"ನಾನು ದೇವರಲ್ಲಿ ನಂಬಿಕೆ ಇಟ್ಟವಳು, ನಿಮ್ಮ ಭಾವನೆಗಳಿಗೆ ನೋವಾಗಿದ್ದಕ್ಕೆ ಕ್ಷಮೆಯಾಚಿಸುತ್ತೇನೆ"; ನಯನತಾರಾ
ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ನಯನತಾರಾ ನಟಿಸಿದ 'ಅನ್ನಪೂರ್ಣಿ' ಸಿನಿಮಾ ವಿವಾದಕ್ಕೆ ಸಿಲುಕಿತ್ತು. ಈ ಸಿನಿಮಾದಲ್ಲಿ ಕೆಲವು ವಿವಾದಾತ್ಮಕ ದೃಶ್ಯಗಳಿವೆ. ಇವುಗಳು ಹಿಂದೂ ಭಾವನೆಗಳಿಗೆ ಧಕ್ಕೆಯನ್ನು ಉಂಟು ಮಾಡಿವೆ ಎಂದು ಆರೋಪ ಮಾಡಿ ಚಿತ್ರತಂಡದ ವಿರುದ್ಧ ದೂರನ್ನು ದಾಖಲಿಸಲಾಗಿತ್ತು.
'ಅನ್ನಪೂರ್ಣಿ' ಸಿನಿಮಾ ವಿವಾದ ತಾರಕ್ಕೇರುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲೂ ವಿರೋಧ ವ್ಯಕ್ತವಾಗಿತ್ತು. ಈ ಸಿನಿಮಾದಲ್ಲಿ ಶ್ರೀರಾಮ ಮಾಂಸ ಭಕ್ಷಕ ಎಂದು ಹೇಳುವ ದೃಶ್ಯವಿದೆ. ಹಾಗೇ ಹಿಂದೂ ಪೂಜಾರಿಯ ಮಗಳು ಬಿರಿಯಾನಿ ಮಾಡುವಾಗ ನಮಾಜ್ ಮಾಡುವ ದೃಶ್ಯ ಇವೆಲ್ಲವೂ ಹಿಂದೂ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿವೆ ಎಂದು ಚಿತ್ರತಂಡದ ವಿರುದ್ಧ ಕಿಡಿಕಾರಲಾಗಿತ್ತು.

ದಕ್ಷಿಣ ಮುಂಬೈನ ಲೋಕಮಾನ್ಯ ತಿಲಕ್ ಪೊಲೀಸ್ ಸ್ಟೇಷನ್‌ನಲ್ಲಿ ರಮೇಶ್ ಸೋಲಾಂಕಿ ಎಂಬುವವರು ದೂರು ದಾಖಲಿಸಿದ್ದರು. ಈ ಸಂಬಂಧ ಜೀ ಸ್ಟುಡಿಯೋ ಕ್ಷಮೆಯಾಚಿಸುತ್ತು. ನೆಟ್‌ಫ್ಲಿಕ್ಸ್ 'ಅನ್ನಪೂರ್ಣಿ' ಸಿನಿಮಾವನ್ನು ಓಟಿಟಿ ವೇದಿಕೆಯಿಂದ ತೆಗೆದು ಹಾಕಿತ್ತು. ಈಗ ಲೇಡಿ ಸೂಪರ್‌ಸ್ಟಾರ್ ನಯನತಾರಾ ಬಹಿರಂಗವಾಗಿ ಪತ್ರದ ಮುಕೇನ ಕ್ಷಮೆಯಾಚಿಸಿದ್ದಾರೆ.
ನಯನತಾರಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ 'ಅನ್ನಪೂರ್ಣಿ' ಸಿನಿಮಾದ ಬಗ್ಗೆ, ಚಿತ್ರತಂಡ ಉದ್ದೇಶ. ಈ ಸಿನಿಮಾದಲ್ಲಿ ಅವರು ಏನು ಹೇಳುವುದಕ್ಕೆ ಹೊರಟಿದ್ದರು ಎಂಬುದನ್ನು ಸುಧೀರ್ಘವಾಗಿ ಬರೆದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ನಯನತಾರಾ ಹೇಳಿದ್ದೇನು ತಿಳಿಯಲು ಮುಂದೆ ಓದಿ.
ಜೈ ಶ್ರೀರಾಮ್ ಎಂದು ಬರೆಯುವ ಮೂಲಕ ನಯನತಾರಾ ಪತ್ರವನ್ನು ಆರಂಭಿಸಿದ್ದಾರೆ. "ಈ ಪತ್ರವನ್ನು ನಾನು ಭಾರವಾದ ಹೃದಯದಿಂದ, ಇತ್ತೀಚೆಗೆ ನಮ್ಮ ಅನ್ನಪೂರ್ಣಿ ಸಿನಿಮಾದ ವಿವಾದಕ್ಕೆ ಸಂಬಂಧಿಸಿದಂತೆ ನನ್ನ ಅಭಿಪ್ರಾಯವನ್ನು ಹಂಚಿಕೊಳ್ಳಲು ಬರೆಯುತ್ತಿದ್ದೇನೆ. ಅನ್ನಪೂರ್ಣಿಯನ್ನು ನಾವು ಕೇವಲ ಸಿನಿಮಾ ಮಾಡಬೇಕು ಅಂತ ಮಾಡಿದ್ದಲ್ಲ. ಅದರ ಹಿಂದೊಂದು ಉದ್ದೇಶವೂ ಇರುತ್ತದೆ." ಎಂದು ನಯನತಾರಾ ಹೇಳಿದ್ದಾರೆ.
