Thandel Review:ನಾಗಚೈತನ್ಯ- ಸಾಯಿ ಪಲ್ಲವಿ ಗೆದ್ದರೇ..? ಹೇಗಿದೆ 'ತಾಂಡೇಲ್'?
2021ರ 'ಲವ್ ಸ್ಟೋರಿ' ಬಳಿಕ ನಾಗ ಚೈತನ್ಯ, ಸಾಯಿ ಪಲ್ಲವಿ ಮತ್ತೆ ಜೊತೆಯಾಗಿ ನಟಿಸಿದ್ದಾರೆ. ಅದುವೇ ತಾಂಡೇಲ್ (Thandel). ಇಂದು (ಫೆಬ್ರವರಿ 7) ಈ ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಿದೆ. ನಾಗ ಚೈತನ್ಯ ಹಾಗೂ ಸಾಯಿ ಪಲ್ಲವಿ ಜೊತೆಯಾಗಿ ನಟಿಸಿದ ಸಿನಿಮಾ ಪ್ರೇಕ್ಷಕರು ಮನಗೆದ್ದಿದೆ. ಈಗ ಅದೇ ನಂಬಿಕೆ ಮೇಲೆ 'ತಾಂಡೇಲ್' ಸಿನಿಮಾ ನೋಡುವುದಕ್ಕೆ ಥಿಯೇಟರ್‌ಗೆ ಪ್ರೇಕ್ಷಕರು ಲಗ್ಗೆ ಇಡುತ್ತಿದ್ದಾರೆ.
'ತಾಂಡೇಲ್' ಮೀನುಗಾರ ಕುಟುಂಬಗಳಿಗೆ ಸೇರಿದ ಕಥೆ. ಈ ಸಿನಿಮಾಗೆ ಚಂದು ಮೊಂಡೇಟಿ ಆಕ್ಷನ್ ಕಟ್ ಹೇಳಿದ್ದಾರೆ. ತೆಲುಗು ಪ್ರೇಕ್ಷಕರಿಗೆ ನೈಜ ಘಟನೆಯನ್ನು ಆಧರಿಸಿದ ಎಮೋಷನಲ್ ಲವ್ ಸ್ಟೋರಿ ಕೊಡುವುದಕ್ಕೆ ಮುಂದಾಗಿದ್ದರು. ಹಾಗಿದ್ದರೆ 'ತಾಂಡೇಲ್' ಸಿನಿಮಾ ಪ್ರೇಕ್ಷಕರನ್ನು ಭಾವನೆಗಳ ಅಲೆಯಲ್ಲಿ ತೇಲಿಸುವುದರಲ್ಲಿ ಯಶಸ್ವಿ ಆಯ್ತಾ? ನಾಗ ಚೈತನ್ಯ, ಸಾಯಿ ಪಲ್ಲವಿ ಪರ್ಫಾಮೆನ್ಸ್ ಹೇಗಿದೆ? ಈ ಸಿನಿಮಾದ ಪ್ಲಸ್ ಏನು? ಮೈನಸ್ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

'ತಾಂಡೇಲ್' ಕಥೆಯೇನು?
ತಾಂಡೇಲ್ ರಾಜು ಉರ್ಫ್ ರಾಜು (ನಾಗ ಚೈತನ್ಯ) ಹಾಗೂ ಸತ್ಯಾ (ಸಾಯಿ ಪಲ್ಲವಿ) ಇಬ್ಬರೂ ಮೀನುಗಾರರ ಕುಟುಂಬಕ್ಕೆ ಸೇರಿದವರು. ಬಾಲ್ಯದಿಂದಲೂ ಇವರಿಬ್ಬರೂ ಒಬ್ಬರನ್ನೊಬ್ಬರು ಬಿಡಲಾರದಷ್ಟು ಪ್ರೀತಿ ಮಾಡುತ್ತಿದ್ದಾರೆ. ಮೀನುಗಾರನಾಗಿದ್ದರಿಂದ ವರ್ಷದಲ್ಲಿ ಕೆಲವು ತಿಂಗಳು ತನ್ನ ತಂಡದೊಂದಿಗೆ ಮೀನು ಹಿಡಿಯುವುದಕ್ಕೆ ಹೊರಡುತ್ತಾನೆ. ಆಗ ಚಂಡಮಾರುತಕ್ಕೆ ಸಿಲುಕಿ ಅವರ ಬೋಟ್ ಭಾರತದ ಗಡಿ ದಾಡಿ ಪಾಕಿಸ್ತಾನ ಪ್ರವೇಶ ಮಾಡುತ್ತೆ. ಪಾಕಿಸ್ತಾನದಲ್ಲಿ ರಾಜು ಸೇರಿ 22 ಮಂದಿ ಮೀನುಗಾರರನ್ನು ಸೆರೆ ಹಿಡಿಯುತ್ತಾರೆ. ಇಲ್ಲಿಂದ ಮುಂದೇನಾಗುತ್ತೆ ಅನ್ನೋದೇ ಕಥೆ.
