Vidyapti Movie Review; ನಾಗಭೂಷಣ ಅವರ 'ವಿದ್ಯಾಪತಿ'; ಇದು ಅವನ ಯುದ್ಧ, ಅವನೇ ಹೋರಾಡಬೇಕು
ಸೋತು ಸೋತು ಸುಣ್ಣವಾಗಿರುವ ಸ್ಯಾಂಡಲ್‌ವುಡ್‌ನಲ್ಲಿ ಈ ವಾರ ಎರಡು ಸಿನಿಮಾಗಳು ರಿಲೀಸ್ ಆಗಿವೆ. ಧನ್ವೀರ್ ನಟನೆಯ 'ವಾಮನ' ಸಿನಿಮಾ ಒಂದಾದರೆ, ನಾಗಭೂಷಣ್, ಮಲೈಕಾ ವಸುಪಾಲ್, ಗರುಡಾ ರಾಮ್ ಹಾಗೂ ಡಾಲಿ ಧನಂಜಯ್ ನಟನೆಯ 'ವಿದ್ಯಾಪತಿ' ಸಿನಿಮಾ ಇನ್ನೊಂದು. ಡಾಲಿ ಧನಂಜಯ್ ನಿರ್ಮಿಸಿರುವ ಈ ಸಿನಿಮಾ ಇಂದು (ಏಪ್ರಿಲ್ 10) ರಾಜ್ಯದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ.
ತನ್ನ ಕಾಮಿಡಿ ಸೆನ್ಸ್ ಮೂಲಕ ಹೆಸರು ವಾಸಿಯಾಗಿರುವ ನಾಗಭೂಷಣ್ 'ವಿದ್ಯಾಪತಿ' ಸಿನಿಮಾ ಮೂಲಕ ಮತ್ತೆ ನಾಯಕನಾಗಿದ್ದಾರೆ. ನಾಗಭೂಷಣ್‌ಗೆ ನಾಯಕಿಯಾಗಿ ಮಲೈಕಾ ವಸುಪಾಲ್ ನಟಿಸಿದ್ದಾರೆ. 'ಇಕ್ಕಟ್' ಎನ್ನುವ ಸಿನಿಮಾವನ್ನು ನಿರ್ದೇಶನ ಮಾಡಿದ್ದ ಹಸೀನ್ ಖಾನ್ ಹಾಗೂ ಇಶಾಮ್ ಖಾನ್ ಈ ಸಿನಿಮಾ ಆಕ್ಷನ್ ಕಟ್ ಹೇಳಿದ್ದಾರೆ. ಇದೊಂದು ಕಾಮಿಡಿ ಕಮ್ ಆಕ್ಷನ್ ಸಿನಿಮಾ ಅನ್ನೋದು ವಿಶೇಷ.

'ಕಿಟ್ಲರ್ ಕಲ್ಯಾಣ' ಧಾರಾವಾಹಿಯ ಮಲೈಕಾ ವಸುಪಾಲ್ ನಾಯಕಿಯಾಗಿ ನಟಿಸಿರುವ ಎರಡನೇ ಸಿನಿಮಾವಿದು. ಈ ಹಿಂದೆ ಚಿಕ್ಕಣ್ಣ ನಾಯಕನಾಗಿ ನಟಿಸಿರುವ 'ಉಪಾಧ್ಯಕ್ಷ' ಸಿನಿಮಾಗೆ ನಾಯಕಿಯಾಗಿ ಮಲೈಕಾ ನಟಿಸಿದ್ದರು. ಈಗ ಮತ್ತೊಬ್ಬ ಹಾಸ್ಯ ನಟ ನಾಗಭೂಷಣ್‌ಗೂ ಹೀರೋಯಿನ್ ಆಗಿ ನಟಿಸಿದ್ದಾರೆ. ಹಾಗಿದ್ದರೆ, ಈ ಕಾಮಿಡಿ ಕಮ್ ಆಕ್ಷನ್ ಸಿನಿಮಾ 'ವಿದ್ಯಾಪತಿ' ಹೇಗಿದ್ದಾನೆ? ಇವನ ಪಾಡೇನು? ಅನ್ನೋದನ್ನು ನೋಡೋಣ ಬನ್ನಿ.
ಯಾರಿದು 'ವಿದ್ಯಾಪತಿ' ?