"ನಾನು ಪಾಸಿಟಿವ್ ಮೆಸೇಜ್ ಅನ್ನು ಕೊಡುವ ಪ್ರಯತ್ನದಲ್ಲಿ, ನನಗೆ ಅರಿವಿಲ್ಲದೆ ನಿಮ್ಮ ಭಾವನೆಗಳಿಗೆ ನೋವುಂಟು ಮಾಡಿದ್ದೇವೆ. ನಮ್ಮ ಸಿನಿಮಾ ಸೆನ್ಸಾರ್ ಆಗಿ ಚಿತ್ರಮಂದಿರದಲ್ಲಿ ಹಾಗೂ ಓಟಿಟಿಯಲ್ಲೂ ರಿಲೀಸ್ ಆಗಿತ್ತು. ಆದರೆ, ಈ ಸಿನಿಮಾವನ್ನು ಓಟಿಟಿ ವೇದಿಕೆಯಿಂದ ತೆಗೆದು ಹಾಕುತ್ತಾರೆಂದು ನಿರೀಕ್ಷೆ ಮಾಡಿರಲಿಲ್ಲ. ನನ್ನ ತಂಡದ ಉದ್ದೇಶ ಯಾರದ್ದೇ ಭಾವನೆಗಳಿಗೆ ಅಥವಾ ನಂಬಿಕೆ ಧಕ್ಕೆಯನ್ನು ಉಂಟುಮಾಡುವುದಾಗಿರಲಿಲ್ಲ. ನಾನು ದೇವರಲ್ಲಿ ನಂಬಿಕೆಯನ್ನು ಇಟ್ಟುಕೊಂಡಿರುವವಳು. ದೇಶದಲ್ಲಿರುವ ಹಲವು ದೇವಾಲಯಗಳಿಗೆ ನಿರಂತರವಾಗಿ ಭೇಟಿ ನೀಡುತ್ತಲೇ ಇರುತ್ತೇನೆ. ಯಾರಿಗೆಲ್ಲ ನೋವಾಗಿದೆ ಅವರಲ್ಲಿ ಪ್ರಾಮಾಣಿಕವಾಗಿ ಹೃದಯದಿಂದ ಕ್ಷಮೆ ಕೇಳುತ್ತೇನೆ" ಎಂದು ನಯನತಾರಾ ಬರೆದುಕೊಂಡಿದ್ದಾರೆ.
ಸಂಪ್ರದಾಯಸ್ಥ ಕುಟುಂಬದಿಂದ ಬಂದ ಒಬ್ಬ ಮಹಾತ್ವಕಾಂಕ್ಷೆಯುಳ್ಳ ಮಹಿಳೆ, ತನ್ನ ಫ್ಯಾಷನ್ ಹಾಗೂ ತಾನು ನಂಬುವ ಸಂಪ್ರದಾಯ ಎರಡರ ಮಧ್ಯೆ ಸಿಕ್ಕಿಕೊಂಡವಳು ಹೇಗೆ ಹೊರಬರುತ್ತಾಳೆ ಅನ್ನೋದೇ 'ಅನ್ನಪೂರ್ಣಿ' ಸಿನಿಮಾ ಕಥೆ. ಈ ಸಿನಿಮಾದಲ್ಲಿ ನಯನತಾರಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ, ಕನ್ನಡದ ನಟ ಅಚ್ಯುತ್ ಕುಮಾರ್, ಕೆ ಎಸ್ ರವಿಕುಮಾರ್, ಸತ್ಯರಾಜ್, ಕಾರ್ತಿಕ್ ಕುಮಾರ್ ಮತ್ತು ರೇಣುಕಾ ನಟಿಸಿದ್ದಾರೆ. ಜೀ ಸ್ಟುಡಿಯೋ, ನಾಡ್ ಸ್ಟುಡಿಯೋ ಹಾಗೂ ಟ್ರಿಡೆಂಟ್ ಆರ್ಟ್ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಿತ್ತು. ಸದ್ಯ ಈ ಸಿನಿಮಾವನ್ನು ಒಟಿಟಿ ವೇದಿಕೆ ನೆಟ್‌ಫ್ಲಿಕ್ಸ್‌ನಿಂದ ತೆಗೆದು ಹಾಕಲಾಗಿದ್ದು, ಸಿನಿಮಾ ಎಡಿಟ್ ಆದ ಬಳಿಕ ಸ್ಟ್ರೀಮಿಂಗ್ ಮಾಡಲಾಗುತ್ತದೆ.


Click it and Unblock the Notifications











