Robo Shankar: ಸೆಟ್‌ನಲ್ಲಿ ಕುಸಿದು ಬಿದ್ದಿದ್ದ ಹಾಸ್ಯ ನಟ ರೋಬೋ ಶಂಕರ್ ನಿಧನ; ಕಂಬನಿ ಮಿಡಿದ ಚಿತ್ರರಂಗ
ತಮಿಳು ಚಿತ್ರರಂಗದ ಜನಪ್ರಿಯ ಹಾಸ್ಯ ನಟ ರೋಬೋ ಶಂಕರ್ ಇಂದು (ಸೆಪ್ಟೆಂಬರ್ 18) ನಿಧನರಾಗಿದ್ದಾರೆ. ರೋಬೋ ಶಂಕರ್ ಅವರಿಗೆ 46 ವರ್ಷ ವಯಸ್ಸಾಗಿತ್ತು. ನಿನ್ನೆ ಶೂಟಿಂಗ್ ಸೆಟ್‌ನಲ್ಲಿದ್ದ ರೋಬೋ ಶಂಕರ್ ದಿಢೀರನೇ ಕುಸಿದು ಬಿದ್ದಿದ್ದರು. ಅವರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಗಿತ್ತು. ವೈದ್ಯರು ಅವರ ಸ್ಥಿತಿ ಗಂಭೀರವಾಗಿದ್ದರಿಂದ ಐಸಿಯುಗೆ ಶಿಫ್ಟ್ ಮಾಡಿದ್ದರು. ಚಿಕಿತ್ಸೆ ಫಲಿಸದೆ ಇಂದು ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ರೋಬೋ ಶಂಕರ್ ತಮಿಳಿನ ಜನಪ್ರಿಯ ನಟರ ಮೆಚ್ಚಿನ ನಟನಾಗಿದ್ದರು. ಧನುಷ್ ನಟನೆಯ 'ಮಾರಿ', 'ಮಾರಿ 2', 'ವಿಶ್ವಾಸಂ', 'ಕೋಬ್ರಾ'ದಂತಹ ಸಿನಿಮಾಗಳಲ್ಲಿ ರೋಬೋ ಶಂಕರ್ ನಟಿಸಿದ್ದಾರೆ. ದಿಢೀರನೇ ರೋಬೋ ಶಂಕರ್ ನಿಧನ ತಮಿಳು ಚಿತ್ರರಂಗಕ್ಕೆ ದೊಡ್ಡ ಆಘಾತವಾಗಿದೆ. ಇವರ ನಿಧನದ ಸುದ್ದಿಯನ್ನು ಕೇಳಿದ ಕೂಡಲೇ ತಾರೆಯರು ಸಂತಾಪ ಸೂಚಿಸುತ್ತಿದ್ದಾರೆ.

ಸಿನಿಮಾವೊಂದರ ಚಿತ್ರೀಕರಣದಲ್ಲಿ ರೋಬೋ ಶಂಕರ್ ಭಾಗಿಯಾಗಿದ್ದರು. ಶೂಟಿಂಗ್ ಸೆಟ್ಟಿನಲ್ಲಿ ಇದ್ದಕ್ಕಿದ್ದ ಹಾಗೆ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡುತ್ತಿದ್ದರು. ಆದರೂ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣಲಿಲ್ಲ. ಚಿಕಿತ್ಸೆ ಫಲಿಸದೇ ರೋಬೋ ಶಂಕರ್ ಇಂದು ರಾತ್ರಿ 8.30ಕ್ಕೆ ಇಹಲೋಕ ತ್ಯಜಿಸಿದ್ದಾರೆ.
ರೋಬೋ ಶಂಕರ್ ಕೆಲವು ವರ್ಷಗಳ ಹಿಂದೆ ಜಾಂಡೀಸ್‌ನಿಂದ ಬಳಲುತ್ತಿದ್ದರು. ಹೀಗಾಗಿ ಕೆಲವು ವರ್ಷಗಳ ಕಾಲ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಜಾಂಡೀಸ್‌ನಿಂದ ಚೇತರಿಸಿಕೊಂಡ ಬಳಿಕ ಮತ್ತೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದಕ್ಕೆ ಆರಂಭಿಸಿದ್ದರು. ಜಾಂಡೀಸ್ ಬಳಿಕ ರೋಬೋ ಶಂಕರ್ ಸಂಪೂರ್ಣವಾಗಿ ಬದಲಾಗಿದ್ದರು. ಅವರು ತುಂಬಾನೇ ಸಣ್ಣಗಾಗಿದ್ದರು. ಹೀಗಾಗಿ ರೋಬೋ ಶಂಕರ್ ಕುಟುಂಬ ಅವರ ಆರೋಗ್ಯದ ಬಗ್ಗೆ ಹೆಚ್ಚು ಕಾಳಹಿ ವಹಿಸಿದ್ದರು.
