Tiger 3 Review: ಶಾರುಖ್ ಇಲ್ಲದೆ ಇದ್ದಿದ್ರೆ ಏನಾಗ್ತಿತ್ತು? ಟೈಗರ್‌ಗೆ..ಪ್ರೇಕ್ಷಕರಿಗೆ 'ಪಠಾಣ್' ಆಸರೆ.. !
ಬಾಲಿವುಡ್‌ನಲ್ಲಿ ಅತೀ ದೊಡ್ಡ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲ್ಮ್ಸ್ ನಿರ್ಮಿಸಿರುವ ಮತ್ತೊಂದು ಆಕ್ಷನ್ ಥ್ರಿಲ್ಲರ್ ಫ್ರಾಂಚೈಸಿ 'ಟೈಗರ್ 3'. ಸಲ್ಮಾನ್ ಖಾನ್ ಟೈಗರ್ ಅವತಾರದಲ್ಲಿ ಇದೂವರೆಗೂ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಮೊದಲ ಎರಡೂ ಪಾರ್ಟ್‌ಗಳೂ ಬ್ಲಾಕ್ ಬಸ್ಟರ್ ಹಿಟ್ ಆಗಿವೆ. ಈಗ ಮೂರನೇ ಸರಣೆ ಕಥೆ.
ಹಳೇ ಸಿದ್ಧ ಸೂತ್ರಗಳನ್ನು ಕೈ ಬಿಟ್ಟು, ಶುಕ್ರವಾರ ರಿಲೀಸ್ ಆಗಬೇಕಿರೋ ಸಿನಿಮಾ ಭಾನುವಾರ (ನವೆಂಬರ್ 12) ರಿಲೀಸ್ ಆಗಿದೆ. ಅದಕ್ಕೆ ಕಾರಣ ದೀಪಾವಳಿ. ಈ ಹಬ್ಬ ಬಾಲಿವುಡ್ ಮಂದಿಗೆ ಲಕ್ಕಿ. ಅದರಲ್ಲೂ ದೀಪಾವಳಿಯಲ್ಲಿ ತೆರೆಕಂಡ ಸಲ್ಮಾನ್ ಖಾನ್ ಸಿನಿಮಾಗಳಿಗೆ ಬಾಕ್ಸಾಫೀಸ್‌ನಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.

ಆದರೆ, ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಜೊತೆಯಾಗಿ ನಟಿಸಿದ ಸಿನಿಮಾ ಇದೇ ಮೊದಲ ಬಾರಿಗೆ ದೀಪಾವಳಿಗೆ ತೆರೆಕಾಣುತ್ತಿದೆ. ಇಬ್ಬರ ಕೆಮಿಸ್ಟ್ರಿ ಈ ಹಿಂದೆ ಬಂದು ಎರಡು ಸರಣಿಗಳಲ್ಲಿ ಪ್ರೂವ್ ಆಗಿದೆ. ಹಾಗಾಗಿ 'ಟೈಗರ್ 3' ಕಥೆ, ಚಿತ್ರಕಥೆ, ಮ್ಯೂಸಿಕ್, ಆಕ್ಷನ್ ಹೇಗಿದೆ? ಅನ್ನೋದು ಮುಖ್ಯ. ಹಾಗಿದ್ದರೆ, 'ಟೈಗರ್ 3' ಹೇಗಿದೆ? ತಿಳಿಯಲು ಮುಂದೆ ಓದಿ.
'ಟೈಗರ್ 3' ಕಥೆಯೇನು?
