ವೇದಿಕೆ ಮೇಲೆ ನಿರೂಪಕಿಗೆ ಹಾರ ಹಾಕಿದ ತಮಿಳು ನಟ: ಉಗಿದು ಆಕ್ರೋಶ ಹೊರ ಹಾಕಿದ ನೆಟ್ಟಿಗರು!
ಸಿನಿಮಾದ ಕಾರ್ಯಕ್ರಮವೊಂದರಲ್ಲಿ ನಿರೂಪಕಿಯೊಂದಿಗೆ ತಮಿಳು ನಟ ಕೂಲ್ ಸುರೇಶ್ ಕೆಟ್ಟದಾಗಿ ವರ್ತಿಸಿದ್ದಾರೆ. ಈ ವರ್ತನೆಯನ್ನು ಜನರು ಕಂಡಿಸಿದ್ದು, ಸಿನಿಮಾದ ಆಡಿಯೋ ಕಾರ್ಯಕ್ರಮದಲ್ಲಿ ನಡೆದ ವಿವಾದಕ್ಕೆ ಎಲ್ಲಡೆ ವಿರೋಧ ವ್ಯಕ್ತವಾಗುತ್ತಿದೆ.
ತಮಿಳು ಸಿನಿಮಾಗಳಲ್ಲಿ ಕಾಮಿಡಿ ಹಾಗೂ ಹಾಸ್ಯ ಪಾತ್ರಗಳಲ್ಲಿ ಹೆಚ್ಚಾಗಿ ಕೂಲ್ ಸುರೇಶ್ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗೆ ಎಲ್ಲಾ ನಟರ ಸಿನಿಮಾಗಳನ್ನು ಕೂಲ್ ಸುರೇಶ್ ತಮ್ಮದೇ ಸ್ಟೈಲ್‌ನಲ್ಲಿ ಯೂಟ್ಯೂಬ್‌ನಲ್ಲಿ ಪ್ರಮೋಟ್ ಮಾಡುತ್ತಿದ್ದಾರೆ. ಇದರಿಂದ ಹಲವು ಬಾರಿ ಟ್ರೋಲ್‌ಗೆ ಒಳಗಾಗಿದ್ದೂ ಇದೆ.

ಗಣೇಶ್ ಚತುರ್ಥಿಯಂದು 'ಸರಕ್ಕು' ಅನ್ನುವ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಕೂಲ್ ಸುರೇಶ್ ಭಾಗವಹಿಸಿದ್ದರು. ಈ ವೇಳೆ ಮಹಿಳಾ ನಿರೂಪಕಿಯೊಂದಿಗೆ ಕೂಲ್ ಸುರೇಶ್ ವರ್ತಿಸಿದ ರೀತಿಗೆ ಎಲ್ಲರಿಂದಲೂ ವಿರೋಧ ವ್ಯಕ್ತವಾಗಿದೆ. ಅಷ್ಟಕ್ಕೂ ಏನಿದು ಘಟನೆ? ಯಾರೀ ನಟ? ತಿಳಿಯೋಕೆ ಮುಂದೆ ಓದಿ..
ಯಾರೀ ಕೂಲ್ ಸುರೇಶ್ ?
ತಮಿಳು ನಟ ಪ್ರಶಾಂತ್ ನಟನೆಯ 'ಚಾಕೊಲೇಟ್' ಸಿನಿಮಾ ಮೂಲಕ ಕೂಲ್ ಸುರೇಶ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಆ ಬಳಿಕ ಕೂಲ್ ಸುರೇಶ್ ನಗೆಟಿವ್ ಹಾಗೂ ಕಾಮಿಡಿ ಪಾತ್ರಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಂಡಿದ್ದರು. ಕೆಲವು ಸಿನಿಮಾಗಳಲ್ಲಿ ತಮ್ಮ ಪಾತ್ರದ ಮೂಲಕ ಗಮನ ಕೂಡ ಸೆಳೆದಿದ್ದರು. ಕ್ರಮೇಣ ಕೂಲ್ ಸುರೇಶ್‌ಗೆ ಸಿನಿಮಾಗಳಲ್ಲಿ ಅವಕಾಶಗಳು ಕಡಿಮೆ ಆದವು.
