Rippan Swamy Review:ಆರಂಭದಲ್ಲೇ 'ರಿಪ್ಪನ್ ಸ್ವಾಮಿ'ಯ ಕ್ಲೈಮ್ಯಾಕ್ಸ್.. ಸಿನಿಮಾದಲ್ಲಿ ಮುಂದೇನಿದೆ?
ಈ ವಾರ ಕನ್ನಡದ ಎರಡು ಸಿನಿಮಾಗಳು ರಿಲೀಸ್ ಆಗಿವೆ. ಎರಡೂ ಸಿನಿಮಾಗಳೂ ಅಣ್ಣಾವ್ರು ಕುಟುಂಬದ ಹೀರೋಗಳದ್ದೇ ಅನ್ನೋದು ವಿಶೇಷ. ಅದರಲ್ಲಿ ಒಂದು ವಿನಯ್ ರಾಜ್‌ಕುಮಾರ್ ನಟನೆಯ 'ಅಂದೊಂದಿತ್ತು ಕಾಲ'. ಇನ್ನೊಂದು ವಿಜಯ ರಾಘವೇಂದ್ರ ನಟನೆಯ 'ರಿಪ್ಪನ್ ಸ್ವಾಮಿ'. ಈ ಎರಡೂ ಸಿನಿಮಾಗಳು ಈ ವಾರ ಥಿಯೇಟರ್‌ಗಳಿಗೆ ಲಗ್ಗೆ ಇಟ್ಟಿವೆ. ವಿಜಯ ರಾಘವೇಂದ್ರ ಹಿಂದೆಂದೂ ನಟಿಸಿದ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, 'ರಿಪ್ಪನ್ ಸ್ವಾಮಿ'ಯಲ್ಲಿ ಉಗ್ರ ಸ್ವರೂಪದಲ್ಲಿ ನೋಡಬಹುದಾಗಿದೆ.
'ರಿಪ್ಪನ್ ಸ್ವಾಮಿ'ಗೂ ಆ ಪಾತ್ರ ಮಾಡಿರುವ ವಿಜಯ ರಾಘವೇಂದ್ರ ಅವರ ಸ್ವಭಾವಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ರಿಯಲ್ ಲೈಫ್‌ನಲ್ಲಿ ವಿಜಯ ರಾಘವೇಂದ್ರ ಅವರಲ್ಲಿ ರಿಪ್ಪನ್ ಸ್ವಾಮಿ ಒಂದೇ ಒಂದು ಗುಣವನ್ನೂ ನೋಡುವುದಕ್ಕೆ ಅಸಾಧ್ಯ. ಹೀಗಿರುವಾಗ ಈ ಪಾತ್ರದಲ್ಲಿ ವಿಜಯ್ ರಾಘವೇಂದ್ರ ಹೇಗೆ ಕಾಣಿಸಿಕೊಳ್ಳುತ್ತಾರೆ? ಅನ್ನೋದು ಮೊದಲ ಕುತೂಹಲ. ಇನ್ನು ಈಗಾಗಲೇ ಪ್ರೀಮಿಯರ್ ಶೋನಲ್ಲಿ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಈ ವಾರ ರಿಲೀಸ್ ಆಗಿರುವ 'ರಿಪ್ಪನ್ ಸ್ವಾಮಿ'ಯ ಕಥೆ ತಿಳಿದುಕೊಳ್ಳುವ ಕುತೂಹಲವಂತೂ ಇದ್ದೇ ಇರುತ್ತೆ. ವಿಜಯ್ ರಾಘವೇಂದ್ರ ಈ ಸಿನಿಮಾ ಮತ್ತೆ ಯಶಸ್ಸು ಕೊಡಬಹುದಾ? ಈ ಸಿನಿಮಾ ಏನಿದೆ? ಏನಿಲ್ಲ? ಮತ್ತೊಂದು ಸಿನಿಮಾ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆಯ ಬಹುದೇ? ಇದೆಲ್ಲವನ್ನು ತಿಳಿಯುವುದಕ್ಕೆ ಮುಂದೆ ಓದಿ.
'ರಿಪ್ಪನ್ ಸ್ವಾಮಿ' ಕಥೆ ಏನು?
