"ನಾನ್ಯಾರು ಅಂತನೂ ಕೇಳದೆ ರೂಮಿಗೆ ಬಾ ಅಂತ ಕರೆದ": ನಟಿ ವಿಚಿತ್ರಾ ಆರೋಪಿಸಿದ ತೆಲುಗಿನ ಟಾಪ್ ಹೀರೊ ಯಾರು?
ತಮಿಳು ನಟಿ ವಿಚಿತ್ರಾ ತೆಲುಗಿನ ಸೀನಿಯರ್ ಹೀರೊ ವಿರುದ್ಧ ಕಾಸ್ಟಿಂಗ್ ಕೌಚ್ ಆರೋಪ ಮಾಡಿದ್ದಾರೆ. ವಿಚಿತ್ರಾ ಈ ಹಿಂದೆ ಹಲವು ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ತಮಿಳು ಬಿಗ್ ಬಾಸ್‌ನ ಏಳನೇ ಸೀಸನ್‌ನಲ್ಲಿ ಪ್ರಬಲ ಸ್ಪರ್ಧಿಯಾಗಿದ್ದಾರೆ. ಇದೇ ರಿಯಾಲಿಟಿ ಶೋ ಅನ್ನು ಕಮಲ್ ಹಾಸನ್ ನಡೆಸಿಕೊಡುತ್ತಿದ್ದಾರೆ.
ಈ ರಿಯಾಲಿಟಿ ಶೋ ನಲ್ಲಿ ಸ್ಪರ್ಧಿಗಳಿಗೆ ಒಂದು ಟಾಸ್ಕ್ ಅನ್ನು ಕೊಡಲಾಗಿತ್ತು. ಅವರ ಜೀವನಕ್ಕೆ ಟರ್ನಿಂಗ್ ಪಾಯಿಂಟ್ ಕೊಟ್ಟ ಘಟನೆಯನ್ನು ವಿವರಿಸಬೇಕಿತ್ತು. ಈ ವೇಳೆ ನಟಿ ವಿಚಿತ್ರಾ ತಮಗಾದ ಕಾಸ್ಟಿಂಗ್ ಕೌಚ್ ಅನುಭವವನ್ನು ಬಿಗ್ ಬಾಸ್ ಶೋನಲ್ಲಿ ಹಂಚಿಕೊಂಡಿದ್ದರು. ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

1991ರಲ್ಲಿ ವಿಚಿತ್ರಾ ಸಿನಿಮಾಗೆ ಎಂಟ್ರಿ ಕೊಟ್ಟಿದ್ದರು. ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, 20 ವರ್ಷಗಳ ಹಿಂದೆ ಸಿನಿಮಾದಲ್ಲಿ ನಟಿಸುವುದರಿಂದ ಹಿಂದೆ ಸರಿದಿದ್ದಾಗಿ ಹೇಳಿಕೊಂಡಿದ್ದಾರೆ. ಆದ್ರೀಗ ಅದಕ್ಕೆ ಕಾರಣ ತೆಲುಗಿನ ಟಾಪ್ ಹೀರೊ ಅಂತ ಪರೋಕ್ಷವಾಗಿ ಶೋನಲ್ಲಿ ಹೇಳಿಕೊಂಡಿದ್ದಾರೆ.
ಅಷ್ಟಕ್ಕೂ ವೈರಲ್ ಆದ ವಿಡಿಯೋದಲ್ಲಿ ನಟಿ ವಿಚಿತ್ರಾ ಏನು ಹೇಳಿದ್ದಾರೆ ಅಂತ ನೋಡುವುದಾರೇ, "2000ರಲ್ಲಿ ನಟರೊಬ್ಬರು ನನಗೆ ಆ ಸಿನಿಮಾ ಮಾಡುವಂತೆ ಸಲಹೆ ನೀಡಿದ್ದರು. ಆ ವಿವರಗಳನ್ನು ನಾನು ಹೇಳುವುದಿಲ್ಲ. ಆ ಸಿನಿಮಾ ಚಿತ್ರೀಕರಣ ಕೇರಳದ ಮಲಂಪುಳ ಎಂಬಲ್ಲಿ ನಡೆಯುತ್ತಿತ್ತು. ಅಲ್ಲಿ ನಾನು ನನ್ನ ಪತಿಯನ್ನು ಭೇಟಿ ಮಾಡಿದೆ. ಅಲ್ಲೇ ನನಗೆ ಕಾಸ್ಟಿಂಗ್ ಕೌಚ್ ಬಗ್ಗೆ ಅತೀ ಕೆಟ್ಟದಾದ ಅನುಭವ ಆಗಿತ್ತು. ಎಲ್ಲರೂ ನಾನು ಮದುವೆ ನಂತರ ಕಾಣೆಯಾದೆ ಎಂದು ಭಾವಿಸಿದ್ದರು. ಆದರೆ ಅದಕ್ಕೆ ಕಾರಣ ಕಾಸ್ಟಿಂಗ್ ಕೌಚ್." ಎಂದು ನಟಿ ವಿಚಿತ್ರ ಹೇಳಿಕೊಂಡಿದ್ದಾರೆ.
