Moda Kavida Vatavarana Review: 'ಮೋಡ ಕವಿದ ವಾತಾವರಣ'ವಿದ್ದರೂ ತೊಂದರೆ ಇಲ್ಲ.. ಜಾಸ್ತಿನೇ ರಿಲ್ಯಾಕ್ಸ್ ಮಾಡಿದರೆ?
ಈ ವಾರ ಸ್ಯಾಂಡಲ್‌ವುಡ್‌ನಲ್ಲಿ ಎರಡು ಪ್ರಮುಖ ಸಿನಿಮಾಗಳು ರಿಲೀಸ್ ಆಗಿವೆ. ಒಂದು ವಿನೋದ್ ಪ್ರಭಾಕರ್ ನಟನೆಯ 'ಬಲರಾಮನ ದಿನಗಳು'. ಇನ್ನೊಂದು ಸಿನಿಮಾ ಸಿಂಪಲ್ ಸುನಿ ನಿರ್ದೇಶನದ 'ಮೋಡ ಕವಿದ ವಾತಾವರಣ'. ಸಿಂಪಲ್ ಸುನಿ ಎಂದ ಕೂಡಲೇ ಸಿನಿಮಾ ಕಥೆ ಕುತೂಹಲವನ್ನು ಕೆರಳಿಸುತ್ತೆ. ಅದರಲ್ಲೂ ಲವ್ ಸ್ಟೋರಿಗಳನ್ನು ವಿಶಿಷ್ಟವಾಗಿ ಹೇಳುವ ಪರಿಗೆ ಪ್ರೇಕ್ಷಕರು ಕ್ಲೀನ್ ಬೋಲ್ಡ್ ಆಗಿದ್ದರು.
ಸುನಿ ಸಿನಿಮಾಗಳ ಕಥೆ 'ಸರಳ'ವಾಗಿರುತ್ತೆ ಅನ್ನೋದು ಪ್ರೇಕ್ಷಕರ ನಂಬಿಕೆ. ಆದರೆ, ಈ ಬಾರಿ ಅದನ್ನು ಸುಳ್ಳು ಮಾಡುವುದಕ್ಕೆ ಹೊರಟಂತೆ ಇದೆ. ಸಿಂಪಲ್ ಸುನಿ ಸಿನಿಮಾ ಅಂದರೆ, ವಿಶಿಷ್ಟವಾದ ಪ್ರೇಮಕಥೆ, ಇಂಪಾದ ಹಾಡುಗಳು, ಚುರುಕಾದ ಸಂಭಾಷಣೆಗಳಿರುತ್ತವೆ. 'ಮೋಡ ಕವಿದ ವಾತಾವರಣ' ಹಾಗಿಲ್ಲ. ಪ್ರೇಮಕಥೆಯ ಜೊತೆಗೆ ಸೈಕಲಾಜಿಕಲ್ ಥ್ರಿಲ್ಲರ್ ಎಳೆಯನ್ನು ಸೇರಿಸಲಾಗಿದೆ.

ಶೀಲಂ ಸ್ವಾಮಿ, ಮೋಕ್ಷಾ ಕುಶಾಲ್ ಮತ್ತು ಸಾತ್ವಿಕಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ 'ಮೋಡ ಕವಿದ ವಾತಾವರಣ' ಹೇಗಿದೆ? ಸಿನಿಮಾ ಕಥೆಯೇನು? ಹೊಸ ಪ್ರತಿಭೆಗೆ ಗೆಲುವು ಕೊಡುತ್ತಾ ಸಿಂಪಲ್ ಸುನಿ ಸಿನಿಮಾ? ಥಿಯೇಟರ್‌ನಲ್ಲಿ ವಾತಾವರಣ ಹೇಗಿದೆ? ಸಿನಿಮಾದ ಪ್ಲಸ್ ಪಾಯಿಂಟ್ ಏನು? ಮೈನಸ್ ಪಾಯಿಂಟ್ ಏನು? ತಿಳಿಯುವುದಕ್ಕೆ ಮುಂದೆ ಓದಿ.
'ಮೋಡ ಕವಿದ ವಾತಾವರಣ' ಕಥೆಯೇನು?