ರಾಜು-ಸತ್ಯ ಪ್ರೀತಿ ಫಲಿಸುತ್ತಾ?
ರಾಜು ಮತ್ತು ಸತ್ಯಾ ಒಬ್ಬರಿಗೊಬ್ಬರು ಪ್ರಾಣಕ್ಕಿಂತಲೂ ಹೆಚ್ಚು ಪ್ರೀತಿಸುತ್ತಾರೆ. ಆದರೆ, ರಾಜು ಪಾಕಿಸ್ತಾನದಲ್ಲಿ ಸೆರೆಯಾದ ಬಳಿಕ ಪ್ರಾಣಕ್ಕಿಂತಲೂ ಹೆಚ್ಚು ಪ್ರೀತಿಸಿದ್ದವನ್ನು ತಿರಸ್ಕರಿಸಿ ಬೇರೊಬ್ಬನನ್ನು ಮದುವೆ ಆಗಲು ಸಿದ್ಧಳಾಗುತ್ತಾಳೆ. ಇವರಿಬ್ಬರ ಲವ್ ಸ್ಟೋರಿಯಲ್ಲಿ ಏನು ನಡೀತು? ಪಾಕಿಸ್ತಾನದ ಜೈಲಿನಿಂದ ರಾಜುನನ್ನು ಬಿಡಿಸಿಕೊಂಡು ಬರಲು ಸತ್ಯಾ ಏನು ಮಾಡುತ್ತಾಳೆ? ರಾಜು ಪಾಕಿಸ್ತಾನದ ಜೈಲಿನಿಂದ ಹೊರ ಬರುತ್ತಾನಾ? ಸತ್ಯಾಳನ್ನು ಮದುವೆ ಆಗುತ್ತಾನಾ? ಇಲ್ವಾ? ಅನ್ನೋದನ್ನು ಸಿನಿಮಾದಲ್ಲಿಯೇ ನೋಡಬೇಕು.

ಹೇಗಿದೆ ಪರ್ಫಾಮೆನ್ಸ್ ?
ಉತ್ತರಾಂಧ್ರದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ಚಂದು ಮೊಂಡೇಟಿ 'ತಾಂಡೇಲ್' ಸಿನಿಮಾ ಮಾಡಿದ್ದಾರೆ. ಈ ಸಿನಿಮಾದಲ್ಲಿ ನಾಗ ಚೈತನ್ಯ ನಟನೆ ಮೆಚ್ಚುವಂತಹದ್ದು. ಪ್ರೇಕ್ಷಕರಿಗೂ ಈ ಸಿನಿಮಾ ತುಂಬಾನೇ ಇಷ್ಟ ಆಗುತ್ತೆ. ಮೀನುಗಾರನಾಗಿ ಗಮನ ಸೆಳೆಯುತ್ತಾರೆ. ಸತ್ಯಾ ಪಾತ್ರದಲ್ಲಿ ಸಾಯಿ ಪಲ್ಲವಿ ನಟನೆ ಚೆನ್ನಾಗಿದೆ. ಇವರಿಬ್ಬರ ಲವ್ ಸ್ಟೋರಿ ಮತ್ತೆ ಪ್ರೇಕ್ಷಕರಿಗೆ ಇಷ್ಟ ಆಗಬಹುದು. ಇವರ ಜೊತೆ ನಟಿಸಿದ ಸಪೋರ್ಟಿಂಗ್ ಪಾತ್ರಗಳಿಗೂ ಇನ್ನಷ್ಟು ಪ್ರಾಮುಖ್ಯತೆ ನೀಡಬೇಕಿತ್ತು.
