Kaddha Chitra Review: ನೋಡುಗನ ತಲೆಗೆ ಹುಳಬಿಡುವ ಸಿನಿಮಾ 'ಕದ್ದ ಚಿತ್ರ'.. ವಿಜಯ ರಾಘವೇಂದ್ರ ಹೊಸ ಲುಕ್ಕೇ ಕಿಕ್ಕು!
'ಕದ್ದ ಚಿತ್ರ' ಈಗಾಗಲೇ ಟ್ರೈಲರ್ ಹಾಗೂ ಟೀಸರ್‌ನಿಂದ ಪ್ರೇಕ್ಷಕರಲ್ಲಿ ಕುತೂಹಲವನ್ನು ಕೆರಳಿಸಿದೆ. ಅದರಲ್ಲೂ ವಿಜಯ ರಾಘವೇಂದ್ರ ಹಿಂದೆಂದೂ ಇಂತಹ ಪಾತ್ರದಲ್ಲಿ ಕಾಣಿಸಿಕೊಂಡೇ ಇಲ್ಲ. ಒಬ್ಬ ಲೇಖಕನಾಗಿ, ಕಾದಂಬರಿಗಾರನಾಗಿ ಎದುರಿಸುವ ಸವಾಲನ್ನು ಮುಂದಿಟ್ಟುಕೊಂಡು ನಿರ್ದೇಶಕ ಸುಹಾಸ್ ಕೃಷ್ಣ ಕಥೆಯನ್ನು ಹೆಣೆದಿದ್ದಾರೆ.
ಕೃತಿ ಚೌರ್ಯಕ್ಕೆ ಸಂಬಂಧಿಸಿದ ಕಥೆ ಕನ್ನಡದ ಮಟ್ಟಿಗೆ ಹೊಸತು. ಇದನ್ನು ಪ್ರೇಕ್ಷಕರ ಮನಕ್ಕೆ ತಟ್ಟುವಂತೆ ಸಿನಿಮಾ ಮಾಡಿದ್ದಾರಾ? ನಿರ್ದೇಶಕ ಹೇಳಲು ಹೊರಟಿರೋ ಕಥೆ ಪ್ರೇಕ್ಷಕರಿಗೆ ಮುಟ್ಟಿದೆಯೇ? 'ಕದ್ದ ಚಿತ್ರ' ವಿಜಯ ರಾಘವೇಂದ್ರ ವೃತ್ತಿ ಬದುಕಿಗೆ ಕಮ್‌ಬ್ಯಾಕ್ ಸಿನಿಮಾ ಆಗುತ್ತಾ? ಅನ್ನೋ ಪ್ರಶ್ನೆಗೆ ಉತ್ತರವೇ ಈ ಸಿನಿಮಾ.

ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ನಿಧನದ ಬಳಿಕ ಈ 'ಕದ್ದ ಚಿತ್ರ' ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಮೇಲೆ ಸ್ಪಂದನಾ ತುಂಬಾನೇ ನಂಬಿಕೆ ಇಟ್ಟುಕೊಂಡಿದ್ದರು. ಹೀಗಾಗಿ ವಿಜಯ ರಾಘವೇಂದ್ರಗೂ ಭಾವನಾತ್ಮಕವಾಗಿ ಈ ಸಿನಿಮಾ ತುಂಬಾನೇ ಸ್ಪೆಷಲ್.
'ಕದ್ದ ಚಿತ್ರ'ದ ಕಥೆಯ ಹಿನ್ನೆಲೆ ಏನು?