ಸಿನಿಮಾ ತಂದೆ-ಮಗಳ ನಡುವಿನ ಸಂಭಾಷಣೆಯ ಮೂಲಕ ತೆರೆದುಕೊಳ್ಳುತ್ತದೆ. ಯಾಯಾತಿಯ ನಾಟಕದ ಹಿನ್ನೆಲೆಯಲ್ಲಿ ಆರಂಭಗೊಂಡ ಸಿನಿಮಾ ನಂತರ ಕೊಡಗಿನ ಒಂದು ಸುಂದರ ಹಾಗೂ ಪ್ರಕೃತಿ ರಮಣೀಯ ರೆಸಾರ್ಟ್‌ಗೆ ಸ್ಥಳಾಂತರಗೊಳ್ಳುತ್ತದೆ. ಸಿನಿಮಾದ ಹೀರೋ ಚೆರಿಶ್ (ಶೀಲಂ) ಮತ್ತು ಸಾತ್ವಿಕಾ (ಸಾತ್ವಿಕಾ) ಜೋಡಿಗೆ ಅದೇ ರೆಸಾರ್ಟ್‌ಗೆ ಬಂದಿದ್ದ ಸೌಪರ್ಣಿಕಾ (ಮೋಕ್ಷಾ) ಹಾಗೂ ಧನಂಜಯ್ ಪರಿಚಯವಾಗುತ್ತಾರೆ. ಸೌಪರ್ಣಿಕಾಗೆ ಒಂದು ಮಾನಸಿಕ ಸಮಸ್ಯೆ. ತನ್ನ ಈ ಸಮಸ್ಯೆಯಿಂದೆ ಒಬ್ಬ ನಿಗೂಢ ವ್ಯಕ್ತಿ ಇದ್ದಾನೆ ಎಂಬುದು ಆಕೆಯ ಆತಂಕ. ದೈಹಿಕವಾಗಿ ತನಗೆ ತೊಂದರೆ ಕೊಡದೇ ಹೋದರೂ, ಅವಳ ಡಿಜಿಟಲ್ ಜೀವನದ ಮೇಲೆ ಕಣ್ಣಿಟ್ಟಿದ್ದಾನೆ ಅನ್ನೋದು ಭಯ. ಈ ರಹಸ್ಯವನ್ನು ಭೇದಿಸಲು ಚೆರಿಶ್ ಮುಂದಾದಾಗ ಲವ್ ಸ್ಟೋರಿ ಸೈಕಲಾಜಿಕಲ್ ಮಿಸ್ಟರಿಯಾಗಿ ತಿರುಗುತ್ತೆ.
ಸಿನಿಮಾದ ಪ್ಲಸ್ ಏನೇನು?
ಅದ್ಭುತ ವಾತಾವರಣ: 'ಮೋಡ ಕವಿದ ವಾತಾವರಣ' ಬೆಸ್ಟ್ ಪಾರ್ಟ್ ಅಂದರೆ ವಾತಾವರಣ. ಮಳೆ, ಹಸಿರು ಬೆಟ್ಟ ಗುಡ್ಡಗಳು, ಕವಿತೆಗಳು ಹೈಲೈಟ್. ಇವೆಲ್ಲವನ್ನೂ ಕ್ಯಾಮರಾ ಕಣ್ಣುಗಳಲ್ಲಿ ಸೆರೆ ಹಿಡಿದ ಸಂತೋಷ್ ರೈ ಪತಾಜೆಗೆ ಮೇಲೆ ಮೆಚ್ಚುಗೆ ಭಾವನೆ ಮೂಡುತ್ತೆ. ಮಂಜು ಮತ್ತು ಮಳೆಯ ದೃಶ್ಯಗಳು ಇಲ್ಲಿ ಕೇವಲ ಹಿನ್ನೆಲೆಯಷ್ಟೇ ಅಲ್ಲ. ಕಥೆಯ ಭಾವನೆಗಳನ್ನು ಪ್ರತಿಬಿಂಬಿಸುತ್ತಿವೆಯೇನೋ ಅಂತ ಅನಿಸುತ್ತೆ.
ಹೊಸಬರ ನಟನೆ: ನಾಯಕ ಶೀಲಂ ಸ್ವಾಮಿ ಸಹಜ ನಟನೆ ಇಷ್ಟ ಆಗುತ್ತೆ. ಸ್ಯಾಂಡಲ್‌ವುಡ್‌ನಲ್ಲಿ ಒಬ್ಬ ಉತ್ತಮ ನಟನಾಗುವ ಭರವಸೆಯನ್ನು ಮೂಡಿಸಿದ್ದಾರೆ. ಸೌಪರ್ಣಿಕಾ ಪಾತ್ರದಲ್ಲಿ ಮೋಕ್ಷಾ ಕುಶಾಲ್ ಉತ್ತಮವಾಗಿ ನಟಿಸಿದ್ದಾರೆ. ಮಾನಸಿಕ ಏರಿಳಿತಗಳಿರುವ ತಮ್ಮ ಪಾತ್ರವನ್ನು ಅತ್ಯುತ್ತಮವಾಗಿ ನಿಭಾಯಿಸಿದ್ದಾರೆ. ಸಾಫ್ಟ್‌ವೇರ್ ಇಂಜಿನಿಯರ್ ಪಾತ್ರದಲ್ಲಿ ಸಾತ್ವಿಕಾ ಕೂಡ ಇಷ್ಟ ಆಗುತ್ತಾರೆ.
ಸಂಗೀತ, ಅತಿಥಿ ಪಾತ್ರಗಳು: 'ಮೋಡ ಕವಿದ ವಾತಾವರಣ'ಕ್ಕೆ ಜೂಡಾ ಸ್ಯಾಂಡಿ ಸಂಗೀತ ವಾತಾವರಣಕ್ಕೆ ತಕ್ಕಂತೆ ಮೂಡ್ ಅನ್ನು ಬದಲಿಸುತ್ತೆ. ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಟ ರಿಷಿ, ಮನ:ಶ್ಶಾಸ್ತ್ರಜ್ಞೆಯಾಗಿ ರೇಖಾ ಪ್ರಸಾದ್ ಪಾತ್ರಗಳು ಕಥೆಗೆ ಇನ್ನಷ್ಟು ಮರುಗು ನೀಡುತ್ತವೆ.

