ವಿಜಯ್ ಪತ್ನಿ ಸಂಗೀತಾ ಮಧ್ಯಂತರ ಅರ್ಜಿ ಬೆನ್ನಲ್ಲೇ ಸಂಧಾನದ ಸಂಚಲನ; ದಳಪತಿ ಲೈಫ್‌ನಲ್ಲಿ ಏನಾಗ್ತಿದೆ?
ದಳಪತಿ ವಿಜಯ್ ಇಟ್ಟ ಪ್ರತಿಯೊಂದು ಹೆಜ್ಜೆಯೂ ಸರಿಯಾಗಿಯೇ ಇತ್ತು. ಸಿನಿಮಾದಂತೆ ರಾಜಕೀಯದಲ್ಲೂ ಯಶಸ್ಸು ಸಿಗೋದು ಬಹುತೇಕ ಖಚಿತ ಎನ್ನುವಂತಾಗಿತ್ತು. ವಿಚ್ಚೇದನದ ಸುದ್ದಿ ಹೊರ ಬೀಳುವವರೆಗೂ ವಿಜಯ್ ಹೋದಲ್ಲೆಲ್ಲ ತಮಿಳುನಾಡಿನ ಜನರು ಬೆನ್ನುತ್ತಟ್ಟಿ ಕಳಿಸಿದ್ದೇ ಹೆಚ್ಚು. ಆದರೆ, ಒಂದು ತಪ್ಪು ಹೆಜ್ಜೆ ವಿಜಯ್ ರಾಜಕೀಯ ಕನಸಿಗೆ ಮುಳ್ಳಾಗುತ್ತಿದೆ.
ವಿಜಯ್ ಪತ್ನಿ ಸಂಗೀತ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿಯನ್ನು ಸಲ್ಲಿಸುತ್ತಿದ್ದಾರೆ. ವಿಜಯ್ ಮೇಲಿನ ಅಭಿಪ್ರಾಯಗಳು ಬದಲಾಗುತ್ತಿವೆ. ಮುಂಬರುವ ಚುನಾವಣೆಯಲ್ಲಿ ತಮಿಳುನಾಡಿ ಚುಕ್ಕಾಣಿ ಹಿಡಿಯಬಹುದೆಂಬ ಲೆಕ್ಕಾಚಾರಗಳೆಲ್ಲ ತಲೆ ಕೆಳಗಾಗುತ್ತಿದೆ. ಹೀಗಿದ್ದರೂ, ವಿಜಯ್ ಇತ್ತೀಚೆಗೆ ತ್ರಿಶಾ ಜೊತೆ ಬಹಿರಂಗವಾಗಿಯೇ ಕಾಣಿಸಿಕೊಂಡಿದ್ದು ಜನರನ್ನು ಗೊಂದಲಕ್ಕೆ ತಳ್ಳಿದೆ.

ಪತ್ನಿ ಹಾಗೂ ತನ್ನ ಎದುರಾಳಿಗಳಿಗೆ ತಿರುಗೇಟು ಕೊಡುವುದಕ್ಕೆ ವಿಜಯ್ ಹಾಗೂ ತ್ರಿಶಾ ಇಬ್ಬರೂ ಬಹಿರಂಗವಾಗಿ ಕಾಣಿಸಿಕೊಂಡರೇ? ಈ ಪ್ರಶ್ನೆ ಮೂಡುವುದು ಸಹಜ. ಆದರೆ, ರಾಜಕೀಯವಾಗಿ ಮೊದಲ ಹೆಜ್ಜೆ ಇಡುತ್ತಿರುವ ಈ ಸಂದರ್ಭದಲ್ಲಿ ಈ ನಡೆ ಸರಿಯಿಲ್ಲ ಎಂದೇ ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನೊಂದು ಕಡೆ ಪತ್ನಿ ಸಂಗೀತಾ ಕೌಟುಂಬಿಕ ನ್ಯಾಯಾಲಯದಲ್ಲಿ ತನಗೆ ಉಳಿದುಕೊಳ್ಳುವುದಕ್ಕೆ ಮನೆಯಿಲ್ಲ. ಇಲ್ಲಿವರೆಗೂ ಸಂಸಾರ ನಡೆಸಿದ ವಿಜಯ್ ಮನೆಯಲ್ಲಿ ಉಳಿದುಕೊಳ್ಳುವುದಕ್ಕೆ ಅವಕಾಶ ಕೊಡಬೇಕೆಂದು ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಎಲ್ಲ ಬೆಳವಣಿಗಳ ಮಧ್ಯೆ ವಿಜಯ್ ಹಾಗೂ ಸಂಗೀತಾ ನಡುವೆ ಸಂಧಾನ ನಡೆಯುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ.
ವಿಜಯ್ ಹಾಗೂ ತ್ರಿಶಾ ಒಟ್ಟಿಗೆ ಕಾಣಿಸಿಕೊಂಡಿದ್ದರ ಬಗ್ಗೆ ತಮಿಳುನಾಡು ಚಿತ್ರರಂಗದಲ್ಲಿಯೇ ಅಪಸ್ವರಗಳು ಎದ್ದಿವೆ. ಕೆಲವರು "ರಾಜಕೀಯಕ್ಕೆ ಪ್ರವೇಶಿಸಿದ ಬಳಿಕ ವಿಜಯ್ ಹೀಗೆ ನಡೆದುಕೊಳ್ಳಬಾರದಿತ್ತು, ಇದು ಅವರಿಗೆ ದೊಡ್ಡ ಹಿನ್ನಡೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೆಲವರು ವಿಜಯ್ ಚುನಾವಣೆ ಮುಗಿಯುವವರೆಗೂ ಸುಮ್ಮನಿರುತ್ತಾರೆ. ವಿಚ್ಚೇದನದ ಬಗ್ಗೆ ಮಾತಾಡುವುದಿಲ್ಲವೆಂದು ಅಭಿಪ್ರಾಯ ಪಟ್ಟಿದ್ದರು. ಆದರೆ, ತ್ರಿಶಾ ಜೊತೆ ಕಾಣಿಸಿಕೊಂಡು ಆ ಲೆಕ್ಕಾಚಾರವನ್ನೂ ತಲೆ ಕೆಳಗಾಗುವಂತೆ ಮಾಡಿದ್ದಾರೆ.
