Elumale Movie Review: ವೀರಪ್ಪನ್ ಹತ್ಯೆ ವೇಳೆ ನಡೀತಿತ್ತು 'ಏಳಮಲೆ'ಯಲ್ಲೊಂದು ಪ್ರೇಮಕಥೆ!
ಒಂದ್ಕಡೆ ತರುಣ್ ಸುಧೀರ್, ಇನ್ನೊಂದ್ಕಡೆ ರಾಣಾ. ಇವರ ಜೊತೆಗೆ ತರುಣ್ ಗರಡಿಯಲ್ಲಿ ಪಳಗಿದ ನಿರ್ದೇಶಕ ಪುನೀತ್ ರಂಗಸ್ವಾಮಿ. ಹಿರಿಯ ನಟರಾದ ಜಗಪತಿಬಾಬು, ಟಿ.ಎಸ್.ನಾಗಾಭರಣ ಹಾಗೂ ಕಿಶೋರ್. 'ಏಳುಮಲೆ' ಸಿನಿಮಾ ಬಿಡುಗಡೆಗೂ ಮುನ್ನ ಇವರು ಗಮನ ಸೆಳೆದಿದ್ದರು. ಅದರಲ್ಲೂ ಟೀಸರ್, ಟ್ರೈಲರ್ ನೋಡಿದ ಮೇಲೆ ಮತ್ತೊಂದು ನೈಜ ಘಟನೆಯ ಗಂಭೀರ ಸಿನಿಮಾ ತೆರೆಮೇಲೆ ಬರುತ್ತೆ ಅನ್ನೋ ನಿರೀಕ್ಷೆಯಿತ್ತು.
'ಏಳುಮಲೆ' ಸಿನಿಮಾ ಕೂಡ ಸೂಪರ್ ಸ್ಟಾರ್‌ಕಾಸ್ಟ್‌ಗೆ ಬೆಲೆ ಕೊಡದೇ ಕಥೆಯನ್ನೇ ಜೀವಾಳವಾಗಿಸಿಕೊಂಡು ನಿರ್ಮಿಸಿದ ಸಿನಿಮಾ. ಎಲ್ಲಾ ಸಮಯದಲ್ಲೂ ಇದೇ ಥಿಯೇರಿ ಕೆಲಸ ಮಾಡುತ್ತೆ ಅಂತ ನಂಬಿಕೊಳ್ಳುವುದಕ್ಕೆ ಆಗದೇ ಹೋದರೂ, ಕಂಟೆಂಟ್ ಇಟ್ಟುಕೊಂಡು ಮಾಡಿದ ಸಿನಿಮಾಗಳನ್ನು ಅಷ್ಟು ಸುಲಭಕ್ಕೆ ಪ್ರೇಕ್ಷಕರು ಕೂಡ ಕೈ ಬಿಟ್ಟಿರುವ ಉದಾಹರಣೆಗಳು ಇಲ್ಲ.

ಈಗ 'ಏಳುಮಲೆ' ಸಿನಿಮಾ ಕೂಡ ಕಂಟೆಂಟ್ ನಂಬಿಕೊಂಡು ನಿರ್ಮಿಸಿದ ಸಿನಿಮಾ. ಜೊತೆಗೆ ಪ್ರಮುಖ ಪಾತ್ರದಲ್ಲಿ ರಾಣಾ, ಪ್ರಿಯಾಂಕಾ ಆಚಾರ್ ಅಂತಹ ಯುವ ಪ್ರತಿಭೆಗಳನ್ನು ಇಟ್ಟುಕೊಂಡು, ಪೋಷಕ ಪಾತ್ರಗಳಲ್ಲಿ ಹಿರಿಯ ನಟರಿಗೆ ಮಣೆ ಹಾಕಿ, ಎರಡನ್ನೂ ಬ್ಯಾಲೆನ್ಸ್ ಮಾಡಿರುವ ಸಿನಿಮಾವಿದು. ಪುನೀತ್ ರಂಗಸ್ವಾಮಿ ನಿರ್ದೇಶಿಸಿದ ಈ ಸಿನಿಮಾಗೆ ತರುಣ್ ಸುಧೀರ್ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡಿದ್ದು, ಸಿನಿಮಾ ಬಗ್ಗೆ ಕುತೂಹಲವನ್ನು ದುಪ್ಪಟ್ಟು ಮಾಡಿತ್ತು. ಹಾಗಿದ್ದರೆ, 'ಏಳುಮಲೆ' ಸಿನಿಮಾ ಹೇಗಿದೆ? ಯುವ ಪ್ರೇಮಿಗಳ ಕಥೆಯೇನು? ಅದರಲ್ಲಿ ಬರೋ ಟ್ವಿಸ್ಟ್ ಏನು? ತಿಳಿಯುವುದಕ್ಕೆ ಮುಂದೆ ಓದಿ.
'ಏಳುಮಲೆ' ಕಥೆಯೇನು?
