Beladingala Baale; 3 ದಶಕಗಳ ಬಳಿಕವೂ 'ಬೆಳದಿಂಗಳ ಬಾಲೆ'ಯನ್ನು ಯಾಕೆ ನೋಡ್ಬೇಕು?
ಕನ್ನಡ ಚಿತ್ರರಂಗ ಇಂದು ಸಕ್ಸಸ್‌ಫುಲ್ ಸಿನಿಮಾಗಳನ್ನು ಕೊಡುವಲ್ಲಿ ಹಿಂದೆ ಉಳಿದಿರಬಹುದು. ಆದರೆ, ಈ ಚಿತ್ರರಂಗದಿಂದ ಕೆಲವು ಅದ್ಭುತ ಸಿನಿಮಾಗಳೇ ಬಂದಿವೆ. ಕೇವಲ ಮನರಂಜನೆಯನ್ನಷ್ಟೇ ಅಲ್ಲದೆ, ಪ್ರೇಕ್ಷಕರ ಮನಸ್ಸಿನಲ್ಲಿ ಸದಾ ಕಾಲ ಒಂದು ಸುಂದರ ಕಾವ್ಯವಾಗಿ ಉಳಿದು ಬಿಟ್ಟಿದೆ. ಇಂತಹ ಅತ್ಯದ್ಭುತ ಸಿನಿಮಾಗಳನ್ನು ನೀಡಿದ ಚಿತ್ರರಂಗವಿದು. ಅಂತಹದರಲ್ಲಿ ಒಂದು ಸಿನಿಮಾ 'ಬೆಳದಿಂಗಳ ಬಾಲೆ'.
ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಹೀರೋ ಅನಂತ್ ನಾಗ್ ಪ್ರಮುಖ ಪಾತ್ರದಲ್ಲಿ ನಟಿಸಿದ ಸಿನಿಮಾವಿದು. ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ ಮಾಸ್ಟರ್ ಪೀಸ್. 'ಬೆಂಳದಿಂಗಳ ಬಾಲೆ' ಕೇವಲ ಸಿನಿಮಾವಾಗಿ ಕಾಡಿಲ್ಲ. ಯಂಡಮೂರಿ ವೀರೇಂದ್ರನಾಥ್ ಬರೆದ ಈ ಕಾದಂಬರಿಯೇ ಕಣ್ಮುಂದೆ ಬಂದಂತೆ ಇದೆ. 1995ರಲ್ಲಿ ತೆರೆಕಂಡಿದ್ದ ಈ ಸಿನಿಮಾ ಬಿಡುಗಡೆಯಾಗಿ ಮೂರು ದಶಕಗಳಾಗಿವೆ. ಇಂದಿಗೂ ಸಿನಿ ಪ್ರೇಮಿಗಳ ಮಾನಸದಿಂದ ಮರೆಯಾಗಿಲ್ಲ. ಹಾಗಿದ್ದರೆ, 'ಬೆಳದಿಂಗಳ ಬಾಲೆ' ಇಂದಿನ ಪೀಳಿಗೆಗೂ ಯಾಕೆ ಪ್ರಸ್ತುತ? ಇದು ಸ್ಯಾಂಡಲ್‌ವುಡ್‌ನ ಸಾರ್ವಕಾಲಿಕ ಸಿನಿಮಾ ಯಾಕೆ? ಮುಂದೆ ಓದಿ.

