"ದಳಪತಿ ವಿಜಯ್ ಪರ ಪ್ರಚಾರ ಮಾಡಲ್ಲ"; ಶಾಕಿಂಗ್ ಹೇಳಿಕೆ ಕೊಟ್ಟ 'ಉತ್ತರಾಖಂಡ' ನಟಿ ಐಶ್ವರ್ಯಾ ರಾಜೇಶ್
ತಮಿಳುನಾಡಿನ ರಾಜಕೀಯ ಚಟುವಟಿಕೆಗಳು ದಿನದಿಂದ ಚುರುಕಾಗುತ್ತಿದೆ. ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಂತೆಯೇ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರ ಮಾಡುವುದಕ್ಕೆ ಶುರು ಮಾಡಿದ್ದಾರೆ. ಈ ಬಾರಿಯ ತಮಿಳುನಾಡಿನ ವಿಧಾನ ಸಭೆ ಚುನಾವಣೆ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ. ಅದಕ್ಕೆ ಕಾರಣ ತಮಿಳಿನ ಜನಪ್ರಿಯ ನಟ ದಳಪತಿ ವಿಜಯ.
ದಳಪತಿ ವಿಜಯ್ ಈ ಚುನಾವಣೆಯಲ್ಲಿ ರಾಜಕೀಯ ಪ್ರವೇಶ ಮಾಡುತ್ತಿದ್ದಾರೆ. ಅವರದ್ದೇ ಸ್ವಂತ ಪಕ್ಷ 'ತಮಿಳಗ ವೆಟ್ರಿ ಕಳಗಂ'ದ ಮೂಲಕ ಚುನಾವಣಾ ಅಖಾಡಕ್ಕೆ ಇಳಿಯುತ್ತಿದ್ದಾರೆ. ಈ ಬಾರಿ ತಮಿಳುನಾಡಿನ ಗದ್ದುಗೆಯನ್ನು ಏರುವ ಫೇವರಿಟ್ ಪಕ್ಷಗಳಲ್ಲಿ ದಳಪತಿ ವಿಜಯ್ ಪಕ್ಷ 'ಟಿವಿಕೆ' ಕೂಡ ಇದೆ. ಹೀಗಾಗಿ ವಿಜಯ್ ಅವರ ರಾಜಕೀಯ ನಡೆಯನ್ನು ವಿಶ್ಲೇಷಕರು ಎದುರು ನೋಡುತ್ತಿದ್ದಾರೆ.

ಇನ್ನು ದಳಪತಿ ವಿಜಯ್‌ಗೆ ತಮಿಳು ಚಿತ್ರರಂಗದ ಪ್ರಮುಖ ಗಣ್ಯರು ಬೆಂಬಲ ನೀಡುತ್ತಿದ್ದಾರೆ. ಆದರೆ, ದಕ್ಷಿಣ ಭಾರತದ ಜನಪ್ರಿಯ ನಟಿ ಐಶ್ವರ್ಯಾ ರಾಜೇಶ್ ಮಾತ್ರ ವಿಜಯ್ ಪ್ರಚಾರಕ್ಕೆ ಕರೆದರೆ ಹೋಗುವುದಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ. ಇದು ದಳಪತಿ ವಿಜಯ್ ಅಭಿಮಾನಿಗಳಿಗೆ ಶಾಕ್ ಕೊಟ್ಟಿದೆ. ಅಷ್ಟಕ್ಕೂ ಐಶ್ವರ್ಯಾ ರಾಜೇಶ್ ಯಾಕೆ ಇಂತಹ ಹೇಳಿಕೆ ಕೊಟ್ಟರು? ತಿಳಿಯುವುದಕ್ಕೆ ಮುಂದೆ ಓದಿ.
ತಮಿಳುನಾಡಿನ ರಾಜಕೀಯ ಪಕ್ಷಗಳು ಚುನಾವಣೆ ಸಮೀಪಿಸುತ್ತಿರುವುದರಿಂದ ಮೈತ್ರಿ ಮಾಡಿಕೊಂಡು ಅಖಾಡಕ್ಕೆ ಇಳಿಯುತ್ತಿದ್ದಾರೆ. ಆದರೆ, ದಳಪತಿ ವಿಜಯ್ ಮಾತ್ರ ಇದೂವರೆಗೂ ಯಾವ ಪಕ್ಷದೊಂದಿಗೂ ಮೈತ್ರಿಯನ್ನು ಮಾಡಿಕೊಂಡಿಲ್ಲ. ಏಕಾಂಗಿಯಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಕ್ಕೆ ನಿರ್ಧರಿಸಿದ್ದಾರೆ. ಇದು ವಿಜಯ್ ಅಭಿಮಾನಿಗಳಲ್ಲಿ ಆತಂಕ ಹಾಗೂ ಗೊಂದಲವನ್ನು ಮೂಡಿಸಿವೆ.
ದಳಪತಿ ವಿಜಯ್ ಈಗಾಗಲೇ ಭರ್ಜರಿಯಾಗಿ ಪ್ರಚಾರವನ್ನು ಮಾಡುತ್ತಿದ್ದಾರೆ. ರಾಜಕೀಯಕ್ಕೆ ಸಂಬಂಧಿಸಿದ ಸಭೆಗಳನ್ನು ಮಾಡುತ್ತಿದ್ದಾರೆ. ಪ್ರತಿ ಸಭೆಯಲ್ಲಿಯೂ ತಮಿಳುನಾಡಿನ ಜನರಲ್ಲಿ ಮತ ಯಾಚನೆ ಮಾಡುತ್ತಿದ್ದಾರೆ. ಸದ್ಯ ವಿಜಯ್‌ಗೆ ಯುವ ಸಮುದಾಯದ ಬೆಂಬಲವಿದೆ. ಆದರೆ, ಇವರಿಗೆ ಹಿರಿಯರನ್ನು ಆಕರ್ಷಿಸಿದರೆ ಈ ಬಾರಿ ಚುನಾವಣೆಯಲ್ಲಿ ಗೆಲ್ಲುವುದು ರಾಜಕೀಯ ವಿಶ್ಲೇಷಕರು ಲೆಕ್ಕಾ ಹಾಕುತ್ತಿದ್ದಾರೆ.

