'KGF 2' ದಾಖಲೆ ಮುರಿಯುತ್ತಾ 'ಪೊನ್ನಿಯಿನ್ ಸೆಲ್ವನ್ 2'? ಮೊದಲ ದಿನದ ಗಳಿಕೆ ಏನು?
ದಕ್ಷಿಣ ಭಾರತದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳು ಎರಡು ಚಾಪ್ಟರ್‌ಗಳಲ್ಲಿ ರಿಲೀಸ್ ಆಗುತ್ತಿವೆ. 'ಬಾಹುಬಲಿ'ಯಿಂದ ಆರಂಭವಾದ ಈ ಟ್ರೆಂಡ್, 'ಪೊನ್ನಿಯನ್ ಸೆಲ್ವನ್'ವರೆಗೂ ಮುಂದುವರೆದಿದೆ. 'ಬಾಹುಬಲಿ 2', 'ಕೆಜಿಎಫ್ 2' ಬಳಿಕ 'ಪೊನ್ನಿಯಿನ್ ಸೆಲ್ವನ್ 2' ಗ್ರ್ಯಾಂಡ್ ರಿಲೀಸ್‌ಗೆ ವೇದಿಕೆ ಸಿದ್ದವಾಗಿದೆ.
ದಕ್ಷಿಣ ಭಾರತದ ಸ್ಟಾರ್ ನಿರ್ದೇಶಕ ಮಣಿರತ್ನಂ ಆಕ್ಷನ್ ಕಟ್ ಹೇಳಿರೋ 'ಪೊನ್ನಿಯಿನ್ ಸೆಲ್ವನ್' ನಾಳೆ (ಏಪ್ರಿಲ್ 28) ರಿಲೀಸ್ ಆಗುತ್ತಿದೆ. ಈ ಮಲ್ಟಿಸ್ಟಾರ್ ಸಿನಿಮಾದ ಮೊದಲ ಚಾಪ್ಟರ್ ಬಾಕ್ಸಾಫೀಸ್‌ನಲ್ಲಿ ದೊಡ್ಡಮಟ್ಟಕ್ಕೆ ಸದ್ದು ಮಾಡಿತ್ತು. ಈಗ ಎರಡನೇ ಚಾಪ್ಟರ್‌ಗೂ ಅದೇ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.

ತಮಿಳು ಸಿನಿಪ್ರಿಯರು 'ಪೊನ್ನಿಯಿನ್ ಸೆಲ್ವನ್ 2'ಗಾಗಿ ಎದುರು ನೋಡುತ್ತಿದ್ದರು. ನಿರೀಕ್ಷೆಯಂತೆ ಈ ಸಿನಿಮಾವೀಗ ರಿಲೀಸ್ ಆಗುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರೋದ್ರಿಂದ ಈಗಾಗಲೇ ಬಾಕ್ಸಾಫೀಸ್ ಬಗ್ಗೆ ಲೆಕ್ಕಾಚಾರ ಹಾಕೋಕೆ ಶುರುವಾಗಿದೆ. ಹಾಗಿದ್ದರೆ, ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, 'ಪೊನ್ನಿಯಿನ್ ಸೆಲ್ವನ್ 2' ಮೊದಲ ದಿನದ ಕಲೆಕ್ಷನ್ ಎಷ್ಟು? ಸಿನಿಮಾದ ಬಾಕ್ಸಾಫೀಸ್ ಭವಿಷ್ಯವೇನು? ತಿಳಿಯುವುದಕ್ಕೆ ಮುಂದೆ ಓದಿ.
'ಪೊನ್ನಿಯಿನ್ ಸೆಲ್ವನ್ 2' ಕಲೆಕ್ಷನ್ ಲೆಕ್ಕಾಚಾರವೇನು?
ಸಿನಿಮಾ ಬಗ್ಗೆ ಇಷ್ಟೊಂದು ನಿರೀಕ್ಷೆ ಯಾಕೆ ಅಂತ ವಿಶೇಷವಾಗಿ ಹೇಳಬೇಕಿಲ್ಲ. ಮೊದಲನೆಯದ್ದಾಗಿ ಇದು ಮಣಿರತ್ನಂ ನಿರ್ದೇಶನದ ಸಿನಿಮಾ. ಎರಡನೆಯದ್ದು ಐಶ್ವರ್ಯಾ ರೈ ಬಚ್ಚನ್, ಚಿಯಾನ್ ವಿಕ್ರಂ, ಕಾರ್ತಿ, ಜಯಂ ರವಿ, ತ್ರಿಶಾ ಕೃಷ್ಣನ್, ಶೋಭಿತಾ ಸೇರಿದಂತೆ ಸ್ಟಾರ್ ಕಲಾವಿದರೇ ಇದ್ದಾರೆ. ಹೀಗಾಗಿ ಈ ಮಲ್ಟಿಸ್ಟಾರರ್ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ.

