ಧನುಷ್ ಹಾಗೂ ಐಶ್ವರ್ಯಾ ವಿಚ್ಛೇದನ ಕಾರಣ ತಿಳಿಸಿದ ಆಪ್ತ ಗೆಳೆಯ: ಯಾಕೀ ನಿರ್ಧಾರ?
ರಜನಿಕಾಂತ್ ಪುತ್ರಿ ಐಶ್ವರ್ಯಾ ಹಾಗೂ ಅಳಿಯ ಧನುಷ್ 18 ವರ್ಷದ ದಾಂಪತ್ಯಕ್ಕೆ ತಿಲಾಂಜಲಿ ಇಟ್ಟಿದ್ದಾರೆ. ದಿಢೀರನೇ ಇಂತಹದ್ದೊಂದು ನಿರ್ಧಾರಕ್ಕೆ ಬಂದಿದ್ದಕ್ಕೆ ಧನುಷ್ ಹಾಗೂ ರಜನಿಕಾಂತ್ ಅಭಿಮಾನಿಗಳು ಶಾಕ್ ಆಗಿದ್ದಾರೆ. ಆದರೆ, ಅವರನ್ನು ಹತ್ತಿರದಿಂದ ಬಲ್ಲವರಿಗೆ ಇದು ಶಾಕಿಂಗ್ ನ್ಯೂಸ್ ಆಗಿರಲಿಲ್ಲವೆಂದು ಆಪ್ತರೊಬ್ಬರು ಕಾರಣವನ್ನು ಬಹಿರಂಗ ಪಡಿಸಿದ್ದಾರೆ.
ಧನುಷ್ ಹಾಗೂ ಐಶ್ವರ್ಯಾ ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಬೇರೆಯಾಗುತ್ತಿರುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಇಬ್ಬರಿಗೂ ಯಾತ್ರ ಹಾಗೂ ಲಿಂಗ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಒಬ್ಬರನ್ನೊಬ್ಬರು ಇಷ್ಟಪಟ್ಟು ವಿವಾಹವಾಗಿದ್ದರು ವಿಚ್ಛೇದನ ನೀಡುವಂತಹ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದು ಯಾಕೆ? ಪ್ರಶ್ನೆಗೆ ಇಬ್ಬರನ್ನೂ ಹತ್ತಿರದಿಂದ ಬಲ್ಲ ಗೆಳಯರೊಬ್ಬರು ಕಾರಣವನ್ನು ಬಹಿರಂಗ ಪಡಿಸಿದ್ದಾರೆ.

ಧನುಷ್- ಐಶ್ವರ್ಯಾ ವಿಚ್ಛೇದನ
ಧನುಷ್ ಹಾಗೂ ಐಶ್ವರ್ಯಾ ಇಬ್ಬರ ನಡುವಿನ ಸಂಬಂಧ ಬಹಳ ದಿನಗಳ ಹಿಂದೆನೇ ಹದಗೆಟ್ಟಿತ್ತು. ಇಬ್ಬರೂ ಈ ಸಂಬಂಧವನ್ನು ಉಳಿಸಿಕೊಳ್ಳಲು ಶತಪ್ರಯತ್ನ ಪಟ್ಟಿದ್ದಾರೆಂದು ತಿಳಿಸಿದ್ದಾರೆ. " ಧನುಷ್ ಒಬ್ಬ ಕೆಲಸಗಾರ. ಯಾವಾಗಲೂ ಕೆಲಸ ಅಂತಾನೇ ಇರುತ್ತಾರೆ. ಅವರನ್ನು ಹತ್ತಿರದಿಂದ ಬಲ್ಲವರಿಗೆ ಅವರು ಎಷ್ಟು ಕಷ್ಟ ಪಡುತ್ತಾರೆಂಬುದು ಗೊತ್ತಿದೆ. ಕೆಲಸದ ನಿಮಿತ್ತ ನಗರದಿಂದ ನಗರಕ್ಕೆ ಪ್ರವಾಸ ಮಾಡುತ್ತಾರೆ. ಹೊರಗಡೆ ಸಿನಿಮಾ ಶೂಟಿಂಗ್‌ಗೆ ಹೋಗುತ್ತಾರೆ. ಇದರಿಂದ ಅವರ ಕೌಟುಂಬಿಕ ಜೀವನಕ್ಕೆ ಕುತ್ತು ತಂದುಕೊಂಡಿದ್ದಾರೆ." ಎಂದು ಇಬ್ಬರಿಗೂ ಆಪ್ತನಾಗಿರುವ ಗೆಳೆಯ ಇಂಡಿಯಾ ಟುಗೆ ಮಾಹಿತಿ ನೀಡಿದ್ದಾನೆ.

