Retro Movie Review:ಲವ್, ಆಕ್ಷನ್, ಗ್ಯಾಂಗ್‌ಸ್ಟರ್, ಕಾಮಿಡಿ ಮಧ್ಯೆ 'ರೆಟ್ರೋ'ದಲ್ಲಿ ಕಳೆದು ಹೋದ ಪ್ರೇಕ್ಷಕ
ತಮಿಳಿನ ಸ್ಟಾರ್ ನಟ ಸೂರ್ಯ ಯಶಸ್ಸಿನ ಹುಡುಕಾಟದಲ್ಲಿ ಇದ್ದಾರೆ. ಈ ಹಿಂದೆ ನಟಿಸಿದ 'ಕಂಗುವ' ಸಿನಿಮಾ ಅವರ ಕೈ ಹಿಡಿಯಲಿಲ್ಲ. ದೊಡ್ಡ ಮಟ್ಟ ನಿರೀಕ್ಷೆ ಇಟ್ಟುಕೊಂಡಿದ್ದ ಸಿನಿಮಾ ನೆಲಕ್ಕಚ್ಚಿತ್ತು. ಆ ಸೋಲಿನಿಂದ ಹೊರ ಬರುವುದಕ್ಕೆ ಸೂರ್ಯ ಎದುರು ನೋಡುತ್ತಿದ್ದರು. ಆಗ ಹುಟ್ಟಿಕೊಂಡಿದ್ದೇ 'ರೆಟ್ರೋ'. ಈ ಸಿನಿಮಾ ಸ್ವತ: ಸೂರ್ಯ ಹಾಗೂ ಜ್ಯೋತಿಕಾ ತಮ್ಮದೇ ನಿರ್ಮಾಣ ಸಂಸ್ಥೆ 2D ಎಂಟರ್‌ಟೈನ್ಮೆಂಟ್ ಸಂಸ್ಥೆಯಡಿ ನಿರ್ಮಾಣ ಮಾಡಿದ್ದಾರೆ.
ತಮಿಳು ಚಿತ್ರರಂಗದ ತಮ್ಮ ವಿಶಿಷ್ಟ ಶೈಲಿಯ ಸಿನಿಮಾಗಳಿಂದ ಗೆದ್ದಿರುವ ಕಾರ್ತಿಕ್ ಸುಬ್ಬರಾಜು ಈ ಸಿನಿಮಾಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಸೂರ್ಯ, ಜ್ಯೋತಿಕಾ ಹಾಗೂ ಕಾರ್ತಿಕ್ ಸುಬ್ಬರಾಜು ಕಾಂಬಿನೇಷನ್ ಸಿನಿಮಾ ಅಂದ್ಮೇಲೆ ನಿರೀಕ್ಷೆಗಳೇನು ಕಮ್ಮಿಯಿರುತ್ತಾ? ದೊಡ್ಡ ಸ್ಟಾರ್‌ಕಾಸ್ಟ್ ಅನ್ನೇ ಕರೆದುಕೊಂಡು ಬಂದಿದ್ದರು. ಹೀಗಾಗಿ 'ರೆಟ್ರೋ' ಬಿಗ್ ಬಜೆಟ್ ಸಿನಿಮಾ ಆಯ್ತು.

ಸೂರ್ಯಗೆ ನಾಯಕಿಯಾಗಿ ಪೂಜಾ ಹೆಗ್ಡೆ ಬಂದರು. ಇವರೊಂದಿಗೆ ಸ್ವಸ್ತಿಕಾ, ಮಲಯಾಳಂ ನಟ ಜೋಜು ಜಾರ್ಜ್, ಪ್ರಕಾಶ್ ರಾಜ್, ನಾಸರ್, ಜಯರಾಮ್ ಸೇರಿದಂತೆ ಸಾಕಷ್ಟು ಮಂದಿ ದಿಗ್ಗಜರು ಈ ಸಿನಿಮಾದಲ್ಲಿ ಇದ್ದಾರೆ. ಇಷ್ಟು ದೊಡ್ಡ ತಾರಾಗಣದ ಈ ಸಿನಿಮಾ ಇಂದು (ಮೇ 1) ಅದ್ಧೂರಿಯಾಗಿ ವಿಶ್ವದಾದ್ಯಂತ ರಿಲೀಸ್ ಆಗಿದೆ. ಈ ಬಾರಿ ಸೂರ್ಯ ಗೆಲ್ಲುತ್ತಾರಾ? ಕಾರ್ತಿಕ್ ಸುಬ್ಬರಾಜು ಹೇಳುವುದಕ್ಕೆ ಹೊರಟಿರೋ 'ರೆಟ್ರೋ' ಕಥೆಯೇನು? ಸಿನಿಮಾದ ಪ್ಲಸ್ ಪಾಯಿಂಟ್ ಏನು? ಮೈನಸ್ ಪಾಯಿಂಟ್ ಏನು? ತಿಳಿಯುವುದಕ್ಕೆ ಮುಂದೆ ಓದಿ.
