ಕಮಲ್ ಹಾಸನ್, ದಳಪತಿ ವಿಜಯ್‌ಗೆ ಬ್ಲಾಕ್‌ಬಸ್ಟರ್ ಕೊಟ್ಟ ನಿರ್ದೇಶಕ ರಜನಿಗೆ ಆಕ್ಷನ್ ಕಟ್: ಏನಿದು ಕಥೆ?
ಸೂಪರ್‌ಸ್ಟಾರ್ ರಜನಿಕಾಂತ್ ಹೊಸ ಸಿನಿಮಾ ಅನೌನ್ಸ್ ಮಾಡಿದ್ರು ಅಂದ್ರೆ ಅಭಿಮಾನಿಗಳು ಭೂಮಿ ಮೇಲೆ ನಿಲ್ಲೋದಿಲ್ಲ. ಅದರಲ್ಲೂ ಸ್ಟಾರ್ ನಿರ್ದೇಶಕನಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಅಂದ್ರಂತೂ ಮುಗಿದೇ ಹೋಯ್ತು. ಕುತೂಹಲ ತಡೆದುಕೊಳ್ಳಲಾಗದೆ ತಡಬಡಾಯಿಸಿ ಬಿಡುತ್ತಾರೆ.
ಹೌದು, ರಜನಿಕಾಂತ್ ಹೊಸ ಸಿನಿಮಾ ಬಗ್ಗೆ ತಮಿಳು ಚಿತ್ರರಂಗದಲ್ಲಿ ಗುಲ್ಲೆದ್ದಿದೆ. ಸೂಪರ್‌ಸ್ಟಾರ್ ರಜನಿಕಾಂತ್ ಸ್ಟಾರ್ ನಿರ್ದೇಶಕನಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಅನ್ನೋ ಮಾತು ಜೋರಾಗಿಯೇ ಕೇಳಿ ಬರುತ್ತಿದೆ. ಅವರು ಮತ್ಯಾರೂ ಅಲ್ಲ ಲೋಕೇಶ್ ಕನಗರಾಜ್.

ರಜನಿ ಹೊಸ ಸಿನಿಮಾ ಕಥೆಯೇನು?
ರಜನಿಕಾಂತ್ ಹಾಗೂ ಲೋಕೇಶ್ ಕನಗರಾಜ್ ಇಬ್ಬರೂ ಹೊಸ ಸಿನಿಮಾ ಬಗ್ಗೆ ಮಾತುಕಥೆ ನಡೆಸಿದ್ದಾರೆ ಅನ್ನೋದು ಸುದ್ದಿ. ಲೋಕೇಶ್ ಕನಗರಾಜ್ ಸದ್ಯ ವಿಜಯ್ ದಳಪತಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅದುವೇ 'ಲಿಯೋ'. ಈ ಸಿನಿಮಾದ ಶೂಟಿಂಗ್ ವೇಗವಾಗಿ ನಡೆಯುತ್ತಿದೆ.
'ಲಿಯೋ' ಸಿನಿಮಾ ಮುಗಿಯುತ್ತಿದ್ದಂತೆ ಲೋಕೇಶ್ ಕನಗರಾಜ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುತ್ತಿದೆ ಅನ್ನೋ ಮಾತು ಓಡಾಡುತ್ತಿದೆ. ಆದರೆ, ಇನ್ನೂ ಅಧಿಕೃತವಾಗಿ ಯಾರೂ ಈ ಬಗ್ಗೆ ಮಾಹಿತಿ ನೀಡಿಲ್ಲ. ಹೀಗಾಗಿ ರಜನಿ ಹಾಗೂ ಲೋಕೇಶ್ ಕನಗರಾಜ್ ಕಾಂಬಿನೇಷನ್ ಸಿನಿಮಾ ಬಗ್ಗೆ ಕುತೂಹಲ ದುಪ್ಪಟ್ಟಾಗಿದೆ.
ಕಮಲ್ ಹಾಸನ್‌ಗೆ ಬಿಗ್ ಸಕ್ಸಸ್ ಕೊಟ್ಟ ಲೋಕೇಶ್
ಲೋಕೇಶ್ ಕನಗರಾಜ್ ತಮ್ಮದೇ ಸಿನಿಮ್ಯಾಟಿಕ್ ಯೂನಿವರ್ಸ್ ಸೃಷ್ಟಿ ಮಾಡುವ ತರಾತುರಿಯಲ್ಲಿದ್ದಾರೆ. ಕಮಲ್ ಹಾಸನ್‌ಗೆ ಆಕ್ಷನ್ ಕಟ್ ಹೇಳಿದ್ದ 'ವಿಕ್ರಮ್' ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಇಲ್ಲಿಂದ ಸೀಕ್ವೆಲ್ ಸಿನಿಮಾಗಳನ್ನು ತೆರೆಮೇಲೆ ತರುವುದಕ್ಕೆ ಲೋಕೇಶ್ ನಿರ್ಧರಿಸಿದ್ದಾರೆ. ಆದರೆ, ಯಾವಾಗ? ಅನ್ನೋದು ಇನ್ನೂ ಗುಟ್ಟಾಗಿಯೇ ಇಟ್ಟಿದ್ದಾರೆ.

'ವಿಕ್ರಮ್' ಸೂಪರ್ ಸಕ್ಸಸ್ ಬಳಿಕ ಲೋಕೇಶ್ 'ಲಿಯೋ' ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾ ಬಳಿಕ ರಜನಿಕಾಂತ್ ಸಿನಿಮಾ ನಿರ್ದೇಶನ ಮಾಡೋದೇ ಆದರೆ, ಕಾಲಿವುಡ್ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ಆಗೋದರಲ್ಲಿ ಡೌಟೇ ಇಲ್ಲ.
ರಜನಿಕಾಂತ್ ಕೈತುಂಬಾ ಸಿನಿಮಾ
ಸೂಪರ್‌ಸ್ಟಾರ್ ರಜನಿಕಾಂತ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಸದ್ಯ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸುತ್ತಿರುವ 'ಜೈಲರ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಕೂಡ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಇನ್ನು ಪುತ್ರಿ ಐಶ್ವರ್ಯಾ ನಿರ್ದೇಶಿಸುತ್ತಿರುವ 'ಲಾಲ್ ಸಲಾಂ' ಸಿನಿಮಾದಲ್ಲಿ ಸೂಪರ್‌ಸ್ಟಾರ್ ನಟಿಸುತ್ತಿದ್ದಾರೆ. ಈ ಮಧ್ಯೆ ಚಿರಂಜೀವಿ ನಟಿಸಿದ 'ವಾಲ್ತೇರು ವೀರಯ್ಯ' ನಿರ್ದೇಶಕರೊಂದಿಗೂ ರಜನಿ ಸಿನಿಮಾ ಮಾಡುತ್ತಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಇವೆಲ್ಲವುಗಳ ಮಧ್ಯೆ ರಜನಿಕಾಂತ್ ಹಾಗೂ ಲೋಕೇಶ್ ಕನಗರಾಜ್ ಸಿನಿಮಾ ಟಾಕ್ ಆಫ್ ದಿ ಟೌನ್ ಆಗಿದೆ.


Click it and Unblock the Notifications