ಹೀಗಾಗಿ 'ಪೊನ್ನಿಯಿನ್ ಸೆಲ್ವನ್ 2' ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಬಹುದು ಅನ್ನೋ ನಿರೀಕ್ಷೆ ಇದ್ದೇ ಇರುತ್ತೆ. ಈಗಾಗಲೇ ಟ್ರೇಡ್ ಅನಲಿಸ್ಟ್‌ಗಳ ಲೆಕ್ಕಾಚಾರದ ಪ್ರಕಾರ,ಈ ಸಿನಿಮಾ ಮೊದಲ ದಿನ ಸುಮಾರು 15 ಕೋಟಿ ರೂ. ಕಲೆಕ್ಷನ್ ಮಾಡಬಹುದು ಎಂದು ಹೇಳುತ್ತಿದ್ದಾರೆ. ಹಾಗೇ ವೀಕೆಂಡ್‌ಗಳಲ್ಲಿ ಸುಮಾರು 20 ರಿಂದ 25 ಕೋಟಿ ರೂ. ಗಳಿಸಬಹುದು ಎಂದು ಅಂದಾಜಿಸಲಾಗಿದೆ.
ಅಡ್ವಾನ್ಸ್ ಬುಕಿಂಗ್ ಹೇಗಿದೆ?
ಪ್ಯಾನ್ ಇಂಡಿಯಾ ಸಿನಿಮಾಗಳು ಸಾಮಾನ್ಯವಾಗಿ ಮೊದಲ ದಿನವೇ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿವೆ. ಹೀಗಾಗಿ ನಿರ್ಮಾಣ ಸಂಸ್ಥೆ ಕೂಡ ಒಂದು ವಾರ ಮುನ್ನವೇ ಅಡ್ವಾನ್ಸ್ ಬುಕಿಂಗ್ ಓಪನ್ ಮಾಡುತ್ತವೆ. ಈ ಸಿನಿಮಾ ಕೂಡ ಏಪ್ರಿಲ್ 24ರಂದು ಅಡ್ವಾನ್ಸ್ ಬುಕಿಂಗ್ ಓಪನ್ ಮಾಡಿತ್ತು. ಅಲ್ಲಿಂದ ಇಲ್ಲಿವರೆಗೂ ಸುಮಾರು 50 ಸಾವಿರ ಟಿಕೆಟ್‌ಗಳನ್ನು ಸೇಲ್ ಆಗಿವೆ.
ಮೂಲಗಳ ಪ್ರಕಾರ, 'ಪೊನ್ನಿಯಿನ್ ಸೆಲ್ವನ್ 2' ಅಡ್ವಾನ್ಸ್ ಬುಕಿಂಗ್ ಓಪನ್ ಮಾಡಿದ ಎರಡೇ ದಿನಕ್ಕೆ 2 ಕೋಟಿ ರೂ. ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಇನ್ನೊಂದು ಕಡೆ ಕೇವಲ ತಮಿಳುನಾಡಿನಲ್ಲೇ ಸುಮಾರು 200 ಕೋಟಿ ರೂ. ಕಲೆಕ್ಷನ್ ಮಾಡಬಹುದು ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಅಂದಾಜಿಸಿದ್ದಾರೆ.
'ಕೆಜಿಎಫ್ 2' ದಾಖಲೆ ಮುರಿಯುತ್ತಾ?
ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2' ಮೊದಲ ದಿನ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆದಿದೆ. ವಿಶ್ವದಾದ್ಯಂತ ಈ ಸಿನಿಮಾ ಸುಮಾರು 154 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿತ್ತು. ಹೀಗಾಗಿ ಈ ದಾಖಲೆಯನ್ನು ದಕ್ಷಿಣ ಭಾರತದ ಮತ್ತೊಂದು ಸಿನಿಮಾ ಬ್ರೇಕ್ ಮಾಡುತ್ತಾ? ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಮಣಿರತ್ನಂ ಅಂತ ದಿಗ್ಗಜನ ಸಿನಿಮಾದಲ್ಲಿ ಐಶ್ವರ್ಯಾ, ಚಿಯಾನ್ ವಿಕ್ರಮ್, ಕಾರ್ತಿ, ಜಯಂ ರವಿ, ತ್ರಿಶಾ ಅಂತಹ ಸ್ಟಾರ್ ನಟರೇ ಇದ್ದಾರೆ. ಹೀಗಾಗಿ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮೊತ್ತ ಕಲೆ ಹಾಬಹುದೇ ಎಂಬ ನಿರೀಕ್ಷೆ ಇತ್ತು. ಆದರೆ, ಮೇಲ್ನೋಟಕ್ಕೆ 'ಪೊನ್ನಿಯಿನ್ ಸೆಲ್ವನ್ 2' ದಾಖಲೆ ಮುರಿಯೋದು ಅಸಾಧ್ಯವೆಂದೇ ಹೇಳಲಾಗುತ್ತಿದೆ. ಈ ಸಿನಿಮಾ ಮೊದಲ ದಿನ ವಿಶ್ವದಾದ್ಯಂತ ಅಂದಾಜು 25 ರಿಂದ 30 ಕೋಟಿ ರೂ. ಒಳಗೆ ಕಲೆಕ್ಷನ್ ಆಗಬಹುದೆಂದು ಅಂದಾಜು ಮಾಡುತ್ತಿದ್ದಾರೆ.


Click it and Unblock the Notifications











