"ನನ್ನನ್ನು ಇನ್ನು ಮುಂದೆ ಆ ರೀತಿ ಸಂಭೋದಿಸಬೇಡಿ": ನಟ ಕಮಲ್ ಹಾಸನ್ ಮನವಿ
ತಮಿಳು ನಟ, ರಾಜಕೀಯ ಮುಖಂಡ ಕಮಲ್ ಹಾಸನ್ ತಮ್ಮ ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ ಈ ಬಗ್ಗೆ ಕಾಲಿವುಡ್ ಅಂಗಳದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.
ಸಿನಿಮಾ ನಟ, ನಟಿಯರಿಗೆ ಅಭಿಮಾನಿಗಳು, ವಿವಿಧ ಸಂಘ ಸಂಸ್ಥೆಗಳು ಅಥವಾ ಚಿತ್ರತಂಡಗಳು ಬಿರುದುಗಳನ್ನು ನೀಡುವುದು ಸರ್ವೇ ಸಾಮಾನ್ಯ. ದಶಕಗಳಿಂದಲೂ ಇದು ನಡೆದುಕೊಂಡು ಬಂದಿದೆ. ಅಭಿಮಾನಿಗಳು, ಆಪ್ತರು ತಮ್ಮಗೆ ಕೊಟ್ಟ ಬಿರುದನ್ನು ಕಲಾವಿದರು ಸ್ವೀಕರಿಸಿದ್ದಾರೆ. ಎಲ್ಲೂ ತಮ್ಮನ್ನು ಆ ರೀತಿ ಕರೆಯಬೇಕು ಎಂದು ಮನವಿ ಮಾಡಿಲ್ಲ. ಹಾಗಂತ ಬೇಡ ಎಂದು ಹೇಳಿಲ್ಲ.

ಸದ್ಯ ಕಮಲ್ ಹಾಸನ್ ನನಗೆ ಯಾವುದೇ ಬಿರುದು ಬಾವಲಿ ಬೇಡ, ನನ್ನನ್ನು ಕಮಲ್ ಹಾಸನ್ ಎಂದು ಕರೆದರೆ ಸಾಕು ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ನನಗೆ ಉಳಗನಾಯಗನ್ ಸೇರಿದಂತೆ ಇತರೆ ಸಾಕಷ್ಟು ಬಿರುದುಗಳನ್ನು ಕೊಟ್ಟಿರುವುದಕ್ಕೆ ನಾನು ಕೃತಜ್ಞ. ಜನರು, ಅಭಿಮಾನಿಗಳು ಕೊಟ್ಟ ಅಂತಹ ಗೌರವ ಮೆಚ್ಚುಗೆಯು ಯಾವಾಗಲೂ ವಿನಮ್ರವಾಗಿದೆ. ಅದನ್ನು ಅದನ್ನು ನನಗೆ ನೀಡುವ ನಿಮ್ಮ ಪ್ರೀತಿಯಿಂದ ನಾನು ನಿಜವಾಗಿಯೂ ಪ್ರೇರಿತನಾಗಿದ್ದೇನೆ ಎಂದು ಕಮಲ್ ಹಾಸನ್ ಹೇಳಿದ್ದಾರೆ.
ಯಾಕೆ ಈ ಬಿರುದುಗಳು ಬೇಡ ಎಂದು ಕಮಲ್ ವಿವರಣೆ ನೀಡಿದ್ದಾರೆ. "ನಾನು ಸಿನಿಮಾ ಎನ್ನುವ ಕ್ರಾಫ್ಟ್‌ನ ವಿದ್ಯಾರ್ಥಿ ಮಾತ್ರ. ಅದರಲ್ಲಿ ಸದಾ ಕಲಿಯಬೇಕು, ಬೆಳೆಯಬೇಕು ಎಂದು ಭಾವಿಸಿದ್ದೇನೆ. ಸಿನಿಮಾ, ಇತರ ಸೃಜನಶೀಲ ಅಭಿವ್ಯಕ್ತಿಗಳಂತೆಯೇ, ಎಲ್ಲರಿಗೂ ಸೇರಿದ್ದು. ಸಿನಿಮಾ, ಇತರ ಸೃಜನಶೀಲ ಅಭಿವ್ಯಕ್ತಿಗಳಂತೆಯೇ, ಎಲ್ಲರಿಗೂ ಸೇರಿದ್ದಾಗಿದೆ. ಇದು ಅಸಂಖ್ಯಾತ ಕಲಾವಿದರು, ತಾಂತ್ರಿಕ ತಜ್ಞರು ಮತ್ತು ಪ್ರೇಕ್ಷಕರ ಸಹಕಾರದಿಂದ ನಿರ್ಮಾಣವಾಗುವಂಥದ್ದು" ಎಂದು ಕಮಲ್ ಹಾಸನ್ ತಿಳಿಸಿದ್ದಾರೆ.
