಮಾ ಪ್ರೇಮಿಗಳಿಗೆ ಸಿಗೋದಕ್ಕೆ ಸಾಧ್ಯವೇ ಇಲ್ಲ.
1987ರಲ್ಲಿ ತೆರೆಕಂಡಿದ್ದ 'ಒಂದು ಮುತ್ತಿನ ಕಥೆ' 1947ರಲ್ಲಿ ಜಾನ್ ಸ್ಟೈನ್‌ಬೆಕ್ ಬರೆದ ಜಗತ್ಪ್ರಸಿದ್ಧ ಕಾದಂಬರಿ 'ದಿ ಪರ್ಲ್' ಆಧರಿಸಿ ಮಾಡಲಾಗಿತ್ತು. ಇದು ಕನ್ನಡದ ಮೊದಲ ಅಂಡರ್ ವಾಟರ್ ಫೈಟ್ ಸೀನ್‌ಗಳನ್ನು ಶೂಟ್ ಮಾಡಿದ ಸಿನಿಮಾ. ಹಾಗಂತ ಇದೊಂದು ಕಾರಣಕ್ಕೆ ಎವರ್‌ಗ್ರೀನ್ ಸಿನಿಮಾ ಆಗಿಲ್ಲ. ತಾಂತ್ರಿಕವಾಗಿ ಸಿನಿಮಾ ಕಥೆಯನ್ನು ತೆರೆಮೇಲೆ ತಂದಿದ್ದು ಇಡೀ ದೇಶದ ಗಮನ ಸೆಳೆದಿತ್ತು.

'ಒಂದು ಮುತ್ತಿನ ಕಥೆ' ಕನ್ನಡ ಚಿತ್ರರಂಗಲ್ಲಿ ಹೊಸ ಕ್ರಾಂತಿಯನ್ನೇ ಮಾಡಿತ್ತು. ಟೆಕ್ನಿಕಲಿ ಸಿನಿಮಾವನ್ನು ತೆಗೆಯಬೇಕು ಅಂತ ಹೊಸ ಟ್ರೆಂಡ್ ಅನ್ನು ಸೃಷ್ಟಿಸಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಕಾರಣವಾಯ್ತು. ಇಷ್ಟೆಲ್ಲ ಇದ್ದರೂ, ಅಂದು ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಲಿಲ್ಲ. ರಾಜ್‌ಕುಮಾರ್ ಹಾಗೂ ಶಂಕರ್‌ನಾಗ್ ಜೋಡಿಯ ಏಕೈಕ ಸಿನಿಮಾ ಸೋಲುಂಡಿತ್ತು. ಆದರೆ, ಇಂದು ಈ ಸಿನಿಮಾ ಅದೆಷ್ಟೋ ಫಿಲ್ಮ್ ಮೇಕರ್‌ಗಳ ಫೇವರಿಟ್.
'ಒಂದು ಮುತ್ತಿನ ಕಥೆ' ರೂವಾರಿಗಳು
ಸಿನಿಮಾ: ಒಂದು ಮುತ್ತಿನ ಕಥೆ (1987)
ಪ್ರಮುಖ ಪಾತ್ರಗಳು: ಡಾ. ರಾಜ್‌ಕುಮಾರ್, ಅರ್ಚನಾ
ನಿರ್ದೇಶನ: ಶಂಕರನಾಗ್
ಸಂಗೀತ: ಎಲ್. ವೈದ್ಯನಾಥನ್
ಛಾಯಾಗ್ರಹಣ: ಬಿ. ಸಿ. ಗೌರಿಶಂಕರ್
ಒಂದು ಮುತ್ತಿನ 'ಕಥೆ'