ಬೆಳದಿಂಗಳ ಬಾಲೆ ಹೈಲೈಟ್ಸ್
ನಿರ್ದೇಶನ: ಸುನಿಲ್ ಕುಮಾರ್ ದೇಸಾಯಿ
ಪಾತ್ರಗಳು: ಅನಂತ್ ನಾಗ್, ಸುಮನ್ ನಗರ್ಕರ್, ರಮೇಶ್ ಭಟ್
ಸಂಗೀತ: ಗುಣಸಿಂಗ್
ಮೂಲ ಕಥೆ: ಖ್ಯಾತ ತೆಲುಗು ಲೇಖಕ ಯಂಡಮೂರಿ ವೀರೇಂದ್ರನಾಥ್ ಅವರ ಕಾದಂಬರಿ ಆಧಾರಿತ
ಕಥಾಹಂದರ
ರೇವಂತ್ (ಅನಂತ್‌ನಾಗ್) ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಚೆಸ್ ಆಟಗಾರ. ಇವರಿಗೆ ಪ್ರತಿ ದಿನವೂ ಒಬ್ಬ ಅನಾಮಧೇಯ ಮಹಿಳೆಯಿಂದ ಫೋನ್ ಕರೆ ಬರಲು ಆರಂಭ ಆಗುತ್ತೆ. ಆಕೆ ತನ್ನ ಪರಿಚಯವನ್ನು ಮಾಡಿಕೊಳ್ಳದೆ, 'ಬೆಳದಿಂಗಳ ಬಾಲೆ'/ ರಮ್ಯಾ (ಸುಮನ್ ನಗರ್ಕರ್) ಎಂದು ಹೇಳಿಕೊಳ್ಳುತ್ತಾರೆ. ಪ್ರತಿ ದಿನವೂ ರೇವಂತ್‌ಗೆ ಕರೆ ಮಾಡಿ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾಳೆ. ಆದರೆ, ಇದು ಸಾಮಾನ್ಯ ಪ್ರೇಮಿಗಳಂತೆ ಅಲ್ಲ. ರೇವಂತ್ ಬುದ್ಧಿಶಕ್ತಿ ಸವಾಲೊಡ್ಡುವ ಒಗಟುಗಳು, ಚದುರಂಗದ ಚಾಲೆಂಜ್‌ಗಳನ್ನು ಹಾಕುತ್ತಾಳೆ. ಆರಂಭದಲ್ಲಿ ರೇವಂತ್‌ಗೆ ಕಿರಿಕಿರಿಯಾದರೂ,'ಬೆಳದಿಂಗಳ ಬಾಲೆ'ಯ ಬುದ್ಧಿವಂತಿಕೆ, ಧ್ವನಿಗೆ ಮಂತ್ರಮುಗ್ಧನಾಗುತ್ತಾನೆ. ಆಕೆ ಕೊಟ್ಟು ಸುಳಿವುಗಳನ್ನು ಇಟ್ಟುಕೊಂಡು ಆಕೆಯನ್ನು ಹುಡುಕಲು ಮುಂದಾಗುತ್ತಾನೆ. ಸಿನಿಮಾದ ಉದ್ದಕ್ಕೂ ಆ ಅಪರಿಚಿತ ಮಹಿಳೆ ಬೆಳದಿಂಗಳ ಬಾಲೆಯಾಗಿಯೇ ಉಳಿದು ಬಿಡುತ್ತಾಳೆ. ಆದರೆ, ರೇವಂತ್ ಆಕೆಯ ಹುಡುಕಲು ಹೋರಾಡುವುದೇ ಸಿನಿಮಾದ ಕಥೆ.
ಚಿತ್ರಕಥೆ ಮತ್ತು ನಿರ್ದೇಶನ
ಈ ಸಿನಿಮಾದಲ್ಲಿ ರೇವಂತ್ ಪಾತ್ರದಲ್ಲಿ ನಟಿಸಿರುವ ಅನಂತ್‌ನಾಗ್ ಎಷ್ಟು ಗಮನ ಸೆಳೆಯುತ್ತಾರೋ, ಅಷ್ಟೇ ಇಷ್ಟ ಆಗೋದು ನಾಯಕಿ ಪಾತ್ರ. ಇಡೀ ಸಿನಿಮಾದಲ್ಲಿ ಆಕೆಯ ಮುಖವನ್ನೇ ತೋರಿಸದೆ ಕೇವಲ ಧ್ವನಿ, ಸಂಭಾಷಣೆ ಮೂಲಕವೇ ಕುತೂಹಲ ಕೆರಳಿಸಿದ್ದು ಚಿತ್ರಕಥೆಯ ತಾಕತ್ತನ್ನು ಹೇಳುತ್ತೆ. ಈ ಸವಾಲನ್ನು ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಅಷ್ಟೇ ಸೊಗಸಾಗಿ ನಿರ್ದೇಶನ ಮಾಡಿದ್ದಾರೆ. ಇದು ಅವರ ವೃತ್ತಿ ಬದುಕಿನ ಬೆಸ್ಟ್ ಸಿನಿಮಾಗಳಲ್ಲಿ ಒಂದು.

