Vijay Net Worth: ನಾಮಪತ್ರ ಸಲ್ಲಿಸುವ ವೇಳೆ ಆಸ್ತಿ ಘೋಷಿಸಿದ ನಟ ವಿಜಯ್; ಚಿರಾಸ್ತಿ-ಸ್ತಿರಾಸ್ತಿ ಎಷ್ಟು?
ತಮಿಳುನಾಡು ರಾಜಕೀಯ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಡಿಎಂಕೆ, ಎಡಿಎಡಿಎಂಕೆ ಹಾಗೂ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಪಕ್ಷ (TVK) ನೇರಾ ನೇರ ಪೈಪೋಟಿಗೆ ಬಿದ್ದಿದೆ. ಮೊದಲ ಚುನಾವಣೆಯನ್ನು ಎದುರಿಸುತ್ತಿರುವ ವಿಜಯ್ ಗೆಲ್ಲಲೇ ಬೇಕು ಎಂಬ ಹಠಕ್ಕೆ ಬಿದ್ದಿದ್ದಾರೆ. ಹೀಗಾಗಿ ವಿಜಯ್ ತಮ್ಮ ನಡೆಯನ್ನು ಚುರುಗೊಳಿಸಿದ್ದಾರೆ. ಇತ್ತೀಚೆಗಷ್ಟೇ ದೊಡ್ಡ ಸಮಾವೇಶ ಮಾಡಿ ತಮ್ಮ ಪಕ್ಷದ ಅಭ್ಯರ್ಥಿಗಳ ಘೋಷಣೆ ಮಾಡಿದ್ದರು.
ಇದೇ ಬೆನ್ನಲ್ಲೇ ಇಂದು (ಮಾರ್ಚ್ 30) ದಳಪತಿ ವಿಜಯ್ ಪೆರಂಬೂರು ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದರು. ತಮ್ಮ ಬೆಂಬಲಿಗರೊಂದಿಗೆ ತೆರಳಿ ನಟ ವಿಜಯ್ ನಾಮಪತ್ರವನ್ನು ಸಲ್ಲಿಸಿದ್ದಾರೆ. ನಾಮಪತ್ರವನ್ನು ಸಲ್ಲಿಸಿದ ಬಳಿಕ ಪ್ರಚಾರ ಸಭೆಯಲ್ಲಿ ವಿಜಯ್ ಮಾತನಾಡಿದರು. "ದುಷ್ಟ ಶಕ್ತಿ ಡಿಎಂಕೆ ಸರ್ಕಾರವನ್ನು ಮನೆಗೆ ಕಳುಹಿಸಬೇಕು" ಎಂದು ಕರೆಯನ್ನು ನೀಡಿದ್ದಾರೆ.

ದಳಪತಿ ವಿಜಯ್ ನಾಮಪತ್ರ ಸಲ್ಲಿಸದ ಬಳಿಕ ತಮಿಳುನಾಡಿನ ಮಾತ್ರಗಳು ಅವರ ಘೋಷಿಸುವ ಆಸ್ತಿಯ ಮೇಲೆ ಕಣ್ಣಿಟ್ಟಿದ್ದರು. ಅದರಂತೆ ವಿಜಯ್ ತಮ್ಮ ನಾಮಪತ್ರ ಸಲ್ಲಿಕೆಯಲ್ಲಿ ತಮ್ಮ ಚಿರಾಸ್ತಿ ಹಾಗೂ ಸ್ತಿರಾಸ್ತಿಯನ್ನು ಘೋಷಣೆ ಮಾಡಿಕೊಂಡಿದ್ದಾರೆ. ಸದ್ಯ ವಿಜಯ್ ಹೊಂದಿರುವ ಆಸ್ತಿಯ ಬಗ್ಗೆ ತಮಿಳುನಾಡಿನಲ್ಲಿ ಚರ್ಚೆ ಶುರುವಾಗಿದೆ. ಅಷ್ಟಕ್ಕೂ ವಿಜಯ್ ಘೋಷಣೆ ಮಾಡಿಕೊಂಡ ಒಟ್ಟು ಆಸ್ತಿ ಎಷ್ಟು? ತಿಳಿಯುವುದಕ್ಕೆ ಮುಂದೆ ಓದಿ.
ತಮಿಳುನಾಡಿನ ಪೆರಂಬೂರು ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ವಿಜಯ್ ಘೋಷಿಸಿಕೊಂಡ ಆಸ್ತಿಯ ವಿವರ ಹೀಗಿದೆ. ತಮಿಳಿನ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ವಿಜಯ್ ಬಳಿಕ ಸುಮಾರು 405 ಕೋಟಿ ರೂಪಾಯಿ (Movable Assets) ಮೌಲ್ಯದ ಚಿರಾಸ್ತಿ ಇದೆ. ಹಾಗೇ ಒಟ್ಟು ಸ್ಥಿರಾಸ್ತಿ 115 ಕೋಟಿ ರೂಪಾಯಿ (Immovable Assets) ಇದೆ. ಇವರ ಬಳಿ ಇರುವ ಒಟ್ಟು ಆಸ್ತಿ 520 ಕೋಟಿ ರೂಪಾಯಿ ಎಂದು ವರದಿಯಾಗಿದೆ.
