The Hunt for Veerappan review: ಬೆಚ್ಚಿಬೀಳಿಸುವ ನರಹಂತಕ ವೀರಪ್ಪನ್ ಸಾಕ್ಷಾಚಿತ್ರ.. ಈತನಿಗೆ ಅನುಕಂಪ ತೋರಿಸುವ ಅಗತ್ಯವಿತ್ತೇ?
ಓಟಿಟಿ ಪ್ರಿಯರಿಗೆ ವೀಕೆಂಡ್‌ನಲ್ಲಿ ಬೆಚ್ಚಿಬೀಳಿಸುವಂತಹ ಡಾಕ್ಯೂಮೆಂಟರಿಯನ್ನು ರಿಲೀಸ್ ಮಾಡಲಾಗಿದೆ. ಅದುವೇ ಫಿಲ್ಮ್‌ಮೇಕರ್ ಸೆಲ್ವಮಣಿ ನಿರ್ದೇಶಿಸಿದ್ದ ಡಾಕ್ಯೂಮೆಂಟರಿ ಸರಣಿ 'ದಿ ಹಂಟ್ ಫಾರ್ ವೀರಪ್ಪನ್'. ಇದು ನರಹಂತಕ ವೀರಪ್ಪನ್ ಬದುಕು ಹಾಗೂ ಸಾವಿನ ಕುರಿತಾದ ಸರಣಿ. ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರ ಆಗುತ್ತಿದೆ.
ನರಹಂತಕ ವೀರಪ್ಪನ್ ಬಗ್ಗೆ ಅದೆಷ್ಟು ಈಗಾಗಲೇ ಅದೆಷ್ಟೋ ಸಿನಿಮಾಗಳು ಬಂದು ಹೋಗಿವೆ. ಒಬ್ಬೊಬ್ಬ ನಿರ್ದೇಶಕ ತಾನು ಕಂಡುಕೊಂಡಂತೆ ವೀರಪ್ಪನ್ ರಕ್ತಚರಿತ್ರೆಯನ್ನು ತೆರೆಮೇಲೆ ತಂದಿದ್ದಾರೆ. ಕೆಲವು ಸಿನಿಮಾ ಸಕ್ಸಸ್ ಕಂಡಿವೆ. ಮತ್ತೆ ಕೆಲವನ್ನು ಪ್ರೇಕ್ಷಕರೇ ತಿರಸ್ಕರಿಸಿದ್ದಾರೆ. ಅಲ್ಲದೆ ವೀರಪ್ಪನ್ ಸತ್ತ 17 ವರ್ಷಗಳಲ್ಲಿ ಹಲವರು ಸಿನಿಮಾ ಮಾಡಿದ್ದಾರೆ. ಮತ್ತೆ ಕೆಲವರು ಡಾಕ್ಯೂಮೆಂಟರಿ ಮಾಡಿದ್ದಾರೆ.

ಈಗ ಇದೇ ವೀರಪ್ಪನ್ ಅನ್ನು ಮುಂದಿಟ್ಟುಕೊಂಡು ಮತ್ತೊಂದು ಡಾಕ್ಯೂಮೆಂಟರಿಯನ್ನು ನೆಟ್‌ಫ್ಲಿಕ್ಸ್ ರಿಲೀಸ್ ಮಾಡಿದೆ. ಹಾಗಿದ್ದರೆ 'ದಿ ಹಂಟ್ ಫಾರ್ ವೀರಪ್ಪನ್' ಹೇಗಿದೆ? ಪಾಸಿಟಿವ್ ಏನು? ನೆಗೆಟಿವ್ ಏನು? ಫಿಲ್ಮ್ ಮೇಕರ್ ಏನು ಹೇಳುವುದಕ್ಕೆ ಹೊರಟಿದ್ದಾರೆ. ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ವೀರಪ್ಪನ್ ಡಾಕ್ಯೂಮೆಂಟರಿಯಲ್ಲಿ ಏನಿದೆ?
'ದಿ ಹಂಟ್ ಫಾರ್ ವೀರಪ್ಪನ್' ದಕ್ಷಿಣ ಭಾರತದಲ್ಲಿ ನಾಲ್ಕು ಭಾಷೆಯಲ್ಲೂ ಟ್ರೆಂಡಿಂಗ್‌ನಲ್ಲಿದೆ. ವೀರಪ್ಪನ್ ಬಗ್ಗೆ ಬಹುತೇಕ ವಿಷಯಗಳು ಈಗಾಗಲೇ ಗೊತ್ತಿದೆ. ಹೀಗಿರುವಾಗ ಮತ್ತೇನು ತೋರಿಸುವುದಕ್ಕೆ ಹೊರಟಿದ್ದಾರೆ ಅನ್ನೋ ಕುತೂಹಲವಿದೆ. ಈ ಡಾಕ್ಯೂ-ಸೀರಿಸ್‌ನಲ್ಲಿ ವೀರಪ್ಪನ್ ಹುಟ್ಟಿನಿಂದ ಹಿಡಿದು ಸಾವಿನವರೆಗೂ ಹಲವು ಮಜಲುಗಳನ್ನು ತೆರೆದಿಡಲಾಗಿದೆ. ಯುವಕನಾಗಿದ್ದ ವೀರಪ್ಪನ್ ಹೇಗೆ ಈ ಕೃತ್ಯಗಳಿಗೆ ಎಂಟ್ರಿ ಕೊಟ್ಟ. 1000 ಆನೆಗಳನ್ನು ದಂತಕ್ಕಾಗಿ ಕೊಂದ ವೀರಪ್ಪನ್ ಅದ್ಹೇಗೆ ನಟೋರಿಯಸ್ ಶ್ರೀಗಂಧದ ಸ್ಮಗ್ಲರ್ ಆದ ಅನ್ನೋದನ್ನು ಆಳವಾಗಿ ತೋರಿಸುತ್ತಾ ಹೋಗಿದ್ದಾರೆ.

