Ustaad Bhagat Singh First Review: ಪವನ್ ಕಲ್ಯಾಣ್ ಸಿನಿಮಾದ ಫಸ್ಟ್ ರಿವ್ಯೂ ಹೇಗಿದೆ?
ತೆಲುಗಿನ ಪವರ್‌ಸ್ಟಾರ್ ಪವನ್ ಕಲ್ಯಾಣ್ ಮತ್ತೊಂದು ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ತೆಲುಗಿನ ಬಹು ನಿರೀಕ್ಷಿತ ಸಿನಿಮಾ ಇದೇ ಮಾರ್ಚ್ 19ರಂದು ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಅದುವೇ 'ಉಸ್ತಾದ್ ಭಗತ್ ಸಿಂಗ್'. ಹರೀಶ್ ಶಂಕರ್ ನಿರ್ದೇಶನ ಮಾಡಿರುವ ಈ ಸಿನಿಮಾ ಯುಗಾದಿ ಹಬ್ಬದ ಪ್ರಯುಕ್ತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ.
ಮೈತ್ರಿ ಮೂವಿ ಮೇಕರ್ಸ್‌ನ ನವೀನ್ ಯೆರ್ನೇನಿ ಹಾಗೂ ವೈ. ರವಿಶಂಕರ್ ನಿರ್ಮಾಣ ಮಾಡಿರುವ ಈ ಸಿನಿಮಾ ತೆಲುಗು ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ. 'ಟಾಕ್ಸಿಕ್' ರಿಲೀಸ್ ಆದ ಒಂದು ವಾರದ ಬಳಿಕ ರಿಲೀಸ್ ಆಗಬೇಕಿತ್ತು. ಆದರೆ, ಯಶ್ ಸಿನಿಮಾ ಪೋಸ್ಟ್‌ಪೋನ್ ಆಗುತ್ತಿದ್ದಂತೆ ಅದೇ ಡೇಟ್‌ಗೆ ಪವನ್ ಕಲ್ಯಾಣ್ ಸಿನಿಮಾ ಬಿಡುಗಡೆಯಾಗುತ್ತಿದೆ. ಹೀಗಾಗಿ ಹಬ್ಬದಲ್ಲಿ ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಭರ್ಜರಿ ಮೀಲ್ಸ್ ಸಿಗೋದು ಗ್ಯಾರಂಟಿ.

ಪವರ್‌ಸ್ಟಾರ್ ಪವನ್ ಕಲ್ಯಾಣ್ ಜೊತೆ ಶ್ರೀಲೀಲಾ, ರಾಶಿ ಖನ್ನಾ, ಗೌತಮಿ, ಚಮ್ಮಕ್ ಚಂದ್ರ, ಅಶುತೋಶ್ ರಾಣಾ, ನವಾಬ್ ಷಾ, ನರ್ರಾ ಶ್ರೀನು, ನಾಗ ಮಹೇಶ್, ರೆಡಿನ್ ಕಿಂಗ್ಸ್ ಲೇ ಹಾಗೂ ಟೆಂಪರ್ ವಂಶಿ ಸೇರಿದಂತೆ ಜನಪ್ರಿಯ ಕಲಾವಿದರು ನಟಿಸಿದ್ದಾರೆ. ತೆಲುಗು ಚಿತ್ರರಂಗದ ರಾಕ್‌ಸ್ಟಾರ್ ದೇವಿ ಶ್ರೀ ಪ್ರಸಾದ್ ಟ್ಯೂನ್ ಹಾಕಿದ್ದಾರೆ. ಎಸ್. ಥಮನ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಈ ಸಿನಿಮಾ ಬಗ್ಗೆ ಬಿಡುಗಡೆಗೆ ಇನ್ನು ಕೆಲವು ದಿನಗಳು ಬಾಕಿ ಇರುವಾಗಲೇ ಫಸ್ಟ್ ರಿವ್ಯೂ ಹೊರಬಿದ್ದಿದೆ.
ಟಾಲಿವುಡ್‌ನ ದುಬಾರಿ ಬಜೆಟ್ ಸಿನಿಮಾವನ್ನು ಸೆನ್ಸಾರ್ ಬೋರ್ಡ್ (CBFC) ಅಧಿಕಾರಿಗಳು ವೀಕ್ಷಣೆ ಮಾಡಿದ್ದಾರೆ. 'ಉಸ್ತಾದ್ ಭಗತ್ ಸಿಂಗ್' ಅನ್ನು ವೀಕ್ಷಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಈ ಸಿನಿಮಾಗೆ ಸೆನ್ಸಾರ್ ಅಧಿಕಾರಿಗಳು ಕೊಟ್ಟಿ ಸರ್ಟಿಫಿಕೇಟ್, ಸೆನ್ಸಾರ್ ಮಂಡಳಿಯ ಪ್ರತಿಕ್ರಿಯೆ ಹಾಗೂ ಕಥಾ ಹಂದರದ ವಿವರಗಳು ಇದೀಗ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿವೆ.
'ಉಸ್ತಾದ್ ಭಗತ್ ಸಿಂಗ್' ಕಥೆ ಕಡೆಗೆ ಬರೋದಾರೆ, ಗಿರಿಜನ ಸಮುದಾಯದ ಭಗತ್ ಸಿಂಗ್ (ಪವನ್ ಕಲ್ಯಾಣ್) ತನ್ನ ಗುರುವಿನ ಪ್ರೇರಣೆಯಿಂದ ಉತ್ತಮ ಜೀವನ ನಡೆಸುತ್ತಿರುತ್ತಾನೆ. ಪೊಲೀಸ್ ಅಧಿಕಾರಿಯಾಗಿ ಸಮಾಜದ ಅನ್ಯಾಯ, ಅಕ್ರಮಗಳ ವಿರುದ್ಧ ಅಂಜದೆ ಹೋರಾಡುತ್ತಿರುತ್ತಾನೆ. ಅದೆಂತಹ ಪರಿಸ್ಥಿತಿಗಳಲ್ಲೂ ಭಗತ್ ಸಿಂಗ್ ಸಮಾಜದ ದುಷ್ಟ ಶಕ್ತಿಗಳನ್ನು ತೊಡೆದು ಹಾಕುವಲ್ಲಿ ಹಿಂಜರಿಯುವುದಿಲ್ಲ. ಈತನ ಹೋರಾಟದಲ್ಲಿ ಏನೆಲ್ಲ ನಡೆಯುತ್ತೆ? ಅನ್ನೋದೆ ಕಥೆ.