ಸೂಪರ್‌ಸ್ಟಾರ್ ವಿದ್ಯಾಗೆ ಸುಳ್ಳಿನ ಕಂತೆಗಳನ್ನು ಹೇಳಿ ಮದುವೆಯಾಗುವ ಸಿದ್ದು ಬಡ ಕುಟುಂಬದಿಂದ ಬಂದವನು. ಹುಟ್ಟು ಸೋಮಾರಿಯಾಗಿರುವ ಸಿದ್ದು ವಿದ್ಯಾಳನ್ನು ಪ್ರೀತಿ ಮಾಡಿ, ಆಕೆಯ ಮನಸ್ಸನ್ನು ಗೆದ್ದು ಮದುವೆಯಾಗುತ್ತಾನೆ. ಪತ್ನಿಯ ದುಡ್ಡಿನಲ್ಲಿ ಮಜಾ ಮಾಡಿಕೊಂಡಿದ್ದ ಸಿದ್ದು ಸುಳ್ಳಿನ ಸತ್ಯ ಹೊರಬೀಳುತ್ತೆ. ಐಷಾರಾಮಿ ಜೀವನ ನಡೆಸುತ್ತಿದ್ದ ಸಿದ್ದು ಬಾಳಲ್ಲಿ ಜಗ್ಗು (ಕೆಜಿಎಫ್ ಖ್ಯಾತಿಯ ಗರುಡ ರಾಮ್) ಎಂಟ್ರಿ ಆಗಿ ಕಾಡುವುದಕ್ಕೆ ಶುರು ಮಾಡುತ್ತಾನೆ. ಇಲ್ಲಿಂದ ವಿದ್ಯಾಳ ಪತಿಯ ಗೋಳಾಟ, ಪರದಾಟ ಶುರುವಾಗತ್ತೆ. ದೈತ್ಯ ಜಗ್ಗು ಜೊತೆ ವಿದ್ಯಾಪತಿ ಹೇಗೆ ಹೋರಾಡುತ್ತಾನೆ? ಸಮಸ್ಯೆಗಳನ್ನು ಹೇಗೆ ಎದುರಿಸುತ್ತಾನೆ? ಅನ್ನೋದೇ ಸಿನಿಮಾ ಕತೆ.
ಪರ್ಫಾಮೆನ್ಸ್ ಹೇಗಿದೆ?
ವಿದ್ಯಾಳ ಪತಿ ಸಿದ್ಧು ಪಾತ್ರದಲ್ಲಿ ನಾಗಭೂಷಣ ಕಾಮಿಡಿ ಕಿಕ್ ಕೊಡುತ್ತಾರೆ. ತಿಳಿ ಹಾಸ್ಯ, ವಿಶಿಷ್ಟ ಮ್ಯಾನರಿಸಂ ಮೂಲಕ ಗಮನ ಸೆಳೆಯುವ ನಾಗಭೂಷಣ ಹೀರೋ ಆದಾಗಲೂ ಅದನ್ನು ಮುಂದುವರೆಸಿದ್ದಾರೆ. ಇನ್ನು ಸಿನಿಮಾವನ್ನು ನಾಗಭೂಷಣ ಅವರಿಗೆ ಮಾಡಿದಂತೆ ಕಾಣುತ್ತೆ. ಪ್ರತಿ ಸೀನ್‌ನಲ್ಲೂ ನಾಗಭೂಷಣ ಅವರೇ ಕಾಣಿಸಿಕೊಳ್ಳುತ್ತಾರೆ. ಆದರೂ ಜನರನ್ನು ನಗಿಸುವಲ್ಲಿ ಹಿಂದೆ ಬಿದ್ದಿಲ್ಲ. ಹಾಗೇ ಭಾವನಾತ್ಮಕವಾಗಿ ಗಮನ ಸೆಳೆಯುತ್ತಾರೆ. ಇನ್ನು ನಾಯಕಿ ಮಲೈಕಾ ವಸುಪಾಲ್ ತೆರೆಮೇಲೆ ಸುಂದರವಾಗಿ ಕಾಣಿಸುತ್ತಾರೆ. ಆದರೆ, ಸಿನಿಮಾದಲ್ಲಿ ಸೂಪರ್‌ಸ್ಟಾರ್ ವಿದ್ಯಾ ಆಗಿದ್ದರೂ ಇವರಿಗೆ ಸ್ಕ್ರೀನ್ ಸ್ಲೇಸ್ ಕಡಿಮೆಯಿದೆ. ಇನ್ನು ಖಡಕ್ ಖಳನಾಯಕನ ಪಾತ್ರದಲ್ಲಿ ಗರುಡ ರಾಮ್ ಮೆಚ್ಚಿಕೊಳ್ಳದೆ ಇರಲು ಸಾಧ್ಯವೇ ಇಲ್ಲ. ಇನ್ನು ವಿಶೇಷ ಪಾತ್ರದಲ್ಲಿ ಎಂಟ್ರಿ ಕೊಡುವ ಡಾಲಿ ಧನಂಜಯ್ ವಿಶಿಷ್ಟ ಲುಕ್ ಅವರ ಅಭಿಮಾನಿಗಳಿಗೆ ಇಷ್ಟ ಆಗುತ್ತೆ.

ನಿರ್ದೇಶನ ಹೇಗಿದೆ?