'ರೆಟ್ರೋ' ಕಥೆಯೇನು?
ಪರಿವೇಲ್ ಕಣ್ಣನ್ ಉರ್ಫ್ ಪರಿ (ಸೂರ್ಯ) ದೇವಸ್ಥಾನದ ಮಾತುಬಾರದ ಅರ್ಚಕನ ಮಗ. ಒಂದು ದಿನ ಈ ಅರ್ಚಕನ ಕೊಲೆ ನಡೆದು ಹೋಗುತ್ತೆ. ಆಗ ಅನಾಥವಾಗಿದ್ದ ಈ ಮಗುವನ್ನು ಗ್ಯಾಂಗಸ್ಟರ್ ತಿಲಕನ್ (ಜೊಜು ಜಾರ್ಜ್) ಹೆಂಡತಿ ಕರೆದುಕೊಂಡು ಸಾಕುತ್ತಾಳೆ. ಆರಂಭದಲ್ಲಿ ಗ್ಯಾಂಗ್‌ಸ್ಟರ್ ಪರಿವೇಲ್ ಅನ್ನು ತನ್ನ ಮಗ ಅಂತ ಒಪ್ಪಿಕೊಳ್ಳುವುದಿಲ್ಲ. ಒಂದು ಘಟನೆಯ ಬಳಿಕ ಪರಿವೇಲನನ್ನು ತಿಲಕನ್ ತನ್ನ ಸ್ವಂತ ಮಗನಂತೆ ಬೆಳೆಸುತ್ತಾನೆ. ಹೀಗಾಗಿ ಅಪ್ಪನ ನಂಬಿಕಸ್ಥನಾಗಿ ಬೆಳೆಯುತ್ತಾನೆ. ಈ ಸಮಯಕ್ಕೆ ಚಿತ್ರದ ನಾಯಕಿ ರುಕ್ಮಿಣಿ (ಪೂಜಾ ಹೆಗ್ಡೆ)ಯೊಂದಿಗೆ ಲವ್ ಆಗುತ್ತೆ. ತನ್ನ ಪ್ರೇಯಸಿಗಾಗಿ ಪರಿವೇಲ್ ಗ್ಯಾಂಗಸ್ಟರ್ ಲೋಕವನ್ನು ಬಿಟ್ಟು ಬಿಡುವುದಕ್ಕೆ ನಿರ್ಧರಿಸುತ್ತಾನೆ. ರುಕ್ಮಿಣಿಗೆ ಮಾತನ್ನೂ ಕೊಡುತ್ತಾನೆ. ಆದರೆ, ಇದು ತಂದೆ ತಿಲಕನ್‌ಗೆ ಇಷ್ಟ ಆಗುವುದಿಲ್ಲ. ಇದೇ ವೇಳೆ ಗೋಲ್ಡ್ ಫಿಶ್ ಕಳ್ಳತದಲ್ಲಿ ಸೂರ್ಯ ಸಿಲುಕಿ ಜೈಲು ಸೇರುತ್ತಾನೆ. ಮತ್ತೆ ಅದೇ ಗ್ಯಾಂಗ್‌ಸ್ಟರ್ ಲೋಕಕ್ಕೆ ಕಾಲಿಟ್ಟಿದ್ದಕ್ಕೆ ಬೇಸರಗೊಂಡ ರುಕ್ಮಿಣಿ ಪರಿವೇಲುವಿನಿಂದ ದೂರವಾಗುತ್ತಾಳೆ. ಐದು ಜೈಲಿನಲ್ಲಿ ಇದ್ದ ಪರಿವೇಲು ತನ್ನ ಪ್ರೇಯಸಿ ರುಕ್ಮಿಣಿಯನ್ನು ಹುಡುಕುವುದಕ್ಕೆ ಪರದಾಡುತ್ತಾನೆ. ಕೊನೆಗೂ ಅಂಡಮಾನ್‌ನಲ್ಲಿ ಇದ್ದಾಳೆಂದು ಗೊತ್ತಾಗುತ್ತೆ. ಇತ್ತ ಪರಿ, ರುಕ್ಮಿಣಿಯನ್ನು ಹುಡುಕುತ್ತಿದ್ದರೆ, ಅತ್ತ ತಿಲಕನ್ ಗೋಲ್ಡ್ ಫಿಶ್ ಹುಡುಕಾಟದಲ್ಲಿ ಇರುತ್ತಾನೆ. ಪರಿವೇಲು ರುಕ್ಮಿಣಿಯ ಮನಸ್ಸನ್ನು ಮತ್ತೆ ಗೆಲ್ಲುತ್ತಾನಾ? ತಿಲಕನ್ ಹಾಗೂ ಮತ್ತೊಬ್ಬ ಗ್ಯಾಂಗಸ್ಟರ್ ಅನ್ನು ಹೇಗೆ ಎದುರಿಸುತ್ತಾನೆ ಎನ್ನುವುದೇ ಕಥೆ.

