Ibbani Tabbida Ileyali movie Review:'ಇಬ್ಬನಿ ತಬ್ಬಿದ ಇಳೆಯಲಿ' ಪ್ರೀತಿ, ಪ್ರೇಮ, ಕಣ್ಣೀರು
ಗೌರಿ ಗಣೇಶ ಹಬ್ಬಕ್ಕೆ ಕನ್ನಡ ಚಿತ್ರರಂಗದಲ್ಲಿ ಥಿಯೇಟರ್‌ಗೆ ಲಗ್ಗೆ ಇಟ್ಟಿರುವ ಸಿನಿಮಾ 'ಇಬ್ಬನಿ ತಬ್ಬಿದ ಇಳೆಯಲಿ'. ರಕ್ಷಿತ್ ಶೆಟ್ಟಿ ಇಷ್ಟ ಪಟ್ಟು ನಿರ್ಮಿಸಿರುವ ಈ ಸಿನಿಮಾ ಹಲವು ಕಾರಣಗಳಿಗೆ ಗಮನ ಸೆಳೆದಿದೆ. ಪ್ರೇಮಿಗಳಂತೂ ಈ ಪ್ರೇಮಕಥೆಯನ್ನು ಕಣ್ತುಂಬಿಕೊಳ್ಳುವುದಕ್ಕೆ ತುದಿಗಾಲಲ್ಲಿ ನಿಂತಿದ್ದರು. ಹಬ್ಬದ ಸಂಭ್ರಮದಲ್ಲಿ ಪ್ರೀತಿ, ವಿರಹ ಇಷ್ಟ ಪಡುವವರು ಈಗಾಗಲೇ ಥಿಯೇಟರ್‌ನಲ್ಲಿ ಇರಬಹುದು.
ಇನ್ನು 'ಇಬ್ಬನಿ ತಬ್ಬಿದ ಇಳೆಯಲಿ' ಸಿನಿಮಾದ ಪ್ರಮುಖ ಪಾತ್ರದಲ್ಲಿ ವಿಹಾನ್, ಅಂಕಿತಾ ಅಮರ್ ಹಾಗೂ ಮಯೂರಿ ನಟರಾಜ್ ನಟಿಸಿದ್ದಾರೆ. ದೊಡ್ಡ ಸ್ಟಾರ್ ಕಾಸ್ಟ್ ಸಿನಿಮಾ ಅಲ್ಲ. ಆದರೆ, ಪ್ರೇಕ್ಷಕರು ಕೈ ಹಿಡಿದರೆ ಇವೆಲ್ಲರೂ ಸ್ಟಾರ್‌ಗಳಾಗಿ ಮರೆಯಬಹುದು. ಇನ್ನು ರಕ್ಷಿತ್ ಶೆಟ್ಟಿ ಪ್ರೊಡಕ್ಷನ್ ಅಂದ್ಮೇಲೆ ಕ್ವಾಲಿಟಿ ಬಗ್ಗೆ ಕಾಂಪ್ರೈಸ್ ಇರಲ್ಲ. ಈ ಸಿನಿಮಾ ಕೂಡ ಅದೇ ಫೀಲ್ ಕೊಡುತ್ತೆ.
'ಇಬ್ಬನಿ ತಬ್ಬಿದ ಇಳೆಯಲಿ' ಅಂತಹ ಮ್ಯೂಸಿಕಲ್ ಡ್ರಾಮವನ್ನು ತೆರೆಮೇಲೆ ತಂದಿರೋದು ಚಂದ್ರಜಿತ್ ಬೆಳ್ಳಿಯಪ್ಪ. ಇಂತಹದ್ದೊಂದು ಪ್ರೇಮಕತೆಯನ್ನು ಹುಡುಕಾಡುತ್ತಿದ್ದವರ ಪಾಲಿಗೆ ನಿರ್ದೇಶಕರೇ ಹೀರೋ ಆಗಬಹುದು. ಕ್ಯಾಮರಾಮ್ಯಾನ್, ಮ್ಯೂಸಿಕ್ ಡೈರೆಕ್ಟರ್ ಅನ್ನು ಇಷ್ಟ ಪಡಬಹುದು. ಸರಿ, 'ಇಬ್ಬನಿ ತಬ್ಬಿದ ಇಳೆಯಲಿ' ಸಿನಿಮಾ ಹೇಗಿದೆ? ಅಂತ ಪ್ರಶ್ನೆ ಮಾಡೋರಿಗೆ ಇಲ್ಲಿದೆ ಉತ್ತರ.

