Laughing Buddha Review:ಇದು ಪೊಲೀಸಪ್ಪನ ತೂಕದ ಕಥೆ: ಲಾಫಿಂಗ್ ಜೊತೆ ಸಸ್ಪೆನ್ಸ್ ಉಚಿತ
ಈ ವಾರ ಎರಡು ನಿರೀಕ್ಷೆಯ ಸಿನಿಮಾಗಳು ರಿಲೀಸ್ ಆಗಿವೆ. ವಿನಯ್ ರಾಜ್‌ಕುಮಾರ್ ನಟನೆಯ 'ಪೆಪೆ'. ಇನ್ನೊಂದು ಕಡೆ ರಿಷಬ್ ಶೆಟ್ಟಿ ನಿರ್ಮಾಣದಲ್ಲಿ ಪ್ರಮೋದ್ ಶೆಟ್ಟಿ ನಟಿಸಿರುವ 'ಲಾಫಿಂಗ್ ಬುದ್ಧ'. ಭರ್ಜರಿಯಾಗಿ ಪ್ರಮೋಷನ್ ಮಾಡಿ ಚಿತ್ರಮಂದಿರಕ್ಕೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದೆ. ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಸಿನಿಮಾದ ಟೈಟಲ್ ಹೇಳುವಂತೆ ಇಲ್ಲಿ ನಗುವಿಗೆ ಹೆಚ್ಚು ಪ್ರಾಮುಖ್ಯತೆ.
ಹಾಗಂತ ಭರತ್ ರಾಜ್ ರಿಷಬ್ ಶೆಟ್ಟಿ ಕೇವಲ ನಗಿಸುವುದಷ್ಟೇ ಅಲ್ಲ ಕಥೆಯಲ್ಲೊಂದು ಸಸ್ಪೆನ್ಸ್ ಇಟ್ಟಿದ್ದಾರೆ. ಕಥೆ ಮೇಲ್ನೋಟಕ್ಕೆ ಪೊಲೀಸಪ್ಪನ ತೂಕದ ಕಥೆಯಾಗಿದ್ದರೂ, ಇಲ್ಲೊಂದಿಷ್ಟು ಗಮನ ಕೊಡಬಹುದಾದ ಅಂಶಗಳು ಇವೆ. 'ಲಾಫಿಂಗ್ ಬುದ್ಧ'ನ ಕಥೆಗೆ ನಗುವಿನ ಜೊತೆಗೆ ಸಸ್ಪೆನ್ಸ್ ಟಚ್ ಕೊಟ್ಟು ಪ್ರೇಕ್ಷಕರಿಗೆ ಹೊಸ ಅನುಭವವನ್ನು ಕೊಡುವುದಕ್ಕೆ ಹೊರಟಿದ್ದಾರೆ. ಹಾಗಿದ್ರೆ ಈ ಸಿನಿಮಾ ಹೇಗಿದೆ? ಹೈಲೈಟ್ಸ್ ಏನು? ತಿಳಿಯಲು ಮುಂದೆ ಓದಿ.

'ಲಾಫಿಂಗ್ ಬುದ್ಧ'ನ ಕಥೆಯೇನು?
ಶಿವಮೊಗ್ಗದ ನೀರೂರಿನ ಪೊಲೀಸ್ ಕಾನ್‌ಸ್ಟೆಬಲ್‌ನಿಂದ ಈ ಸಿನಿಮಾದ ಕಥೆ ಆರಂಭ ಆಗುವುದು. ನೀರೂರು ಪೊಲೀಸ್ ಕಾನ್‌ಸ್ಟೆಬಲ್ ಗೋವರ್ಧನ್ (ಪ್ರಮೋದ್ ಶೆಟ್ಟಿ) ತಿಂಡಿ ಪೋತ. ಫಿಟ್ನೆಸ್ ಇಲ್ಲದ ಈ ಕಾನ್‌ಸ್ಟೆಬಲ್ ನೋಡಿ ಆಡಿಕೊಳ್ಳುವವರೇ ಹೆಚ್ಚು. ಹಾಗಂತ ಕೇಸ್‌ಗಳನ್ನು ಭೇದಿಸುವ ವಿಚಾರದಲ್ಲೂ ಎತ್ತಿದ ಕೈ. ಆದರೆ, ಕೇಸ್‌ಗಿಂತಲೂ ತುಸು ಹೆಚ್ಚು ತಿನ್ನುವುದರಲ್ಲಿ ಆಸಕ್ತಿ ಹೆಚ್ಚು. ಯಾರು ಏನೇ ಅಂದೂ ಗೋವರ್ಧನ್ ತಿಂದ್ಕೊಂಡು, ಹೊಟ್ಟೆ ಬೆಳೆಸಿಕೊಂಡು ತನ್ನಷ್ಟಕ್ಕೆ ತಾನಿರುತ್ತಾನೆ. ಅದೇ ಇದೇ ಹೊಟ್ಟೆ ಮುಂದೆ ಈತನ ಕೆಲಸಕ್ಕೂ ಕುತ್ತು ತರುತ್ತೆ. ಆಗ ಸಿನಿಮಾದಲ್ಲೊಂದು ಟ್ವಿಸ್ಟ್. ಅಲ್ಲಿಂದ ಅಸಲಿಗೆ ಕಥೆ ಶುರು. ಅದೇನು ಅನ್ನೋದನ್ನು ಸಿನಿಮಾದಲ್ಲಿಯೇ ನೋಡಿ.
