ರಜನಿಕಾಂತ್ ಆಯ್ತು.. ಸೂರ್ಯನ ಕೆರಳಿದ ವಿಜಯ್ ಫ್ಯಾನ್ಸ್.. ಸ್ಮೈಲ್ ಕೊಟ್ಟು ಬಾಯಿ ಮುಚ್ಚಿಸಿದ ಜ್ಯೋತಿಕಾ
ದಳಪತಿ ವಿಜಯ್ ಬೆಂಕಿ ಮೇಲೆ ಹೆಜ್ಜೆ ಇಡುತ್ತಿದ್ದಾರೆ. ಸಿನಿಮಾದಲ್ಲಿ ನಟಿಸುತ್ತಿದ್ದಾಗ ವಿವಾದಗಳಿಂದ ಇವರು ದೂರವೇ ಉಳಿದಿದ್ದರು. ಅದ್ಯಾವಾಗ ರಾಜಕೀಯಕ್ಕೆ ಎಂಟ್ರಿ ಕೊಟ್ಟರೋ ಅಲ್ಲಿಂದ ಒಂದೊಂದೇ ವಿವಾದಗಳು ಇವರನ್ನು ಹುಡುಕಿಕೊಂಡು ಬರುತ್ತಿವೆ ಎನಿಸುತ್ತಿದೆ. ಇವರಿಂದ ತಪ್ಪಾಗುತ್ತಿದೆಯೋ.. ಇಲ್ಲ ಇವರ ಆಪ್ತರಿಂದ ತಪ್ಪಾಗುತ್ತಿದೆಯೋ? ಬೇರೆ ಮಾತು. ಆದರೆ, ವಿವಾದ ಮಾತ್ರ ವಿಜಯ್ ಅವರನ್ನು ಹುಡುಕಿಕೊಂಡು ಬರುತ್ತಿದೆ.
ವಿಜಯ್ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟ ಕ್ಷಣದಿಂದಲೇ ವಿವಾದ ಬೆನ್ನು ಬಿಡದ ಬೇತಾಳದಂತೆ ಓಡಾಡಿಕೊಂಡಿದೆ. ಸದ್ಯ ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆಯಿದೆ. ಮುಂದಿನ ತಿಂಗಳು ನಡೆಯಲಿರುವ ಚುನಾವಣೆಯಲ್ಲಿ ಅಖಾಡಕ್ಕೆ ಇಳಿಯುತ್ತಿದ್ದಾರೆ. ತಮ್ಮ ಟಿವಿಕೆ ಪಕ್ಷದಿಂದ ಅಧಿಕಾರಕ್ಕೆ ಬರುವ ಕನಸನ್ನು ಕಾಣುತ್ತಿದ್ದಾರೆ. ಇದಕ್ಕೆ ಬೇಕಿರೋ ತಂತ್ರಗಳನ್ನು ರೂಪಿಸುತ್ತಿದ್ದಾರೆ. ಮೊದಲ ಪ್ರಯತ್ನದಲ್ಲಿಯೇ ತಮ್ಮ 'ತಮಿಳುಗ ವೆಟ್ರಿ ಕಳಗಂ' ಪಕ್ಷವನ್ನು ಅಧಿಕಾರಕ್ಕೆ ತರುವ ಮಹಾದಾಸೆ ಇಟ್ಟುಕೊಂಡಿದ್ದಾರೆ.