'ಉಸ್ತಾದ್ ಭಗತ್ ಸಿಂಗ್' ಒಬ್ಬ ವ್ಯಕ್ತಿಯ ವೀರಾ-ವೇಷದ ಕಥೆಯಷ್ಟೇ ಅಲ್ಲ. ದೇಶದ ಸಮಗ್ರತೆ, ಏಕತೆ ಹಾಗೂ ಜನರ ಕಲ್ಯಾಣಕ್ಕಾಗಿ ತನ್ನ ಜೀವನವನ್ನೇ ಸಮರ್ಪಿಸಿದ ವೀರನ ಕಥೆ. ಸಾಮಾಜಿಕ ವಿಷಯಗಳು ಮತ್ತು ರಾಜಕೀಯ ನಾಯಕರ ಅಕ್ರಮಗಳ ವಿರುದ್ಧ ಧ್ವನಿ ಎತ್ತುವ ಪೊಲೀಸ್ ಅಧಿಕಾರಿಯ ಹೋರಾಟವನ್ನು ಇದು ಬಿಂಬಿಸುತ್ತದೆ.
ಮಾರ್ಚ್ 10 ರಂದು ಸೆನ್ಸಾರ್ ಮಂಡಳಿ ಅಧಿಕಾರಿಗಳು ಸಿನಿಮಾ ವೀಕ್ಷಿಸಿ, ಯಾವುದೇ ದೃಶ್ಯಕ್ಕೆ ಕತ್ತರಿ ಹಾಕದೇ ಬಿಡುಗಡೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ದೃಶ್ಯ ಹಾಗೂ ಸಂಭಾಷಣೆಗಳಲ್ಲಿ ಸೂಚಿಸಿದ ಸಣ್ಣ ಬದಲಾವಣೆಗಳನ್ನು ಸೂಚಿಸಿದ್ದಾರೆ ಎನ್ನಲಾಗಿದೆ. ಸದ್ಯ ಸಿನಿಮಾಗೆ 'ಯುಎ' ಸರ್ಟಿಫಿಕೇಟ್ ಸಿಕ್ಕಿದೆ.
ಉತ್ತಮ ಕತೆ ಹಾಗೂ ಅದನ್ನು ತೆರೆಮೇಲೆ ನಿರೂಪಣೆ ಮಾಡಿದ ರೀತಿಯನ್ನು ಸೆನ್ಸಾರ್ ಮಂಡಳಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ. ಪ್ರತಿ ಫ್ರೇಮ್‌ನಲ್ಲಿಯೂ ಪವನ್ ಕಲ್ಯಾಣ್ ಮಾಸ್ ಲುಕ್, ಸ್ಟೈಲ್ ಎದ್ದು ಕಾಣುತ್ತೆ. ಹಾಗೇ ಹರೀಶ್ ಶಂಕರ್ ಅವರ ನಿರ್ದೇಶನ ಸ್ಪಷ್ಟವಾಗಿ ಕಂಡುಬಂದಿದೆ ಎಂದು ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾಗಿ ತೆಲುಗು ಫಿಲ್ಮಿಬೀಟ್ ವರದಿ ಮಾಡಿದೆ. ಇನ್ನು ಮೂಲಗಳ ಪ್ರಕಾರ, 'ಉಸ್ತಾದ್ ಭಗತ್ ಸಿಂಗ್' ಸುಮಾರು 2 ಗಂಟೆ 34 ನಿಮಿಷ (154 ನಿಮಿಷಗಳು) ರನ್‌ಟೈಮ್ ಹೊಂದಿದೆ ಎನ್ನಲಾಗಿದೆ.


Click it and Unblock the Notifications











