Jaat First Review:ಸನ್ನಿ ಡಿಯೋಲ್ ಸಿನಿಮಾ 'ಪೈಸಾ ವಸೂಲ್'; ತೆಲುಗು ನಿರ್ದೇಶಕ ಗೆಲ್ತಾನಾ?
ಸನ್ನಿ ಡಿಯೋಲ್ 'ಗದರ್ 2' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. 2023ರಲ್ಲಿ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಇತಿಹಾಸವನ್ನೇ ಬರೆದಿತ್ತು. ಇನ್ನೇನು ಸನ್ನಿ ಡಿಯೋಲ್ ಅನ್ನು ಜನರು ಮರೆತೇ ಬಿಟ್ಟರು ಅನ್ನುವಾಗಲೇ ಬಾಕ್ಸಾಫೀಸ್‌ನಲ್ಲಿ 'ಗದರ್ 2' 700 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಈ ಮೂಲಕ ಸನ್ನಿ ಮತ್ತೆ ಆಕ್ಷನ್‌ಗೆ ಮರಳಿದ್ದರು. ಇದೇ ಯಶಸ್ಸಿನ ಬೆನ್ನಲ್ಲೇ ಮತ್ತೊಂದು ಸಿನಿಮಾ 'ಜಾಟ್' ರಿಲೀಸ್‌ಗೆ ರೆಡಿಯಾಗಿದೆ.
ಏಪ್ರಿಲ್ 10ರಂದು 'ಜಾಟ್' ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ವಿಶೇಷ ಅಂದರೆ, ಈ ಸಿನಿಮಾವನ್ನು ತೆಲುಗಿನ ಹಿಟ್ ನಿರ್ದೇಶಕ ಗೋಪಿಚಂದ್ ಮಲಿನೇನಿ ಆಕ್ಷನ್ ಕಟ್ ಹೇಳಿದ್ದಾರೆ. ತೆಲುಗಿನಲ್ಲಿ 'ಕ್ರ್ಯಾಕ್', 'ವೀರ ಸಿಂಹ ರೆಡ್ಡಿ' ಅಂತಹ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ಗೋಪಿಚಂದ್‌ಗೆ 'ಜಾಟ್' ಮೊದಲ ಬಾಲಿವುಡ್ ಎಂಟ್ರಿ. ಹೀಗಾಗಿ ಇದು ಉತ್ತರ ಹಾಗೂ ದಕ್ಷಿಣ ಭಾರತದ ಕಾಂಬಿನೇಷನ್ ಸಿನಿಮಾ ಎನ್ನಬಹುದು.

ನಾಳೆ (ಏಪ್ರಿಲ್ 10) ರಿಲೀಸ್ ಆಗುತ್ತಿರುವ ಈ ಸಿನಿಮಾ ಬಗ್ಗೆ ಈಗಾಗಲೇ ಮೊದಲ ವಿಮರ್ಶೆ ಹೊರಬಿದ್ದಿದೆ. ಸ್ವಯಂ ಘೋಷಿತ ದುಬೈ ಮೂಲದ ವಿವಾದಾತ್ಮಕ ವಿಮರ್ಶಕ ಉಮೈರ್ ಸಂಧು 'ಜಾಟ್' ಸಿನಿಮಾ ಬಗ್ಗೆ ಈಗಾಗಲೇ ವಿಮರ್ಶೆಯೊಂದನ್ನು ಪೋಸ್ಟ್ ಮಾಡಿದ್ದಾನೆ. ಈಗಾಗಲೇ ಈ ಸಿನಿಮಾ ನೋಡಿ 'ಪೈಸಾ ವಸೂಲ್' ಎಂದು ಹೇಳಿದ್ದಾರೆ. ಹಾಗಿದ್ದರೆ, ಈತನ ವಿಮರ್ಶೆಯಲ್ಲಿ ಏನು ಹೇಳಿದ್ದಾನೆ? ಎನ್ನುವುದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಬಾಲಿವುಡ್‌ನ ದಿಗ್ಗಜ ಸನ್ನಿ ಡಿಯೋಲ್ ಜೊತೆ ಮತ್ತೊಬ್ಬ ನಟ ರಣ್‌ದೀಪ್ ಹೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹಾಗೇ ಸಯ್ಯಾಮಿ ಖೇರ್, ದಕ್ಷಿಣ ಭಾರತದ ನಟರಾದ ರೆಜಿನಾ ಕಸ್ಸಂದ್ರ, ರಮ್ಯಾ ಕೃಷ್ಣನ್, ಜಗಪತಿ ಬಾಬು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇವರೊಂದಿಗೆ ಬಬ್ಲು ಪೃಥ್ವಿರಾಜ್, ಜರೀನಾ ವಾಹೇಬ್, ಉಪೇಂದ್ರ ಲಿಮಯೆ, ಅಜಯ್ ಘೋಷ್, ಆಯೇಶಾ ಖಾನ್, ದಯಾನಂದ ರೆಡ್ಡಿ ಈ ಸಿನಿಮಾದಲ್ಲಿ ಇದ್ದಾರೆ. ಹಾಗೇ ಊರ್ವಶಿ ರೌಟೇಲಾ ಈ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಮತ್ತೊಂದು ಹೈಲೈಟ್. ಸನ್ನಿ ಡಿಯೋಲ್ ಸಿನಿಮಾವನ್ನು ಬಿಗ್ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗಿದೆ.