ಈಗಾಗಲೇ ಚಿತ್ರತಂಡವೇ ಹೇಳಿಕೊಂಡಿರುವಂತೆ ಇದು ಕರ್ನಾಟಕ ಹಾಗೂ ತಮಿಳುನಾಡಿನ ಗಡಿಭಾಗದ ಪ್ರೇಮಿಗಳ ಕಥೆ. ಸೇಲಂ ಮೂಲದ ರೇವತಿಗೆ (ಪ್ರಿಯಾಂಕಾ ಆಚಾರ್) ಚಾಮರಾಜನಗರದ ಕ್ಯಾಬ್ ಡ್ರೈವರ್ ಹರೀಶನ (ರಾಣಾ) ಮೇಲೆ ಪ್ರೀತಿ ಹುಟ್ಟುತ್ತೆ. ರೇವತಿ ಶ್ರೀಮಂತ ಮನೆತನದ ಹುಡುಗಿ. ಹರೀಶ ಅನಾಥ, ಕ್ಯಾಬ್ ಡ್ರೈವರ್. ರೇವತಿ ಮೈಸೂರಿನಲ್ಲಿ ಓದುವಾಗ ಇಬ್ಬರ ಪರಿಚಯವಾಗಿ ಲವ್ ಆಗುತ್ತೆ. ಅದು ಹುಡುಗಿ ಮನೆಯವರಿಗೆ ಗೊತ್ತಾಗಿ ಬೇರೆ ಮದುವೆ ಮಾಡುವುದಕ್ಕೆ ಮುಂದಾಗುತ್ತಾರೆ. ಆಗ ರೇವತಿ ಮನೆಬಿಟ್ಟು ಬರಲು ನಿರ್ಧರಿಸುತ್ತಾಳೆ. ರೇವತಿ ಹಾಗೂ ಹರೀಶ ಇಬ್ಬರೂ ಒಂದು ಸ್ಥಳದಲ್ಲಿ ಭೇಟಿಯಾಗುವುದಕ್ಕೆ ನಿರ್ಧರಿಸುತ್ತಾರೆ. ಇವರಿಬ್ಬರೂ ಒಟ್ಟಿಗೆ ಸೇರುವುದಕ್ಕೂ ಮುನ್ನ ನಡೆಯುವ ಎರಡು ಪ್ರತ್ಯೇಕ ಘಟನೆಗಳು ಈ ಪ್ರೇಮಿಗಳನ್ನು ಒಂದಾಗುವುದಕ್ಕೆ ಬಿಡುತ್ತಾ? ಇಲ್ವಾ? ಅನ್ನೋದು ಕಥೆ.
ನೈಜ ಘಟನೆಯ ಹಿನ್ನೆಲೆ
'ಏಳುಮಲೆ' ಸಿನಿಮಾದ ಕಥೆ ನಡೆಯೋದು 2004ರಲ್ಲಿ. ಚಾಮರಾಜನಗರದ ಮಲೆಮದೇಶ್ವರ ಬೆಟ್ಟ ಆಗ ಸೂಕ್ಷ್ಮ ಪ್ರದೇಶವಾಗಿತ್ತು. ಕಾಡುಗಳ್ಳ ವೀರಪ್ಪನ್ ಹಿಡಿಯುವುದಕ್ಕೆ ಪೊಲೀಸರ ಕಾರ್ಯಚರಣೆ ಚುರುಕುಗೊಂಡಿದ್ದ ಕಾಲವದು. ಈ ಹಿನ್ನೆಲೆಯನ್ನು ಇಟ್ಟುಕೊಂಡು, ಇದೇ ಕಾಲಘಟ್ಟದಲ್ಲಿ ನಡೆದ ನೈಜ ಘಟನೆಗೆ ಕಾಲ್ಪನಿಕ ರೂಪ ನೀಡಲಾಗಿದೆ. ಹೀಗಾಗಿ ಸಿನಿಮಾ ಬಳಸಿರುವ ಪರಿಕರಗಳು ಕೂಡ ಪ್ರೇಕ್ಷಕರನ್ನು 21 ವರ್ಷ ಹಿಂದಕ್ಕೆ ಕರೆದುಕೊಂಡು ಹೋಗುತ್ತೆ. ಕಥೆಯ ಜೊತೆಗೆ 2004ರ ಕಾಲಘಟ್ಟವನ್ನು ಸೃಷ್ಟಿಸಿ ನೈಜತೆಗೆ ಪ್ರಾಮುಖ್ಯತೆ ನೀಡಲಾಗಿದೆ.
