'ಉಳಿದ ದಿನಗಳು ನನ್ನ ಜನರಿಗಾಗಿ': ಚಿತ್ರರಂಗದಲ್ಲಿ 64 ವರ್ಷ ಪೂರ್ಣಗೊಳಿಸಿದ ಕಮಲ್ ಹಾಸನ್
ತಮಿಳು ಚಿತ್ರರಂಗದ ನಟ, ನಿರ್ದೇಶಕ ಎಲ್ಲವೂ ಆಗಿ ತನ್ನದೆ ಛಾಪು ಮೂಡಿಸಿರುವ ನಟ ಕಮಲ್ ಹಾಸನ್ ಸಿನಿಪಯಣದಲ್ಲಿ 64 ವರ್ಷ ಪೂರ್ಣಗೊಳಿಸಿದ್ದಾರೆ. ಭಾಷೆಯ ಗಡಿಗಳನ್ನು ದಾಟಿ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ನಟನಿಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಸಿನಿ ಪಯಣದಲ್ಲಿ 65ನೇ ವರ್ಷಕ್ಕೆ ಕಾಲಿಟ್ಟಿರುವ ಕಮಲ್ ಹಾಸನ್ ಅವರನ್ನು ಅಭಿಮಾನಿಗಳು ಅಭಿನಂದಿಸುತ್ತಿರುವಾಗಲೇ, ಎಲ್ಲರಿಗೂ ಧನ್ಯವಾದ ಹೇಳಿ ಕಮಲ್ ಹಾಸನ್ ಮಾಡಿರುವ ಟ್ವೀಟ್ ಟ್ರೆಂಡಿಂಗ್ ಆಗಿದೆ. ವಿಶ್ವ ಚಿತ್ರರಂಗದ ಮಹಾನ್ ನಟರಿಗೆ ಪೈಪೋಟಿ ನೀಡಬಲ್ಲ ವ್ಯಕ್ತಿತ್ವ ನಮ್ಮ ತಮಿಳು ಚಿತ್ರರಂಗದಲ್ಲಿ ಇರುವುದು ನಮಗೆಲ್ಲರಿಗೂ ಹೆಮ್ಮೆಯ ಕ್ಷಣ ಎಂದು ಅಭಿಮಾನಿಗಳು ಹೇಳುತ್ತಾರೆ.

ತಮಿಳು ಚಲನಚಿತ್ರೋದ್ಯಮಕ್ಕೆ ಬೆಲೆಕಟ್ಟಲಾಗದ ಉಡುಗೊರೆ
ಕಮಲ್ ಹಾಸನ್ ಅವರು ಭೀಮಸಿಂಗ್ ನಿರ್ದೇಶನದಲ್ಲಿ ಜೆಮಿನಿ ಗಣೇಶನ್ ಮತ್ತು ಸಾವಿತ್ರಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ ಕಳತ್ತೂರ್ ಕಣ್ಣಮ್ಮ ಚಿತ್ರದಲ್ಲಿ ಬಾಲನಟರಾಗಿ ಚಿತ್ರರಂಗ ಪ್ರವೇಶಿಸಿದರು. ಚಿತ್ರ ಬಿಡುಗಡೆಯಾಗಿ 64 ವರ್ಷ ತುಂಬಿದೆ. ಉಳಗ ನಾಯಗನ್ ಎಂದೇ ಅಭಿಮಾನಿಗಳಿಂದ ಕರೆಸಿಕೊಳ್ಳುವ ಕಮಲ್ ಹಾಸನ್ ಅವರು ತಮ್ಮ ಸಿನಿಮಾಗಳಲ್ಲಿ ಹಾಕದ ಗೆಟಪ್ ಇಲ್ಲ ಎನ್ನುವ ಮಟ್ಟಿಗೆ ತಮ್ಮ ಸಿನಿಮಾಗಳಲ್ಲಿ ಹಲವು ಪಾತ್ರಗಳನ್ನು ಮಾಡಿದ್ದಾರೆ.
ಸಿನಿಮಾ ಪ್ರಯೋಗಗಳಿಗೆ ಒಡಿಡಕೊಂಡಿರುವ ಅವರು, ಒರು ಕೈದಿಯಿನ್ ಡೈರಿ, ಸತ್ಯ, ಮತ್ತು ತೇವರ್ ಮಗನ್‌ನಂತಹ ಚಿತ್ರಗಳಲ್ಲಿನ ಪಾತ್ರಗಳಲ್ಲಿ ಮಿಂಚಿದರು. ಮಣಿರತ್ನಂ ನಿರ್ದೇಶನದ ನಾಯಕನ್‌ನಲ್ಲಿ ಅವರ ಪಾತ್ರ ಯಾರು ಮರೆಯಲಾಗದು. ಪುಷ್ಪಕ ವಿಮಾನ ಎಂಬ ಮೂಕಿ ಚಿತ್ರದಲ್ಲೂ ನಟಿಸಿ ಹಲವರನ್ನು ಅಚ್ಚರಿಗೊಳಿಸಿದ್ದರು.