ವಿಜಯ್‌ಗೆ ತಮಿಳು ಚಿತ್ರರಂಗದಿಂದ ಬೆಂಬಲ ನೀಡಲಾಗುತ್ತಿದೆ. ಆದರೆ, ಅದು ಸಾಕಾಗುವುದಿಲ್ಲವೆಂದು ಹೇಳಲಾಗುತ್ತಿದೆ. ಈ ಮಧ್ಯೆ ನಟಿ ಐಶ್ವರ್ಯ ರಾಜೇಶ್ ಪ್ರಚಾರಕ್ಕೆ ಹೋಗುವುದಿಲ್ಲವೆಂದು ಹೇಳಿದ್ದಾರೆ. ಇತ್ತೀಚೆಗೆ ನಟಿ ಐಶ್ವರ್ಯಾ ರಾಜೇಶ್ ಮೇಟ್ಟುಪಾಳ್ಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾಧ್ಯಮದವರು ವಿಜಯ್‌ರ ರಾಜಕೀಯ ಪ್ರವೇಶದ ಕುರಿತು ಪ್ರಶ್ನೆ ಮಾಡಿದ್ದರು. ಅದಕ್ಕೆ ಐಶ್ವರ್ಯ ರಾಜೇಶ್ ಪ್ರತಿಕ್ರಿಯೆ ಹೀಗಿತ್ತು.
"ನನಗೆ ನಟ ದಳಪತಿ ವಿಜಯ್ ಅಂದರೆ ತುಂಬಾನೇ ಇಷ್ಟ. ರಾಜಕೀಯ ಕ್ಷೇತ್ರಕ್ಕೆ ಯಾರು ಬೇಕಾದರೂ ಬರಬಹುದು. ಆದರೆ, ಬಯಸಿ ಬರುವವರು ಜನರಿಗೆ ಒಳ್ಳೆಯದನ್ನು ಮಾಡಬೇಕು." ಎಂದು ಹೇಳಿದರು. ಒಂದು ವೇಳೆ ವಿಜಯ್ ಪ್ರಚಾರಕ್ಕೆ ಆಹ್ವಾನಿಸಿದರೆ ಹೋಗುತ್ತೀರಾ? ಎಂದು ಪ್ರಶ್ನೆ ಮಾಡಿದ್ದರೆ, "ಅದಕ್ಕೆಲ್ಲ ಯಾವುದೇ ರೀತಿಯ ಅವಕಾಶವಿಲ್ಲ" ಎಂದು ಉತ್ತರಾಖಂಡದ ನಟಿ ಐಶ್ವರ್ಯಾ ರಾಜೇಶ್ ಹೇಳಿಕೆ ಕೊಟ್ಟು ಅಚ್ಚರಿ ಮೂಡಿಸಿದ್ದಾರೆ. ಈ ಹೇಳಿಕೆ ಈಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಐಶ್ವರ್ಯಾ ರಾಜೇಶ್ ತಮಿಳು, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಕನ್ನಡದ 'ಉತ್ತರಕಾಂಡ'ದ ಮೂಲಕ ಕನ್ನಡಕ್ಕೂ ಎಂಟ್ರಿ ಕೊಟ್ಟಿದ್ದರು. ಈಗ ದಳಪತಿ ವಿಜಯ್ ಬಗ್ಗೆ ಕೊಟ್ಟ ಹೇಳಿಕೆ ತಮಿಳುನಾಡಿನಲ್ಲಿ ಸಂಚಲನ ಸೃಷ್ಟಿಸಿದೆ.


Click it and Unblock the Notifications