ಈಗಾಗಲೇ ನಾಗಭೂಷಣ ಜೊತೆಗೆ 'ಇಕ್ಕಟ್' ಎನ್ನುವ ಹಾಸ್ಯ ಪ್ರದಾನ ಸಿನಿಮಾವನ್ನು ಎಶಾಮ್,ಹಸೀನ್ ನಿರ್ದೇಶನ ಮಾಡಿದ್ದರು. 'ವಿದ್ಯಾಪತಿ' ಕೂಡ ಅದೇ ಕಾಂಬಿನೇಷನ್ ಸಿನಿಮಾ ಅಂತ ಹೇಳಬಹುದು. ಇಲ್ಲಿ ಎಶಾಮ್,ಹಸೀನ್ ಇಬ್ಬರೂ ಹಾಸ್ಯಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿದ್ದಾರೆ. ಕಥೆಯಲ್ಲಿ ವಿಭಿನ್ನತೆಯೇನು ಇಲ್ಲ. ಸ್ಕ್ರೀನ್‌ಪ್ಲೇ ಕೊಂಚ ಮಟ್ಟಿಗೆ ನಿಧಾನಗತಿಯಲ್ಲಿ ಸಾಗುತ್ತೆ. ಪ್ರೇಕ್ಷಕರನ್ನು ನಗಿಸುವಲ್ಲಿ ಯಶಸ್ಸಿಯಾಗಿದ್ದರು ಚಿತ್ರಕಥೆ ವೇಗವಾಗಿರಬೇಕಿತ್ತು.
ಪ್ಲಸ್ ಏನು?
ನಾಗಭೂಷಣ ಅವರ ಕಾಮಿಡಿ ಇಷ್ಟ ಆಗುತ್ತೆ. ಇವರ ಜೊತೆ ಸ್ನೇಹಿತನಾಗಿ ನಟಿಸಿರುವ ಶ್ರೀವತ್ಸ ಅವರ ಕಾಮಿಡಿ ಕೂಡ ಪ್ರೇಕ್ಷಕರನ್ನು ಸೆಳೆಯುತ್ತೆ. ಅನಕೊಂಡ ಪಾತ್ರದಲ್ಲಿ ಡಾಲಿ ಧನಂಜಯ್ ವಿಶಿಷ್ಟ ಲುಕ್‌ನಲ್ಲಿ ಎಂಟ್ರಿ ಕೊಟ್ಟಿರುವುದು ಸಿನಿಮಾ ಬೂಸ್ಟ್ ಕೊಟ್ಟಂತೆ ಇದೆ. ಇಲ್ಲಿವರೆಗೂ ಸಿಕ್ಕಾಪಟ್ಟೆ ರಗಡ್ ಆಗಿ ಕಾಣಿಸಿಕೊಂಡಿದ್ದ ಗರುಡ ರಾಮ್ ವಿಶಿಷ್ಟ ಪಾತ್ರದ ಮೂಲಕ ಗಮನ ಸೆಳೆಯುತ್ತಾರೆ.
ಮೈನಸ್ ಏನು?
ಸಿನಿಮಾದಲ್ಲಿ ನಾಯಕಿ ಮಲೈಕಾ ವಸುಪಾಲ್‌ಗೆ ಇನ್ನೂ ಹೆಚ್ಚಿನ ಸ್ಕ್ರೀನ್‌ಸ್ಪೇಸ್ ಕೊಡಬೇಕಿತ್ತು. ನಿರೂಪಣೆಯಲ್ಲಿ ಇನ್ನಷ್ಟು ತಾಕತ್ತು ಇರಬೇಕಿತ್ತು. ಸ್ಕ್ರೀನ್‌ಪ್ಲೇಗೆ ಮತ್ತಷ್ಟು ಗಮನ ಕೊಟ್ಟಿದ್ದರೆ ವಿದ್ಯಾಪತಿ ಮತ್ತೊಂದು ಅದ್ಭುತ ಕಾಮಿಡಿ ಸಿನಿಮಾ ಆಗುತ್ತಿತ್ತು.
ಕೊನೆಯಲ್ಲಿ...?
ಕನ್ನಡದಲ್ಲಿ ಒಂದೊಳ್ಳೆಯ ಕಾಮಿಡಿ ಸಿನಿಮಾ ಬಾರದ ಬಹಳಷ್ಟು ದಿನಗಳು ಆಗಿತ್ತು. 'ವಿದ್ಯಾಪತಿ' ಸಿನಿಮಾ ಪ್ರೇಕ್ಷಕರನ್ನು ಖಂಡಿತವಾಗಿಯೂ ನಗಿಸುತ್ತೆ. ಇಡೀ ಕುಟುಂಬದೊಂದಿಗೆ ಸಿನಿಮಾ ನೋಡಬೇಕು ಅಂದುಕೊಂಡಿದ್ದವರಿಗೆ ಇದು ಸಖತ್ ಒಳ್ಳೆಯ ಮನರಂಜನೆ ನೀಡಬಲ್ಲದು.


Click it and Unblock the Notifications











