" ಆ ಇಬ್ಬರು ನಟರಿಂದ ತ್ರಿಶಾ ಮದುವೆ ಬಗ್ಗೆ ನಂಬಿಕೆ ಕಳ್ಕೊಂಡಿದ್ದಾರೆ": ನಟನ ವಿವಾದಾತ್ಮಕ ಹೇಳಿಕೆ!
ದಕ್ಷಿಣ ಭಾರತದ ಸ್ಟಾರ್ ನಟಿ ತ್ರಿಶಾ ಇನ್ನೂ ಯಾಕೆ ಮದುವೆ ಆಗಿಲ್ಲ ಅನ್ನೋದು ಅಭಿಮಾನಿಗಳ ಪ್ರಶ್ನೆ. ಎಲ್ಲಾ ನಟಿಯರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಆದರೆ, ಕೃಷ್ಣ ಸುಂದರಿ ತ್ರಿಶಾ ಮಾತ್ರ ಇನ್ನೂ ಮದುವೆ ಆಗಲ್ಲ. ಒಂದೊಂದೇ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಡುತ್ತಿದ್ದಾರೆ.
ತ್ರಿಶಾ ಈಗ ಮಣಿರತ್ನಂ ನಿರ್ದೇಶಿಸುತ್ತಿರುವ 'ಪೊನ್ನಿಯನ್ ಸೆಲ್ವನ್ 2' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಇದೇ ಏಪ್ರಿಲ್ 28ರಂದು ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಈಗಾಗಲೇ 'ಪಿಎಸ್ 1'ನಲ್ಲಿ ಕುಂದವೈ ಪಾತ್ರದಲ್ಲಿ ನಟಿಸಿ ಜನಮನ ಗೆದ್ದರು.

ಇದೇ ಸಂದರ್ಭದಲ್ಲಿ ತಮಿಳು ನಟ ಹಾಗೂ ವಿವಾದಾತ್ಮಕ ಯೂಟ್ಯೂಬರ್ ಬೈಲ್ವಾನ್ ರಂಗನಾಥನ್ ಹೇಳಿಕೆಯೊಂದನ್ನು ನೀಡಿದ್ದಾರೆ. ವಯಸ್ಸು 40 ದಾಟಿದರೂ ತ್ರಿಶಾ ಇನ್ನೂ ಯಾಕೆ ಮದುವೆ ಆಗಿಲ್ಲ ಅಂತ ಹೇಳಿದ್ದಾರೆ. ಇದೇ ಹೇಳಿಕೆ ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.
ತಮಿಳಿನ ಬಹು ಬೇಡಿಕೆಯ ನಟಿ ತ್ರಿಶಾ
ತ್ರಿಶಾ ತಮಿಳು, ತೆಲುಗು ಮಂದಿಗಷ್ಟೇ ಅಲ್ಲ ಕನ್ನಡದ ಸಿನಿಪ್ರೇಮಿಗಳಿಗೂ ಚೆನ್ನಾಗಿಯೇ ಗೊತ್ತು. ಕನ್ನಡದಲ್ಲಿ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆ ನಟಿಸಿದ್ದಾರೆ. ನಯನತಾರಾ, ಸಮಂತಾರಂತೆಯೇ ನಟಿ ತ್ರಿಶಾ ಕೂಡ ದಕ್ಷಿಣ ಭಾರತದಲ್ಲಿ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.
ವಿಜಯ್ ಸೇತುಪತಿ ಜೊತೆ ತ್ರಿಶಾ '96' ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾ ತ್ರಿಶಾ ವೃತ್ತಿ ಬದುಕಿಗೆ ಮತ್ತೊಮ್ಮೆ ಬೂಸ್ಟ್ ಕೊಟ್ಟಿತ್ತು. ಅಲ್ಲಿಂದ ತ್ರಿಶಾ ಬಿಗ್ ಬಜೆಟ್ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಡುತ್ತಿದ್ದಾರೆ. ದಳಪತಿ ವಿಜಯ್ ನಟಿಸುತ್ತಿರುವ 'ಲಿಯೋ'ದಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಮೂಲಕ 14 ವರ್ಷಗಳ ಬಳಿಕ ತ್ರಿಶಾ ಮತ್ತೆ ದಳಪತಿ ವಿಜಯ್‌ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ವೇಳೆ ಬೈಲ್ವಾನ್ ರಂಗನಾಥನ್ ನಟಿಯ ಯಾಕೆ ಮದುವೆ ಆಗಿಲ್ಲ ಅಂತ ವಿವಾದಾತ್ಮಕ ಹೇಳಿಕೆ ಕೊಟ್ಟು ಸಂಚಲನ ಸೃಷ್ಟಿಸಿದ್ದಾರೆ.

