Peddi First Review: ರಾಮ್ ಚರಣ್ 'ಪೆದ್ದಿ' ಫಸ್ಟ್ ರಿವ್ಯೂ; ಶಿವಣ್ಣ ಹೆಂಗೆ?
ಪ್ಯಾನ್ ಇಂಡಿಯಾ ಸಿನಿಮಾ 'ಪೆದ್ದಿ' ಅದ್ಧೂರಿ ಬಿಡುಗಡೆಗೆ ಸಕಲ ಸಿದ್ಧತೆಗಳು ನಡೆಯುತ್ತಿದೆ. ಈಗಾಗಲೇ ಸಿನಿಮಾ ತಂಡ ಭರ್ಜರಿಯಾಗಿ ಪ್ರಚಾರ ಮಾಡುತ್ತಿದೆ. ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗುತ್ತಿರೋದ್ರಿಂದ ರಾಮ್ ಚರಣ್, ಜಾಹ್ನವಿ ಕಪೂರ್, ಶಿವಣ್ಣ ಮೂವರು ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಎಲ್ಲಾ ಭಾಷೆಗಳಲ್ಲೂ ಪ್ರಚಾರ ಮಾಡುತ್ತಿದ್ದಾರೆ.
'ಪೆದ್ದಿ' ಗ್ರ್ಯಾಂಡ್ ರಿಲೀಸ್‌ಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಟಾಲಿವುಡ್‌ನ ಮೆಗಾ ಕುಟುಂಬದ ಅಭಿಮಾನಿಗಳು ಈ ಸಿನಿಮಾವನ್ನು ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಇತ್ತೀಚೆಗೆ ಸಿನಿಮಾ ಸೆನ್ಸಾರ್ ಪ್ರಕ್ರಿಯೆ ಕೂಡ ಮುಗಿದಿದೆ. 'ಪೆದ್ದಿ' ಸಿನಿಮಾ ವೀಕ್ಷಿಸಿದ ಬಳಿಕ ಸೆನ್ಸಾರ್ ಅಧಿಕಾರಿಗಳು ಸಿನಿಮಾ ಯು/ಎ ಸರ್ಟಿಫಿಕೇಟ್ ಕೊಟ್ಟಿದ್ದಾರೆಂದು ವರದಿಯಾಗಿದೆ.

ಟಾಲಿವುಡ್ ಮತ್ತೊಂದು ಮಾಸ್, ಆಕ್ಷನ್ ಎಂಟರ್‌ಟೈನರ್ 'ಪೆದ್ದಿ' ಕ್ರೇಜ್ ಎಲ್ಲೆಡೆ ಜೋರಾಗಿದೆ. 'ಪುಷ್ಷ' ಸಿನಿಮಾದ ನಿರ್ದೇಶಕ ಸುಕುಮಾರ್ ಶಿಷ್ಯ ಬುಚ್ಚಿ ಬಾಬು ಸನಾ ನಿರ್ದೇಶಿಸಿರುವ ಈ ಸಿನಿಮಾ ರಾಮ್ ಚರಣ್ ಕರಿಯರ್‌ಗೆ ಮತ್ತೆ ಸಕ್ಸಸ್ ತಂಡು ಕೊಡುತ್ತಾ? ಅಂತ ಅವರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಹಾಗಿದ್ದರೆ, 'ಪೆದ್ದಿ' ಮೊದಲ ವಿಮರ್ಶೆ ಹೇಗಿದೆ? ತಿಳಿಯುವುದಕ್ಕೆ ಮುಂದೆ ಓದಿ.
'ಪೆದ್ದಿ' ಹೇಗಿದೆ ರೆಸ್ಪಾನ್ಸ್?
ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲಿ 'ಪೆದ್ದಿ' ಕೂಡ ಒಂದು. ಅದರಲ್ಲೂ ಗ್ಲೋಬಲ್ ಸ್ಟಾರ್ ರಾಮ್ ಚರಣ್ ಲೀಡ್ ರೋಲ್‌ನಲ್ಲಿ ನಟಿಸಿರುವುದರಿಂದ ಸಿನಿಮಾ ನಿರೀಕ್ಷೆಗಳನ್ನಂತೂ ಹುಟ್ಟಾಕಿದೆ. RRR ಸಿನಿಮಾ ಬಳಿಕ ಗ್ಲೋಬಲ್ ಸ್ಟಾರ್ ಆಗಿ ಹೊರ ಹೊಮ್ಮಿರುವ ರಾಮ್ ಚರಣ್‌ಗೆ 'ಪೆದ್ದಿ' ಪ್ಯಾನ್ ಇಂಡಿಯಾ ಲೆವಲ್‌ನಲ್ಲಿ ಸದ್ದು ಮಾಡುತ್ತಾ? ಅನ್ನೋ ಕುತೂಹಲ ಮೂಡಿದೆ. ಪ್ರಾದೇಶಿಕ ಸೆನ್ಸಾರ್ ಮಂಡಳಿಯಿಂದ 'ಪೆದ್ದಿ' ಅತ್ಯುತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಸಿನಿಮಾ ಔಟ್‌ಪುಟ್ ಅದ್ಭುತವಾಗಿ ಮೂಡಿಬಂದಿದೆ ಎಂದು ತೆಲುಗು ಫಿಲ್ಮಿಬೀಟ್ ವರದಿ ಮಾಡಿದೆ.
ಪೆದ್ದಿ ಹೈಲೈಟ್ ಏನು?
ರಾಮ್ ಚರಣ್ 'ಪೆದ್ದಿ' ಸಿನಿಮಾವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿಯ ಸದಸ್ಯರು ಸ್ಟೋರಿ ಹಾಗೂ ನರೇಷನ್‌ಗೆ ಸಂಪೂರ್ಣವಾಗಿ ಮನಸೋತಿದ್ದಾರೆ. ಸಿನಿಮಾದಲ್ಲಿ ಹಲವು ಆಕರ್ಷಣೆಗಳನ್ನು ಪಟ್ಟಿ ಮಾಡಲಾಗಿದೆ. ಈ ಸಿನಿಮಾದಲ್ಲಿ ಪ್ರೇಕ್ಷಕರು ಹೈ-ವೋಲ್ಟೇಜ್ ಆಕ್ಷನ್ ಹಾಗೂ ಎಮೋಷನ್ ದೃಶ್ಯಗಳನ್ನು ವೀಕ್ಷಣೆ ಮಾಡಬಹುದು. ಸಿನಿಮಾದಲ್ಲಿ ಮಾಸ್ ದೃಶ್ಯಗಳಿಗೆ ಎಷ್ಟು ಪ್ರಾಮುಖ್ಯತೆ ನೀಡಲಾಗಿದೆಯೋ ಅಷ್ಟೇ ಪ್ರಾಮುಖ್ಯತೆಯನ್ನು ಭಾವನಾತ್ಮಕ ಸನ್ನಿವೇಶಗಳಿಗೂ ನೀಡಲಾಗಿದೆ. ಆಕ್ಷನ್ ಹಾಗೂ ಮಾಸ್ ದೃಶ್ಯಗಳಿಗಾಗಿ ಸಿನಿಮಾಗೆ 'U/A' ಸರ್ಟಿಫಿಕೇಟ್ ನೀಡಲಾಗಿದೆ. ಹೀಗಿದ್ದರೂ ಇಡೀ ಕುಟುಂಬ ಕೂತು ನೋಡಬಹುದಾದ ಕಮರ್ಷಿಯಲ್ ಎಂಟರ್‌ಟೈನರ್ ಸಿನಿಮಾ ಎಂಬ ಅಭಿಪ್ರಾಯ ಬಂದಿದೆ.