ಕೇರಳದಲ್ಲಿ ಮಲಂಪುಳದಲ್ಲಿ ತೆಲುಗು ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ಅಲ್ಲಿ 3 ಸ್ಟಾರ್ ಹೊಟೇಲ್‌ನಲ್ಲಿ ನಮಗೆ ಉಳಿದುಕೊಳ್ಳಲು ಅವಕಾಶ ನೀಡಲಾಗಿತ್ತು. ಅಲ್ಲಿ ಒಂದು ಪಾರ್ಟಿಯನ್ನು ಆಯೋಜಿಸಲಾಗಿತ್ತು. ಆಗ ನಾನು ಆ ಜನಪ್ರಿಯ ಹೀರೊನನ್ನು ಭೇಟಿ ಮಾಡಿದೆ. ಅವರು ನನ್ನ ಹೆಸರನ್ನು ಹೇಳಲಿಲ್ಲ. ಆದರೆ, ನೇರವಾಗಿ ರೂಮಿಗೆ ಬರುವಂತೆ ಕರೆದರು. ಅದು ನನಗೆ ದೊಡ್ಡ ಶಾಕ್ ಆಗಿತ್ತು. ಇಂತಹ ಘಟನೆಯನ್ನು ನಾನು ತಮಿಳು ಸಿನಿಮಾಗಳಲ್ಲಿ ನೋಡಿಲ್ಲ." ಎಂದು ನಟಿ ವಿಚಿತ್ರಾ ಆ ವಿಡಿಯೋದಲ್ಲಿ ಹೆಸರು ಹೇಳದೆ ತೆಲುಗಿನ ಫೇಮಸ್ ನಟ ಎಂದಿದ್ದಾರೆ.
ಇಷ್ಟೇ ಅಲ್ಲದೆ, " ನಟನ ಬಯಕೆಯನ್ನು ಕಡೆಗಣಿಸಿದ್ದಕ್ಕೆ ಪ್ರತಿ ದಿನ ಆ ಹೀರೊ ಕಡೆಯವರು ಕುಡಿದು ಬಂದು ಬಾಗಿಲು ಬಡಿಯುತ್ತಿದ್ದರು. ಆ ವೇಳೆ ಹೊಟೇಲ್‌ನ ಮ್ಯಾನೇಜರ್ (ಈಗ ವಿಚಿತ್ರಾ ಅವರ ಪತಿ) ಪ್ರತಿ ದಿನ ಈಕೆಯ ರೂಮ್ ಅನ್ನು ಬದಲಾಯಿಸುತ್ತಿದ್ದರು. ಅದರಿಂದ ರೊಚ್ಚಿಗೆದ್ದಿದ್ದ ನಟ. ಇದೇ ಸಿನಿಮಾ ಫೈಟ್ ಸೀನ್ ಒಂದನ್ನು ಹಳ್ಳಿಯಲ್ಲಿ ಚಿತ್ರೀಕರಣ ಮಾಡಲಾಗುತ್ತಿತ್ತು. ಆ ವೇಳೆ ಫೈಟ್ ಮಾಡುತ್ತಿದ್ದ ಹುಡುಗನೊಬ್ಬ ನನ್ನ ದೇಹವನ್ನು ಅಸಹ್ಯವಾಗಿ ಟಚ್ ಮಾಡುತ್ತಿದ್ದ. ಫೈಟ್ ಮಾಸ್ಟರ್ ಬಳಿ ಕರೆದುಕೊಂಡು ಹೋದರೆ, ನನ್ನ ಕೆನ್ನೆ ಬಾರಿಸಿದ್ದರು. ಎರಡು ರಕ್ತ ಹೆಪ್ಪುಗಟ್ಟಿತ್ತು. ಯಾರೂ ನನ್ನ ಸಹಾಯಕ್ಕೆ ಬರಲೇ ಇಲ್ಲ" ಎಂದು ಆರೋಪಿಸಿದ್ದಾರೆ.
ನಟಿ ವಿಚಿತ್ರಾ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತೆಲುಗಿನ ಆ ಟಾಪ್ ಹೀರೊ ಯಾರು ಎಂದು ಹುಡುಕಾಡುತ್ತಿದ್ದಾರೆ. ಅದರಲ್ಲಿ ತೆಲುಗಿನ ಲೆಜೆಂಡ್ ಬಾಲಯ್ಯ ಹಾಗೂ ನಟಿ ವಿಚಿತ್ರಾ ನಟಿಸಿರುವ ಸಿನಿಮಾದ ದೃಶ್ಯಗಳನ್ನು ಶೇರ್ ಮಾಡುತ್ತಿದ್ದಾರೆ. ನೆಟ್ಟಿಗರು ನಟಿ ವಿಚಿತ್ರಾ ಹಾಗೂ ಬಾಲಯ್ಯ ನಟಿಸಿರೋ 'ಭಲೇ ವಾಡಿವಿ ಬಾಸು' ಸಿನಿಮಾದ ತುಣುಕುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಲ್ಲದೆ, ಆ ಸಿನಿಮಾ ಶೂಟಿಂಗ್ ವೇಳೆ ನಡೆದ ಘಟನೆಯನ್ನು ನೆನಪಿಸುತ್ತಿದ್ದಾರೆ.
ನಟಿ ವಿಚಿತ್ರಾ 'ಭಲೇ ವಾಡಿವಿ ಬಾಸು' ಸಿನಿಮಾ ಸಾಹಸ ನಿರ್ದೇಶಕ ಎ ವಿಜಯ್ ವಿರುದ್ಧ ಕೇಸ್ ದಾಖಲಿಸಿದ್ದರು. ದೈಹಿಕ ಹಲ್ಲೆ ಮಾಡಿದ್ದಾರೆಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆಂದು ಇಂಡಿಯಾ ಟುಡೇ ಅಂದು ವರದಿ ಮಾಡಿತ್ತು.


Click it and Unblock the Notifications