ತಮಿಳುನಾಡು ಜನರಿಂದಲೂ ವಿಜಯ್‌ಗೆ ಬೆಂಬಲ ಸಿಗುತ್ತಿದೆ. ಈ ಗ್ಯಾಪ್‌ನಲ್ಲಿ ಕರೂರ್ ದುರಂತ,ಪತ್ನಿಯ ವಿಚ್ಛೇದನ ಅರ್ಜಿ,ತ್ರಿಶಾ ಜೊತೆಗಿನ ಗಾಸಿಪ್‌ಗಳ ಜೊತೆಗೆ ಅಭಿಮಾನಿಗಳ ವರ್ತನೆ ಅವರ ವರ್ಚಸ್ಸಿಗೆ ಧಕ್ಕೆ ತರುತ್ತಿವೆ ಎಂಬ ಅಭಿಪ್ರಾಯ ಮೂಡಿದೆ. ಅದಕ್ಕೆ ಕಾರಣ ಇತ್ತೀಚೆಗೆ ವಿಜಯ್ ಅಭಿಮಾನಿಗಳು ನಟ ಸೂರ್ಯ ಬಗ್ಗೆ ಮಾಡಿದ ಟೀಕೆ. ಅದಕ್ಕೆ ಜ್ಯೋತಿಕಾ ಕೊಟ್ಟ ತಿರುಗೇಟು ತಮಿಳುನಾಡಿನಲ್ಲಿ ಭಾರಿ ಚರ್ಚೆಯಾಗುತ್ತಿದೆ.
ದಳಪತಿ ವಿಜಯ್ ರಾಜಕೀಯ ಭವಿಷ್ಯವನ್ನು ವಿಶ್ಲೇಷಕರು ಕುತೂಹಲದಿಂದ ನೋಡುತ್ತಿದ್ದಾರೆ. ತಮಿಳುನಾಡು ರಾಜಕೀಯದಲ್ಲಿ ವಿಜಯ್ ಕಿಂಗ್ ಮೇಕರ್ ಆಗಬಹುದೆಂಬ ಲೆಕ್ಕಾಚಾರವನ್ನೂ ಹಾಕಲಾಗುತ್ತಿದೆ. ಇದೇ ವೇಳೆ ಬಿಜೆಪಿ ಪಕ್ಷ ಮೈತ್ರಿ ಮಾಡಿಕೊಂಡರೆ, ಉಪಮುಖ್ಯಮಂತ್ರಿ ಸ್ಥಾನ ನೀಡುವುದಾಗಿ ಆಫರ್ ಕೊಟ್ಟಿರುವ ಬಗ್ಗೆನೂ ಸುದ್ದಿಯಾಗಿತ್ತು. ಆದರೆ, ಸೈದ್ದಾಂತಿಕ ಹಿನ್ನೆಲೆಯಲ್ಲಿ ವಿಜಯ್ ಈ ಆಫರ್ ಅನ್ನು ತಿರಸ್ಕರಿಸಿದ್ದಾರೆ.
ದಳಪತಿ ವಿಜಯ್ ಹಾಗೂ ಬಿಜೆಪಿ ನಡುವಿನ ಮೈತ್ರಿ ಮಾತುಕತೆ ಮುರಿದು ಬಿದ್ದ ಬೆನ್ನಲ್ಲೇ ಪಕ್ಷದ ಕಾರ್ಯಕರ್ತರು ನಿಟ್ಟುಸಿರು ಬಿಟ್ಟಿದ್ದಾರೆ. ಈ ಮಧ್ಯೆ ವಿಜಯ್ ಸುತ್ತ ವೈಯಕ್ತಿಕ ಸಮಸ್ಯೆಗಳು ಸುಳಿದಾಡುತ್ತಿವೆ. ಕರೂರ್‌ನಲ್ಲಿ ದುರಂತದ ಕುರಿತು ಸಿಬಿಐ ತನಿಖೆ ನಡೆಯುತ್ತಿದೆ. ಇನ್ನೊಂದು ಕಡೆ ವಿಚ್ಚೇದನ ಬಾರೀ ಹಿನ್ನೆಡೆ ತಂದುಕೊಟ್ಟಿದೆ. ಹೀಗಿದ್ದರೂ ತ್ರಿಶಾ ಜೊತೆ ಕಾಣಿಸಿಕೊಂಡಿದ್ದು, ಮತ್ತಷ್ಟು ಸಂಚಲನವನ್ನು ಸೃಷ್ಟಿಸಿತ್ತು. ಸಾಲದಕ್ಕೆ ಅವರದ್ದೇ ಪಕ್ಷದ ಸದಸ್ಯ ಆದವ್ ಅರ್ಜುನಾ "ರಜನಿಕಾಂತ್ ರಾಜಕೀಯಕ್ಕೆ ಬರಲು ಬಯಸಿದ್ದರು. ಆದರೆ, ಡಿಎಂಕೆ ಅವರನ್ನು ಬೆದರಿಸಿದ್ದರಿಂದ ಧೈರ್ಯ ಕಳೆದುಕೊಂಡರು" ಎಂದು ಆರೋಪಿಸಿದ್ದರು. ಈ ಹೇಳಿಕೆಗೆ ದೊಡ್ಡ ಮಟ್ಟಕ್ಕೆ ವಿರೋಧವೇ ವ್ಯಕ್ತವಾಗುತ್ತಿದೆ. ಆದರೆ, ಈ ಎಲ್ಲ ವಿವಾದಗಳ ಬಗ್ಗೆ ವಿಜಯ್ ಮೌನಕ್ಕೆ ಶರಣಾಗಿದ್ದಾರೆ.

