"ಅಜಿತ್‌ಗೆ ಯಾಕೆ ಪದ್ಮ ಭೂಷಣ ಪ್ರಶಸ್ತಿ ಸಿಕ್ಕಿದೆ ಒಂದೂ ಅರ್ಥ ಆಗುತ್ತಿಲ್ಲ?"
ಇತ್ತೀಚೆಗೆ ಕೇಂದ್ರ ಸರ್ಕಾರ ಪದ್ಮ ಪ್ರಶಸ್ತಿ ಪಡೆದವರ ಪಟ್ಟಿಯನ್ನು ಘೋಷಿಸಿದೆ. ಅದರಲ್ಲಿ ತಮಿಳು ಚಿತ್ರರಂಗದ ಸ್ಟಾರ್ ನಟ ಅಜಿತ್ ಕುಮಾರ್‌ಗೆ ಪದ್ಮ ಭೂಷಣ ಪ್ರಶಸ್ತಿಯನ್ನು ಘೋಷಣ ಮಾಡಲಾಗಿದೆ. ಈ ಸುದ್ದಿ ಹೊರ ಬೀಳುತ್ತಿದ್ದಂತೆ ತಮಿಳು ಚಿತ್ರರಂಗದ ಗಣ್ಯರು, ಸೆಲೆಬ್ರೆಟಿಗಳು ಖುಷಿಯಿಂದ ಅವರಿಗೆ ಅಭಿನಂದನೆಗಳನ್ನು ಹೇಳುತ್ತಿದ್ದರು. ಹಾಗೇ ಅಜಿತ್ ಕೂಡ ಭಾವುಕರಾಗಿ ಧನ್ಯವಾದಗಳನ್ನು ಅರ್ಪಿಸಿದ್ದರು.
ತಮಿಳು ನಟ ಅಜಿತ್ ಕುಮಾರ್‌ಗೆ ಪದ್ಮ ಭೂಷಣ ಪ್ರಶಸ್ತಿ ಸಿಕ್ಕಿರುವ ಖುಷಿಯಲ್ಲಿ ಕಾಲಿವುಡ್ ಚಿತ್ರರಂಗ ಇದೆ. ಇದೇ ವೇಳೆ ತಮಿಳಿನ ಖ್ಯಾತ ಪತ್ರಕರ್ತ ಅಂತನಾನ್ ಕೊಟ್ಟ ಹೇಳಿಕೆ ಈಗ ತಮಿಳುನಾಡಿನಲ್ಲಿ ಸಂಚಲನ ಸೃಷ್ಟಿಸಿದೆ. ಅಜಿತ್ ಪದ್ಮ ಭೂಷಣ ಪ್ರಶಸ್ತಿಯನ್ನು ನೀಡಿದ್ದನ್ನು ಕಟುವಾಗಿ ಟೀಕಿಸಿದ್ದಾರೆ. ಈ ಬಗ್ಗೆ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ.

ಅಷ್ಟಕ್ಕೂ ತಮಿಳು ಪತ್ರಕರ್ತ ಅಜಿತ್‌ಗೆ ಪದ್ಮ ಭೂಷಣ ಪ್ರಶಸ್ತಿ ಬಂದಿದ್ದಕ್ಕೆ ಯಾಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ? ಅವರು ಕೊಡುತ್ತಿರುವ ಕಾರಣಗಳು ಏನು? ಅಜಿತ್ ಕುಮಾರ್ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸುತ್ತಾರಾ? ಟೀಕೆಗಳಿಗೆ ಪ್ರತಿಕ್ರಿಯೆ ನೀಡುತ್ತಾರಾ? ಅನ್ನೋ ಈ ಎಲ್ಲಾ ಪ್ರಶ್ನೆಗಳು ಹುಟ್ಟಿಕೊಂಡಿದೆ. ಅಷ್ಟಕ್ಕೂ ಏನಿದು ಗಲಾಟೆ ಅನ್ನೋದನ್ನು ನೋಡುವುದಾದರೇ..
ತಮಿಳಿನ ಖ್ಯಾತ ಪತ್ರಕರ್ತ ಅಂತನಾನ್ ಒಂದು ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಅದರಲ್ಲಿ ಅಜಿತ್‌ಗೆ ಪದ್ಮ ಭೂಷಣ ಪ್ರಶಸ್ತಿ ಬಂದಿದ್ದನ್ನು ಪ್ರಶ್ನೆ ಮಾಡಿದ್ದಾರೆ. ಅಜಿತ್‌ಗೆ ಪದ್ಮ ಭೂಷಣ ಪ್ರಶಸ್ತಿ ನೀಡಿದ ಸುದ್ದಿ ಕೇಳಿ ನನಗೆ ಭಯವಾಯಿತು ಎಂದು ಹೇಳಿಕೊಂಡಿದ್ದಾರೆ. ಅವರು ಯಾವುದೇ ಕಾರ್ಯಕ್ರಮಕ್ಕೂ ಹೋಗುವುದಿಲ್ಲ. ಅದು ಅವರ ಸಿದ್ಧಾಂತ. ಈ ಪ್ರಶಸ್ತಿ ಬಂದಾಗ ತೆಗೆದುಕೊಳ್ಳಲು ಅವರು ಹೋಗುವುದಿಲ್ಲವೇ? ಅವರಿಗೆ ಸಮಸ್ಯೆ ಆಗುವುದಿಲ್ಲವೇ.
ಅಜಿತ್ ಕುಮಾರ್ ಯಾವುದೇ ಕಾರ್ಯಕ್ರಮಗಳಿಗೂ ಹೋಗುವುದಿಲ್ಲ. ತಮ್ಮ ಸಿನಿಮಾದ ಪ್ರಚಾರದಲ್ಲಿಯೇ ಅವರು ಕಾಣಿಸಿಕೊಳ್ಳುವುದಿಲ್ಲ. ಪ್ರೀ ರಿಲೀಸ್ ಇವೆಂಟ್‌ನಲ್ಲಿ ಭಾಗವಹಿಸುವುದಿಲ್ಲ. ಇದು ಅವರೇ ಮಾಡಿಕೊಂಡಿರುವ ತತ್ವಗಳು. ಅಂತಹ ವ್ಯಕ್ತಿಗೆ ಯಾಕೆ ಪ್ರಶಸ್ತಿ ನೀಡಿದ್ದಾರೆ? ಈ ಪ್ರಶಸ್ತಿ ಬಂದಿರುವ ಸುದ್ದಿಯನ್ನು ನೋಡಿ ಅವರ ಮನಸ್ಥಿತಿ ಹೇಗಿದೆಯೋ ಗೊತ್ತಿಲ್ಲ ಎಂದು ಟೀಕೆಗಳನ್ನು ಪಾಸ್ ಮಾಡಿದ್ದಾರೆ.

