Akhanda 2 First Review: ಧರ್ಮ-ಅಧರ್ಮ.. ಭಾರತ-ಪಾಕ್ ಯುದ್ಧ; 'ಅಖಂಡ'ದಲ್ಲಿ ಬಾಲಯ್ಯ ಫುಲ್ ವೈಲೆಂಟ್
'ಗಾಡ್ ಆಫ್ ಮಾಸ್' ಅಂತ ಅಭಿಮಾನಿಗಳು ಪ್ರೀತಿಯಿಂದಲೇ ಕರೆಯುವ ನಂದಮೂರಿ ಬಾಲಕೃಷ್ಣ ಅಖಾಡಕ್ಕೆ ಇಳಿಯುವುದಕ್ಕೆ ರೆಡಿಯಾಗಿದ್ದಾರೆ. ಮತ್ತೊಂದು ಮಾಸ್ ಸಿನಿಮಾ 'ಅಖಂಡ 2' ಜೊತೆ ಥಿಯೇಟರ್‌ನಲ್ಲಿ ಧೂಳೆಬ್ಬಿಸುವುದಕ್ಕೆ ಸಜ್ಜಾಗಿದ್ದಾರೆ. 'ಅಖಂಡ' ಸಿನಿಮಾ ಬ್ಲಾಕ್ ಬಸ್ಟರ್ ಆಗುತ್ತಿದ್ದಂತೆ ಸೆನ್ಸೇಷನಲ್ ಡೈರೆಕ್ಟರ್ ಬೋಯಪಾಟಿ ಶ್ರೀನು ಜೊತೆ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು.
ಈಗ 'ಅಖಂಡ 2' ಸಿನಿಮಾ ತೆರೆಗೆ ಬರುವುದಕ್ಕೆ ಸಜ್ಜಾಗಿದೆ. ಇನ್ನೇನು ಕೇವಲ 6 ದಿನಗಳು ಬಾಕಿ ಉಳಿದಿವೆ ಅಷ್ಟೇ. ಇದು ಬ್ಲಾಕ್‌ಬಸ್ಟರ್ ಸಿನಿಮಾ 'ಅಖಂಡ'ದ ಮುಂದುವರಿದ ಭಾಗವಾಗಿದೆ. ಹೀಗಾಗಿ ಈ ಸಿನಿಮಾವನ್ನು ರಾಮ್ ಆಚಂಟಾ ಮತ್ತು ಗೋಪಿಚಂದ್ ಆಚಂಟಾ 14 ರೀಲ್ಸ್ ಪ್ಲಸ್ ಬ್ಯಾನರ್‌ನಲ್ಲಿ ನಿರ್ಮಿಸಿದ್ದಾರೆ. ವಿಶೇಷ ಅಂದರೆ, ನಂದಮೂರಿ ಬಾಲಕೃಷ್ಣ ಪುತ್ರಿ ತೇಜಸ್ವಿನಿ ಈ ಸಿನಿಮಾವನ್ನು ಪ್ರೆಸೆಂಟ್ ಮಾಡುತ್ತಿದ್ದಾರೆ.