ಸಿನಿಮಾದ ಪ್ಲಸ್ ಏನು?
ನಾಗಚೈತನ್ಯ ಹಾಗೂ ಸಾಯಿ ಪಲ್ಲವಿ ಅಭಿನಯ ಸಿನಿಮಾ ಪ್ರೇಮಿಗಳನ್ನು ಕಾಡುತ್ತೆ. ಸಿನಿಮಾದಲ್ಲಿ ಎದ್ದು ಕಾಣಬಹುದಾದ ಕೆಲವು ನ್ಯೂನ್ಯತೆಯನ್ನು ಸಾಯಿ ಪಲ್ಲವಿ ಪಾತ್ರ ಮರೆ ಮಾಚುವ ಪ್ರಯತ್ನವನ್ನು ಮಾಡಿದೆ. ಪ್ರೀ ಕ್ಲೈಮ್ಯಾಕ್ಸ್ ದೃಶ್ಯಗಳು ಪ್ರೇಕ್ಷಕರಿಗೆ ಥ್ರಿಲ್ ಕೊಡುತ್ತವೆ. ಇದನ್ನು ಬಿಟ್ಟರೆ, ದೇವಿಶ್ರೀ ಪ್ರಸಾದ್ ಅವರ ಸಂಗೀತ ತುಂಬಾನೇ ಇಷ್ಟ ಆಗುತ್ತೆ. ಹಾಗೇ ಸಿನಿಮಾದ ಛಾಯಾಗ್ರಹಣ ಕೂಡ ಪ್ರೇಕ್ಷಕರ ಮನ ಸೆಳೆಯುತ್ತೆ.
ಸಿನಿಮಾ ಮೈನಸ್ ಏನು?
ಸಿನಿಮಾ ಚಿತ್ರಕಥೆಯಲ್ಲಿ ಹಿಡಿತವಿಲ್ಲ. ಕೆಲವೊಮ್ಮೆ ಪ್ರೇಕ್ಷಕರ ತಾಳ್ಮೆ ಪರೀಕ್ಷೆ ಮಾಡುತ್ತಿದೆ ಅಂತ ಅನಿಸುತ್ತೆ. ಸ್ಕ್ರೀನ್‌ನಲ್ಲಿ ಭಾವನೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿಲ್ಲ ಅಂತ ಒಮ್ಮೆ ಅನಿಸಿದರೆ, ಇನ್ನೊಮ್ಮೆ ನಾಟಕೀಯತೆ ಎದ್ದು ಕಾಣುತ್ತೆ. ಅದರಲ್ಲೂ ಪಾಕಿಸ್ತಾನದಲ್ಲಿ ರಾಜು ಸೆರೆ ಹಿಡಿದ ಬಳಿಕ ಕೆಲವು ದೃಶ್ಯಗಳು ಮಜಾ ಕೊಡುವುದಿಲ್ಲ. ಪ್ರೀ ಕ್ಲೈಮ್ಯಾಕ್ಸ್ ದೃಶ್ಯಗಳು ಬರುವವರೆಗೂ ಕಾಡುವಂತಹ ದೃಶ್ಯಗಳು ಇಲ್ಲ.
ಕ್ಲೈಮ್ಯಾಕ್ಸ್
ಸಿನಿಮಾದ ಕ್ಲೈಮ್ಯಾಕ್ಸ್ ಪ್ರೇಕ್ಷಕರನ್ನು ಕಾಡಬಹುದು. ಇನ್ನು ಸಿನಿಮಾದ ಕೆಲವು ಅಂಶಗಳನ್ನು ಬದಿಗಿಟ್ಟು ಸಿನಿಮಾ ನೋಡಬಹುದು. ಒಂದ್ಮೇಳೆ ಲವ್ ಸ್ಟೋರಿಗಳನ್ನು ಇಷ್ಟ ಪಡುವವರೇ ಆಗಿದ್ದರೆ 'ತಾಂಡೇಲ್' ಇಷ್ಟ ಆಗಬಹುದು. ಒಮ್ಮೆ ಸಿನಿಮಾ ನೋಡಿ ಬರಲಿ ಅಡ್ಡಿಯಿಲ್ಲ.


Click it and Unblock the Notifications