ಕಮಲ್ ಹಾಸನ್‌ಗೆ ಆಕ್ಷನ್ ಎಂದರೆ ರಿಯಲಿಸಂ. ಅವರು ಇಂಡಿಯನ್, ವೆಟ್ಟೈಯಾಡು ವಿಲೈಯಾಡು ಮತ್ತು 2022 ರ ಬ್ಲಾಕ್‌ಬಸ್ಟರ್ ವಿಕ್ರಮ್‌ನಂತಹ ಚಲನಚಿತ್ರಗಳಲ್ಲಿ ತಾವೇ ಹೋರಾಟದ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನು, ಕಮಲ್ ಹಾಸನ್ ಪುತ್ರಿ ಶ್ರುತಿ ಟ್ವಿಟರ್‌ನಲ್ಲಿ ತಂದೆಗೆ ಶುಭಾಶಯ ಕೋರಿದ್ದು, ಚಿತ್ರವನ್ನು ಹಂಚಿಕೊಂಡಿದ್ದು, "ಏಳು, ಬಿಳು, ಚಾಲೆಂಜ್‌ಗಳು. ಎಲ್ಲವನ್ನೂ ಅವರು ನೋಡಿದ್ದಾರೆ. ಆದರೆ ಉಳಗ ನಾಯಗನ್ ಮತ್ತು ಚಿತ್ರೋದ್ಯಮವನ್ನು ರತ್ತರಕ್ಕೆ ಕೊಂಡೋಯ್ಯುವ ಅವರ ಅವಿರತ ಪ್ರಯತ್ನದ ನಡುವೆ ಏನೂ ಅಡ್ಡ ಬರಲು ಸಾಧ್ಯವಿಲ್ಲ. 6 ದಶಕಗಳ ಅಪ್ರತಿಮ ಚಕ್ರವರ್ತಿ ಚಿತ್ರರಂಗದಲ್ಲಿ 64ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ" ಎಂದು ಹೆಮ್ಮೆ ಪಟ್ಟುಕೊಂಡಿದ್ದಾರೆ.
ವಿಕ್ರಮನನ್ನು ಸೋಲಿಸುತ್ತಾನಾ ಜೈಲರ್..?
ವಿಕ್ರಮ್ ಸಿನಿಮಾದಿಂದ ಕಳೆದ ವರ್ಷ ತಮಿಳು ಚಿತ್ರರಂಗಕ್ಕೆ ದೊಡ್ಡ ಹಿಟ್ ನೀಡಿದ ನಂತರ, ಕಮಲ್ ಹಾಸನ್ ಮತ್ತೊಮ್ಮೆ ತಮ್ಮ ಬಾಕ್ಸ್ ಆಫೀಸ್ ಪ್ರತಿಸ್ಪರ್ಧಿ ಸೂಪರ್‌ಸ್ಟಾರ್ ರಜನಿಕಾಂತ್ ಅವರನ್ನು ಮೀರಿಸಿದ್ದರು. ಈಗ ರಜನಿಕಾಂತ್ ಅವರ ಜೈಲರ್ ಸೂಪರ್ ಹಿಟ್ ಆಗಿದೆ. ಇಂದಿಗೂ ಎಲ್ಲಾ ಥಿಯೇಟರ್‌ಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
ಈ ಬಗ್ಗೆ ಕಮಲ್ ಹಾಸನ್ ತಮ್ಮ ಅಧಿಕೃತ ಟ್ವಿಟರ್ ಪೇಜ್ ನಲ್ಲಿ ಟ್ವೀಟ್ ಒಂದನ್ನು ಹಂಚಿಕೊಂಡಿದ್ದಾರೆ. "64 ವರ್ಷಗಳ ಬಾಳಿನಲ್ಲಿ ಶುಭ ಹಾರೈಸಿರುವುದು ನನ್ನ ಕಲಾಜೀವನಕ್ಕೆ ಸಂದ ಸೌಭಾಗ್ಯವೇ ಹೊರತು ನನ್ನ ದೇಹಕ್ಕಲ್ಲ. ನನ್ನನ್ನು ಅಭಿನಂದಿಸುವವರೆಲ್ಲರಿಗೂ ಧನ್ಯವಾದಗಳು. ನನ್ನ ಉಳಿದ ದಿನಗಳು ನನ್ನ ಜನರಿಗಾಗಿ" ಎಂದು ಹೇಳಿದ್ದಾರೆ. ಈ ಮೂಲಕ ತಮ್ಮ ರಾಜಕೀಯ ಜೀವನದ ಬಗ್ಗೆ ಮಾಹಿತಿ ನೀಡಿದ್ದಾರೆ.
ಕಮಲ್ ಹಾಸನ್ ಅವರು ಇಂಡಿಯನ್ 2 ಚಿತ್ರದ ನಂತರ ಕಲ್ಕಿಯಲ್ಲಿ ಪ್ರಭಾಸ್ ಅವರ ಎದುರು ಖಳನಾಯಕನಾಗಿ ನಟಿಸುತ್ತಿರುವ ಅವರು, ಮುಂದೆ ಎಚ್ ವಿನೋದ್ ನಿರ್ದೇಶನದ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮತ್ತು ನಂತರ ಅವರು ಮಣಿರತ್ನಂ ನಿರ್ದೇಶನದ ಚಿತ್ರದಲ್ಲಿ ನಟಿಸಲಿದ್ದಾರೆ.


Click it and Unblock the Notifications