ಮಲೆನಾಡು ಭಾಗದ ಒಂದು ಸಣ್ಣ ಊರಿನ ಜಮೀನ್ದಾರ ಸ್ವಾಮಿ ಅದೇ ಊರಿನ ಜನರಿಗೆ ರಿಪ್ಪನ್ ಸ್ವಾಮಿ ಎಂದೇ ಫೇಮಸ್. ಆದರೆ, ಒಳ್ಳೆಯ ರೀತಿಯಿಂದಲ್ಲ. ಇಡೀ ಊರಿನವರಿಗೆ ಅವನೊಬ್ಬ ವಿಚಿತ್ರ ಸ್ವಭಾವದ ವ್ಯಕ್ತಿ. ಕೋಪಿಷ್ಠ, ಸದಾ ಹೊಡೆದಾಟ, ಬಡಿದಾಟ ಮಾಡಿಕೊಂಡು ಇರುವ ವ್ಯಕ್ತಿ. ಕೆಲವೊಮ್ಮೆ ಅವನು ನಿಗೂಢ ವ್ಯಕ್ತಿ ಅಂತ ಅನಿಸುವುದು ಉಂಟು. ಸ್ನೇಹಿತರಿಗಾಗಿ ಏನು ಬೇಕಾದರೂ ಮಾಡುವ ವ್ಯಕ್ತಿ. ಚಿಕ್ಕದೊಂದು ವಿಷಯಕ್ಕೆ ಅವರೊಂದಿಗೆ ಕಿತ್ತಾಡಿಕೊಂಡು ಬೇರೆಯಾಗುತ್ತಾನೆ. ಕೋಪ ಬಂದರೆ, ಯಾರನ್ನು ಬೇಕಾದರೂ ಎದುರು ಹಾಕಿಕೊಳ್ಳುವ ಆಸಾಮಿ. ಇಂತಹ ಕಟುಕನಿಗೂ ಪ್ರೀತಿಯಾಗುತ್ತೆ. ಅವಳೇ ಅವನ ಹೆಂಡತಿಯೂ ಆಗುತ್ತಾಳೆ. ಇಷ್ಟು ಕಠೋರ ಸ್ವಭಾವದ ರಿಪ್ಪನ್ ಸ್ವಾಮಿ ಸತ್ತಿರೋ ವಿಷಯ ಊರಿನವರಿಗೆ ದಂಗುಬಡಿಸುತ್ತೆ. ಅಷ್ಟಕ್ಕೂ ರಿಪ್ಪನ್ ಸ್ವಾಮಿ ಯಾಕೆ ಹೀಗಾಡುತ್ತಾನೆ? ಅವನಗೆ ಏನಾಯ್ತು? ಇದೆಲ್ಲವೂ ಎಳೆ ಎಳೆಯಾಗಿ ಬಿಚ್ಚಿಕೊಳ್ಳುತ್ತಾ ಹೋಗುತ್ತೆ. ಅದನ್ನು ಸಿನಿಮಾದಲ್ಲಿಯೇ ನೋಡಬೇಕು.
ರಿಪ್ಪನ್ ಸ್ವಾಮಿ 'ವಿಜಯ' ಸಿಕ್ಕಿತೇ?