ಸಿನಿಮಾದ ಪ್ಲಸ್ ಏನೇನು?
ನಿಧಾನಗತಿ ನಿರೂಪಣೆ: ಸಿನಿಮಾ ನೋಡಲು ಹೋದ ಪ್ರೇಕ್ಷಕನಿಗೆ ಮೊದಲಾರ್ಧ ನಿಜಕ್ಕೂ 'ಮೋಡ ಕವಿದ ವಾತಾವರಣ'ವಿದೆಯೇನೋ ಎನ್ನುವಷ್ಟು ಭಾಸವಾಗುತ್ತೆ. ಫಸ್ಟ್ ಹಾಫ್ ತುಂಬಾನೇ ನಿಧಾನಗತಿಯಲ್ಲಿ ಸಾಗುತ್ತೆ. ಪ್ರೇಕ್ಷಕರ ತಾಳ್ಮೆಯನ್ನು ಪರೀಕ್ಷಿಸುತ್ತದೆ. ಲವ್ ಸ್ಟೋರಿ ಹಾಗೂ ಸೈಕಲಾಜಿಕಲ್ ಡ್ರಾಮಾವನ್ನು ಹದವಾಗಿ ಮಿಶ್ರಣ ಮಾಡುವಲ್ಲಿ ಸುನಿ ಎಡವಿದ್ದಾರೆಂದು ಅನಿಸುತ್ತೆ.
ಗೊಂದಲದ ಟ್ವಿಸ್ಟ್‌ಗಳು: ಫಸ್ಟ್ ಹಾಫ್ ನಿಧಾನಗತಿಯಲ್ಲಿ ಸಾಗುತ್ತಿದ್ದ ಕಥೆಗೆ ದ್ವಿತೀಯಾರ್ಧದಲ್ಲಿ ಕುತೂಹಲ ಮೂಡಿಸಲು ಸುನಿ ಮುಂದಾಗಿದ್ದಾರೆ. ಒಂದರ ಹಿಂದೊಂದು ಟ್ವಿಸ್ಟ್‌ಗಳನ್ನು ಸೃಷ್ಟಿಸಲು ಯತ್ನಿಸಿದ್ದಾರೆ. ಇದು ಸಿನಿಮಾಗೆ ಪ್ಲಸ್ ಆಗುವ ಬದಲು ಕಥೆಯಲ್ಲಿ ಇನ್ನಷ್ಟು ಗೊಂದಲವನ್ನು ಸೃಷ್ಟಿಸುತ್ತದೆ.
ಆಳವಾದ ವಿಶ್ಲೇಷಣೆ ಇಲ್ಲ: ಸಿಂಪಲ್ ಸುನಿ ತಮ್ಮ ಕಥೆಯಲ್ಲಿ 'ಕ್ಲಸ್ಟರ್ ಪರ್ಸನಾಲಿಟಿ ಡಿಸಾರ್ಡರ್' (Cluster Personality Disorder) ಎಂಬ ಮಾನಸಿಕ ಸಮಸ್ಯೆಯನ್ನು ಬಳಸಿಕೊಂಡಿದ್ದಾರೆ. ಆದರೆ, ಪ್ರೇಕ್ಷಕನಿಗೆ ಅದರ ಪ್ರಾಮುಖ್ಯತೆಯನ್ನು ಆಳವಾಗಿ ತೋರಿಸುವುದರಲ್ಲಿ ಹಿಂದೆ ಬಿದ್ದಿದ್ದಾರೆ. ಇನ್ನು ಸುನಿಯ ನಿರೂಪಣೆ
ಪ್ರೇಕ್ಷಕರಿಗೆ ಭಾವನಾತ್ಮಕ ಕನೆಕ್ಟ್ ಆಗುವುದಿಲ್ಲ.
ಕೊನೆಯಲ್ಲಿ..
'ಮೋಡ ಕವಿದ ವಾತಾವರಣ' ಕನ್ನಡದ ಮಟ್ಟಿಗೆ ಒಂದೊಳ್ಳೆ ಪ್ರಯತ್ನ. ಕಥೆ ವಿಶಿಷ್ಟವಾಗಿದೆ. ತಾಂತ್ರಿಕ ಗುಣಮಟ್ಟ ಉತ್ತಮವಾಗಿದ್ದರೂ, ಸ್ಕ್ರೀನ್‌ಪ್ಲೇನಲ್ಲಿ ಗೊಂದಲ ಎದ್ದು ಕಾಣುತ್ತೆ. ಸುನಿಯ ಈ ಹಿಂದಿನ ಸಿನಿಮಾಗಳನ್ನು ನೋಡಿ ಥಿಯೇಟರ್‌ಗೆ ಹೋದವರಿಗೆ 'ಮೋಡ ಕವಿದ ವಾತಾವರಣ' ಸೃಷ್ಟಿಯಾಗಬಹುದು.


Click it and Unblock the Notifications