ಜಾಟ್ ಸಿನಿಮಾ ಬಜೆಟ್ 100 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. 'ಗದರ್ 2' ಅಂತಹ ಬಿಗ್ ಸಕ್ಸಸ್ ಕೊಟ್ಟಿರುವ ಸನ್ನಿ ಡಿಯೋಲ್ ಮೇಲೆ ಬಾಲಿವುಡ್ ಮಂದಿ ನಿರೀಕ್ಷೆಗಳನ್ನು ಇಟ್ಟುಕೊಂಡು ಕೂತಿದ್ದಾರೆ. ಈ ಮಧ್ಯೆ ವಿವಾದಾತ್ಮಕ ವಿಮರ್ಶಕನ ರಿವ್ಯೂ ಕೂಡ ಪಾಸಿಟಿವ್ ಆಗಿದೆ. 'ಜಾಟ್' ಸಿನಿಮಾವನ್ನು ಸೆನ್ಸಾರ್ ಬೋರ್ಡ್‌ನಲ್ಲಿ ವೀಕ್ಷಿಸಿದ್ದು, ಪೈಸಾ ವಸೂಲ್ ಎಂದು ಹೇಳಿಕೊಂಡಿದ್ದಾರೆ.
"ಸೆನ್ಸಾರ್ ಮಂಡಳಿಯಲ್ಲಿ ನಾನು ಜಾಟ್ ಸಿನಿಮಾವನ್ನು ನೋಡಿದೆ. ದಕ್ಷಿಣ ಭಾರತದ ಹಾಗೂ ಉತ್ತರ ಭಾರತದ ಕಾಂಬಿನೇಷನ್‌ಲ್ಲಿ ಬಂದಿರುವ ಈ ಸಿನಿಮಾ ಪೈಸಾ ವಸೂಲ್. ಸಿಂಗಲ್ ಸ್ಕ್ರೀನ್ ಸಿನಿಮಾಗಳು ಧೂಳೆಬ್ಬಿಸಲಿವೆ. ಸನ್ನಿ ಡಿಯೋಲ್ ತುಂಬಾನೇ ಅದ್ಭುತವಾಗಿ ಕಾಣಿಸುತ್ತಾರೆ" ಎಂದು ವಿವಾದಾತ್ಮಕ ವಿಮರ್ಶಕ ಉಮೈರ್ ಸಂಧು ತನ್ನ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಸನ್ನಿ ಡಿಯೋಲ್ ಬಾಲಿವುಡ್ ಮಂದಿಯ ಫೇವರಿಟ್ ನಟ. 'ಗದರ್ 2' ಬಳಿಕ ಬಾಕ್ಸಾಫೀಸ್ ಲೆಕ್ಕಾಚಾರವನ್ನೇ ತಲೆಕೆಳಗೆ ಮಾಡಿದ್ದ ಸನ್ನಿ ಡಿಯೋಲ್ ಸಿನಿಮಾ 500 ಕೋಟಿಗೂ ಅಧಿಕ ಶೇರ್ ಅನ್ನು ಗಳಿಸಿದ್ದರು. ಈಗ 'ಜಾಟ್' ಸಿನಿಮಾ ಮೇಲೆನೂ ಅದೇ ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ. 'ಜಾಟ್' ಈಗಾಗಲೇ ಅಡ್ವಾನ್ಸ್ ಬುಕಿಂಗ್ ಮೂಲಕ 6.92 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿಗಳಾಗಿವೆ. ಈ ಸಿನಿಮಾ ಮೇಲೆ ಬಾಲಿವುಡ್ ಮಂದಿಯ ನಿರೀಕ್ಷೆ ಹೆಚ್ಚಿದ್ದು, ನಾಳೆ (ಏಪ್ರಿಲ್ 10) ಸಿನಿಮಾದ ಹಣೆ ಬರಹ ಹೊರಬೀಳಲಿದೆ.


Click it and Unblock the Notifications