ಒಂದೆಳೆ ಕಥೆ ಹೇಳಿದ ಮೇಲೆ 'ರಿಪ್ಪನ್ ಸ್ವಾಮಿ'ಯನ್ನು ವಿಜಯ ರಾಘವೇಂದ್ರ ಅವರಲ್ಲಿ ನೋಡಬಹುದೇ? ಸಿನಿಮಾ ನೋಡುವುದಕ್ಕೂ ಮುನ್ನ ಇಂತಹದ್ದೊಂದು ಪ್ರಶ್ನೆ ಮೂಡುವುದು ಸಹಜ. ಯಾಕಂದ್ರೆ ಇದೂವರೆಗೂ ವಿಜಯ ರಾಘವೇಂದ್ರ ಇಂತಹ ಕಠೋರ ವ್ಯಕ್ತಿತ್ವದ ಪಾತ್ರದಲ್ಲಿ ಕಾಣಿಸಿಕೊಂಡಿರಲೇ ಇಲ್ಲ. ವಿಜಯ ರಾಘವೇಂದ್ರ ಅವರಿಂದ ಇಂತಹ ಪಾತ್ರ ಸಾಧ್ಯವೇ ಇಲ್ಲ ಅನ್ನೋವರ ಅಭಿಪ್ರಾಯವನ್ನು ವಿಜಯ ರಾಘವೇಂದ್ರ ಇಲ್ಲಿ ಬದಲಾಯಿಸುತ್ತಾರೆ. ಇಡೀ ಸಿನಿಮಾದಲ್ಲಿ ಇವರೇ ಹೈಲೈಟ್. ಈ ಸಿನಿಮಾ ಮೂಲಕ ಹೊಸ ಹೊಸ ಪಾತ್ರಗಳು ಅವರನ್ನು ಹುಡುಕಿಕೊಂಡು ಬರಬಹುದು.
ನಿರ್ದೇಶಕ- ಪಾತ್ರವರ್ಗ ಹೇಗಿದೆ?
'ರಿಪ್ಪನ್ ಸ್ವಾಮಿ' ಕನ್ನಡ ಚಿತ್ರರಂಗಕ್ಕೆ ಮತ್ತೊಂದು ವಿಶಿಷ್ಠ ಸಿನಿಮಾ ಎನ್ನುಬಹುದು. ಈ ಕ್ರೆಡಿಟ್ ನಿರ್ದೇಶಕ ಕಿಶೋರ್ ಮೂಡುಬಿದ್ರೆ ಅವರಿಗೆ ಕೊಡಬೇಕು. ಆರಂಭದಲ್ಲಿಯೇ 'ರಿಪ್ಪನ್ ಸ್ವಾಮಿ'ಯ ಕ್ಲೈಮ್ಯಾಕ್ಸ್ ತೋರಿಸಿ, ರಿವರ್ಸ್ ಸ್ಕ್ರೀನ್ ಪ್ಲೇ ಮೂಲಕ ಪ್ರೇಕ್ಷಕರಿಗೆ ಕಥೆ ಹೇಳುವ ಪ್ರಯತ್ನ ನಿಜಕ್ಕೂ ಅದ್ಭುತ. ಇನ್ನು ರಿಪ್ಪನ್ ಸ್ವಾಮಿಯ ಪತ್ನಿಯಾಗಿ ಅಶ್ವಿನಿ ಚಂದ್ರಶೇಖರ್ ಮೊದಲ ಸಿನಿಮಾದಲ್ಲಿ ಇಷ್ಟ ಆಗುತ್ತಾರೆ. ಪ್ರಕಾಶ್ ತುಮಿನಾಡು, ವಜ್ರಧೀರ್ ಜೈನ್, ಯಮುನಾ ಶ್ರೀನಿಧಿಯವರ ಪಾತ್ರಗಳು ಕೂಡ ಇಷ್ಟ ಆಗುತ್ತೆ.

ಸಿನಿಮಾದ ಪ್ಲಸ್ ಏನು?
'ರಿಪ್ಪನ್ ಸ್ವಾಮಿ' ಕ್ರೈಂ-ಥ್ರಿಲ್ಲರ್ ಸಿನಿಮಾ ಆಗಿದ್ದರಿಂದ ಆಗಾಗ ಟ್ವಿಸ್ಟ್ ಅಂಡ್ ಟರ್ನ್‌ಗಳನ್ನು ನಿರೀಕ್ಷೆ ಮಾಡಬಹುದು. ರಿವರ್ಸ್ ಸ್ಕ್ರೀನ್ ಪ್ಲೇ ಮೂಲಕ ಕಥೆ ಹೇಳುವುದು ಪ್ರೇಕ್ಷಕರಿಗೆ ಇಷ್ಟ ಆಗುತ್ತೆ. ಕೇವಲ ರಿಪ್ಪನ್ ಸ್ವಾಮಿಯ ಕ್ರೌರ್ಯ, ಹಿಂಸೆ, ರಕ್ತಾಪಾತದ ಸಿನಿಮಾ ಅಲ್ಲ. ಅವನ ಸಾವಿನ ಹಿಂದಿನ ನಿಗೂಢತೆ, ಹೇಳಿಕೊಳ್ಳುವುದಕ್ಕೆ ಆಗದ ನೋವನ್ನು ಪರಿಣಾಮಕಾರಿಯಾಗಿ ಹೇಳುವುದಕ್ಕೆ ಹೊರಟಿದ್ದಾರೆ. ಎಲ್ಲಾ ಪಾತ್ರಗಳು ಇಷ್ಟ ಆಗುತ್ತವೆ. ರಂಗನಾಥ್ ಛಾಯಾಗ್ರಹಣ ಮಲೆನಾಡಿನ ಸೊಬಗನ್ನು ಇನ್ನಷ್ಟು ಸುಂದರವಾಗಿಸಿದೆ.