ಇದೊಂದು ಬಡ ಮೀನುಗಾರ ಹಾಗೂ ಮುತ್ತು ಹುಡುಕುವವನ ಕಥೆ. ಕರಾವಳಿ ಭಾಗದಲ್ಲಿ ನಡೆಯುವ ಕಥೆಯ ಪ್ರಮುಖ ಪಾತ್ರಧಾರಿ ಐತೂ (ಡಾ.ರಾಜ್‌ಕುಮಾರ್). ಐತೂವಿನ ಪತ್ನಿ ಕಾಕಿ (ಅರ್ಚನಾ) ಇವರಿಬ್ಬರು ಸುತ್ತುವ ಕಥೆಯಿದು. ಕಡು ಬಡತನದಲ್ಲಿ ಬೇಸತ್ತು ಹೋಗಿದ್ದ ಐತೂಗೆ ಒಂದು ದಿನ ಸಮುದ್ರದ ಆಳದಲ್ಲಿ ಅಮೂಲ್ಯವಾದ ಮುತ್ತು ಸಿಗುತ್ತೆ. ಅದು ತನ್ನ ಬದುಕನ್ನು ಬದಲಿಸಿಬಹುದು ಎಂಬ ಆಸೆ ಮೂಡುತ್ತೆ. ಆದರೆ, ಆತ ನಂಬಿದ ಸ್ನೇಹಿತರೇ ಅವನಿಗೆ ಹೇಗೆ ಮೋಸ ಮಾಡುತ್ತಾರೆ? ಸಮಾಜದ ಜನರು, ಬಂಡವಾಳಶಾಹಿಗು ಹೇಗೆ ಐತೂವಿನ ವಿರುದ್ಧ ಸಂಚು ರೂಪಿಸುತ್ತಾರೆ. ಒಂದು ಮುತ್ತು ಐತೂವಿನ ಬದಕಿನಲ್ಲಿ ಏನೆಲ್ಲ ದುರಂತವನ್ನು ತಂದೊಡ್ಡುತ್ತೆ ಅನ್ನೋದೇ 'ಒಂದು ಮುತ್ತಿನ ಕಥೆ'.
ಮುತ್ತಿನಂಥ ಅಭಿನಯ
ಡಾ.ರಾಜ್‌ಕುಮಾರ್ ಎಲ್ಲಾ ತರಹದ ಪಾತ್ರಗಳಲ್ಲಿಯೂ ನಟಿಸಿದ್ದಾರೆ. ಆಡು ಮುಟ್ಟ ಸೊಪ್ಪಿಲ್ಲ, ಅಣ್ಣಾವ್ರ ನಟಿಸದ ಪಾತ್ರವೇ ಇಲ್ಲ ಅಂತ ಅಭಿಮಾನಿಗಳು ಹೇಳುತ್ತಲೇ ಇರುತ್ತಾರೆ. ಇಂತಹ ವಿಶಿಷ್ಟ ಪಾತ್ರಗಳಲ್ಲಿ 'ಒಂದು ಮುತ್ತಿನ ಕಥೆ' ಕೂಡ ಒಂದು. ಅಣ್ಣಾವ್ರು ತನ್ನ ಸ್ಟಾರ್‌ಡಮ್ ಅನ್ನು ಪಕ್ಕಕ್ಕೆ ಇಟ್ಟು ಶಂಕರ್‌ನಾಗ್ ಅಣತಿಯಂತೆ ನಟಿಸಿದ್ದರು. ಐತೂ ಎಂಬ ಕಡು ಬಡವ ಮುತ್ತುಗಳನ್ನು ಹೆಕ್ಕುವ ಪಾತ್ರದಲ್ಲಿ ಗಮನ ಸೆಳೆದಿದ್ದರು. ಐತೂವಿನಲ್ಲಿ ಅಣ್ಣಾವ್ರ ಮುಗ್ಧತೆ, ಶಂಕರ್‌ನಾಗ್ ಅವರ ಬುದ್ದಿವಂತಿಕೆ ಸೇರಿಕೊಂಡಿದ್ದನ್ನು ಕಾಣಬಹುದು. ಕಾಕಿ ಪಾತ್ರದಲ್ಲಿ ಅರ್ಚನಾ ಅವರ ನಟನೆಯಲ್ಲಿ ನೈಜತೆ ಕಾಣುತ್ತೆ. ಇನ್ನು ಖಳನಾಯಕರಾಗಿ ಮುಖಮಂತ್ರಿ ಚಂದ್ರು, ತೂಗುದೀಪ ಶ್ರೀನಿವಾಸ್, ದೊಡ್ಡಣ್ಣ ಮತ್ತು ರಮೇಶ್ ಭಟ್ ಈ ಸಿನಿಮಾದ ಜೀವಾಳ ಎನಿಸಿಕೊಳ್ಳುತ್ತಾರೆ.