ನಾನು ಇಲ್ಲಿ ಚಿಕ್ಕವನಾಗಿಯೇ ಇರುತ್ತೇನೆ. ನನ್ನ ಅಪೂರ್ಣತೆಗಳು ಹಾಗೂ ಸುಧಾರಿಸಬೇಕಾದ ನನ್ನ ಕರ್ತವ್ಯದ ಬಗ್ಗೆ ನಿರಂತರವಾಗಿ ಗಮನ ಹರಿಸುತ್ತೇನೆ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಯಾವುದೇ ಬಿರುದುಗಳನ್ನು ಗೌರವಪೂರ್ವಕವಾಗಿ ತಿರಸ್ಕರಿಸುತ್ತಿದ್ದೇನೆ. ಅಭಿಮಾನಿಗಳು, ಮಾಧ್ಯಮದವರು, ಚಿತ್ರರಂಗದವರು ಹಾಗೂ ತಮ್ಮ ಪಕ್ಷದವರು ನನ್ನನ್ನು ಇನ್ನು ಮುಂದೆ ಕಮಲ್ ಹಾಸನ್ ಎಂದು ಕರೆದರೆ ಸಾಕು ಎಂದು ಮನವಿ ಮಾಡಿದ್ದಾರೆ. ಉಳಗನಾಯಗನ್ ಮಾತ್ರವಲ್ಲ 'ಆಂಡವರ್' ಎಂದು ಕೂಡ ಅಭಿಮಾನಿಗಳು ಕಮಲ್ ಹಾಸನ್ ಅವರನ್ನು ಕರೆಯುತ್ತಾರೆ. ಇದಕ್ಕೂ ಮುನ್ನ ನಟ ಅಜಿತ್ ಕುಮಾರ್ ಕೂಡ ಅಭಿಮಾನಿಗಳಲ್ಲಿ ಇದೇ ರೀತಿ ಮನವಿ ಮಾಡಿದ್ದರು. ಥಲಾ(ನಾಯಕ) ಎಂದು ತಮ್ಮನ್ನು ಸಂಭೋದಿಸಬೇಡಿ ಎಂದಿದ್ದರು. ನಟ ಸೂರ್ಯ ಸಹ ತಮ್ಮನ್ನು ನಡಿಪ್ಪಿನ್ ನಾಯಗನ್ ಎಂದು ಕರೆಯಬೇಡಿ ಎಂದು ಹೇಳಿದ್ದರು
ಕನ್ನಡದಲ್ಲಿ ಮಾತ್ರವಲ್ಲ ತಮಿಳಿನಲ್ಲಿ ಸ್ಟಾರ್ ಕಲಾವಿದರಿಗೆ ಸಾಕಷ್ಟು ಬಿರುದುಗಳು ಸಿಕ್ಕಿದೆ. ಸ್ಟಾರ್ ಪಟ್ಟ ಮಾತ್ರವಲ್ಲ ಸಿನಿಮಾ ಬಿಟ್ಟು ಹೊರಗೂ ಅವರನ್ನು ವಿವಿಧ ಬಿರುದುಗಳಿಂದ ಜನ ಕರೆಯುತ್ತಿದ್ದಾರೆ. ಪುರಚ್ಚಿ ತಲೈವರ್ ಎಂದು ಎಂಜಿಆರ್ ಅವರನ್ನು ಅಭಿಮಾನಿಗಳು ಕರೆಯುತ್ತಿದ್ದರು.
ಜಯಲಲಿತಾ ಅವರನ್ನು ಪುರುಚ್ಚಿ ತಲೈವಿ, ಅಮ್ಮ ಎಂದು ಅಭಿಮಾನಿಗಳು ಮೆರೆಸುತ್ತಿದ್ದರು. ನಡಿಗರ್ ತಿಲಗಂ ಎಂದು ಶಿವಾಜಿ ಗಣೇಶ್ ಬಿರುದಾಂಕಿತರಾಗಿದ್ದರು. ರಜನಿಕಾಂತ್ ಅವರನ್ನು ಸೂಪರ್ ಸ್ಟಾರ್ ಎಂದು ಕರೆಯುತ್ತಾರೆ. ವಿಜಯ್‌ಗೆ ದಳಪತಿ ಎನ್ನುವ ಬಿರುದು ಇದೆ.
ಇನ್ನುಳಿದಂತೆ ಚಿಯಾನ್ ವಿಕ್ರಂ, ಮಕ್ಕಳ್ ಸೆಲ್ವನ್ ವಿಜಯ್ ಸೇತುಪತಿ, ಇಳಯ ಸೂಪರ್ ಸ್ಟಾರ್ ಧನುಷ್ ಹೀಗೆ ಒಬ್ಬೊರಿಗೆ ಒಂದು ಬಿರುದು ಕೊಟ್ಟು ಅಭಿಮಾನಿಗಳು ಮೆರೆಸುತ್ತಾರೆ. ಜೈಕಾರ ಹಾಕುತ್ತಾರೆ. ಕೆಲವರು ಮಾತ್ರ ಇದು ಬೇಡ ಎನ್ನುತ್ತಿದ್ದಾರೆ.


Click it and Unblock the Notifications