ಇನ್ನು ಸ್ವಯಂ ಸಂಪಾದಿಸಿದ ಸ್ಥಿರ ಆಸ್ತಿ 220 ಕೋಟಿ ರೂಪಾಯಿ. ಹಾಗೇ ಪೂರ್ವಜರ ಆಸ್ತಿಯ ಮೌಲ್ಯ 21.83 ಕೋಟಿ ರೂಪಾಯಿ. ಇನ್ನು ಸ್ವಯಂ ಸಂಪಾದಿಸಿದ ಸ್ಥಿರ ಆಸ್ತಿಗಳಲ್ಲಿ 92 ಕೋಟಿ ರೂಪಾಯಿ ಮೌಲ್ಯದ ಭೂಮಿ ಹಾಗೂ ಕಟ್ಟಡಗಳು ಸೇರಿವೆ. ಕಳೆದ ಐದು ವರ್ಷಗಳಲ್ಲಿ ವಿಜಯ್ ಒಟ್ಟು ಮೌಲ್ಯ 734 ಕೋಟಿ ರೂಪಾಯಿ ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ.
ವಿಜಯ್ ಇಷ್ಟು ಮೊತ್ತದ ಆಸ್ತಿಯನ್ನು ಸಿನಿಮಾಗಳು, ಜಾಹೀರಾತು, ಹೂಡಿಕೆಗಳು ಸೇರಿದಂತೆ ಇತರ ಆದಾಯದ ಮೂಲಗಳಿಂದ ಬಂದಿದೆ. ಇನ್ನು ಇದರಲ್ಲಿ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನಲ್ಲಿ 213 ಕೋಟಿ ರೂಪಾಯಿ ಠೇವಣಿ, ಆಕ್ಸಿಸ್ ಬ್ಯಾಂಕ್‌ನಲ್ಲಿ 5.79 ಕೋಟಿ ರೂಪಾಯಿ ಠೇವಣಿ ಇದೆಯೆಂದು ನಾಮಪತ್ರದಲ್ಲಿ ಉಲ್ಲೇಖಿಸಲಾಗಿದೆ. ಹಾಗೇ ಕೊಡೈಕೆನಾಲ್‌ನಲ್ಲಿ 2 ಎಸ್ಟೇಟ್ ಇದೆಯೆಂದು ಹೇಳಲಾಗಿದೆ.
ಇನ್ನು ವಿಜಯ್ ಬಳಿ ಇರುವ ಕಾರುಗಳ ಪಟ್ಟಿ ಕೂಡ ದೊಡ್ಡದಿದೆ. ಐಷಾರಾಮಿ ಕಾರುಗಳಾದ ಬಿಎಂಡ್ಲ್ಯೂ 530, ಟೊಯೋಟಾ ವೆಲ್ಫೈರ್, ಮಾರುತಿ ಸ್ವಿಫ್ಟ್ ಸೇರಿದಂತೆ ಅವರ ಹೆಸರಿನಲ್ಲಿ 5 ಕಾರುಗಳಿದ್ದು ಅವುಗಳ ಬೆಲೆ 6 ಕೋಟಿ ರೂಪಾಯಿ. ಹಾಗೇ 67,400 ರೂಪಾಯಿ ಬೆಲೆಯ TVS XL ಸೂಪರ್ ಬೈಕ್ ಕೂಡ ಇವರ ಹೆಸರಿನಲ್ಲೇ ಇದೆ. ಹಾಗೇ ಚಿನ್ನದ ಆಭರಣಗಳು 110 ಪವನ್‌ಗಳು, 15 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ವಸ್ತುಗಳಿದ್ದು, ಹಾಗೇ ಹೆಸರಿನಲ್ಲಿ ಯಾವುದೇ ಸಾಲವಿಲ್ಲ ಎಂದು ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ನಾಮಪತ್ರ ಸಲ್ಲಿಗೆ ಬಳಿಕ ಸಮಾವೇಶದಲ್ಲಿ ವಿಜಯ್ ಆಡಳಿತ ಪಕ್ಷ ಡಿಎಂಕೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ತಮ್ಮ ಭಾಷಣದಲ್ಲಿ ಡಿಎಂಕೆ ಆಡಳಿತ ನಡೆಸಿದ ಐದು ವರ್ಷಗಳಲ್ಲಿ ಮಾದಕವಸ್ತು ಹಾಗೂ ಭ್ರಷ್ಟಾಚಾರ ವ್ಯಾಪಕವಾಗಿದೆ ಎಂದು ಕಿಡಿಕಾರಿದ್ದಾರೆ. "ಒಂದು ಕಾಲದಲ್ಲಿ ಶಾಂತವಾಗಿದ್ದ ತಮಿಳುನಾಡನ್ನು ವಿರೂಪಗೊಳಿಸಿದ್ದು ಡಿಎಂಕೆ. ಇದೊಂದು ದುಷ್ಟಶಕ್ತಿ" ಎಂದು ವಿಜಯ್ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಅಸಮರ್ಥ ಆಡಳಿತಕ್ಕೆ ಮುಖ್ಯಮಂತ್ರಿ ಸ್ಟಾಲಿನ್ ಅವರೇ ಹೊಣೆ ಎಂದೂ ಟೀಕಿಸಿದರು.


Click it and Unblock the Notifications