ಮುತ್ತಿನ ನಿರ್ದೇಶನ
ಶಂಕರ್‌ನಾಗ್ ರೆಗ್ಯೂಲರ್ ಕಮರ್ಷಿಯಲ್ ಸಿನಿಮಾ ಮಾಡಲಿಲ್ಲ. ಅಣ್ಣಾವ್ರಿಗಾಗಿ ಪ್ರಯೋಗಾತ್ಮಕ ಸಿನಿಮಾವನ್ನು ಮಾಡುವುದಕ್ಕೆ ಮುಂದಾಗಿದ್ದರು. ಕನ್ನಡ ಚಿತ್ರರಂಗದಲ್ಲೇ ಒಂದಿಷ್ಟು ಹೊಸತು ಎನಿಸುವ ಪ್ರಯೋಗ ನಡೀತು. ಆ ಕಾಲಕ್ಕೆ ಭಾರತೀಯ ಚಿತ್ರರಂಗದಲ್ಲೇ ಮೊದಲ ಬಾರಿಗೆ ಸಮುದ್ರದಾಳದಲ್ಲಿ ದೃಶ್ಯಗಳನ್ನು ಚಿತ್ರೀಕರಿಲಾಯ್ತು. ಕರಾವಳಿಯ ಸೌಂದರ್ಯವನ್ನು ಸುಂದರವಾಗಿ ಸೆರೆ ಹಿಡಿಯಲಾಗಿತ್ತು. ನೀಲಿ ಪ್ರಪಂಚವನ್ನು ತೆರೆ ಮೇಲೆ ಸುಂದರವಾಗಿ ಕಟ್ಟಿಕೊಟ್ಟಿದ್ದರು.
ತಾಂತ್ರಿಕತೆ
ಸಿನಿಮಾದಲ್ಲಿ ಬರುವ ಸುಂದರ ತಾಣಗಳನ್ನು ಛಾಯಾಗ್ರಾಹಕ ಬಿ.ಸಿ ಗೌರಿ ಶಂಕರ್ ಸುಂದರವಾಗಿ ಕಟ್ಟಿಕೊಟ್ಟಿದ್ದರು. ಇನ್ನು ಎಲ್. ವೈದ್ಯನಾಥನ್ ಅವರ ಸಂಗೀತ ಸಿನಿಮಾದ ಮತ್ತೊಂದು ಹೈಲೈಟ್. ಇದಕ್ಕೆ ಚಿ. ಉದಯಶಂಕರ್ ಅವರ ಸಾಹಿತ್ಯ ಸಾಥ್ ಕೊಟ್ಟಿತ್ತು. "ಮುತ್ತೊಂದ ತಂದೆ..." ಮತ್ತು "ಮಲ್ಲಿಗೆ ಹೂವಿನಂತೆ..." ಎಂಬ ಹಾಡುಗಳು ಜನಪ್ರಿಯವಾಗಿದ್ದವು.
ಪ್ಲಸ್ ಏನು?
ಪ್ರಯೋಗ: ರೆಗ್ಯೂಲರ್ ಸಿನಿಮಾಗಳಿಗೆ ಒಗ್ಗಿಕೊಳ್ಳದೆ, ಕಥೆ ಹಾಗೂ ಮೇಕಿಂಗ್ ಹೆಚ್ಚು ಪಾಮುಖ್ಯತೆಯನ್ನು ನೀಡಲಾಗಿತ್ತು. ರಾಜ್‌ಕುಮಾರ್ ಅಂತಹ ಮೇರು ನಟನನ್ನು ಇಟ್ಟುಕೊಂಡು ಶಂಕರ್ ನಾಗ್ ತೋರಿದ ಧೈರ್ಯ ಮೆಚ್ಚಲೇಬೇಕು.
ರಾಜ್‌ಕುಮಾರ್ ನಿರ್ಧಾರ: ಚಿತ್ರರಂಗದಲ್ಲಿ ಮೇರು ನಟನಾಗಿ ಮೆರೆಯುತ್ತಿದ್ದ ಕಾಲದಲ್ಲಿ ಕಮರ್ಷಿಯಲ್ ಫೈಟ್ಸ್, ಬಿರುಸಿನ ಡೈಲಾಗ್‌ಗಳಿಗೆ ಬ್ರೇಕ್ ಕೊಟ್ಟು ಕಂಟೆಂಟ್ ಅನ್ನು ಮೆಚ್ಚಿಕೊಂಡು ನಟಿಸಿದ್ದರು.
