'ಲಿಯೋ' ಆಡಿಯೋ ಲಾಂಚ್ ಕ್ಯಾನ್ಸಲ್: ಫ್ಯಾನ್ಸ್ ಕಿಡಿ.. ಸನಾತನ ಧರ್ಮ, ಕಾವೇರಿ ಡಿಎಂಕೆ ವಿವಾದಗಳು ನಿಂತಿಲ್ಲ!
ತಮಿಳುನಾಡಿನ ಡಿಎಂಕೆ ಸರ್ಕಾರ ಒಂದಲ್ಲ ಒಂದು ವಿವಾದವನ್ನು ಮೈ ಮೇಲೆ ಎಳೆದುಕೊಳ್ಳುತ್ತಿದೆ. ವಿವಾದಗಳಿಂದಲೇ ಸದಾ ಸುದ್ದಿಯಲ್ಲಿರೋ ಡಿಎಂಕೆ ಸರ್ಕಾರ ಈಗ ದಳಪತಿ ವಿಜಯ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ದಳಪತಿ ವಿಜಯ್ ಅಭಿಮಾನಿಗಳು ತಮಿಳುನಾಡು ಡಿಎಂಕೆ ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ. ದಳಪತಿ ವಿಜಯ್ ನಟನೆಯ 'ಲಿಯೋ' ಸಿನಿಮಾದ ಆಡಿಯೋ ಕ್ಯಾನ್ಸಲ್ ಆಗಿದ್ದಕ್ಕೆ ಡಿಎಂಕೆ ಸರ್ಕಾರದ ಕುತಂತ್ರವೇ ಕಾರಣ ಅಂತ ವಿಜಯ್ ಫ್ಯಾನ್ಸ್ ಆಕ್ರೋಶ ಹೊರಹಾಕುತ್ತಿದ್ದಾರೆ.

'ಲಿಯೋ' ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮ ಇದೇ ಸೆಪ್ಟೆಂಬರ್ 30ರಂದು ನಡೆಯಬೇಕಿತ್ತು. ಆದರೆ, ಸಿನಿಮಾದ ನಿರ್ಮಾಪಕರು ದಿಢೀರನೇ ಆಡಿಯೋ ಲಾಂಚ್ ಅನ್ನು ಕ್ಯಾನ್ಸಲ್ ಮಾಡಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಇದಕ್ಕೆ ಡಿಎಂಕೆ ಸರ್ಕಾರ ಅನುಮತಿ ನೀಡದೇ ಇರುವುದೇ ಕಾರಣವೆಂದು ತಮಿಳುನಾಡು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಮೂಲಕ ಮತ್ತೊಂದು ವಿವಾದವನ್ನು ಡಿಎಂಕೆ ಸರ್ಕಾರ ಮೈ ಮೇಲೆ ಎಳೆದುಕೊಂಡಿದೆ.
ದಳಪತಿ ವಿಜಯ್ ಫ್ಯಾನ್ಸ್ ಕೆಂಗಣ್ಣಿಗೆ ಗುರಿ
'ಲಿಯೋ' ನಿರ್ಮಾಣ ಸಂಸ್ಥೆ ಸೆವೆನ್ ಸ್ಕ್ರೀನ್ ಸ್ಟುಡಿಯೋ ಚೆನ್ನೈನಲ್ಲಿ ನಡೆಯಬೇಕಿದ್ದ ಆಡಿಯೋ ಲಾಂಚ್ ಕಾರ್ಯಕ್ರಮವನ್ನು ಕ್ಯಾನ್ಸಲ್ ಮಾಡಿದೆ. ಇದಕ್ಕೆ ಕಾರಣ ಡಿಎಂಕೆ ನೇತೃತ್ವದ ತಮಿಳು ನಾಡು ಸರ್ಕಾರವೇ ಕಾರಣ ಎಂದು ದಳಪತಿ ವಿಜಯ್ ಫ್ಯಾನ್ಸ್ ಆಕ್ರೋಶ ಹೊರಹಾಕುತ್ತಿದ್ದಾರೆ. ಹೀಗಾಗಿ ಎಕ್ಸ್‌ನಲ್ಲಿ (ಟ್ವಿಟರ್) 'DMK fears Thalapathy Vijay, 'We Stand with Leo' ಎರಡು ಹ್ಯಾಶ್ ಟ್ಯಾಗ್ ಅನ್ನು ಬಳಿಸಿ ಆಕ್ರೋಶ ಹೊರಹಾಕುತ್ತಿದ್ದಾರೆ.
ವಿಜಯ್ ಜನಪ್ರಿಯತೆಗೆ ಬೆದರಿದ ಡಿಎಂಕೆ?
ಕಳೆದ ಆರು ತಿಂಗಳಿನಿಂದ ದಳಪತಿ ವಿಜಯ್ ರಾಜಕೀಯಕ್ಕೆ ಬರುತ್ತಾರೆಂಬ ಸುದ್ದಿ ಓಡಾಡುತ್ತಿದೆ. ವಿಜಯ್ ಕೂಡ ಸಾಕಷ್ಟು ಸಮಾಜಮುಖಿ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದಾರೆ. 2026ರ ಚುನಾವಣೆಗೆ ವಿಜಯ್ ತಯಾರಿ ನಡೆಸಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ಬೆದರಿರುವ ಡಿಎಂಕೆ ಸರ್ಕಾರ ದಳಪತಿ ವಿಜಯ್ 'ಲಿಯೋ' ಸಿನಿಮಾದ ಆಡಿಯೋ ಲಾಂಚ್‌ಗೆ ಅವಕಾಶ ನೀಡಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ. ಹೀಗಾಗಿ ಮತ್ತೊಂದು ವಿವಾದದಲ್ಲಿ ತಮಿಳುನಾಡು ಸರ್ಕಾರ ಸಿಕ್ಕಿಕೊಂಡಿದೆ.