ಸೂರ್ಯ-ಪೂಜಾ ಹೆಗ್ಡೆ ಜೋಡಿ ಹೇಗಿದೆ?
'ರೆಟ್ರೋ' ಸಿನಿಮಾ ಜೀವಾಳವೇ ಸೂರ್ಯ. ಆಕ್ಷನ್, ಕಾಮಿಡಿ, ರೊಮ್ಯಾನ್ಸ್ ಎಲ್ಲಾ ಕಡೆ ಸೂರ್ಯ ಗೆಲ್ಲುತ್ತಾರೆ. ಪ್ರತಿ ಸಿನಿಮಾದಂತೆ ಇಲ್ಲೂ ಕೂಡ ಇಷ್ಟವಾಗುತ್ತಾರೆ. ಇನ್ನು ಪೂಜಾ ಹೆಗ್ಡೆಗೆ ಈ ಸಿನಿಮಾದಲ್ಲಿ ರುಕ್ಮಿಣಿಯಾಗಿ ಅಭಿಮಾನಿಗಳ ಮನಗೆದ್ದಿದ್ದಾರೆ. ಇದು ಅವರ ವೃತ್ತಿ ಬದುಕಿನ ಅತ್ಯುತ್ತಮ ಪಾತ್ರವೆಂದು ಹೇಳಬಹುದು. ಇದೇ ಮೊದಲ ಬಾರಿಗೆ ಇಬ್ಬರೂ ಜೋಡಿಯಾಗಿ ನಟಿಸಿದ್ದು ಪ್ರೇಕ್ಷಕರಿಗೆ ಇಷ್ಟ ಆಗುತ್ತೆ. ಇವರೊಂದಿಗೆ ತಂದೆ ತಿಲಕನ್ ಪಾತ್ರದಲ್ಲಿ ನಟಿಸಿರುವ ಮಲಯಾಳಂ ನಟ ಜೊಜು ಜಾರ್ಜ್ ಗ್ಯಾಂಗ್‌ಸ್ಟರ್ ಆಗಿ ಇಷ್ಟ ಆಗುತ್ತಾರೆ. ಇನ್ನು ಪ್ರಕಾಶ್ ರಾಜ್ ಅವರದ್ದು ಅತಿಥಿ ಪಾತ್ರ.
ಕಾರ್ತಿಕ್ ಸುಬ್ಬರಾಜು ನಿರ್ದೇಶನ ಹೇಗಿದೆ?