ಫಸ್ಟ್ ಹಾಫ್ ಹೇಗಿದೆ?
ಪ್ರಮೋದ್ ಶೆಟ್ಟಿ ಹೆಚ್ಚು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೂ, ಅವರನ್ನು ಗಂಭೀರ ಪಾತ್ರಕ್ಕೂ ಬಳಸಿಕೊಂಡಿದ್ದಾರೆ. ಹಾಗೇ ಹಾಸ್ಯ ಪಾತ್ರಗಳಿಗೂ ಬಳಸಿಕೊಂಡಿದ್ದಾರೆ. ಇಲ್ಲಿ ನಿರ್ದೇಶಕರು ಅವೆರಡನ್ನೂ ಒಂದೇ ಸಿನಿಮಾ ತರುವುದಕ್ಕೆ ಹೊರಟಿದ್ದಾರೆನೋ ಅಂತ ಅನಿಸುತ್ತೆ. ಮೊದಲಾರ್ಧದಲ್ಲಿ 'ಲಾಫಿಂಗ್ ಬುದ್ಧ' ಪ್ರೇಕ್ಷಕರನ್ನು ನಗಿಸುತ್ತೆ. ಫಿಟ್ನೆಸ್ ಇಲ್ಲದ ಕಾನ್‌ಸ್ಟೆಬಲ್ ಪಾಡನ್ನು ಹಾಸ್ಯದ ರೂಪದಲ್ಲಿ ಹೇಳಲಾಗಿದೆ. ಫಸ್ಟ್ ಕಾಮಿಡಿಯ ಎಲಿಮೆಂಟ್ಸ್‌ನಿಂದ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತೆ.
ಸೆಕೆಂಡ್ ಹಾಫ್ ಹೇಗಿದೆ?
ಫಸ್ಟ್ ಹಾಫ್ ನಗುವಿಗೆ ಹೆಚ್ಚಿನ ಆದ್ಯತೆಯಾದರೆ, ಸೆಕೆಂಡ್ ಹಾಫ್ ಟ್ವಿಸ್ಟ್ ಅಂಡ್ ಸಸ್ಪೆನ್ಸ್‌ಗೆ ಹೆಚ್ಚಿನ ಒತ್ತು ಕೊಡಲಾಗಿದೆ. ಇದು ಪ್ರೇಕ್ಷಕರನ್ನು ಆಗಾಗ ಕುತೂಹಲಕ್ಕೆ ತಂದೊಡ್ಡುತ್ತೆ. ಒಟ್ನಲ್ಲಿ ಪ್ರೇಕ್ಷಕರಿಗೆ ನಗುವಿನ ಮೂಲಕ ಮನರಂಜನೆಯನ್ನೂ ನೀಡುತ್ತೆ. ಹಾಗೇ ಸಸ್ಪೆನ್ಸ್ ಮೂಲಕ ಥ್ರಿಲ್ ಅನ್ನೂ ನೀಡುತ್ತೆ. ಆದರೂ ಕೆಲವು ಕುಂದು ಕೊರತೆಗಳು ಕಾಣುತ್ತವೆ.

ದಿಗಂತ್ ಪಾತ್ರ ಟರ್ನಿಂಗ್ ಪಾಯಿಂಟ್
ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾದಲ್ಲಿ ದಿಗಂತ್ ಕೂಡ ಕಾಣಿಸಿಕೊಂಡಿದ್ದಾರೆ. ಇವರ ಪಾತ್ರ ಈ ಸಿನಿಮಾದ ಹೈಲೈಟ್. ರಿಷಬ್ ಶೆಟ್ಟಿನೇ ಈ ಪಾತ್ರದಲ್ಲಿ ನಟಿಸಬೇಕಿತ್ತು. ಆದರೆ, ಕೊನೆಯಲ್ಲಿ ಅದು ದಿಗಂತ್ ಪಾಲಾಯ್ತು. ದೂಡ್ ಪೇಡ ದಿಗಂತ್ ಪಾತ್ರವೇ 'ಲಾಫಿಂಗ್ ಬುದ್ಧ' ಸಿನಿಮಾದ ಕಥೆಗೊಂದು ತಿರುವು ನೀಡುತ್ತೆ. ಇಲ್ಲಿಂದ ಕಥೆಯ ಗತಿ ಬೇರೆಯಾಗುತ್ತೆ.