ಸಿನಿಮಾದ ಮೈನಸ್ ಏನು?
ಯಾವುದೇ ಸಿನಿಮಾ ಪರ್ಫೆಕ್ಟ್ ಆಗಿರಲ್ಲ. ಹೀಗಾಗಿ ಇಲ್ಲೂ ಕೆಲವು ಮೈನಸ್‌ಗಳು ಇವೆ. ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿದ್ದರಿಂದ ಸ್ಕ್ರೀನ್ ಪ್ಲೇ ಇನ್ನೂ ಟೈಟ್ ಆಗಿರಬೇಕಿತ್ತು. ಸಿನಿಮಾಗೆ ಸ್ವಲ್ಪ ವೇಗ ಕೊಡಬೇಕಿತ್ತು. ಅದರಲ್ಲೂ ಸೆಕೆಂಡ್ ಹಾಫ್‌ನಲ್ಲಿ ಸೀನ್‌ಗಳಿಗೆ ಕತ್ತರಿ ಬಿದ್ದಿದ್ದರೆ, ಇನ್ನಷ್ಟು ಥ್ರಿಲ್ಲಿಂಗ್ ಆಗಿರುತ್ತಿತ್ತು. ರಕ್ತಪಾತ ಕಡಿಮೆ ಮಾಡಿ, ಇನ್ನಷ್ಟು ಎಮೋಷನ್ಸ್ ತುಂಬಿದ್ದರೆ ಫ್ಯಾಮಿಲಿ ಆಡಿಯನ್ಸ್ ಅನ್ನು ಹೆಚ್ಚಾಗಿ ಸೆಳೆಯಬಹುದಿತ್ತು.
'ರಿಪ್ಪನ್ ಸ್ವಾಮಿ' ಕ್ಲೈಮ್ಯಾಕ್ಸ್ ಏನು?
'ರಿಪ್ಪನ್ ಸ್ವಾಮಿ' ಕನ್ನಡ ಚಿತ್ರರಂಗದ ಮತ್ತೊಂದು ವಿಶಿಷ್ಠ ಸಿನಿಮಾ. ಅದೇ ಮಾಸ್ ಆಕ್ಷನ್, ಲವ್ ಸ್ಟೋರಿಗಳಿಂದ ಬೇಸತ್ತಿರೋ ಸಿನಿ ಪ್ರೇಮಿಗಳಿಗೆ ಇಷ್ಟ ಆಗುತ್ತೆ. ಅದರಲ್ಲೂ ಕ್ರೈಂ ಥ್ರಿಲ್ಲರ್ ಸಿನಿಮಾ ಇಷ್ಟ ಪಡುವವರಿಗೆ 'ರಿಪ್ಪನ್ ಸ್ವಾಮಿ' ಸಖತ್ ಇಷ್ಟ ಆಗುತ್ತೆ. ಹೀಗಾಗಿ ವಿಜಯ ರಾಘವೇಂದ್ರ ಹಾಗೂ ಸಿನಿಮಾ ಥಿಯೇಟರ್‌ನಲ್ಲಿ ವಿಶಿಷ್ಠ ಅನುಭವ ಕೊಡೋದು ಗ್ಯಾರಂಟಿ.


Click it and Unblock the Notifications