ಅನಂತ್ ನಾಗ್ ಅಭಿನಯ
ಅಂತರರಾಷ್ಟ್ರೀಯ ಮಟ್ಟದ ಚೆಸ್ ಆಟಗಾರನಾಗಿ ಅನಂತ್ ನಾಗ್ ಅವರ ಅಭಿನಯ ಅದ್ಭುತ. ರೇವಂತ್ ಪಾತ್ರದಲ್ಲಿ ಅನಂತ್‌ನಾಗ್ ಜೀವಿಸಿದ್ದಾರೆ. ಚೆಸ್ ಆಟಗಾರ, ಪ್ರೇಮಿ, ರಹಸ್ಯ ಮಹಿಳೆ ನೋಡಲು ಹಂಬಲಿಸುವ ವ್ಯಕ್ತಿಯಾಗಿ ಪ್ರೇಕ್ಷಕರಿಗೆ ಇಷ್ಟ ಆಗುತ್ತಾರೆ. ಅವರ ಬದಲಾಗುವ ಭಾವನೆಗಳು, ಧ್ವನಿಯಲ್ಲಿನ ಏರಿಳಿತ ನೋಡುಗನ್ನು ಮಂತ್ರಮುಗ್ಧರನ್ನಾಗಿಸುತ್ತೆ. ಸುನೀಲ್ ಕುಮಾರ್ ದೇಸಾಯಿ ಇದೇ ಸಿನಿಮಾವನ್ನು ಕಮಲ್ ಹಾಸನ್ ಅವರೊಂದಿಗೆ ತಮಿಳಿನಲ್ಲಿ ಮಾಡುವುದಕ್ಕೆ ಹೊರಟಿದ್ದರು. ಆದರೆ, ಅನಂತ್ ನಾಗ್ ಅವರ ನಟನೆ ಮ್ಯಾಚ್ ಮಾಡುವುದಕ್ಕೆ ಆಗುವುದಿಲ್ಲವೆಂದು ತಿರಸ್ಕರಿಸಿದ್ದರು ಎಂಬ ಸುದ್ದಿನೂ ಇದೆ.
ಬೆಳದಿಂಗಳ ಬಾಲೆಯ ಹಿನ್ನೆಲೆ ಧ್ವನಿ
ಬೆಳದಿಂಗಳ ಬಾಲೆಯ ಧ್ವನಿ ಇಡೀ ಸಿನಿಮಾದ ಮತ್ತೊಂದು ಹೈಲೈಟ್. ರಮ್ಯಾಳಾಗಿ ನಟಿಸಿದ್ದ ಸುಮನ್ ನಗರ್ಕರ್‌ಗೆ ಹಿರಿಯ ಗಾಯಕಿ ಮಂಜುಳಾ ಗುರುರಾಜ್ ಧ್ವನಿ ನೀಡಿದ್ದರು. ಸಿನಿಮಾದ ಉದ್ದಕ್ಕೂ ಈ ಧ್ವನಿ ಕಾಡುತ್ತಲೇ ಇರುತ್ತೆ. ಇನ್ನು ಗುಣ ಸಿಂಗ್ ಅವರ ಟ್ಯೂನ್‌ಗಳು ಮಧ್ಯದಲ್ಲಿ ಪ್ರೇಕ್ಷಕರನ್ನು ಬೇರೆಯೊಂದು ಲೋಕಕ್ಕೆ ಕರೆದುಕೊಂಡು ಹೋಗುತ್ತೆ. ಎಲ್ಲಾ ಹಾಡುಗಳನ್ನು ಎಸ್‌ಪಿಬಿ ಹಾಡಿದ್ದರೆ, ಇವರಿಗೆ ಜೊತೆ ವಾಣಿ ಜಯರಾಮ್, ಚಂದ್ರಿಕಾ ಗುರುರಾಜ್ ಧ್ವನಿಯನ್ನೂ ಕೇಳಬಹುದು.