ಯಾವ ಪಾತ್ರ ಹೇಗಿದೆ?
ಡೊಳ್ಳೊಟ್ಟೆ ಬಿಟ್ಟುಕೊಂಡು ಪ್ರಮೋದ್ ಶೆಟ್ಟಿ ಈ ಸಿನಿಮಾ ಹೈಲೈಟ್. ಎಮೋಷನ್ಸ್ ಅನ್ನು ಹೊರ ಹಾಕುವಲ್ಲಿ ಇವರಿಗೆ ಪ್ರೇಕ್ಷಕರಿಗೆ ಚಪ್ಪಾಳೆ ಸಿಗುತ್ತೆ. ಆಗಾಗ ನಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಥ್ರಿಲ್ಲಿಂಗ್ ಸೀನ್‌ಗಳಲ್ಲೂ ಗಮನ ಸೆಳೆಯುತ್ತಾರೆ. ದಿಗಂತ್ ಎಂದಿನಂತೆ ತನ್ನ ಮ್ಯಾನರಿಸಂನಿಂದ ಇಷ್ಟ ಆಗುತ್ತಾರೆ. ಹಾಗೇ ತೇಜು ಬೆಳವಾಡಿ ಹಾಗೂ ಹಿರಿಯ ನಟ ಸುಂದರ್ ರಾಜ್ ಕೂಡ ತಮ್ಮ ಪಾತ್ರಗಳ ಮೂಲಕ ಇಷ್ಟ ಆಗುತ್ತಾರೆ.
ಪ್ಲಸ್ ಏನು?
'ಲಾಫಿಂಗ್ ಬುದ್ಧ' ಎಂಟರ್‌ಟೈನರ್ ಸಿನಿಮಾ. ಫ್ಯಾಮಿಲಿ ಜೊತೆ ಆರಾಮಾಗಿ ಕೂತು ನೋಡಬಹುದು. ನಗು ಬೇಕು ಜೊತೆ ಥ್ರಿಲ್ಲಿಂಗ್ ಇರಬೇಕು ಅನ್ನೋರಿಗೆ ಈ ಸಿನಿಮಾ ಇಷ್ಟ ಆಗುತ್ತೆ. ಮ್ಯೂಸಿಕ್, ಕ್ಯಾಮರಾ ವರ್ಕ್, ಆರ್ಟ್ ವರ್ಕ್ ಎಲ್ಲವೂ ಸಿನಿಮಾದ ಕಥೆ ಬೇಕಾದಷ್ಟು ಇದೆ. ಫ್ಯಾಮಿಲಿ ಜೊತೆ ಥಿಯೇಟರ್‌ಗೆ ಬಂದು ಎಂಜಾಯ್ ಮಾಡಬಹುದು.
ಮೈನಸ್ ಏನು?
ಈ ಸಿನಿಮಾವನ್ನು ಅದ್ಭುತ ಅನ್ನುವಂತಹ ಸಿನಿಮಾಗಳ ಸಾಲಿಗೆ ಸೇರಿಸಲು ಆಗುವುದಿಲ್ಲ. ಅಲ್ಲಲ್ಲಿ ಡ್ರಾಮ ಹೆಚ್ಚಾಯ್ತು ಅನಿಸುತ್ತೆ. ಸ್ವಲ್ಪ ಚಿತ್ರಕಥೆಯನ್ನು ಟೈಟ್ ಮಾಡಿದ್ದರೆ, ಪ್ರೇಕ್ಷಕರಿಗೊಂದು ಪರ್ಫೆಕ್ಟ್ ಸಿನಿಮಾ ಸಿಗುತ್ತಿತ್ತೋ ಏನೋ? ಕೆಲವು ಕಡೆ ಇನ್ನೂ ಏನೋ ಬೇಕಿತ್ತು ಅಂತ ಅನಿಸುತ್ತೆ. ಉಳಿದಂತೆ ಸಿನಿಮಾ ನೀಟ್ ಆಗಿದೆ. ಒಮ್ಮೆ ನೋಡಲು ಅಡ್ಡಿಯಿಲ್ಲ.


Click it and Unblock the Notifications