ಏನಿವರ ಕಥೆ?
ಈಗಾಗಲೇ ಟೀಸರ್, ಟ್ರೈಲರ್ ನೋಡಿರುವವರಿಗೆ ಈ ಸಿನಿಮಾ ಒಬ್ಬ ನಾಯಕ, ಇಬ್ಬರು ನಾಯಕಿಯರ ಕಥೆ ಇರಬಹುದು ಅನ್ನೋ ಅನುಮಾನ ಮೂಡಿತ್ತು. ಅದು ನಿಜಕ್ಕೂ ಸತ್ಯ. ಸಿದ್ಧಾರ್ಥ್ (ವಿಹಾನ್) ಕೊಟ್ಯಾಧಿಪತಿಯ ಮಗ. ಅನಾಹಿತಾ (ಅಂಕಿತಾ ಅಮರ್) ಬೆಂಗಾಲಿ ಹುಡುಗಿ. ಇವರಿಬ್ಬರ ಪ್ರೀತಿಯಲ್ಲಿ ಬರುವ ರಾಧೆ (ಮಯೂರಿ ನಟರಾಜ್). ಇಡೀ ಸಿನಿಮಾ ಈ ಮೂರು ಪಾತ್ರಗಳನ್ನೇ ಪ್ರಧಾನವಾಗಿಟ್ಟುಕೊಂಡು ಮುಂದಕ್ಕೆ ಸಾಗುತ್ತೆ. 7 ವರ್ಷಗಳಿಂದ ಬೇರೆಯಾಗಿರುವ ಸಿದ್ಧಾರ್ಥ್ ಹಾಗೂ ಅಂಕಿತಾ ಅಮರ್ ಮಧ್ಯೆ ರಾಧೆ ಬಂದಿದ್ದಾಳೆ. ಸಿದ್ಧಾರ್ಥ್‌ಗೆ ಅನಾಹಿತ ಪ್ರೀತಿ ಸಿಗುತ್ತಾ? ರಾಧೆಗೆ ಸಿದ್ಧಾರ್ಥ್ ಸಿಗುತ್ತಾನಾ? ಅನ್ನೋದೇ 'ಇಬ್ಬನಿ ತಬ್ಬಿದ ಇಳೆಯಲಿ' ಸಿನಿಮಾದ ಒಂದೆಳೆ ಕಥೆ.
