'ಲಾಲ್ ಸಲಾಂ' ಸೋಲಿಗೆ ಕಾರಣ ಸೂಪರ್‌ಸ್ಟಾರ್ ರಜನಿಕಾಂತ್; ಸೋಲಿನ ಬಳಿಕ ತಪ್ಪು ಒಪ್ಪಿಕೊಂಡ ಪುತ್ರಿ
ರಜನಿಕಾಂತ್ ಪುತ್ರಿ ಐಶ್ವರ್ಯಾ ಪತಿಯಿಂದ ಬೇರೆಯಾದ ಬಳಿಕ ಮತ್ತೆ ನಿರ್ದೇಶನಕ್ಕೆ ಮರಳಿದ್ದರು. ಅದಾಗಲೇ ನಿರ್ದೇಶನ ಮಾಡಿ ಅನುಭವಿದ್ದರೂ, ಕೆಲವು ವರ್ಷಗಳಿಂದ ನಿರ್ದೇಶನದಿಂದ ದೂರ ಸರಿದಿದ್ದರು. ಆದ್ರೀಗ ಪತಿಯಿಂದ ದೂರವಾದ ಮೇಲೆ ಮತ್ತೆ ನಿರ್ದೇಶನದ ಕಡೆ ಮುಖ ಮಾಡಿದ್ದರು. ವೃತ್ತಿ ಬದುಕನ್ನು ಗಂಭೀರವಾಗಿ ಪರಿಗಣಿಸಿದ್ದರು. ಆ ಪ್ರಯತ್ನವೇ 'ಲಾಲ್ ಸಲಾರಂ'.
'ಲಾಲ್ ಸಲಾಂ' ಬಹಳಷ್ಟು ನಿರೀಕ್ಷೆ ಹುಟ್ಟಿಸಿತ್ತು. 'ಜೈಲರ್' ಅಂತಹ ಮೆಗಾ ಬ್ಲಾಕ್‌ಬಸ್ಟರ್ ಕೊಟ್ಟ ಸೂಪರ್‌ಸ್ಟಾರ್ ರಜನಿಕಾಂತ್ ವಿಶೇಷ ಪಾತ್ರದಲ್ಲಿ ಬೇರೆ ನಟಿಸಿದ್ದರು. ಹೀಗಾಗಿ ಈ ಬಾರಿಗೆ ಐಶ್ವರ್ಯಾ ಧನುಷ್ ಸಕ್ಸಸ್ ಗ್ಯಾರಂಟಿ ಅಂತಲೇ ನಿರೀಕ್ಷೆ ಮಾಡಿದ್ದರು. ಆದರೆ, ಲೆಕ್ಕಾಚಾರವೆಲ್ಲ ತಲೆಕೆಳಗಾಗಿತ್ತು. ರಜನಿಕಾಂತ್ ಸಿನಿಮಾದಲ್ಲಿದ್ದಿದ್ದರ ಹೊರತಾಗಿಯೂ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ.

ಅಂದ ಹಾಗೆ 'ಲಾಲ್ ಸಲಾಂ' ಸಿನಿಮಾಗೆ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ನಾಯಕರಾಗಿದ್ದರು. ಸೂಪರ್‌ಸ್ಟಾರ್ ರಜನಿಕಾಂತ್ ಕೇವಲ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿತ್ತು. ಹೀಗಿದ್ದರೂ, ರಜನಿಕಾಂತ್‌ರನ್ನು ಹೈಲೈಟ್ ಮಾಡಲಾಗಿತ್ತು. ಆದರೂ, ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ. ಸಿನಿಮಾ ಬಗ್ಗೆ ರಜನಿಕಾಂತ್ ನುಡಿದ ಭವಿಷ್ಯ ನಿಜವಾಗಲಿಲ್ಲ. ಈಗ ಐಶ್ವರ್ಯಾ ಸಿನಿಮಾದ ಸೋಲಿಗೆ ರಜನಿಕಾಂತ್ ಪಾತ್ರವೇ ಕಾರಣ ಅನ್ನೋದನ್ನು ಪರೋಕ್ಷವಾಗಿ ಹೇಳಿದ್ದಾರೆ.
ಈ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮದ ವೇಳೆ ರಜನಿಕಾಂತ್ ಭವಿಷ್ಯ ನುಡಿದಿದ್ದರು. ಈ ಸಿನಿಮಾ ಉತ್ತಮವಾಗಿ ಮೂಡಿ ಬಂದಿದೆ. ಇದು ರಾಷ್ಟ್ರ ಪ್ರಶಸ್ತಿ ಪಡೆಯುವ ಕಥೆ ಎಂದಿದ್ದರು. ಆದರೆ, ಸಿನಿಮಾ ನೋಡಿದ ಪ್ರೇಕ್ಷಕರಿಗೆ ಆ ಫೀಲಿಂಗ್ ಬಾರದೆ ಇದ್ದಿದ್ದೇ 'ಲಾಲ್ ಸಲಾಂ' ಸೋಲಿಗೆ ಪ್ರಮುಖ ಕಾರಣವಾಗಿತ್ತು. ಅಲ್ಲದೆ ಸಿನಿಮಾದಲ್ಲಿ ರಜನಿಕಾಂತ್ ಎಂಟ್ರಿ ಬಗ್ಗೆ ಪುತ್ರಿ ಐಶ್ವರ್ಯಾ ತಪ್ಪೊಪ್ಪಿಕೊಂಡಿದ್ದಾರೆ.

