ನಾಯಕಿ ಕೈಯಲ್ಲಿ ಕಾಂಡೋಮ್.. ದೇವದಾಸನಾದ 'ಕೂಲಿ' ನಿರ್ದೇಶಕ;'ಡಿಸಿ' ರಗಡ್ ಟೈಟಲ್ ಟೀಸರ್
ತಮಿಳು ಚಿತ್ರರಂಗದ ಬಹುಬೇಡಿಕೆಯ ನಿರ್ದೇಶಕ ಲೋಕೇಶ್ ಕನಕರಾಜ್ ಈಗ ಹೀರೋ ಆಗಿದ್ದಾರೆ. ಇತ್ತೀಚೆಗೆ ಸೂಪರ್‌ಸ್ಟಾರ್ ರಜನಿಕಾಂತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದ 'ಕೂಲಿ' ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಈ ಸಿನಿಮಾ ಬಾಕ್ಸಾಫೀಸ್ ಹೇಳಿಕೊಳ್ಳುವಷ್ಟು ಮೆಚ್ಚುಗೆ ಪಡೆಯದೇ ಹೋದರೂ ಲೋಕೇಶ್ ಕನಕರಾಜ್ ಸಿನಿಮಾಗೆ ಕ್ರೇಜ್ ಮಾತ್ರ ಕಮ್ಮಿಯಾಗಿಲ್ಲ. ತಮಿಳು ಸಿನಿಮಾ ಪ್ರಿಯರು ಇಂದಿಗೂ 'ಕೂಲಿ' ನಿರ್ದೇಶಕನ ಸಿನಿಮಾಗಾಗಿ ಎದುರು ನೋಡುತ್ತಿದ್ದಾರೆ.
ಇಲ್ಲಿವರೆಗೂ ಕಾರ್ತಿ, ದಳಪತಿ ವಿಜಯ್, ಕಮಲ್ ಹಾಸನ್, ರಜನಿಕಾಂತ್ ಅಂತಹ ದಿಗ್ಗಜರಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಒಂದೆರಡು ಸಿನಿಮಾಗಳು ಬಿಟ್ಟರೆ, ಲೋಕೇಶ್ ಕನಕರಾಜ್ ನಿರ್ದೇಶಿಸಿದ ಸಿನಿಮಾಗಳಲ್ಲೆವೂ ಮೆಗಾ ಹಿಟ್ ಆಗಿವೆ. ತನ್ನ ವೃತ್ತಿ ಬದುಕಿನಲ್ಲಿ ಯಶಸ್ಸಿನ ಉತ್ತುಂಗದಲ್ಲಿ ಇರುವಾಗಲೇ ಆಕ್ಟಿಂಗ್ ಕಡೆಗೆ ಮುಖ ಮಾಡಿದ್ದಾರೆ.

ತಮಿಳಿನ ಮತ್ತೊಬ್ಬ ಪ್ರಾಮಿಸಿಂಗ್ ಡೈರೆಕ್ಟರ್ ಅರುಣ್ ಮಾಥೇಶ್ವರನ್ ನಿರ್ದೇಶನದ ಸಿನಿಮಾದಲ್ಲಿ ಚೊಚ್ಚಲ ಬಾರಿಗೆ ನಾಯಕನಾಗಿದ್ದಾರೆ. ಲೋಕೇಶ್ ಕನಕರಾಜ್ ಹೀರೋ ಆಗಿರುವ 'ಡಿಸಿ' ಸಿನಿಮಾವನ್ನು ಸನ್ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿದ್ದರೇ, ಅನಿರುದ್ಧ್ ಸಂಗೀತ ನೀಡುತ್ತಿದ್ದಾರೆ. ಸದ್ಯ ಈ ಸಿನಿಮಾದ ಟೈಟಲ್ ಟೀಸರ್ ರಿಲೀಸ್ ಆಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.
ಲೋಕೇಶ್ ಕನಕರಾಜ್ ನಿರ್ದೇಶಕರಾಗಿ ಯಶಸ್ಸು ಕಂಡಿದ್ದಾರೆ. ಈಗ ನಟರಾಗಿ ಗೆಲ್ಲುತ್ತಾರಾ ಅನ್ನೋ ಕುತೂಹಲವಿದೆ. ಈ ಸಿನಿಮಾಗೂ ಮುನ್ನ ಶ್ರುತಿ ಹಾಸನ್ ಅವರ ಒಂದು ಆಲ್ಬಂ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದರು. ಈಗ ಅರುಣ್ ಮಾಥೇಶ್ವರನ್ ನಿರ್ದೇಶನದ 'DC' ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ. ಪಂಜಾಬಿ ಹಾಗೂ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿರುವ ವಾಮಿಕಾ ಗಬ್ಬಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
'ಡಿಸಿ' ಸಿನಿಮಾ ಟೈಟಲ್ ಟೀಸರ್ ಲೋಕೇಶ್ ಕನಕರಾಜ್ ಲುಕ್ ಅಂಡ್ ಮ್ಯಾನರಿಸಂ ಅನ್ನು ರಿವೀಲ್ ಆಗಿದೆ. ಲೋಕೇಶ್ ನಾಯಕನಾಗಿ ನಟಿಸುತ್ತಿರುವ ಚೊಚ್ಚಲ ಸಿನಿಮಾದಲ್ಲಿ ದೇವದಾಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಕ್ತಸಿಕ್ತವಾದ ಮುಖ-ಕೈಗಳು, ಆ ಕೈಗಳಲ್ಲಿ ಚಾಕು ಹಿಡಿದು ಮಾಸ್ ಲುಕ್ ಕೊಟ್ಟಿದ್ದಾರೆ. ಅದೇ ಇನ್ನೊಂದು ಕಡೆ ನಟಿ ವಾಮಿಕಾ ಗಬ್ಬಿ ಕೈಯಲ್ಲಿ ಕಾಂಡೋಮ್ ಹಿಡಿದು ನಡೆದು ಬರುತ್ತಿರುವ ದೃಶ್ಯವಿದೆ. ಈ ಎರಡೂ ದೃಶ್ಯಗಳು ಪ್ರೇಕ್ಷಕರಲ್ಲಿ ಕುತೂಹಲವನ್ನಂತೂ ಸೃಷ್ಟಿಸಿವೆ.