'ಟೈಗರ್' ಭಾರತದ ರಾ ಏಜೆಂಟ್ ಅನ್ನೋದು ಗೊತ್ತೇ ಇದೆ. ಈತನ ಹೊಸ ಮಿಷನ್ ಏನು? ಅನ್ನೋದೇ ಸಿನಿಮಾದ ಕುತೂಹಲ. ಅಫ್ಘಾನಿಸ್ತಾನದಲ್ಲಿರುವ ಭಾರತೀಯ ಅಧಿಕಾರಿಯ ರಕ್ಷಿಸಲು ಪಾಕಿಸ್ತಾನಕ್ಕೆ ಬರುವ ಟೈಗರ್ ಡಬಲ್ ಏಜೆಂಟ್ ಆಗಿ ಕೆಲಸ ಮಾಡುತ್ತಾರೆ. ಟೈಗರ್ ಪತ್ನಿ ಜೋಯಾ (ಕತ್ರಿನಾ ಕೈಫ್) ತನ್ನ ದೇಶದಲ್ಲಿ ನಡೆಯುತ್ತಿರೋ ಸಂಚನ್ನು ಬಯಲು ಮಾಡಲು ಹೋಗಿ ಪತಿಗೆ ಶಾಕ್ ಕೊಡುತ್ತಾಳೆ. ಇತ್ತ ಅತಿಶ್ ರೆಹಮಾನ್ (ಇಮ್ರನಾ ಹಾಶ್ಮಿ) ಪಾಕಿಸ್ತಾನದ ಪ್ರಧಾನಿ ಇರಾನಿಯನ್ನು ಪದಚ್ಯುತಿಗೊಳಿಸಲು ಮಾಸ್ಟರ್ ಪ್ಲ್ಯಾನ್ ಮಾಡುತ್ತಾನೆ. ಜೋಯಾ ಈತನೊಂದಿಗೆ ಕೈ ಜೋಡಿಸುತ್ತಾಳೆ. ಅಲ್ಲಿಗೆ ಟೈಗರ್, ಜೋಯಾ ಹಾಗೂ ಅತಿಶ್ ನಡುವೆ ಕಥೆ ಮುಂದೆ ಹೇಗೆ ಸಾಗುತ್ತೆ ಅನ್ನೋದೇ ಕಥೆ.
ಸಿನಿಮಾ ಹೈಲೈಟ್ ಏನು?
'ಟೈಗರ್ 3' ಹಲವು ಪ್ರಶ್ನೆಗಳನ್ನು ಹುಟ್ಟಾಕುತ್ತೆ. ಅವುಗಳಲ್ಲಿ ಕೆಲವು ಪ್ರಶ್ನೆಗಳಿಗೆ ಉತ್ತರಾನೂ ಸಿಗುತ್ತೆ. ಪ್ರೇಕ್ಷಕರಿಗೆ ಕುತೂಹಲ ಕೆರಳಿಸೋದು ಏನಂದ್ರೆ? ಪಾಕಿಸ್ತಾನ ಸೇನೆಗೆ ಟೈಗರ್ ಸಿಕ್ಕಿಬಿದ್ದಿದ್ದು ಹೇಗೆ? ಟೈಗರ್ ತಪ್ಪಿಸಿಕೊಂಡಿದ್ದು ಹೇಗೆ? ಜೋಯಾ, ಅತಿಶ್ ಸಂಚು ಎಪಿಸೋಡ್ ಹೇಗಿದೆ? ಟೈಗರ್, ಜೋಯಾ ಆಕ್ಷನ್ ಸೀಕ್ವೆನ್ಸ್ ಹೇಗಿದೆ? ಈ ಎಲ್ಲಾ ಪ್ರಶ್ನೆಗಳಿಗೆ ಸಿಗೋ ಉತ್ತರ ಸಿನಿಮಾದ ಹೈಲೈಟ್. ಆದರೆ, 'ಟೈಗರ್'ಗೆ ವೇಗ ಮತ್ತು ಚೈತನ್ಯ ಕೊಡೊದೇ 'ಪಠಾಣ್'. ಸಿನಿಮಾದ ಅಸಲಿ ಹೈಲೈಟ್ ಇದೇನೆ.

'ಟೈಗರ್'ಗೆ 'ಪಠಾಣ್' ಸಾಥ್
'ಟೈಗರ್' ಸಿನಿಮಾದ ಮೊದಲಾರ್ಥ ಕುಂಟುತ್ತಾ ಸಾಗುವಾಗ 'ಪಠಾಣ್' ಅರ್ಥಾತ್ ಶಾರುಖ್ ಖಾನ್ ಎಂಟ್ರಿ ಆಗುತ್ತೆ. ಇಲ್ಲಿಂದ ಶಾರುಖ್ ಹಾಗೂ ಸಲ್ಮಾನ್ ನಡುವಿನ ಸಂಭಾಷಣೆ ಪ್ರೇಕ್ಷಕರನ್ನು ಟ್ರ್ಯಾಕ್‌ಗೆ ಕರೆದುಕೊಂಡು ಬರುತ್ತೆ. ಇಬ್ಬರೂ ಜೋಡಿಯಾಗಿ ಮಾಡುವ ಆಕ್ಷನ್ ಸೀಕ್ವೆನ್ಸ್ ಫ್ಯಾನ್ಸ್ ಕಣ್ಣಿಗೆ ಹಬ್ಬ. ಆದರೆ, ಇಡೀ ಸಿನಿಮಾವನ್ನು ಗೆಲ್ಲಿಸೋ ಚೈತನ್ಯ ಈ ದೃಶ್ಯಗಳಿಗಿಲ್ಲ.