ಇದೇ ವೇಳೆ ಕೆಲವರು ಪದ್ಮ ಪ್ರಶಸ್ತಿಗಳನ್ನು ಹಿಂತಿರುಗಿಸಿದ್ದಾರೆ. ಅದರಲ್ಲೂ ಕಾವೇರಿ ಸಮಸ್ಯೆಯಾದ ಸಮಯದಲ್ಲಿ ನಿರ್ದೇಶಕ ಭಾರತಿರಾಜ ಪದ್ಮ ಪ್ರಶಸ್ತಿ ಹಿಂತಿರುಗಿಸುವುದಾಗಿ ಹೇಳಿದ್ದರು. ಕೆಲವರು ಹೀಗೆ ಪ್ರಶಸ್ತಿಯನ್ನು ಪಡೆದು ಹಿಂತಿರುಗಿಸುತ್ತಾರೆ. ಈಗ ಅಜಿತ್ ಅವರಿಗೆ ಯಾಕೆ ಪ್ರಶಸ್ತಿಯನ್ನು ಕೊಡಬೇಕು? ಯಾವ ಆಧಾರದ ಮೇಲೆ ಅಂತಹ ಪ್ರಶಸ್ತಿ ನೀಡಿದ್ದಾರೋ ಗೊತ್ತಾಗುತ್ತಿಲ್ಲ ಎಂದಿದ್ದಾರೆ.
ಅಷ್ಟಕ್ಕೂ ಅಜಿತ್‌ಗೆ ಪದ್ಮ ಭೂಷಣ ಪ್ರಶಸ್ತಿ ಬಂದಿದ್ದಕ್ಕೆ ಯಾಕಿಷ್ಟು ವಿರೋಧ ವ್ಯಕ್ತ ಪಡಿಸಿದ್ದಾರೆ ಅಂದರೆ, ಅಜಿತ್ ಸಿನಿಮಾಗೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮಗಳಿಗೆ ಹೋಗಲ್ಲ. ಯಾವುದೇ ಚಲನ ಚಿತ್ರೋತ್ಸವದಲ್ಲಿ ಅವರು ಭಾಗವಹಿಸುವುದಿಲ್ಲ. ತಾನು ನಟಿಸಿದ ಸಿನಿಮಾ ಬಗ್ಗೆ ಒಂದೇ ಒಂದು ಮಾತು ಆಡುವುದಿಲ್ಲ. ಇಂತಹವರಿಗೆ ಈ ಪ್ರಶಸ್ತಿಯನ್ನು ಯಾಕೆ ಎಂಬುವುದೇ ತನಗೆ ಅರ್ಥ ಆಗುತ್ತಿಲ್ಲ ಎಂದು ತಮಿಳಿನ ಪತ್ರಕರ್ತ ಅಂತನಾನ್ ಹೇಳಿಕೊಂಡಿದ್ದಾರೆ.


Click it and Unblock the Notifications