ಕೂಲ್ ಸುರೇಶ್ ವರ್ತನೆಯಿಂದ ತಮಿಳು ಸಿನಿಮಾ ಮಂದಿ ಬೇಸತ್ತು ಹೋಗಿದ್ದರು. ಹೀಗಾಗಿ ನಿರ್ದೇಶಕರು ಈ ನಟನನ್ನು ತಮ್ಮ ಸಿನಿಮಾಗಳಲ್ಲಿ ಹಾಕಿಕೊಳ್ಳುವುದಕ್ಕೆ ಹಿಂದೇಟು ಹಾಕಿದ್ದರು. ಈಗ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ಮಾತ್ರ ನಟ ಕೂಲ್ ಸುರೇಶ್ ನಟಿಸುತ್ತಿದ್ದಾರೆ.
ನಿರೂಪಕಿಯೊಂದಿಗೆ ಕೆಟ್ಟ ವರ್ತನೆ
ಇತ್ತೀಚೆಗೆ ಕೂಲ್ ಸುರೇಶ್ ಯೂಟ್ಯೂಬ್ ಚಾನೆಲ್‌ನಲ್ಲಿ ಬೇರೆ ನಟರ ಸಿನಿಮಾಗಳನ್ನು ಪ್ರಮೋಟ್ ಮಾಡುವುದಕ್ಕೆ ಮುಂದಾಗಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳನ್ನು ಇಂಪ್ರೆಸ್ ಮಾಡಲು ಹರಸಾಹಸ ಮಾಡುತ್ತಿದ್ದಾರೆ. ಈ ವಿಡಿಯೋ ನೋಡಿದ ಬಳಿಕ ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ. ಹಣಕ್ಕೋಸ್ಕರ ಇಷ್ಟೆಲ್ಲ ಮಾಡುತ್ತಿದ್ದಾರೆಂದು ಟ್ರೋಲ್ ಕೂಡ ಆಗಿದ್ದರು.
ಇತ್ತೀಚೆಗೆ ಮನ್ಸೂರ್ ಅಲಿ ಖಾನ್ ನಟಿಸುತ್ತಿರುವ 'ಸರಕ್ಕು' ಅನ್ನೋ ಸಿನಿಮಾದ ಆಡಿಯೋ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ ವೇದಿಕೆ ಮೇಲೆ ನಿರೂಪಕಿಯ ಕುತ್ತಿಗೆಗೆ ಹಾರ ಹಾಕಿ ಸೀನ್ ಕ್ರಿಯೇಟ್ ಮಾಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕೂಲ್ ಸುರೇಶ್ ವಿರುದ್ಧ ಕಿಡಿಕಾರಿದ್ದರು.
ವಿವಾದ ಬಳಿಕ ಕ್ಷಮೆ ಕೇಳಿದ ನಟ
ನಿರೂಪಕಿಯೊಂದಿಗೆ ನಟ ಕೂಲ್ ಸುರೇಶ್ ವರ್ತನೆಯನ್ನು ವೇದಿಕೆ ಮೇಲೆ ಇದ್ದವರೇ ಖಂಡಿಸಿದ್ದರು. ಸಿನಿಮಾದ ನಟ ಮನ್ಸೂರ್ ಅಲಿ ಖಾನ್ ಕೂಡ ವಿರೋಧ ವ್ಯಕ್ತಪಡಿಸಿದ್ದು, ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದಿದ್ದರು. ಆ ನಂತರ ಕೂಲ್ ಸುರೇಶ್ ವೇದಿಕೆ ಮೇಲೆ ಕ್ಷಮೆಯಾಚಿಸಿದರು.
ಕೂಲ್ ಸುರೇಶ್ ವರ್ತನೆಯ ವಿರುದ್ಧ ನೆಟ್ಟಗರು ಕೂಡ ಕಿಡಿಕಾರಿದರು. "ನಿರೂಪಕಿಯೊಂದಿಗೆ ಕೂಲ್ ಸುರೇಶ್ ವರ್ತನೆ ಖಂಡನೀಯ" ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. "ನಿರ್ಮಾಪಕರು ಪ್ರಚಾರಕ್ಕೆ ಈತನನ್ನು ಕರೆಯುವುದನ್ನು ನಿಲ್ಲಿಸಬೇಕು" ಎಂದು ನೆಟ್ಟಿಗರು ಹೇಳಿದ್ದಾರೆ.


Click it and Unblock the Notifications