ತ್ರಿಶಾ ಯಾಕಿನ್ನು ಮದುವೆ ಆಗಿಲ್ಲ?
ಸೌತ್ ನಟಿ ತ್ರಿಶಾ ವಯಸ್ಸು ಈಗ 39 ವರ್ಷ. ಆದರೂ ಇನ್ನೂ ಮದುವೆ ಬಗ್ಗೆ ಮನಸ್ಸು ಮಾಡಿಲ್ಲ. ಹಿಂದೊಮ್ಮೆ ಉದ್ಯಮಿಯೊಂದಿಗೆ ಇನ್ನೇ ಮದುವೆ ಆಗೇಬಿಟ್ಟಿತು ಅನ್ನುವಾಗಲೇ ದೂರ ಸರಿದಿದ್ದರು. ಅಂದಿನಿಂದ ತ್ರಿಶಾ ಮದುವೆ ಬಗ್ಗೆನೇ ಆಗಾಗ ಮಾತುಗಳು ಕೇಳಿ ಬರುತ್ತಲೇ ಇವೆ.
ಕೆಲವು ದಿನಗಳ ಹಿಂದೆ 'ಪೊನ್ನಿಯನ್ ಸೆಲ್ವನ್ 2 ಪ್ರಚಾರದ ವೇಳೆ ತ್ರಿಶಾಗೆ ಮತ್ತೆ ಇದೇ ಪ್ರಶ್ನೆ ಎದುರಾಗಿತ್ತು. ಆಗಲೂ ತ್ರಿಶಾ ನನ್ನ ಈ ಜೀವನ ಅಭಿಮಾನಿಗಳಿಗೆ ಮೀಸಲು ಎಂದು ಹೇಳಿದ್ದರು. ಈ ಬೆನ್ನಲ್ಲೇ ಬೈಲ್ವಾನ್ ರಂಗನಾಥನ್ ವಿವಾದಾತ್ಮಕ ಹೇಳಿಕೆ ಕೊಟ್ಟು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೇ ವೇಳೆ ತ್ರಿಶಾ ಮದುವೆ ಆಗದೆ ಇರುವುದಕ್ಕೆ ಇಬ್ಬರು ನಟರೇ ಕಾರಣ ಎಂದಿದ್ದಾರೆ.
"ಆ ಇಬ್ಬರು ನಟರೇ ಕಾರಣ"
ನಟ ಬೈಲ್ವಾನ್ ರಂಗನಾಥನ್ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ತ್ರಿಶಾ ಯಾಕೆ ಮದುವೆ ಆಗಿಲ್ಲ ಅನ್ನೋದನ್ನು ಬಹಿರಂಗಪಡಿಸಿದ್ದಾರೆ. 39ರ ಹರೆಯದಲ್ಲೂ ನಟಿ ತ್ರಿಶಾ ಮದುವೆಯಾಗಿಲ್ಲ. ಆದರೆ, ಉಳಿದ ನಟಿಯರಂತೆ ತ್ರಿಷಾ ಕೂಡ ಬೇಗ ಮದುವೆಯಾಗಲಿ ಎಂದು ಅಭಿಮಾನಿಗಳು ಬಯಸಿದ್ದಾರೆಂದು ಹೇಳಿದ್ದಾರೆ.
ತ್ರಿಶಾ ಮದುವೆಯಾಗಿದೇ ಸಿಂಗಲ್ ಆಗಿರುವುದಕ್ಕೆ ಕಾರಣ ಸಿಂಬು ಮತ್ತು ರಾಣಾನೇ ಕಾರಣ ಎಂದು ಬೈಲ್ವಾನ್ ರಂಗನಾಥನ್ ಹೇಳಿಕೆ ಕೊಟ್ಟಿದ್ದಾರೆ. ಇಬ್ಬರೂ ನಟರೂ ಪ್ರೀತಿಸಿ ಮೋಸ ಮಾಡಿದ್ದರಿಂದ ತ್ರಿಷಾ ಮದುವೆಯ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ." ಎಂದು ಬೈಲ್ವಾನ್ ಬಹಿರಂಗಪಡಿಸಿದ್ದಾಗಿ ತಮಿಳು ಮಾಧ್ಯಮಗಳು ವರದಿ ಮಾಡಿವೆ.


Click it and Unblock the Notifications