ಆರೋಗ್ಯ ಸರಿಯಿಲ್ಲದ ಕಾರಣ ತಮಿಳಿನಲ್ಲಿ ಒಳ್ಳೊಳ್ಳೆ ಸಿನಿಮಾಗಳನ್ನು ಕೈ ಬಿಟ್ಟಿದ್ದರು. ಬಳಿಕ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದ್ದರು. ಆ ವೇಳೆ ಅವರ ದೇಹದಲ್ಲಾದ ಬದಲಾವಣೆಯನ್ನು ಕಂಡು ಅಭಿಮಾನಿಗಳೇ ಆತಂಕ ವ್ಯಕ್ತಪಡಿಸಿದ್ದರು. ಕೆಲವು ದಿನಗಳ ಬಳಿಕ ಸಹಜ ಸ್ಥಿತಿಗೆ ಮರಳಿದ್ದರು. ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಕ್ಕೆ ಆರಂಭಿಸಿದ್ದರು. ರೋಬೋ ಶಂಕರ್ ಮತ್ತೆ ಸರಿ ಹೋದರು ಎಂದೇ ಭಾವಿಸಲಾಗಿತ್ತು.
ರೋಬೋ ಶಂಕರ್ ಯುನಿವರ್ಸಲ್ ಸ್ಟಾರ್ ಕಮಲ್ ಹಾಸನ್ ಅವರ ಅಪ್ಪಟ ಅಭಿಮಾನಿಯಾಗಿದ್ದರು. ಅವರ ಸಿನಿಮಾಗಳನ್ನು ಬಿಡದೆ ಕುಟುಂಬ ಸಮೇತ ವೀಕ್ಷಿಸುತ್ತಿದ್ದರು. 'ಇಂಡಿಯನ್' ಸಿನಿಮಾ ಬಿಡುಗಡೆಯಾದ ಸಮಯದಲ್ಲಿ ಇಡೀ ಕುಟುಂಬ ಹಾಗೂ ಅಭಿಮಾನಿಗಳ ಜೊತೆ ಡೋಲು ವಾದ್ಯಗಳ ಸಮೇತ ಥಿಯೇಟರ್‌ಗೆ ಎಂಟ್ರಿ ಕೊಟ್ಟಿದ್ದರು. ಇಷ್ಟೇ ಅಲ್ಲದೆ, ಸೋಶಿಯಲ್ ಮೀಡಿಯಾದಲ್ಲೂ ಪತ್ನಿ ಹಾಗೂ ಕುಟುಂಬದೊಂದಿಗೆ ಕಾಣಿಸಿಕೊಳ್ಳುತ್ತಿದ್ದರು.
ಆರಾಮಾಗಿಯೇ ಇದ್ದ ರೋಬೋ ಶಂಕರ್ ಶೂಟಿಂಗ್ ಸ್ಪಾಟ್‌ನಲ್ಲಿ ಕುಸಿದು ಬಿದ್ದಿದ್ದರು. ಚಿಕಿತ್ಸೆ ಫಲಿಸದೆ ಇಂದು ಕೊನೆಯುಸಿರೆಳೆದಿದ್ದಾರೆ. ಇವರ ನಿಧನಕ್ಕೆ ಕಮಲ್ ಹಾಸನ್ ಕಂಬನಿ ಮಿಡಿದಿದ್ದಾರೆ. ಇವರೊಂದಿಗೆ ಖುಷ್ಬೂ ಸುಂದರ್, ಕಾರ್ತಿ, ಸಿಮ್ರಾನ್, ಸಿಂಬು ಸೇರಿದಂತೆ ತಮಿಳು ಚಿತ್ರರಂಗದ ಗಣ್ಯರು ರೋಬೋ ಶಂಕರ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.


Click it and Unblock the Notifications