ಈ ಸಿನಿಮಾ ಪೂರ್ತಿ ವಿಜಯ ರಾಘವೇಂದ್ರ ಸ್ಮೀಕಿಂಗ್ ಅಂಡ್ ಡ್ರಿಂಕಿಂಗ್ ಮಾಡುತ್ತಿರುತ್ತಾರೆ. ಈ ಸಿನಿಮಾದಲ್ಲಿ ಅವರದ್ದೇ ಆದ ಒಂದು ಫ್ಯಾಷನ್ ಇರುತ್ತೆ. ಆ ಫ್ಯಾಷನ್ ಹೇಗೆ ಪ್ರೊಫೆಷನ್ ಆಗುತ್ತೆ ಅನ್ನೋದೇ ಒಂದು ಸಿನಿಮಾ. ಈ ಸಿನಿಮಾದಲ್ಲಿ ವಿಜಯ ರಾಘವೇಂದ್ರ ಒಬ್ಬ ಒಳ್ಳೆಯ ಬರಹಗಾರ ಕೂಡ ಹೌದು. ಈ ವೇಳೆ ವಿಜಯ ರಾಘವೇಂದ್ರ ಬರೆದಿರೋ ಒಂದು ಪುಸ್ತಕ ಕದ್ದಿದ್ದು ಅಂತ ದೊಡ್ಡ ಸುದ್ದಿಯಾಗುತ್ತೆ. ಇದಾದ ಬಳಿಕ ಸಿನಿಮಾ ಏನೆಲ್ಲಾ ಟ್ವಿಸ್ಟ್‌ಗಳನ್ನು ಪಡೆದುಕೊಳ್ಳುತ್ತೆ ಅನ್ನೋದು ಸಿನಿಮಾ ಕಥೆ.
ವಿಜಯ ರಾಘವೇಂದ್ರ ಅವರಿಸಿಕೊಳ್ಳುತ್ತಾರೆ
'ಕದ್ದ ಚಿತ್ರ' ಸಿನಿಮಾದಲ್ಲಿ ಕಾದಂಬರಿಗಾರನಾಗಿ ವಿಜಯ ರಾಘವೇಂದ್ರ ಕಾಣಿಸಿಕೊಳ್ಳುತ್ತಾರೆ. ಇಡೀ ಸಿನಿಮಾವನ್ನು ಇವರೇ ಆವರಿಸಿಕೊಂಡಿರುವುದು ಎದ್ದು ಕಾಣುತ್ತೆ. ಇದೇ ಮೊದಲ ಬಾರಿಗೆ ಇಂತಹ ಪಾತ್ರದಲ್ಲಿ ವಿಜಯ ರಾಘವೇಂದ್ರ ಕಾಣಿಸಿಕೊಂಡಿದ್ದು, ಇವರ ಪಾತ್ರ ಪ್ರೇಕ್ಷಕರಿಗೆ ಇಷ್ಟ ಆಗುತ್ತೆ. ಆದರೆ, ನಾಯಕಿಯಾಗಿ ಕಾಣಿಸಿಕೊಂಡಿರುವ ನಮ್ರತಾ ಸುರೇಂದ್ರನಾಥ್ ಗಮನ ಸೆಳೆಯುತ್ತಾರೆ. ಈ ಸಿನಿಮಾದಲ್ಲಿ ನಾಯಕಿಯ ನಟನೆ ಚೆನ್ನಾಗಿದೆ. ಆದರೆ, ಸಿನಿಮಾದಲ್ಲಿ ಪರ್ಫಾಮ್ ಮಾಡುವುದಕ್ಕೆ ಇನ್ನೊಂದಿಷ್ಟು ಅವಕಾಶ ಕೊಡಬೇಕಿತ್ತು ಅಂತ ಅನಿಸುತ್ತೆ.

ಟೆಕ್ನಿಕಲಿ ಸಿನಿಮಾ ಹೇಗಿದೆ?