'ಲಾಲ್ ಸಲಾಂ' ಸಿನಿಮಾ ಬಿಡುಗಡೆ ಇನ್ನು ಎರಡು ದಿನಗಳು ಬಾಕಿ ಉಳಿದಿವೆ ಅನ್ನುವಾಗ ಐಶ್ವರ್ಯಾ ಮತ್ತೆ ಎಡಿಟಿಂಗ್‌ಗೆ ಕೂತಿದ್ದರು. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ರಿಲೀಸ್‌ಗೆ ಎರಡು ದಿನಗಳಿದೆ ಅನ್ನುವಾಗ ಏನು ಮಾಡಬೇಕು ಅಂತ ಗೊತ್ತಾಗದೇ ಎಡಿಟಿಂಗ್ ಮಾಡಿದ್ದೆವು. ಈ ವೇಳೆ ಸೆಕೆಂಡ್ ಹಾಫ್‌ನಲ್ಲಿ ರಜನಿಕಾಂತ್ ಪಾತ್ರವನ್ನು ರಿವೀಲ್ ಮಾಡಬೇಕಿತ್ತು. ಆದರೆ, ಮೊದಲಾರ್ಧದಲ್ಲಿಯೇ ಎಂಟ್ರಿ ಕೊಡಿಸಿದ್ದು ತಪ್ಪಾಯಿತು ಎಂದಿದ್ದಾರೆ.
ಲೈಕಾ ಪ್ರೊಡಕ್ಷನ್ ನಿರ್ಮಿಸಿದ್ದ ಈ ಸಿನಿಮಾ ಐಶ್ವರ್ಯಾ ರಜನಿಕಾಂತ್‌ಗೆ ಒಳ್ಳೆಯ ಕಮ್‌ಬ್ಯಾಕ್ ಆಗುವ ಸಾಧ್ಯತೆಯಿತ್ತು. ಸಿನಿಮಾ ನೋಡಿದಾಗ ಸೆಂಥಿಲ್ ಪಾತ್ರವೇ ಕಥೆಗೆ ಹೀರೊ ಆಗಿತ್ತು. ಆದರೆ, ಸೂಪರ್ ಸ್ಟಾರ್ ರಜನಿಕಾಂತ್ ಎಂಟ್ರಿ ಕೊಡುತ್ತಿದ್ದಂತೆ, ಪ್ರೇಕ್ಷಕರು ಕಥೆಯನ್ನು ಬಿಟ್ಟು ಮೊಯ್ದೀನ್ ಭಾಯ್ ಪಾತ್ರದ ಕಡೆಗೆ ವಾಲಿದರು. ಇದು ಸಿನಿಮಾದ ಸೋಲಿಗೆ ಪ್ರಮುಖ ಕಾರಣ ಆಗಿತ್ತು.
'ಜೈಲರ್' ಬಳಿಕ ಮತ್ತೆ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದ ರಜನಿಕಾಂತ್ ಮಗಳಿಗಾಗಿ ಆ ಸಕ್ಸಸ್ ಅನ್ನು ಪಕ್ಕಕ್ಕಿಟ್ಟು ಸಿನಿಮಾದಲ್ಲಿ ನಟಿಸಿದ್ದರು. ಆದರೆ, ಇದು ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತಿದೆ. ಈ ಮೂಲಕ ಮತ್ತೆ ರಜನಿ ಸೋಲಿನ ಕಹಿಯನ್ನು ಅನುಭವಿಸಬೇಕಾಯ್ತು. ಇದರಿಂದ ಅಭಿಮಾನಿಗಳಿಗೆ ಬೇಸರ ಆಗಿದೆ ಅನ್ನೋದನ್ನು ಐಶ್ವರ್ಯಾ ರಜನಿಕಾಂತ್ ಕೂಡ ಒಪ್ಪಿಕೊಂಡಿದ್ದಾರೆ.


Click it and Unblock the Notifications