ಭುಗಿಲೆದ್ದ ಕಾವೇರಿ ಹೋರಾಟ
ಇತ್ತ ಕರ್ನಾಟಕದಲ್ಲಿ ಕಾವೇರಿ ಹೋರಾಟ ಭುಗುಲೆದ್ದಿದೆ. ತಮಿಳು ಸರ್ಕಾರ ಕಾವೇರಿ ನೀರು ಪಡೆಯುವಲ್ಲಿ ಯಶಸ್ವಿಯಾಗಿದೆ. ಇದು ಕನ್ನಡಿಗರ ಕಣ್ಣು ಕುಕ್ಕುವಂತೆ ಮಾಡಿದೆ. ಕಾವೇರಿ ಹೋರಾಟ ತಾರಕಕ್ಕೇರುತ್ತಿದ್ದಂತೆ ಕರ್ನಾಟಕ ಸರ್ಕಾರ ಕಾವೇರಿ ನೀರಿಗೆ ಸಂಬಂಧಿಸಿದಂತೆ ಸುಳ್ಳು ಮಾಹಿತಿಯನ್ನು ನೀಡಿದೆ. ಕೇಂದ್ರ ಜಲಶಕ್ತಿ ಮಂತ್ರಿಗೆ ಕಾವೇರಿಯ ಸುಳ್ಳು ಗ್ರೌಂಡ್ ರಿಪೋರ್ಟ್ ಹಾಗೂ ಮಳೆ ವರದಿ ನೀಡಿದೆ ಎಂದು ಆರೋಪಿದ್ದರು. ಇದು ಕಾವೇರಿ ಭಾಗದ ಜನರನ್ನು ರೊಚ್ಚಿಗೆಬ್ಬಿಸಿತ್ತು.
ಸನಾತನ ಧರ್ಮ ವಿವಾದ
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ಡೆಂಘೀ, ಮಲೇರಿಯಾಗೆ ಹೋಲಿಸಿ ವಿವಾದಕ್ಕೆ ಸಿಲುಕಿದ್ದರು. ಈ ಹೇಳಿಕೆ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಇತ್ತೀಚೆಗೆ ಉದಯನಿಧಿ ಸ್ಟಾಲಿನ್ ಹಾಗೂ ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ಅನ್ನೂ ಕಳುಹಿಸಿದೆ. ಹೀಗೆ ಒಂದಲ್ಲ ಒಂದು ವಿವಾದದಲ್ಲಿ ಸಿಲುಕುತ್ತಲೇ ಇದೆ. ಈಗ ವಿಜಯ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.


Click it and Unblock the Notifications