ನಟನೆ-ನಿರ್ದೇಶನ-ತಾಂತ್ರಿಕತೆ
ಸಿನಿಮಾದ ಹೀರೋ ರಾಣಾಗೆ 'ಏಳುಮಲೆ' ಎರಡನೇ ಸಿನಿಮಾ. ಮೊದಲ ಸಿನಿಮಾ 'ಏಕ್‌ಲವ್ಯ'ಗೆ ಹೋಲಿಸಿದರೆ ನಟನೆಯಲ್ಲಿ ಗಣನೀಯ ಬದಲಾವಣೆ ಕಾಣುತ್ತೆ. ಹಾಗೇ ಚೊಚ್ಚಲ ಸಿನಿಮಾದಲ್ಲಿ ನಾಯಕಿ ಪ್ರಿಯಾಂಕಾ ಆಚಾರ್ ಉತ್ತಮ ಅಭಿನಯ ನೀಡಿದ್ದಾರೆ. ಪುನೀತ್ ರಂಗಸ್ವಾಮಿಗೂ ಇದು ಚೊಚ್ಚಲ ಸಿನಿಮಾ ಆಗಿದ್ದರೂ, ಟೈಟ್ ಸ್ಕ್ರೀನ್‌ಪ್ಲೇ ಮೂಲಕ ಗಮನ ಸೆಳೆಯುತ್ತಾರೆ. ಅದ್ವೈತ್ ಗುರುಮೂರ್ತಿ ಕ್ಯಾಮರಾ, ಡಿ. ಇಮ್ಮಾನ್ ಸಂಗೀತ ಸಿನಿಮಾಗೆ ಕಿಕ್ ಕೊಡುತ್ತೆ.

'ಏಳುಮಲೆ' ಪ್ಲಸ್ ಪಾಯಿಂಟ್ ಏನು?
'ಏಳುಮಲೆ' ಸಿನಿಮಾದ ಸ್ಕ್ರೀನ್‌ಪ್ಲೇ ಟೈಟ್ ಆಗಿದೆ. ಲವ್‌ಸ್ಟೋರಿಯಲ್ಲಿ ಫ್ಲ್ಯಾಶ್‌ಬ್ಯಾಕ್ ಇಲ್ಲ. ಅನಾವಶ್ಯಕ ದೃಶ್ಯಗಳಿಲ್ಲ. ಲವ್‌ಸ್ಟೋರಿ ಹಾಗೂ ಸಸ್ಪೆನ್ಸ್ ಎರಡನ್ನೂ ಬೆಸೆದಿರುವ ಶೈಲಿಯೇ ಅದ್ಭುತ. ಹೀಗಾಗಿ ಪ್ರೇಕ್ಷಕನ ಮೂಡ್ ಡೈವರ್ಟ್ ಆಗುವ ಪ್ರಸಂಗ ಬಿದ್ದಿಲ್ಲ. ಭಾವನಾತ್ಮಕ ಹಾಗೂ ಆಕ್ಷನ್ ಸನ್ನಿವೇಶಗಳಲ್ಲಿ ರಾಣಾ ಗಮನ ಸೆಳೆಯುತ್ತಾರೆ. ಕಾನ್‌ಸ್ಟೇಬಲ್ ಪಾತ್ರದಲ್ಲಿ ಟಿ.ಎಸ್.ನಾಗಾಭರಣ, ಖಡಕ್ ಪೊಲೀಸ್ ಅಧಿಕಾರಿಯಾಗಿ ಕಿಶೋರ್, ಜಗಪತಿ ಬಾಬು ಪಾತ್ರ ಕೂಡ ಈ ಸಿನಿಮಾದ ಹೈಲೈಟ್.
ಮೈನಸ್ ಪಾಯಿಂಟ್ ಏನು?
ಒಂದು ರಾತ್ರಿಯಲ್ಲಿ ನಡೆಯುವ ಕಥೆಯಾಗಿದ್ದರಿಂದ ರಾತ್ರಿ ವೇಳೆನೇ ಶೂಟ್ ಮಾಡಲಾಗಿದೆ. ಇದು ಈ ಕಥೆಗೆ ಅನಿವಾರ್ಯವಾಗಿದ್ದರೂ, ಕತ್ತಲೆಯೇ ಹೆಚ್ಚು ಆವರಿಸಿಕೊಂಡಿದೆ. ಲವ್ ಸ್ಟೋರಿ, ಕ್ರೈಂ, ಸಸ್ಪೆನ್ಸ್ ಇಷ್ಟ ಪಡುವವರಿಗೆ ಈ ಸಿನಿಮಾ ಇಷ್ಟ ಆಗುತ್ತೆ. ಇಡೀ ಕುಟುಂಬ ಒಟ್ಟಿಗೆ ಬಂದು ನೋಡುವಂತಹ ವೈಬ್ ಸಿಗುವುದಿಲ್ಲ. ಒಟ್ಟಾರೆ, ಇದು ಕನ್ನಡದಲ್ಲಿ ಬಂದ ಮತ್ತೊಂದು ಉತ್ತಮ ಸಿನಿಮಾ. ಕಂಟೆಂಟ್ ಅನ್ನೇ ಪ್ರಧಾನವಾಗಿ ಇಟ್ಟುಕೊಂಡ ಸಿನಿಮಾ. ಸ್ಟಾರ್‌ಗಳು ಇಲ್ಲದ ಮತ್ತೊಂದು ಸಿನಿಮಾ ಪ್ರೇಕ್ಷಕರಿಗೆ ಖಂಡಿತಾ ಇಷ್ಟ ಆಗುತ್ತೆ.


Click it and Unblock the Notifications