ಕಾರ್ತಿಕ್ ಸುಬ್ಬರಾಜು ಹಾಗೂ ಸೂರ್ಯ ಕಾಂಬಿನೇಷನ್‌ನಲ್ಲಿ ಬಂದಿರುವ ಮೊದಲ ಸಿನಿಮಾವಿದು. ಕಾರ್ತಿಕ್ ಆಯ್ಕೆ ಮಾಡಿಕೊಂಡ ಸಬ್ಜೆಕ್ಟ್ ಉತ್ತಮವಾಗಿದೆ. ಆದರೆ, ಅದನ್ನು ತೆರೆಮೇಲೆ ತರುವ ವೇಳೆ ಗೊಂದಲಕ್ಕೆ ಬಿದ್ದಿದ್ದಾರೆ ಎಂದು ಎನಿಸುತ್ತದೆ. ಸಿನಿಮಾದ ಫಸ್ಟ್ ಹಾಫ್‌ನಲ್ಲಿ ಸ್ಟೋರಿ ಎಂಗೇಜಿಂಗ್ ಆಗಿದೆ ಎಂದು ಎನಿಸುತ್ತದೆ. ಅದೇ ಸೆಕೆಂಡ್ ಹಾಫ್‌ನಲ್ಲಿ ನಿರ್ದೇಶಕರು ಟ್ರ್ಯಾಕ್ ತಪ್ಪಿದ್ದಾರೆ ಅಂತ ಅನಿಸುತ್ತೆ. ಅದಕ್ಕೆ ಎರಡು ಪಾರ್ಟ್‌ಗಳಲ್ಲಿ ಕಥೆಯನ್ನು ಹೇಳಿದ್ದಾರಾ? ಎನ್ನುವ ಪ್ರಶ್ನೆ ಕೂಡ ಹುಟ್ಟಿಕೊಳ್ಳುತ್ತೆ. ಹಾಗೇ ಸಾಕಷ್ಟು ಟ್ರ್ಯಾಕ್‌ಗಳು ಬಂದಿರುವುದರಿಂದ ಪ್ರೇಕ್ಷಕ ಈ ಸಿನಿಮಾ ನೋಡುವಾಗ ಗೊಂದಲಕ್ಕೂ ಒಳಗಾಗುತ್ತಾನೆ.

ಪ್ಲಸ್ ಪಾಯಿಂಟ್ ಏನು?
ಸೂರ್ಯ, ಪೂಜಾ ಹೆಗ್ಡೆ ಹಾಗೂ ಕಾರ್ತಿಕ್ ಸುಬ್ಬರಾಜು ಕಾಂಬಿನೇಷನ್ ಈ ಸಿನಿಮಾ ಫ್ಲಸ್ ಪಾಯಿಂಟ್. ಇದೇ ಮೊದಲ ಬಾರಿಗೆ ಈ ಮೂವರೂ ಒಂದೇ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಇದು ಸಿನಿಪ್ರಿಯರನ್ನು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿತ್ತು. ಇಲ್ಲಿ ಸೂರ್ಯ ಹಾಗೂ ಪೂಜಾ ಹೆಗ್ಡೆ ಕೆಮಿಸ್ಟ್ರಿ ವರ್ಕ್‌ಔಟ್ ಆಗಿದೆ. ಪ್ರೇಕ್ಷಕರಿಗೆ ಈ ಜೋಡಿ ಇಷ್ಟ ಆಗುತ್ತೆ. ಸಿನಿಮಾದಲ್ಲಿ ಏನಾದರೂ ವಿಭಿನ್ನವಾದನ್ನು ಟ್ರೈ ಮಾಡುವ ಕಾರ್ತಿಕ್ ಇಲ್ಲೂ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಅದು ಎಲ್ಲರಿಗೂ ಇಷ್ಟ ಆಗದೇ ಹೋದರೂ ಪ್ರಯತ್ನ ಇಷ್ಟ ಆಗಬಹುದು. ಹಾಗೆ 15 ನಿಮಿಷದ ಆಕ್ಷನ್ ಸೀನ್ ಸಿಕ್ಕಾಪಟ್ಟೆ ಇಷ್ಟ ಆಗುತ್ತೆ.
ಮೈನಸ್ ಏನು?