ನಿರ್ದೇಶಕನ ಕಲ್ಪನೆಗೆ ಎಷ್ಟು ಮಾರ್ಕ್ಸ್
'ಇಬ್ಬನಿ ತಬ್ಬಿದ ಇಳೆಯಲಿ' ಸಿನಿಮಾ ನೋಡಿ ಹೊರಬಂದ್ಮೇಲೆ ನಿರ್ದೇಶಕ ಚಂದ್ರಜಿತ್ ಬೆಳ್ಳಿಯಪ್ಪ ಹೀರೋ ಅನಿಸಬಹುದು. ಒಂದು ಸಿಂಪಲ್ ಕಥೆಗೆ ಸನ್ನಿವೇಶಗಳನ್ನು ಜೋಡಿಸಿದ್ದನ್ನು ಮೆಚ್ಚಿಕೊಳ್ಳಲೇಬೇಕು. ಹೀರೋ ದೃಷ್ಟಿಕೋನವನ್ನಿಟ್ಟುಕೊಂಡು ಕಥೆಯನ್ನು ಹೇಳುತ್ತಾರೆ. ಈ ವೇಳೆ ಸ್ಕ್ರೀನ್ ಪ್ಲೇನಲ್ಲಿ ಪಾಸ್ಟ್ ಹಾಗೂ ಪ್ರೆಸೆಂಟ್ ಸನ್ನಿವೇಶಗಳನ್ನು ಅಚ್ಚುಕಟ್ಟಾಗಿ ಹೇಳುತ್ತಾ ಮುಂದಕ್ಕೆ ಹೋಗುತ್ತಾರೆ. ಇಲ್ಲಿ ನಿರ್ದೇಶಕರಿಗೆ ಸಾಥ್ ಕೊಡೋದು ಛಾಯಾಗ್ರಾಹಕ ಶ್ರೀವತ್ಸನ್. ಒಂದೊಂದು ಫ್ರೇಮ್ ಪೇಂಟಿಂಗ್ ಮಾಡಿದಂತಿದೆ. ಇದಕ್ಕೆ ಗಗನ್ ಬದೇರಿಯಾ ಅವರ ಹಿನ್ನೆಲೆ ಸಂಗೀತ ಹಾಗೂ ಹಾಡುಗಳು ನಿರ್ದೇಶಕನ ಕಲ್ಪನೆಗಳಿಗೆ ಜೊತೆಯಾಗಿ ಸಾಗುತ್ತವೆ. ತಾಂತ್ರಿಕ ವರ್ಗದಲ್ಲಿ ಈ ಮೂವರು ಹೈಲೈಟ್ ಆಗುತ್ತಾರೆ.
ವಿಹಾನ್, ಅಂಕಿತಾ, ಮಯೂರಿ ನಡುವೆ ಪೈಪೋಟಿ
'ಇಬ್ಬನಿ ತಬ್ಬಿದ ಇಳೆಯಲಿ'ಯಲ್ಲಿ ನಟಿಸಿದ ವಿಹಾನ್, ಅಂಕಿತಾ ಅಮರ್ ಹಾಗೂ ಮಯೂರಿ ನಟರಾಜ್ ಪಾತ್ರಗಳು ಸಿನಿಮಾ ನೋಡಿ ಹೊರಬಂದ ಮೇಲೂ ಕಾಡುತ್ತವೆ. ವಿಹಾನ್ ಅಭಿನಯದಲ್ಲಿ ಪ್ರಬುದ್ಧತೆ ಕಾಣುತ್ತೆ. ಹಿಂದಿನ ಸಿನಿಮಾಗಳನ್ನು ಮರೆತು ನೋಡುವಂತೆ ಮಾಡುತ್ತೆ. ನಟಿ ಮಯೂರಿ ನಟರಾಜ್‌ಗೆ ಸಿಕ್ಕಿದ್ದು ಚಿಕ್ಕ ಸ್ಕ್ರೀನ್ ಸ್ಪೇಸ್. ಆದರೆ, ತಮ್ಮ ಪಾತ್ರವನ್ನು ತಿಂದು ಹಾಕಿದ್ದಾರೆ. ಇನ್ನು ಬೆಂಗಾಲಿ ಹುಡುಗಿಯಾಗಿ ಅಂಕಿತಾ ಅಮರ್ ಪ್ರೇಕ್ಷಕರ ಫೇವರಿಟ್ ಆಗಿಬಿಟ್ಟಿದ್ದಾರೆ. ಈ ಮೂವರು ಸಿನಿಮಾದ ಮತ್ತೊಂದು ಪಿಲ್ಲರ್.

ಪ್ಲಸ್ ಪಾಯಿಂಟ್ ಏನು?
