Sanju weds Geetha 2 Review:ಪ್ರೀತಿನೂ ಇಲ್ಲ.. ಭಾವನೆಗಳೂ ಇಲ್ಲ.. ಮಿಸ್ಸಿಂಗ್ ಮಿಸ್ಸಿಂಗ್ ಎಲ್ಲಾ ಮಿಸ್ಸಿಂಗ್!
2011ರಲ್ಲಿ ತೆರೆಕಂಡಿದ್ದ 'ಸಂಜು ವೆಡ್ಸ್ ಗೀತಾ' ಕನ್ನಡ ಸಿನಿಪ್ರಿಯರನ್ನು ಮನಸೂರೆಗೊಳಿಸಿದ ಸಿನಿಮಾ. ಸಿನಿಮಾದ ಕಥೆ, ನಿರ್ದೇಶನ, ಸಂಗೀತ, ಶ್ರೀನಗರ ಕಿಟ್ಟಿ, ಮೋಹಕತಾರೆ ರಮ್ಯಾ ಎಲ್ಲವೂ ಇಷ್ಟ ಆಗಿತ್ತು. ಕಷ್ಟದಲ್ಲೇ ಸಿನಿಮಾ ನಿರ್ಮಾಣ ಮಾಡಿ ಇಡೀ ಚಿತ್ರತಂಡ ಗೆದ್ದು ಬೀಗಿತ್ತು. ಸಂಜು ಮತ್ತು ಗೀತಾ ಲವ್ ಸ್ಟೋರಿಯನ್ನು ಕಣ್ತುಂಬಿಕೊಂಡು ಹಾಡಿ ಹೊಗಳಿತ್ತು. ಆದರೆ, 'ಸಂಜು ವೆಡ್ಸ್ ಗೀತಾ 2'....?
ಹೆಚ್ಚು ಕಡಿಮೆ 14 ವರ್ಷಗಳ ಬಳಿಕ ಕನ್ನಡದ ಬೆಸ್ಟ್ ಲವ್ ಸ್ಟೋರಿಗಳಲ್ಲಿ ಒಂದಾದ 'ಸಂಜು ವೆಡ್ಸ್ ಗೀತಾ' ಸೀಕ್ವೆಲ್ ರಿಲೀಸ್ ಆಗಿದೆ. ಹೆಚ್ಚು ಕಡಿಮೆ ಅದೇ ತಂಡ ಪಾರ್ಟ್ ಮಾಡಿದೆ. ಅದೇ ನಿರ್ದೇಶಕರು, ಅದೇ ಛಾಯಾಗ್ರಾಹಕರು, ಅದೇ ಹೀರೋ, ಹೀರೋಯಿನ್ ಅಷ್ಟೇ ಬೇರೆ. ಹೀಗಿದ್ದರೂ ಸೀಕ್ವೆಲ್ ಬಹಳಷ್ಟು ವಿಷಯಗಳನ್ನು ಬಿಟ್ಟುಕೊಟ್ಟಿದೆ.

'ಸಂಜು ವೆಡ್ಸ್ ಗೀತಾ 2' ಬಿಡುಗಡೆಗೂ ಮುನ್ನ ಒಂದಿಷ್ಟು ಸಂಕಷ್ಟಗಳನ್ನು ಎದುರಿಸಿತ್ತು. ರಿಲೀಸ್ ಬಳಿಕ ಆ ಕಷ್ಟಗಳು ಕಳೆದು ಹೋಗಬಹುದೆಂಬ ನಿರೀಕ್ಷೆ ಇತ್ತು. ಅದೆಲ್ಲವೂ ಹುಸಿಯಾದಂತೆ ಕಾಣುತ್ತಿದೆ. ಭಾವನಾತ್ಮಕ ಪ್ರೇಮಕಥೆಗಳನ್ನು ಕಟ್ಟಿಕೊಡುವ ಸದಾ ಗೆಲ್ಲುತ್ತಿದ್ದ ನಿರ್ದೇಶಕ ನಾಗಶೇಖರ್ ಈ ಸಿನಿಮಾದಲ್ಲಿ ಸೋತಿದ್ದಾರೆ. ಅದಕ್ಕೆ ಕಾರಣ ಏನು? ಈ ಸಿನಿಮಾದಲ್ಲಿ ಪ್ಲಸ್ ಏನಿದೆ? ಮೈನಸ್ ಎಷ್ಟಿದೆ? ಅನ್ನೋದನ್ನು ನೋಡೋಣ.