ಭಾವನಾತ್ಮಕ ಅಂತ್ಯ
ಬೆಳದಿಂಗಳ ಬಾಲೆ ಕ್ಲೈಮ್ಯಾಕ್ಸ್ ಸಿನಿಮಾದ ಮತ್ತೊಂದು ಹೈಲೈಟ್. ರೆಗ್ಯೂಲರ್ ಕಮರ್ಷಿಯಲ್ ಸಿನಿಮಾಗಳಂತೆ ಇದು ಹ್ಯಾಪಿ ಇಲ್ಲವೇ ಸ್ಯಾಡ್ ಎಂಡಿಂಗ್ ಕಲ್ಪನೆ ಇಲ್ಲ. ಸಿನಿಮಾ ಕೊನೆಕೊಳ್ಳುವುದು ದು:ಖದಿಂದಲೇ ಆದರೂ, ಭೌದ್ಧಿಕ ಪ್ರೀತಿಗಿಂತ ಮಾನಸಿಕ ಪ್ರೀತಿ ಎಷ್ಟು ಪವರ್‌ಫುಲ್ ಅನ್ನೋದನ್ನು ತೋರಿಸಿಕೊಟ್ಟಿದೆ. ಈ ಸಿನಿಮಾದ ಕ್ಲೈಮ್ಯಾಕ್ಸ್ ಪ್ರೇಕ್ಷಕನಿಗೆ ಒಂದು ರೀತಿಯ ಮಧುರ ನೋವು ಕೊಟ್ಟು ಹೋಗುತ್ತೆ.
ಮೈನಸ್ ಏನು?
ಸಿನಿಮಾ ಅಂದ್ಮೇಲೆ ಕೆಲವು ಮೈನಸ್ ಇರಲೇಬೇಕು. ಈಗಲೂ ಸಲ್ಲುವ ಸಿನಿಮಾ ಆದರೂ, ಸ್ವಲ್ಪ ವೇಗವಾಗಿರಬೇಕಿತ್ತು ಅಂತ ಅನಿಸಬಹುದು. ತಾಂತ್ರಿಕತೆ, ಲೋಕೇಶನ್‌ಗಳ ಆಯ್ಕೆಯ ಇನ್ನೂ ಚೆನ್ನಾಗಿ ಇರಬಹುದಿತ್ತು ಅನಿಸಬಹುದು. ಆದರೆ, ಅಂದಿನ ಕಾಲಕ್ಕೆ ಇದು ಪರ್ಫೆಕ್ಸ್ ಸಿನಿಮಾ.
ಕೊನೆಯಲ್ಲಿ
ಬೆಳದಿಂಗಳ ಬಾಲೆ ಇದು ಕೇವಲ ಸಿನಿಮಾ ಅಷ್ಟೇ ಅಲ್ಲ. ಇದೊಂದು ಭಾವನೆ ಅಂತ ಅನಿಸಿಬಿಡುತ್ತೆ. ಕೇವಲ ಮೂರು ಗಂಟೆಯಲ್ಲಿ ಮನಸ್ಸಿನಿಂದಲೇ ಕಳೆದು ಹೋಗುವುದಿಲ್ಲ. ನಿರಂತರವಾಗಿ ನಿಮ್ಮನ್ನು ಕಾಡುತ್ತಲೇ ಇರುವ ಸಿನಿಮಾ.


Click it and Unblock the Notifications