ಈ ಸಿನಿಮಾದ ಮೈನಸ್ ಸೆಕೆಂಡ್ ಹಾಫ್. ಯಾಕಂದ್ರೆ ಮೊದಲಾರ್ಧಕ್ಕೂ ದ್ವಿತಿಯಾರ್ಧಕ್ಕೂ ಯಾವುದೇ ರೀತಿಯ ಸಂಬಂಧವೇ ಇಲ್ಲ ಎಂದು ಎನಿಸುತ್ತದೆ. ಸಿನಿಮಾದ ಕಥೆ ಸೆಕೆಂಡ್ ಹಾಫ್‌ಗೆ ಎಂಟ್ರಿ ಕೊಡುತ್ತಿದ್ದಂತೆ ಬೇರೆಯದ್ದೇ ಟ್ರ್ಯಾಕ್ ಇರಬೇಕು ಎಂದು ಎನಿಸುತ್ತದೆ. ಇಲ್ಲಿ ಜನರು ಬೋರ್ ಆಗುತ್ತಾರೆ. ಫಸ್ಟ್ ಹಾಫ್‌ಗೂ ಸೆಕೆಂಡ್ ಹಾಫ್‌ಗೂ ಮಿಸ್ ಹೊಡೆಯುತ್ತಿದೆಯಲ್ಲ ಅನ್ನೋ ಅನುಭವಕ್ಕೆ ಬರುತ್ತದೆ. ಲವ್, ಆಕ್ಷನ್ ಹಾಗೂ ಸೆಂಟಿಮೆಂಟ್ ಟ್ರ್ಯಾಕ್ ಅನ್ನು ಎಂಜಾಯ್ ಮಾಡುತ್ತಿದ್ದ ಪ್ರೇಕ್ಷಕರು ಕಾಮಿಡಿ ಟ್ರ್ಯಾಕ್ ಎಂಟ್ರಿ ಕೊಡುತ್ತಿದ್ದಂತೆ ಕಂಗಾಲಾಗಿ ಹೋಗುತ್ತಾರೆ. ಕೆಲವೊಮ್ಮೆ ಕಾರ್ತಿಕ್ ಸುಬ್ಬರಾಜು ಪ್ರೇಕ್ಷಕರ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಾರೆಂದು ಎನಿಸುತ್ತದೆ. ಪ್ರಕಾಶ್ ರಾಜ್ ಪಾತ್ರ ತೀರಾ ಸಿಂಪಲ್ ಎಂದು ಎನಿಸುತ್ತದೆ. ಇನ್ನು ಶ್ರೇಯಾ ಸರಣ್ ಸಾಂಗ್ ಬೇಕಿತ್ತಾ ಅಂತಲೂ ಅನಿಸಬಹುದು.
ಅಂತಿಮವಾಗಿ ಏನು?
ಸೂರ್ಯ ಹಾಗೂ ಕಾರ್ತಿಕ್ ಕಾಂಬಿನೇಷನ್‌ನಲ್ಲಿ ಒಂದೊಳ್ಳೆ ಬ್ಲಾಕ್‌ಬಸ್ಟರ್ ಸಿನಿಮಾ ಬರಬಹುದಾಗಿತ್ತು. ಅದನ್ನು ಮಿಸ್ ಮಾಡಿಕೊಂಡಿದ್ದಾರೆ. ಕೆಲವು ಕಡೆ ಇಷ್ಟ ಆಗಲ್ಲ ಅದೂ ನಿಜ. ಸ್ಕ್ರೀನ್‌ಪ್ಲೇನಲ್ಲಿ ಎಡವಿದ್ದಾರೆ ಎಂದು ರಾಜಾರೋಷವಾಗಿ ಹೇಳಬಹುದು. ಸಿನಿಮಾದಲ್ಲಿ ಕಥೆ ಸರಳವಾಗಿ ಇರದೆ ಹಲವು ಟ್ರ್ಯಾಕ್‌ಗಳು ಇವೆ. ಅವು ಕೆಲವೊಮ್ಮೆ ಕಿರಿಕಿರಿ ಮಾಡುತ್ತವೆ. ಇಷ್ಟೆಲ್ಲ ನ್ಯೂನ್ಯತೆ ಇದ್ದರೂ, ಈ ಸಿನಿಮಾದಲ್ಲಿ ಸೂರ್ಯ ಹಾಗೂ ಪೂಜಾ ಹೆಗ್ಡೆ ತುಂಬಾನೇ ಇಷ್ಟ ಆಗುತ್ತಾರೆ. ಕಾರ್ತಿಕ್ ಸುಬ್ಬರಾಜು ಸ್ಕ್ರೀನ್ ಪ್ಲೇ ಹೊರತು ಪಡಿಸಿದರೆ, ಮೇಕಿಂಗ್‌ಗೆ ಹಾಲಿವುಡ್ ಟಚ್ ಕೊಟ್ಟಿದ್ದಾರೆ. ನೀವು ಒಬ್ಬ ಸಿನಿಮಾ ಆಸಕ್ತರಾಗಿದ್ದರೆ, ಸೂರ್ಯ ಹಾಗೂ ಪೂಜಾ ಹೆಗ್ಡೆಯ ಅಭಿಮಾನಿಯಾಗಿದ್ದರೆ, ಕಾರ್ತಿಕ್ ಸುಬ್ಬರಾಜು ಸಿನಿಮಾಗಳ ಫ್ಯಾನ್ ಆಗಿದ್ದರೆ, ಈ ಪ್ರಯತ್ನವನ್ನು ಒಮ್ಮೆ ಹೋಗಿ ನೋಡಬಹುದು.


Click it and Unblock the Notifications