ತಾಂತ್ರಿಕ ಶ್ರೀಮಂತಿಕೆ: 80ರ ದಶಕದ ಕೊನೆಯಲ್ಲಿದ್ದ ತಂತ್ರಜ್ಞಾನದ ಮಿತಿಯಲ್ಲೇ ಹಾಲಿವುಡ್ ಮಟ್ಟದ ಅಂಡರ್‌ವಾಟರ್ ಶೂಟಿಂಗ್ ಮಾಡಿದ್ದು, ಸಮುದ್ರದ ತೀರಗಳನ್ನು ಅದ್ಭುತವಾಗಿ ತೆರೆಮೇಲೆ ತಂದಿದ್ದು ಮೆಚ್ಚುವಂತಹದ್ದು.
ಮೈನಸ್ ಏನು?
ಇಮೇಜ್ Vs ಕಥೆ: ಡಾ.ರಾಜ್‌ಕುಮಾರ್ ಅಂದರೆ, ಆಕ್ಷನ್, ಡೈಲಾಗ್, ಹೀರೋಯಿಸಂ ಅನ್ನು ಅಭಿಮಾನಿಗಳು ನಿರೀಕ್ಷೆ ಮಾಡಿದ್ದರು. ಆದರೆ, ಇದರಲ್ಲಿ ಅದೆಲ್ಲವನ್ನೂ ಮೀರಿ ಸಿನಿಮಾ ಮಾಡಲಾಗಿತ್ತು.
ಅಂತ್ಯ: ಈ ಸಿನಿಮಾದ ದುರಂತದ ಅಂತ್ಯ, ತೀರ ಗಂಭೀರವಾದ ನಿರೂಪಣೆ ಅಂದಿನ ಸಾಮಾನ್ಯ ಪ್ರೇಕ್ಷಕರಿಗೆ ಸ್ವಲ್ಪ ಮಟ್ಟಿಗೆ ಮೂಡಿಸಿತ್ತು.
ಸೋತಿದ್ದು ಏಕೆ?
ಡಾ.ರಾಜ್‌ಕುಮಾರ್, ಶಂಕರ್‌ನಾಗ್ ಅಂತಹ ದಿಗ್ಗಜರು ಒಟ್ಟಿಗೆ ಸೇರಿಕೊಂಡಿದ್ದರೂ 'ಒಂದು ಮುತ್ತಿನ ಕಥೆ' ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷೆ ಮಾಡಿದಷ್ಟು ಯಶಸ್ಸು ಕಾಣಲಿಲ್ಲ. ರಾಜ್‌ಕುಮಾರ್ ಇಮೇಜ್, ಸಿನಿಮಾದ ಶೈಲಿ ವೈರುಧ್ಯ ದಿಕ್ಕಿನಲ್ಲಿ ಇದ್ದಿದ್ದ ಇದಕ್ಕೆ ಕಾರಣವಿದ್ದಿರಬಹುದು. ಈ ಸಿನಿಮಾದ ಸೋಲಿನ ಬಗ್ಗೆ ಶಂಕರ್ ನಾಗ್ ಒಂದು ಸಂದರ್ಶನದಲ್ಲಿ "ನಾನು ರಾಜ್‌ಕುಮಾರ್ ಅವರ ಇಮೇಜ್ ಬ್ರೇಕ್ ಮಾಡಲು ಯಶಸ್ವಿಯಾಗಲಿಲ್ಲ. ಆದರೆ, ಅಂತಹದ್ದೊಂದು ಪ್ರಯತ್ನ ಮಾಡಿದ್ದಕ್ಕೆ ತೃಪ್ತಿಯಿದೆ" ಎಂದು ಹೇಳಿದ್ದಾಗಿ ವರದಿಗಳಾಗಿವೆ. ಆದರೆ, ಅಂದು ಸೋತ ಸಿನಿಮಾ ಇಂದು 'ಕ್ಲಾಸಿಕ್' ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.


Click it and Unblock the Notifications