ರಾಮ್ ಚರಣ್ ಒನ್-ಮ್ಯಾನ್ ಶೋ
ರಾಮ್ ಚರಣ್‌ಗೆ 'ಪೆದ್ದಿ' ತುಂಬಾನೇ ಮುಖ್ಯ. 'ಗೇಮ್ ಚೇಂಜರ್' ಹೀನಾಯ ಸೋಲಿನ ಬಳಿಕ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲ್ಲಲೇ ಬೇಕಾದ ಅನಿವಾರ್ಯತೆಯಿದೆ. ರಾಮ್ ಚರಣ್ ಈ ಚಿತ್ರದಲ್ಲಿ ಪವರ್‌ಫುಲ್ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮೆಗಾ ಪವರ್‌ಸ್ಟಾರ್ ನಟನೆ, ಡೈಲಾಗ್ ಡೆಲಿವರಿ ಹಾಗೂ ಮ್ಯಾನರಿಸಂ ಇಡೀ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲ್ಲುವಂತೆ ಮಾಡುತ್ತವೆ. ಇನ್ನು ಜಾಹ್ನವಿ ಕಪೂರ್ ರಾಮ್ ಚರಣ್‌ಗೆ ಪರ್ಫೆಕ್ಟ್ ಜೋಡಿಯಾಗಿ ಅನ್ನೋ ಭಾವನೆ ಮೂಡುತ್ತೆ ಅನ್ನೋ ಅಭಿಪ್ರಾಯ ವ್ಯಕ್ತವಾಗಿದೆ.
ಪರ್ಫಾಮೆನ್ಸ್ ಹೇಗಿದೆ?
ರಾಮ್ ಚರಣ್ ಜೊತೆ ಶಿವಣ್ಣನ ಪಾತ್ರದ ಮೇಲೂ ನಿರೀಕ್ಷೆಯಿದೆ. ಈ ಸಿನಿಮಾದಲ್ಲಿ ಶಿವಣ್ಣ ವಿಶೇಷ ಪಾತ್ರದಲ್ಲಿ ನಟಿಸಿದ್ದರೂ, ಶಿಳ್ಳೆಗಳು ಬೀಳೋದು ಗ್ಯಾರಂಟಿ ಅನ್ನೋ ಅಭಿಪ್ರಾಯ ವ್ಯಕ್ತವಾಗಿದೆ. ಸುಮಾರು 20 ನಿಮಿಷಗಳಷ್ಟು ಶಿವಣ್ಣ ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳುತ್ತಾರೆಂಬ ಅಭಿಪ್ರಾಯ ವ್ಯಕ್ತವಾಗಿದೆ.
ಕೊನೆಯ ಹಂತದ ಪ್ರಚಾರ
ರಾಮ್ ಚರಣ್ 'ಪೆದ್ದಿ'ಗೆ ಸೆನ್ಸಾರ್ ಮಂಡಳಿಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಈ ಸಿನಿಮಾ ಅನೌನ್ಸ್ ಆದ ದಿನದಿಂದಲೂ ಭಾರಿ ಕುತೂಹಲವನ್ನು ಮೂಡಿಸಿದೆ. ಕಮರ್ಷಿಯಲ್ ಅಂಶಗಳ ಜೊತೆಗೆ ಹಳ್ಳಿಯ ಹಿನ್ನೆಲೆಯುಳ್ಳ ಕಥೆಯನ್ನು ತೆರೆಮೇಲೆ ತರಲಾಗಿದೆ. ಸದ್ಯ ಸೆನ್ಸಾರ್ ಪ್ರಕ್ರಿಯೆ ಮುಗಿದಿದ್ದು, ದೇಶಾದ್ಯಂತ ಕೊನೆಯ ಹಂತದ ಪ್ರಚಾರ ಮಾಡುವುದಕ್ಕೆ ಚಿತ್ರತಂಡ ಮುಂದಾಗಿದೆ. 'ಪೆದ್ದಿ' ಬಿಡುಗಡೆಗೆ ಕೌಂಟ್‌ಡೌನ್ ಶುರುವಾಗಿದ್ದು, ಥಿಯೇಟರ್‌ಗಳಲ್ಲಿ ರಾಮ್ ಚರಣ್ ಅಬ್ಬರವನ್ನು ಕಣ್ಣುಂಬಿಕೊಳ್ಳಲು ಮಾಸ್ ಪ್ರೇಕ್ಷಕರು ದಿನಗಣನೆ ಆರಂಭಿಸಿದ್ದಾರೆ.


Click it and Unblock the Notifications