ಲೋಕೇಶ್ ಕನಕರಾಜ್ ಚೊಚ್ಚಲ ಬಾರಿಗೆ 'ಮಾನಗರಂ' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದರು. ಹಾಗೇ ಕಾರ್ತಿ ನಟನೆಯ 'ಕೈದಿ' ಸಿನಿಮಾ ಸಿಕ್ಕಾಪಟ್ಟೆ ಜನಪ್ರಿಯತೆ ತಂದು ಕೊಟ್ಟಿತ್ತು. ಅಲ್ಲಿಂದ ತಮಿಳಿನ ದಿಗ್ಗಜರ ಗಮನ ಸೆಳೆದರು. ದಳಪತಿ ವಿಜಯ್‌ಗೆ ನಟಿಸಿದ 'ಮಾಸ್ಟರ್' ಹಾಗೂ ಕಮಲ್ ಹಾಸನ್‌ಗೆ ಆಕ್ಷನ್ ಕಟ್ ಹೇಳಿದ್ದ 'ವಿಕ್ರಮ್' ಮೆಗಾ ಬ್ಲಾಸ್ಟರ್ ಆಗಿತ್ತು. ಆದರೆ, ನಂತರ ನಿರ್ದೇಶಿಸಿದ 'ಲಿಯೋ' ಹಾಗೂ 'ಕೂಲಿ' ಎರಡೂ ಸಿನಿಮಾಗಳು ಸೋಲುಂಡವು. ಹೀಗಾಗಿ ವೃತ್ತಿ ಜೀವನದಲ್ಲಿ ಕೊಂಚ ಮಟ್ಟಿಗೆ ಹಿನ್ನಡೆ ಅನುಭವಿಸಿದರೂ ಕ್ರೇಜ್ ಮಾತ್ರ ಕಮ್ಮಿಯಾಗಿಲ್ಲ.
ಇದೇ ಬೆನ್ನಲ್ಲೇ ಲೋಕೇಶ್ ಕನಕರಾಜ್ ನಟನೆಗೆ ಇಳಿದಿದ್ದಾರೆ. 'ಡಿಸಿ' ಟೈಟಲ್ ಟೀಸರ್ ನೋಡಿ ಪ್ರೇಕ್ಷಕರು ಇಷ್ಟ ಪಟ್ಟಿದ್ದಾರೆ. ಈ ಸಿನಿಮಾದ ಶೂಟಿಂಗ್ ಶುರುವಾಗಿದ್ದು, ಮುಂದಿನ ವರ್ಷ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆಯಿದೆ. ಸದ್ಯ ಲೋಕೇಶ್ ಕನಕರಾಜ್ ನಾಯಕನಾಗಿ ಯಶಸ್ವಿಯಾಗುತ್ತಾರಾ? ಎಂದು ನೋಡಬೇಕಿದೆ.


Click it and Unblock the Notifications