ಸಿನಿಮಾ ಪ್ಲಸ್ ಏನು?
'ಟೈಗರ್ 3' ಆಕ್ಷನ್ ಪ್ರಿಯರಿಗೆ ಇಷ್ಟ ಆಗಬಹುದು. ಸಲ್ಮಾನ್ ಖಾನ್, ಕತ್ರಿನಾ ಕೈಫ್ ಆಕ್ಷನ್ ಸೀಕ್ವೆನ್ಸ್‌ನಲ್ಲಿ ಮಿಂಚಿದ್ದಾರೆ. ಇಮ್ರಾನ್ ಹಾಶ್ಮಿ ವಿಲನ್ ಪಾತ್ರದಲ್ಲಿ ಹೊಸ ರೂಪವನ್ನು ತೋರಿಸಿದ್ದಾರೆ. ಸಲ್ಮಾನ್-ಶಾರುಖ್ ಖಾನ್ ದೃಶ್ಯಗಳು ಸಿನಿಮಾಗೆ ಸಿಕ್ಕಾಪಟ್ಟೆ ಇಷ್ಟ ಆಗುತ್ತವೆ.
ಸಿನಿಮಾದ ಮೈನಸ್ ಏನು?
ಮನೀಶ್ ಶರ್ಮಾ ನಿರ್ದೇಶನದಲ್ಲಿ ಧಮ್ ಇಲ್ಲ. ಸ್ಕ್ರೀನ್ ಪ್ಲೇ ಜಾಳು ಅಂತ ಅನಿಸುತ್ತೆ. ತಾಂತ್ರಿಕ ವಿಭಾಗದಲ್ಲಿ ಚಿತ್ರತಂಡ ಸೋತಿದೆ ಅಂತ ಅನಿಸುತ್ತೆ. ಸಿನಿಮಾದಲ್ಲಿ ಬಳಸಿರೊ ವಿಎಫ್‌ಎಕ್ಸ್ ಕೆಟ್ಟದಾಗಿದೆ. ಪ್ರೀತಂ ಮ್ಯೂಸಿಕ್ ಅಷ್ಟಕ್ಕಷ್ಟೇ. ಪ್ರೇಕ್ಷಕರಿಗೆ ರಿಲೀಫ್ ಕೊಡುವುದಕ್ಕೆ ಉತ್ತಮ ಹಾಡುಗಳು ಬೇಕಿತ್ತು. ಹಿನ್ನೆಲೆ ಸಂಗೀತ ನಿರಸವಾಗಿದೆ. ಈ ಕಾರಣಕ್ಕೆ ಸಿನಿಮಾ ಕೆಲವೊಮ್ಮೆ ಡಲ್ ಅಂತ ಅನಿಸುತ್ತೆ.
'ಟೈಗರ್' ಸರ್ಪ್ರೈಸ್ ಏನು?
ಸಿನಿಮಾ ಅಂದ್ಮೇಲೆ 100% ಪರ್ಫೆಕ್ಟ್ ಆಗಿರಬೇಕು ಅಂತ ನಿರೀಕ್ಷೆ ಮಾಡುವುದಕ್ಕೆ ಆಗುವುದಿಲ್ಲ. ಟೈಗರ್ 3 ಕೂಡ ಹಾಗೇನೆ.. ನಿರೀಕ್ಷೆ ಇಟ್ಟುಕೊಂಡು ಹೋದವರಿಗೆ ನಿರಾಸೆ ಕಟ್ಟಿಟ್ಟಿದ್ದೇ. ಅದೇ ನಿರೀಕ್ಷೆ ಬಿಟ್ಟು ಹೋದವರಿಗೆ ಇಷ್ಟ ಆಗಬಹುದು. ಕೊನೆ ಸಿಗೋ ಸರ್ಪ್ರೈಸ್ ಮಸ್ತ್ ಕಿಕ್ ಕೊಡಬಹುದು.. ಆ ಸರ್ಪ್ರೈಸ್ ಏನು? ಈ ಪ್ರಶ್ನೆಗೆ ಉತ್ತರ ಸಿನಿಮಾದಲ್ಲಿ ಸಿಗುತ್ತೆ.


Click it and Unblock the Notifications