ನಂದಮೂರಿ ಬಾಲಕೃಷ್ಣ ನಾಯಕನಾಗಿ ನಟಿಸುತ್ತಿದ್ದರೆ, ಇವರೊಂದಿಗೆ ಸಂಯುಕ್ತಾ ಮೆನನ್, ಆದಿ ಪಿನ್ನಿಶೆಟ್ಟಿ ಮತ್ತು ಹರ್ಷಾಲಿ ಮಲ್ಹೋತ್ರಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 'ಅಖಂಡ 2' ಬಿಗ್ ಬಜೆಟ್ ಹಾಗೂ ದೃಶ್ಯ ವೈಭವದಿಂದ ಕೂಡಿದ ಸಿನಿಮಾ ಎನ್ನಲಾಗಿದೆ. ಅಲ್ಲದೆ ಆಕ್ಷನ್ ಸೀಕ್ವೆನ್ಸ್ ಕೂಡ ಅಷ್ಟೇ ರಿಚ್ ಆಗಿದೆ ಅನ್ನೋದು ಮಾತುಗಳು ಕೂಡ ಕೇಳಿ ಬರುತ್ತಿವೆ. ಇದೇ ವೇಳೆ 'ಅಖಂಡ 2' ಬಗ್ಗೆ ಮೊದಲ ವಿಮರ್ಶೆ ಕೂಡ ಹೊರ ಬಿದ್ದಿದೆ. ಅದರಲ್ಲಿ ಸಿನಿಮಾ ಬಗ್ಗೆ ಮಾಹಿತಿ ಏನಿದೆ ಅಂತ ನೋಡುವುದಾರೇ.
'ಅಖಂಡ 2' ಸಿನಿಮಾ ಪ್ರೇಕ್ಷಕರಿಗೆ ಮಸ್ತ್ ಮನರಂಜನೆ ನೀಡಲಿದೆ ಎನ್ನಲಾಗಿದೆ. ನೋಡುಗರ ಕಣ್ಣುಗಳಿಗೆ ಈ ಸಿನಿಮಾ ಹಬ್ಬ ಅನ್ನೋ ಅಭಿಪ್ರಾಯ ವ್ಯಕ್ತವಾಗುತ್ತಿದೆ. 'ಅಖಂಡ' ಯಶಸ್ಸಿನ ಬಳಿಕ ಸಿಕ್ಕಾಪಟ್ಟೆ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದು, ಪ್ರಾದೇಶಿಕ ಸೆನ್ಸಾರ್ ಮಂಡಳಿಯ ಅಧಿಕಾರಿಗಳು ಈ ಸಿನಿಮಾವನ್ನು ನೋಡಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ವಿಷಯವನ್ನು ಟಾಲಿವುಡ್ ಮಾಧ್ಯಮಗಳು ಹಂಚಿಕೊಂಡಿವೆ.
ಸೆನ್ಸಾರ್ ಬೋರ್ಡ್‌ನ ಅಧಿಕಾರಿಗಳು 'ಅಖಂಡ 2' ಸಿನಿಮಾವನ್ನು ವೀಕ್ಷಣೆ ಮಾಡಿ ಕೆಲವು ಸಲಹೆ ಹಾಗೂ ಸೂಚನೆಗಳನ್ನು ನೀಡಿದ್ದಾರೆ. ಕೆಲವು ಸೀನ್‌ಗಳಿಗೆ ಕತ್ತರಿ ಹಾಕುವಂತೆ ಸೂಚನೆ ನೋಡಿದ್ದು, ತೀರಾ ಹಿಂಸೆ ನೀಡುವ ಕೆಲವ ದೃಶ್ಯಗಳನ್ನು ತೆಗೆದು ಹಾಕುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ಕೆಲವು ಸಂಭಾಷಣೆಗಳ ಮೇಲೂ ಆಕ್ಷೇಪ ವ್ಯಕ್ತಪಡಿಸಿದ್ದು, ನಿರ್ದೇಶಕರು ಅದನ್ನಲ್ಲೆ ತೆಗೆದು ಸಿನಿಮಾವನ್ನು ರೆಡಿ ಮಾಡಿಟ್ಟುಕೊಂಡಿದ್ದಾರೆ. ಸದ್ಯ ಈ ಸಿನಿಮಾಗೆ U/A ಸರ್ಟಿಫಿಕೇಟ್ ಸಿಕ್ಕಿದೆ.

ಇನ್ನು 'ಅಖಂಡ 2' ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ. ಆ ರೀತಿಯಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ ಎಂದು ಟೀಮ್ ಹೇಳಿಕೊಂಡಿದೆ. ಈ ಸಿನಿಮಾದ ಕಥೆ ಸನಾತನ ಧರ್ಮದ ಹಿನ್ನೆಲೆಯಲ್ಲಿ ಆರಂಭ ಆಗುತ್ತೆ. ವಿಶ್ವ ಪ್ರಸಿದ್ಧ ಕುಂಭಮೇಳದಂತಹ ಅಂಶಗಳನ್ನು ಇಲ್ಲಿ ಸೇರಿಸಲಾಗಿದೆ. ಹಾಗೇ ಶಿವನ ತತ್ವವನ್ನು ಈ ಸಿನಿಮಾ ಪ್ರತಿಬಿಂಬಿಸಲಿದೆ. ನಂದಮೂರಿ ಬಾಲಕೃಷ್ಣ ಈ ಸಿನಿಮಾದಲ್ಲಿ ಅಘೋರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
'ಅಖಂಡ 2' ಧರ್ಮ-ಅಧರ್ಮದ ನಡುವಿನ ಯುದ್ಧ, ಭಾರತ-ಪಾಕ್ ಯುದ್ಧದ ಹಿನ್ನೆಲೆಯಲ್ಲಿ ನಡೆಯುವ ಕಥೆ. ಈ ಎರಡು ಅಂಶಗಳನ್ನು ಸಿನಿಮಾದಲ್ಲಿ ಎಫೆಕ್ಟಿವ್ ಆಗಿ ತೋರಿಸಲಾಗಿದ್ದು, ಈ ಕಾರಣಕ್ಕೆ ಸಿನಿಮಾದ ಅವಧಿಯನ್ನು ವಿಸ್ತರಿಸಿದ್ದಾರೆ. ಸದ್ಯ 'ಅಖಂಡ 2' ಸಿನಿಮಾ ಸುಮಾರು 2 ಗಂಟೆ 45 ನಿಮಿಷಗಳು (165 ನಿಮಿಷಗಳು) ಇದೆ. ಹೀಗಾಗಿ ಸಿನಿಮಾ ಸ್ವಲ್ಪ ಉದ್ದವಿದೆ ಎಂದು ಎನಿಸಬಹುದು. ಅದೇ ಒಂದು ವೇಳೆ ಕಥೆಯಲ್ಲಿ ಧಮ್ ಇಲ್ಲದೇ ಇದ್ದರೆ ಮಾತ್ರ ಪ್ರೇಕ್ಷಕನಿಗೆ ಕಿರಿಕಿರಿ ಅನಿಸಬಹುದು.


Click it and Unblock the Notifications