ಸಂಜು ಮತ್ತು ಗೀತಾಳ ಕಥೆಯೇನು?
ಸಿನಿಮಾದ ಕತೆಯ ಎಳೆ ಹೇಳುವುದಕ್ಕೂ ಮುನ್ನವೇ ಒಂದು ಸೂಚನೆ. ಇದು 'ಸಂಜು ವೆಡ್ಸ್ ಗೀತಾ' ಸಿನಿಮಾದ ಮುಂದುವರೆದ ಭಾಗ ಅಲ್ಲ. ಇದು ಶಿಡ್ಲಘಟ್ಟದ ರೇಷ್ಮೆ ವ್ಯಾಪಾರಿ ಸಂಜು (ಶ್ರೀನಗರ ಕಿಟ್ಟಿ) ಮತ್ತು ಉದ್ಯಮಿಯ ಪುತ್ರಿ ಗೀತಾ (ರಚಿತಾ ರಾಮ್) ಇಬ್ಬರ ಪ್ರೇಮ ಕಥೆ. ಸಂಜು ಕೊಟ್ಟ ರೇಷ್ಮೆ ಸೀರೆ ಗೀತಾಳನ್ನು 'ಮಿಸ್ ಕರ್ನಾಟಕ' ಪಟ್ಟ ಗೆಲ್ಲುವಂತೆ ಮಾಡುತ್ತೆ. ಅಲ್ಲಿಂದ ಇಬ್ಬರ ನಡುವೆ ಪ್ರೀತಿ ಚಿಗುರುತ್ತೆ. ರೆಗ್ಯೂಲರ್ ಸಿನಿಮಾದಂತೆ ಹುಡುಗಿಯ ಅಪ್ಪನಿಂದ ವಿರೋಧ ಎದುರಾಗುತ್ತೆ. ಈಗ ಇಬ್ಬರು ಒಂದಾಗುತ್ತಾರಾ? ಇಲ್ವಾ? ಅನ್ನೋದು ಒಂದೆಳೆ ಕಥೆ.

ಸಿನಿಮಾದಲ್ಲಿ ಏನೇನಿದೆ?
'ಸಂಜು ವೆಡ್ಸ್ ಗೀತಾ 2' ಕಥೆಯನ್ನು ಹೆಣೆಯುವಲ್ಲಿ ನಾಗಶೇಖರ್ ಎಡವಿರೋದು ಮೊದಲಾರ್ಧದಲ್ಲಿಯೇ ಗೊತ್ತಾಗುತ್ತೆ. ಸಮಸ್ಯೆಯನ್ನು ಹೇಳಬೇಕಾ? ಪ್ರೀತಿಯನ್ನು ತೋರಿಸಬೇಕಾ? ಅನ್ನೋದ ಗೊಂದಲಕ್ಕೆ ಬಿದ್ದವರಂತೆ ಕಾಣುತ್ತದೆ. ಸಂಜು ಮತ್ತು ಗೀತಾಳ ಲವ್ ಸ್ಟೋರಿ, ಅವರ ದಾಂಪತ್ಯ, ಅದರಲ್ಲಿರು ಸಮಸ್ಯೆ. ಇವುಗಳ ಮಧ್ಯೆ ನೇಕಾರರ ಸಮಸ್ಯೆಗಳನ್ನು ತಂದು ಇಟ್ಟು ಏನೋ ಹೇಳಿವುದಕ್ಕೆ ಹೋಗಿ. ಏನೋ ಹೇಳಿದಂತೆ ಭಾಸವಾಗುತ್ತೆ.
ಯಾರ್‍ಯಾರ ನಟನೆ ಹೇಗಿದೆ?