ಇನ್ನು ಇಷ್ಟೆಲ್ಲ ನಡೆದ ಬಳಿಕ ವಿಜಯ್ ಹಾಗೂ ತ್ರಿಶಾ ಇಬ್ಬರೂ ಒಟ್ಟಿಗೆ ಲಿವಿಂಗ್ ಟುಗೆದರ್‌ನಲ್ಲಿ ಇದ್ದಾರೆ. ಒಂದು ಖಾಸಗಿ ಹೋಟೆಲ್‌ನಲ್ಲಿ ಇಬ್ಬರೂ ರಹಸ್ಯವಾಗಿ ವಾಸ ಮಾಡುತ್ತಿದ್ದಾರೆ ಎಂದು ಕೆಲವರು ಆರೋಪ ಮಾಡಿದ್ದರು. ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಈ ಚರ್ಚೆ ಈಗ ಬಹಿರಂಗಗೊಂಡಿದೆ. ಕಾರ್ಯಕ್ರಮವೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡು ಗೊಂದಲಕ್ಕೆ ಬಿದ್ದಿದ್ದ ಅಭಿಮಾನಿಗಳಿಗೆ ಸ್ಪಷ್ಟ ಸಂದೇಶವನ್ನು ಕೊಟ್ಟಿದ್ದಾರೆ. ಈಗ ಮುಂದೇನು ಅನ್ನೋ ಪ್ರಶ್ನೆ ಅವರ ಫ್ಯಾನ್ಸ್‌ಗೆ ಕಾಡುತ್ತಿದೆ.

ಇಷ್ಟೆಲ್ಲ ನಡೆಯುತ್ತಿರುವಾಗಲೇ ವಿಜಯ್ ಹಾಗೂ ಸಂಗೀತಾ ಇಬ್ಬರನ್ನು ಸಂಧಾನ ಮಾಡಿಸುವುದಕ್ಕೆ ಎರಡೂ ಕುಟುಂಬಗಳು ಮುಂದೆ ಬಂದಿವೆ ಎನ್ನಲಾಗಿದೆ. ವಿಜಯ್ ಹಾಗೂ ಸಂಗೀತಾ ವಿಚ್ಛೇದನದ ವಿಚಾರ ಕಗ್ಗಂಟಾಗುತ್ತಿದ್ದಂತೆ ಎರಡೂ ಮನೆಯ ಪೋಷಕರು ದಿಟ್ಟ ನಿರ್ಧಾರ ಕೈಗೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಇಬ್ಬರೂ ಮತ್ತೆ ಸೌಹಾರ್ದಯುತವಾಗಿ ಒಟ್ಟಿಗೆ ಸಂಸಾರ ನಡೆಸುವುದಕ್ಕೆ ಸಂಧಾನ ಮಾಡುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಇಬ್ಬರನ್ನೂ ಮಾತುಕತೆ ಮೂಲಕ ಸಮಾಧಾನ ಮಾಡುತ್ತಿದ್ದಾರೆನ್ನುವ ಮಾತು ಕೇಳಿ ಬಂದಿದೆ.
ವಿಜಯ್ ಹಾಗೂ ತ್ರಿಶಾ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುವುದಕ್ಕೂ ಮುನ್ನ ಪತ್ನಿ ಸಂಗೀತಾ ಎಲ್ಲವನ್ನೂ ಮರೆತು ತಮ್ಮ ಮಕ್ಕಳಿಗಾಗಿ ಮತ್ತೆ ಒಟ್ಟಾಗಿ ಬದುಕಲು ಸಿದ್ಧರಿದ್ದರು. ಆದರೆ, ವಿಜಯ್ ಇತ್ತೀಚೆಗಿನ ನಡೆ ಸಂಧಾನಕ್ಕೆ ಸಿದ್ಧರಿಲ್ಲ ಅನ್ನೋದು ಸ್ಪಷ್ಟಪಡಿಸಿದೆ ಎಂದು ತಮಿಳುನಾಡಿನಲ್ಲಿ ಚರ್ಚೆಯಾಗುತ್ತಿದೆ. ಇನ್ನು ಕೆಲ ವಿಜಯ್ ಅಭಿಮಾನಿಗಳು ಇದು ಅವರ ವೈಯಕ್ತಿಕ ವಿಚಾರ ಎಂದರೆ, ಇನ್ನು ಕೆಲವರು ಇದನ್ನು ಒಪ್ಪಿಕೊಳ್ಳಲು ಸಿದ್ದವಿಲ್ಲ. ಹೀಗಾಗಿ ವಿಜಯ್ ಹಾಗೂ ಸಂಗೀತಾ ಪೋಷಕರು ನಿಜಕ್ಕೂ ಸಂಧಾನ ನಡೆಸುವುದಕ್ಕೆ ಮುಂದಾಗಿದ್ದರೆ, ಅದು ಯಶಸ್ಸಾಗಲಿ, ತಮ್ಮ ನಟ ರಾಜಕೀಯವಾಗಿಯೂ ಬೆಳೆಯಲಿ ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











