ಕರ್ನಾಟಕಕ್ಕೂ ಸಹಾಯ ಹಸ್ತ ಚಾಚಿದ ತಮಿಳು ನಟ ವಿಜಯ್ ದಳಪತಿ: ಒಟ್ಟು 1.30 ಕೋಟಿ ದೇಣಿಗೆ
ಕೊರೊನಾ ವೈರಸ್ ಕಾರಣದಿಂದ ಸಂಕಷ್ಟದಲ್ಲಿರುವ ಜನರಿಗೆ ನೆರವಾಗಲು ಸಿನಿಮಾ ಸೆಲೆಬ್ರಿಟಿಗಳು ತಮ್ಮಿಂದಾದ ರೀತಿಯಲ್ಲಿ ಮುಂದಾಗುತ್ತಿದ್ದಾರೆ. ಈಗಾಗಲೇ ಅನೇಕ ನಟರು, ನಟಿಯರು ಸರ್ಕಾರಗಳ ಪರಿಹಾರ ನಿಧಿಗೆ ದೇಣಿಗೆ ಪಾವತಿಸುವ ಮೂಲಕ ಅಥವಾ ಕಷ್ಟದಲ್ಲಿರುವ ಜನರಿಗೆ ಆಹಾರ ಸಾಮಗ್ರಿಗಳನ್ನು ಒದಗಿಸುವ ಮೂಲಕ ನೆರವಾಗುತ್ತಿದ್ದಾರೆ. ಇನ್ನು ಕೆಲವು ಸಿನಿಮಾ ಕಾರ್ಮಿಕರಿಗೆ ಸಹಾಯ ಮಾಡುತ್ತಿದ್ದಾರೆ.
Recommended Video
ಹೀಗೆ ಸೆಲೆಬ್ರಿಟಿಗಳು ತಾವು ಸಂಪಾದಿಸಿದ್ದರಲ್ಲಿ ಒಂದಷ್ಟು ಭಾಗವನ್ನು ಈ ಸಂಕಷ್ಟದ ಸಮಯದಲ್ಲಿ ವಿನಿಯೋಗಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ. ಆಯಾ ಭಾಷೆಯ ಸೆಲೆಬ್ರಿಟಿಗಳು ತಮ್ಮ ಭಾಗದ ಜನರಿಗೆ ನೆರವಾಗಲು ಅಥವಾ ತಮ್ಮ ರಾಜ್ಯ ಸರ್ಕಾರಕ್ಕೆ ಸಹಾಯ ಮಾಡಲು ಮುಂದಾಗುತ್ತಿದ್ದಾರೆ. ಆದರೆ ತಮಿಳಿನ ಖ್ಯಾತ ನಟ ಇಳಯದಳಪತಿ ವಿಜಯ್ ಒಂದು ಹೆಜ್ಜೆ ಮುಂದಾಗಿದ್ದಾರೆ. ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳಿಗೂ ಅವರು ನೆರವಿನ ಹಸ್ತ ಚಾಚಿದ್ದಾರೆ. ಮುಂದೆ ಓದಿ..

1.30 ಕೋಟಿ ರೂಪಾಯಿ ದೇಣಿಗೆ
ಕೊರೊನಾ ವೈರಸ್ ಸೋಂಕಿನಿಂದ ಸಂಕಷ್ಟದಲ್ಲಿರುವ ವಿವಿಧ ರಾಜ್ಯಗಳಿಗೆ ಹಾಗೂ ದಕ್ಷಿಣ ಭಾರತದ ಸಿನಿಮಾ ಕಾರ್ಮಿಕರ ಸಂಘಕ್ಕೆ ವಿಜಯ್ ಒಟ್ಟು 1.30 ಕೋಟಿ ರೂಪಾಯಿ ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಪಿಎಂ ಕೇರ್, ಸಿಎಂ ಪರಿಹಾರ ನಿಧಿಗೆ ದೇಣಿಗೆ
ಪ್ರಧಾನ ಮಂತ್ರಿಗಳ 'ಪಿಎಂ ಕೇರ್ಸ್' ನಿಧಿಗೆ ವಿಜಯ್ ದಳಪತಿ ಅವರು 25 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಹಾಗೆಯೇ ತಮ್ಮ ತವರು ತಮಿಳುನಾಡಿನ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 50 ಲಕ್ಷ ರೂ. ದೇಣಿಗೆ ರವಾನಿಸಿದ್ದಾರೆ.

ಎಫ್ಇಎಫ್‌ಎಸ್‌ಐ 25 ಲಕ್ಷ ರೂ
ಪಕ್ಕದ ರಾಜ್ಯವಾದ ಕೇರಳದಲ್ಲಿ ಹೆಚ್ಚು ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿರುವುದರಿಂದ ಅಲ್ಲಿನ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 10 ಲಕ್ಷ ರೂ ದೇಣಿಗೆ ನೀಡಿದ್ದಾರೆ. ಇದಲ್ಲದೆ, ದಕ್ಷಿಣ ಭಾರತದ ಸಿನಿಮಾ ನೌಕರರ ಸಂಸ್ಥೆಗೆ (ಎಫ್ಇಎಫ್‌ಎಸ್‌ಐ) 25 ಲಕ್ಷ ರೂ. ಸಹಾಯ ಒದಗಿಸಿದ್ದಾರೆ.

ದಕ್ಷಿಣದ ರಾಜ್ಯಗಳಿಗೆ ನೆರವು
ಅಷ್ಟೇ ಅಲ್ಲದೆ ಅವರು ದಕ್ಷಿಣ ಭಾರತದ ಇತರೆ ರಾಜ್ಯಗಳಿಗೂ ನೆರವು ನೀಡಿದ್ದಾರೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಲಾ 5 ಲಕ್ಷ ರೂ. ನೀಡಿದ್ದಾರೆ. ಹಾಗೆಯೇ ಕೇಂದ್ರಾಡಳಿತ ಪ್ರದೇಶವಾದ ಪುದುಚೆರಿಗೂ ಐದು ಲಕ್ಷ ರೂ. ದೇಣಿಗೆ ಕೊಟ್ಟಿದ್ದಾರೆ.

ಅಭಿಮಾನಿಗಳ ಸಂಘಗಳಿಗೆ ಸಹಾಯ
ಹೀಗೆ ವಿವಿಧೆಡೆಗೆ ತಮ್ಮ ನೆರವು ಒದಗಿಸಿರುವ ಅವರು ಸ್ಥಳೀಯರಿಗೆ ಸಹಾಯ ಮಾಡಲು ಕೂಡ ಮತ್ತೊಂದು ಯೋಜನೆ ರೂಪಿಸಿದ್ದಾರೆ. ಸಂಕಷ್ಟದಲ್ಲಿರುವ ದಿನಗೂಲಿ ಕಾರ್ಮಿಕರು, ನಿರ್ಗತಿಕರಿಗೆ ಸಹಾಯ ಮಾಡುವ ಉದ್ದೇಶದಿಂದ ತಮಿಳು ನಾಡಿನಾದ್ಯಂತ ಇರುವ ತಮ್ಮ ಫ್ಯಾನ್ಸ್ ಕ್ಲಬ್‌ಗಳಲ್ಲಿನ ಸದಸ್ಯರಿಗೆ ಹಣ ನೀಡಿದ್ದಾರೆ. ಆದರೆ ಎಷ್ಟು ಮೊತ್ತದ ಹಣ ಕೊಟ್ಟಿದ್ದಾರೆ ಎನ್ನುವುದನ್ನು ಬಹಿರಂಗಪಡಿಸಿಲ್ಲ.


Click it and Unblock the Notifications