ಶ್ರೀನಗರ ಕಿಟ್ಟಿ ಹಾಗೂ ರಚಿತಾ ರಾಮ್ ಅವರ ಪಾತ್ರಗಳನ್ನು ಎಂದಿನಂತೆ ಸಮರ್ಥವಾಗಿ ನಿಭಾಯಿಸಿದ್ದಾರೆ. ಇನ್ನು ಸಂಪತ್ ಕುಮಾರ್, ಸಾಧು ಕೋಕಿಲಾ, ತಬಲಾ ನಾಣಿ ಅಂತಹ ನಟರನ್ನು ಬಳಸಿಕೊಂಡಿಲ್ಲ. ಅವರಿಗಾಗಿ ಇನ್ನೊಂದಿಷ್ಟು ಉತ್ತಮ ಸೀನ್‌ಗಳನ್ನು, ಹಾಸ್ಯ ಸನ್ನಿವೇಶಗಳನ್ನು ಸೃಷ್ಟಿಸಬಹುದಿತ್ತು. ಆ ಕೊರತೆ ಸಿನಿಮಾದಲ್ಲಿ ಹೆಚ್ಚಾಗಿ ಕಾಣಿಸುತ್ತಿದೆ.
ಸಿನಿಮಾದ ಪ್ಲಸ್ ಏನು?
'ಸಂಜು ವೆಡ್ಸ್ ಗೀತಾ 2' ಸಿನಿಮಾದಲ್ಲಿ ಪ್ಲಸ್ ಪಾಯಿಂಟ್ ಅಂತ ಕಾಣುವುದು ಎರಡೇ. ಒಂದು ಶ್ರೀಧರ್ ವಿ ಸಂಭ್ರಮ್ ಅವರ ನೀಡಿದ ಸಂಗೀತ. ಇನ್ನೊಂದು ಸತ್ಯ ಹೆಗಡೆಯವರ ಕ್ಯಾಮರಾ ವರ್ಕ್. ಸಂಗೀತ ಪ್ರಿಯರಿಗೆ ಹಾಡುಗಳು ಇಷ್ಟ ಆಗುತ್ತವೆ. ಮೆಲೋಡಿ ಟ್ರ್ಯಾಕ್‌ಗಳಿಗೆ ತಕ್ಕಂತೆ ಛಾಯಾಗ್ರಹಣವಿದೆ. ಸ್ವಿಡ್ಜರ್‌ಲ್ಯಾಂಡ್‌ನ ಸುಂದರ ತಾಣಗಳನ್ನು ಸತ್ಯ ಹೆಗಡೆಯವರ ಕೈ ಚಳಕದಿಂದ ಕಣ್ತುಂಬಿಕೊಳ್ಳಬಹುದು. ಅದು ಬಿಟ್ಟರೆ ಮತ್ತೇನು ಕಾಣುವುದಿಲ್ಲ.
ಸಿನಿಮಾದ ಮೈನಸ್ ಏನು?
ನಾಗಶೇಖರ್ ಕಥೆ, ಚಿತ್ರಕಥೆ. ಈ ಎರಡೂ ವಿಭಾಗದಲ್ಲೂ ಸಾಕಷ್ಟು ಕೊರತೆಗಳು ಎದ್ದು ಕಾಣುತ್ತವೆ. ಇಷ್ಟು ದಿನ ಪ್ರೇಕ್ಷಕರನ್ನು ಪ್ರೀತಿಯಲ್ಲಿ ಮುಳುಗಿಸಿ, ಕಣ್ಣೀರಿನಲ್ಲಿ ಚಿತ್ರಮಂದಿರದಿಂದ ಹೊರಗೆ ಕರೆದುಕೊಂಡು ಬರುತ್ತಿದ್ದ ನಿರ್ದೇಶಕರು ಈ ಬಾರಿ ವಿಫಲರಾಗಿದ್ದಾರೆ. ಇದಕ್ಕೆ ಓವರ್ ಕಾನ್ಫಿಡೆನ್ಸ್ ಅನ್ನಬಹುದಾ? ಗೊತ್ತಿಲ್ಲ. ಅದಕ್ಕೆ ನಾಗಶೇಖರ್ ಅವರೇ ಉತ್ತರಿಸಬೇಕು. ಅದ್ಬುತ ಕಲಾವಿದರನ್ನು ಬಳಸಿಕೊಳ್ಳದೆ ಇರೋದು ಈ ಸಿನಿಮಾ ಮತ್ತೊಂದು ಕೊರತೆ. ಒಟ್ನಲ್ಲಿ 'ಸಂಜು ವೆಡ್ಸ್ ಗೀತಾ 2' ಮೇಲೆ ಇಟ್ಟಿದ್ದ ನಿರೀಕ್ಷೆ ಹುಸಿಯಾಗಿದೆ.


Click it and Unblock the Notifications