ನಾಲ್ಕು ಚಾಪ್ಟರ್.. ಒಂದೊಂದರಲ್ಲಿ ಏನೇನಿದೆ?
ನೆಟ್‌ಫ್ಲಿಕ್ಸ್‌ನ 'ದಿ ಹಂಟ್ ಫಾರ್ ವೀರಪ್ಪನ್' ಅನ್ನು ನಾಲ್ಕು ಸೀರಿಸ್‌ನಲ್ಲಿ ತೋರಿಸಲಾಗಿದೆ. ಮೊದಲ ಚಾಪ್ಟರ್ 'ಫಾರೆಸ್ಟ್ ಕಿಂಗ್'ನಿಂದಲೇ ವೀರಪ್ಪನ್ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತೆ. ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ತನ್ನ ಪತಿಯ ಬಗ್ಗೆ, ಆತನ ಕೃತ್ಯದ ಬಗ್ಗೆ ನಿರ್ಭೀತಿಯಿಂದ ಮಾತಾಡುವುದನ್ನು ಕಾಣಬಹುದು. ಆಕೆಯ ದೃಷ್ಟಿಯಿಂದ ವೀರಪ್ಪನ್ ಹೀರೊ. ಅಲ್ಲಿನ ಜನರ ಪಾಲಿಗೆ ಆತ ರಾಬಿನ್ ಹುಡ್ ಅನ್ನೋದನ್ನು ಈ ಡಾಕ್ಯೂಮೆಂಟರಿ ಬಿಂಬಿಸಿದಂತಿದೆ.
ಸಂಬಂಧ ಪಟ್ಟವರಿಂದ ಮಾಹಿತಿ
ಫಿಲ್ಮ್ ಮೇಕರ್ ಸೆಲ್ಪಮಣಿ ಸೆಲ್ಪರಾಜ್ ಈ ಡಾಕ್ಯೂ ಸೀರೀಸ್‌ಗಾಗಿ ತುಂಬಾನೇ ರಿಸರ್ಚ್ ಮಾಡಿದ್ದಾರೆ ಅನ್ನೋದು ಗೊತ್ತಾಗುತ್ತೆ. ವೀರಪ್ಪನ್ ಕಾಲದಲ್ಲಿ ಕೆಲಸ ಮಾಡಿರುವ ಫಾರೆಸ್ಟ್ ಆಫೀಸರ್, ಪೊಲೀಸ್ ಅಧಿಕಾರಿಗಳು, ತನಿಖಾ ಪತ್ರಕರ್ತರು, ವೀರಪ್ಪನ್ ಊರಿನ ಜನರನ್ನು ಮಾತಾಡಿಸಿ ಮಾಹಿತಿಯನ್ನು ಕಲೆ ಹಾಕಲಾಗಿದೆ. ವೀರಪ್ಪನ್ ಕೃತ್ಯದಿಂದ ಹಿಡಿದು, ಆತನ ಬಳಿ ಇರುವ ಸಂಪತ್ತಿನ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ವೀರಪ್ಪನ್ ಒಂದು ಹೆಲಿಕಾಪ್ಟರ್ ಅನ್ನೇ ಕೊಳ್ಳಬಹುದಿತ್ತು ಅಂತ ಸಹಚರ ಮಾಹಿತಿ ಹೊರಹಾಕಿದಾಗ ವೀಕ್ಷಕರಿಗೆ ಅಚ್ಚರಿ ಆಗಲೂ ಬಹುದು. ಹೀಗೆ ಹಿಂದೆಂದೂ ಸಿಗದ ಕೆಲವು ಮಾಹಿತಿ ಸಿಗುತ್ತವೆ.
ವೀರಪ್ಪನ್ ಮೇಲೆ ಅನುಕಂಪ ತೋರಿಸಿದ್ದಾರೆಯೇ?
ವೀರಪ್ಪನ್ ಕೃತ್ಯಕ್ಕೆ ದಂತಚೋರ, ನರಹಂತಕ ಹೀಗೆ ಏನೇನೋ ಬಿರುದು ನೀಡಿದ್ದರೂ, ಡಾಕ್ಯೂಮೆಂಟರಿಯಲ್ಲಿ ವೀರಪ್ಪನ್ ಮತ್ತೊಂದು ಮುಖವನ್ನು ತೋರಿಸುವ ಪ್ರಯತ್ನ ಆಗಿದೆಯೇ ಅಂತ ಅನಿಸೋದು ಇರೋದಿಲ್ಲ. ವೀರಪ್ಪನ್ ಒಳ್ಳೆ ಗುಣ, ಸಹಾಯ ಮನೋಭಾವ ಎತ್ತಿ ಹಿಡಿದಂತೆ ಇದೆ. ಹೀಗಾಗಿ ಸೀರಿಸ್ ಅನ್ನು ನೋಡಿದವರಿಗೆ ವೀರಪ್ಪನ್ ಮೇಲೆ ಅನುಕಂಪ ನೀಡಲಾಗಿದೆಯೇ ಎಂಬ ಪ್ರಶ್ನೆ ಮೂಡಿದರೂ ಮೂಡಬಹುದು.


Click it and Unblock the Notifications