ಚಂದ್ರಜಿತ್ ಬೆಳ್ಳಿಯಪ್ಪ ಅವರ ನಿರ್ದೇಶನ ಇಷ್ಟ ಆಗುತ್ತೆ. ಕೆಲವು ಕ್ಲಾಸಿಕ್ ಸಿನಿಮಾಗಳನ್ನು ನೆನಪಿಗೆ ತರುತ್ತೆ. ಫಸ್ಟ್ ಹಾಫ್ ಸಿನಿಮಾವನ್ನು ನೋಡಿಸಿಕೊಂಡು ಹೋಗುತ್ತೆ. ಇಂಟರ್‌ವಲ್‌ನಲ್ಲಿ ಸಿಗುವ ಟ್ವಿಸ್ಟ್ ಪ್ರೇಕ್ಷಕನಿಗೆ ಸಿಗುವ ಥ್ರಿಲ್. ವಿಹಾನ್, ಅಂಕಿತಾ ಅಮರ್, ಮಯೂರಿ ನಟರಾಜ್ ಪಾತ್ರಗಳು ಕಾಡುತ್ತವೆ. ನಿರ್ದೇಶನ, ಸಿನಿಮ್ಯಾಟೋಗ್ರಫಿ, ಸಂಗೀತ ಈ ಸಿನಿಮಾದ ಜೀವಾಳ ಅನ್ನಬಹುದು.
ಮೈನಸ್ ಪಾಯಿಂಟ್ ಏನು?
ಸಿನಿಮಾ ಅದೆಷ್ಟೇ ಚೆನ್ನಾಗಿದ್ದರೂ ಎಲ್ಲದರೂ ಒಂದೆರಡು ಕಡೆ ತಪ್ಪಿಗಳು ಆಗಿರಲೇಬೇಕು. ಈ ಸಿನಿಮಾ ಕೂಡ ಹಾಗೇ ಆಗಿದೆ. ಸೆಕೆಂಡ್ ಹಾಫ್‌ನಲ್ಲಿ ಸಿನಿಮಾದ ಅವಧಿ ದೊಡ್ಡದಿದೆ ಅಂತ ಅನಿಸುತ್ತೆ. ಚಿತ್ರಕಥೆ ಇನ್ನೂ ಸ್ಪಲ್ಪ ಟೈಟ್ ಆಗಿರಬೇಕಿತ್ತು. ಅದು ಬಿಟ್ಟರೆ, ಕ್ರಿಯೇಟಿವ್ ಆಗಿ ಪ್ರೆಸೆಂಟ್ ಮಾಡುವ ನಿರ್ದೇಶಕರು ಕೆಲವು ಕಡೆ ಹಳೆಯ ಸೀನ್‌ಗಳನ್ನೇ ಬಳಸಿದ್ದಾರೆ.
ಕೊನೆಯಲ್ಲೇನು?
ಲವ್ ಸ್ಟೋರಿಗಳನ್ನು ಇಷ್ಟ ಪಡುವವರಿಗೆ 'ಇಬ್ಬನಿ ತಬ್ಬಿದ ಇಳೆಯಲಿ' ಸಿನಿಮಾ ಸಿಕ್ಕಾಪಟ್ಟೆ ಇಷ್ಟ ಆಗುತ್ತೆ. ಮಾಸ್, ಕಾಮಿಡಿ, ಕಮರ್ಷಿಯಲ್ ಸಿನಿಮಾಗಳಿಗೆ ಅಡಿಕ್ಟ್ ಆಗಿರುವವರಿಗೆ ಈ ಸಿನಿಮಾ ಇಷ್ಟ ಆಗುವುದು ಕಷ್ಟ. ಒಂದೊಳ್ಳೆ ಫೀಲ್ ಗುಡ್ ಸಿನಿಮಾವನ್ನು ಚಿಕ್ಕ ಪುಟ್ಟ ತಪ್ಪುಗಳನ್ನು ಸಹಿಸಿಕೊಂಡು ನೋಡುವುದಾದರೆ ಖಂಡಿತಾ ಎಂಜಾಯ್ ಮಾಡುತ್ತೀರ.


Click it and Unblock the Notifications