ಇನ್ನೇನು ರಜನಿಕಾಂತ್ ವಿವಾದ ತಣ್ಣಗಾಯ್ತು ಎನ್ನುವಾಗಲೇ, ವಿಜಯ್ ಅಭಿಮಾನಿಗಳು ನಟ ಸೂರ್ಯರನ್ನು ವಿವಾದಕ್ಕೆ ಎಳೆದುಕೊಂಡು ಬಂದಿದ್ದಾರೆ. ರಜಿನಿಕಾಂತ್ ವಿವಾದ ಸ್ವಲ್ಪಮಟ್ಟಿಗೆ ತಣ್ಣಗಾದಾಗ ಇತ್ತೀಚೆಗೆ ಜ್ಯೋತಿಕಾ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್‌ವೊಂದರಲ್ಲಿ ಅಭಿಮಾನಿಯೊಬ್ಬರು ಸೂರ್ಯರಿಗಿಂತ ವಿಜಯ್ ಉತ್ತಮ ನಟ ಎಂದು ಕಾಮೆಂಟ್ ಮಾಡಿದ್ದರು. ಅದೀಗ ಚರ್ಚೆಯ ವಿಷಯವಾಗಿದೆ.
ವಿಜಯ್ ಅಭಿಮಾನಿ ಮಾಡಿದ ಈ ವಿವಾದಕ್ಕೆ ಸೂರ್ಯ ಪತ್ನಿ ಹಾಗೂ ನಟಿ ಜ್ಯೋತಿಕಾ ನಗುವ ಸ್ಮೈಲಿಯನ್ನು ಹಾಕಿ ಸಿಂಪಲ್ ಆಗಿ ತಿರುಗೇಟು ಕೊಟ್ಟಿದ್ದಾರೆ. ಈ ಸ್ಕ್ರೀನ್‌ಶಾಟ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದು ಕೆಲವರ ನಿದ್ದೆ ಕೆಡಿಸಿದೆ. ವಿಜಯ್ ಅಭಿಮಾನಿಗಳಿಗೆ ಹೀಗೆ ಎಲ್ಲರೊಂದಿಗೂ ಹೀಗೆ ಉಗಿಸಿಕೊಳ್ಳುವುದೇ ಒಂದು ರೂಢಿಯಾಗಿಬಿಟ್ಟಿದೆ ಎಂದು ಟೀಕಿಸುತ್ತಿದ್ದಾರೆ. ಅಭಿಮಾನಿಗಳ ಇಂತಹ ವರ್ತನೆಗಳನ್ನು ವಿಜಯ್ ಸ್ವತಃ ನಿಯಂತ್ರಣದಲ್ಲಿ ಇಡಬೇಕೆಂಬ ಮಾತು ಕೇಳಿಬರುತ್ತಿವೆ.


Click it and Unblock the Notifications