'ಕದ್ದ ಚಿತ್ರ'ವನ್ನು ಕುತೂಹಲ ಕಾರಿಯಾಗಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ನಿರ್ದೇಶಕ ಸುಹಾಸ್ ಕೃಷ್ಣ ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಎಕ್ಸ್‌ಪೆರಿಮೆಂಟ್ ಮಾಡಲು ಮುಂದಾಗಿದ್ದು ಗಮನಿಸಬೇಕಾದ ಅಂಶ. ಕಥೆಯಲ್ಲಿ ಕುತೂಹಲ, ಆಕ್ರೋಶ, ಸೇಡು, ಕೃತಿ ಚೌರ್ಯವನ್ನು ಮುಖ್ಯ ವಿಷಯವನ್ನಾಗಿ ಇಟ್ಟಿಕೊಳ್ಳಲಾಗಿದೆ. ಆದರೆ, ಚಿತ್ರಕತೆ ಇನ್ನಷ್ಟು ಚುರುಕಾಗಿರಬೇಕಿತ್ತು ಅಂತ ಆಗಾಗ ಅನಿಸುತ್ತದೆ. ಕೆಲವು ಕಡೆ ಸಿನಿಮಾದ ಕಥೆಯನ್ನು ಅನಾವಶ್ಯಕವಾಗಿ ಎಳೆದಿದ್ದಾರೇನೋ ಅಂತ ಅನಿಸುತ್ತೆ.
ಹಿನ್ನೆಲೆ ಸಂಗೀತ ಹೈಲೈಟ್
'ಕದ್ದ ಚಿತ್ರ' ಹೈಲೈಟ್ ಹಿನ್ನೆಲೆ ಸಂಗೀತ. ಕೆಲವು ದೃಶ್ಯಗಳು ಪ್ರೇಕ್ಷಕರ ಗಮನ ಸೆಳೆಯುವಂತೆ ಮಾಡುತ್ತವೆ. ಕೆಲವೊಮ್ಮೆ ನೋಡುಗನನ್ನು ಬೆಚ್ಚಿಬೀಳಿಸುವಂತೆ ಮಾಡುವುದು ಹಿನ್ನೆಲೆ ಸಂಗೀತವೇ. ಈ ಕಾರಣಕ್ಕೆ ಬ್ಯಾಕ್‌ಗ್ರೌಂಡ್ ಮ್ಯೂಸಿಕ್‌ಗೆ ಹೆಚ್ಚಿನ ಅಂಕ ನೀಡಲೇಬೇಕು.
ಪ್ಲಸ್ ಅಂಡ್ ಮೈನಸ್ ಏನು?
'ಕದ್ದ ಚಿತ್ರ'ದಲ್ಲಿ ಪ್ಲಸ್ ಅಂಡ್ ಮೈನಸ್ ಎರಡೂ ಇದೆ. ಕ್ರೇಜಿ ಮೈಂಡ್ಸ್ ಕ್ಯಾಮಾರಾ ವರ್ಕ್ ಅದ್ಭುತವಾಗಿದೆ. ಮೂವರು ವಿಲನ್‌ಗಳ ಪಾತ್ರವೂ ಸಿನಿಮಾದ ಹೈಲೈಟ್‌ಗಳಲ್ಲಿ ಒಂದು. ಹಿನ್ನೆಲೆ ಸಂಗೀತ, ವಿಜಯ ರಾಘವೇಂದ್ರ ನಟನೆ ಸಿನಿಮಾದ ಪ್ಲಸ್. ಹಾಗೇ ಈ ಸಿನಿಮಾದಲ್ಲಿ ಕಾಮಿಡಿ ದೃಶ್ಯಗಳು ಇರಬೇಕಿತ್ತು. ಸಿನಿಮಾದ ಉದ್ದಕ್ಕೂ ಹಾಸ್ಯ ದೃಶ್ಯಗಳ ಕೊರತೆ ಎದ್ದು ಕಾಣಿಸುತ್ತಿತ್ತು. ಎಡಿಟಿಂಗ್ ಇನ್ನಷ್ಟು ಚುರುಗಾಗಿರಬೇಕಿತ್ತು. ಕೆಲವು ದೃಶ್ಯಗಳಿಗೆ ಮುಲಾಜಿಲ್ಲದೆ ಕತ್ತರಿ ಹಾಕಬಹುದಿತ್ತು. ಇದು ಸಿನಿಮಾದ ಮೈನಸ್ ಪಾಯಿಂಟ್.


Click it and Unblock the Notifications