ಪತ್ನಿ ಜೊತೆ ಜಗಳ: ಹೊಸ ಚಿತ್ರಕ್ಕೆ ಸಹಿ
ಧನುಷ್ ಹಾಗೂ ಐಶ್ವರ್ಯಾ ಇಬ್ಬರಲ್ಲೂ ಮನಸ್ತಾಪವಿರುವುದು ಇದೇ ಮೊದಲೇನಲ್ಲ. ಅಲ್ಲದೆ ಇತ್ತೀಚೆಗೆ ಶುರುವಾಗಿದ್ದೂ ಅಲ್ಲವೆನ್ನುವುದನ್ನು ಆಪ್ತ ಗೆಳೆಯ ಬಹಿರಂಗ ಪಡಿಸಿದ್ದಾನೆ. " ಪತ್ನಿ ಐಶ್ವರ್ಯಾ ಜೊತೆ ಏನಾದರೂ ಮನಸ್ತಾಪವೆದ್ದರೆ, ಧನುಷ್ ಹೊಸ ಸಿನಿಮಾ ಸಹಿ ಮಾಡುತ್ತಿದ್ದರು. ಬಿದ್ದು ಹೋಗುತ್ತಿರುವ ಸಂಬಂಧದಿಂದ ದೂರ ಉಳಿಯಲು ಅವರು ತಮ್ಮ ಕೆಲಸವನ್ನು ಬಳಸಿಕೊಳ್ಳುತ್ತಿದ್ದರು. ಇದು ಅವರಿಬ್ಬರ ಸಂಬಂಧಕ್ಕೆ ಕುತ್ತು ತಂದು ಬಿಟ್ಟಿತು." ಎಂದು ಇಂಡಿಯಾ ಟು ಡೇ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

ಬಹಳ ಹಿಂದೆನೇ ವಿಚ್ಛೇದನದ ಬಗ್ಗೆ ಚರ್ಚೆ
ಧನುಷ್ ಸಿನಿಮಾ ಜೊತೆ ಪ್ರೊಡಕ್ಷನ್ ಹೌಸ್‌ಗೂ ಕೈ ಹಾಕಿದ್ದಾರೆ. ಇವರ ನಿರ್ಮಾಣ ಸಂಸ್ಥೆಯಲ್ಲಿ ಸಿನಿಮಾಗಳು ಸೆಟ್ಟೇರುತ್ತಿವೆ. ಓಟಿಟಿ ವೇದಿಕೆಯನ್ನು ಬಳಸಿಕೊಂಡು ಹೊಸ ಪ್ರಾಜೆಕ್ಟ್‌ಗಳನ್ನು ಕೈಗೆತ್ತಿಕೊಂಡಿದ್ದರು. ಕಳೆದ ಆರು ತಿಂಗಳು ಇವರಿಬ್ಬರಿಗೂ ತುಂಬಾನೇ ಸಮಸ್ಯೆಯಾಗಿದೆ. ಹೀಗಾಗಿ ಇಬ್ಬರು ವಿಚ್ಛೇದನ ನೀಡುವ ಬಗ್ಗೆ ಹಲವು ದಿನಗಳಿಂದ ಚರ್ಚೆ ಮಾಡುತ್ತಿದ್ದರು." ಎಂದು ತಿಳಿಸಿದ್ದಾರೆ.

ವಿಚ್ಛೇದನ ನೀಡಲು ಧನುಷ್ ಪ್ಲ್ಯಾನ್
"ಧನುಷ್ ಬಾಲಿವುಡ್ ಸಿನಿಮಾ 'ಅತರಂಗಿ ರೇ' ಬಿಡುಗಡೆ ಸಜ್ಜಾಗಿತ್ತು. ಹೀಗಾಗಿ ವೈಯಕ್ತಿಕ ಜೀವನದ ಬಗ್ಗೆ ನೋವಿದ್ದರೂ ಧನುಷ್ ಎಲ್ಲಿಯೂ ತೋರಿಸಿಕೊಂಡಿಲ್ಲ. 'ಅತರಂಗಿ ರೇ' ಸಿನಿಮಾದ ಪ್ರಚಾರ ಮುಗಿಯುವವರೆಗೂ ವಿಚ್ಛೇದನ ಬಗ್ಗೆ ಪ್ರಸ್ತಾಪ ಮಾಡಲಿಲ್ಲ. ಈ ವಿಷಯವನ್ನು ತನ್ನೊಳಗೆ ಇಟ್ಟುಕೊಳ್ಳಲು ನಿರ್ಧಾರಿಸಿದ್ದರು. 'ಅತರಂಗಿ ರೇ' ಸಿನಿಮಾ ಬಿಡುಗಡೆ ಬಳಿಕ ವಿಚ್ಛೇದನ ಸುದ್ದಿ ಅನೌನ್ಸ್ ಮಾಡಿದ್ದಾರೆ." ಎಂದು ಮಾಹಿತಿ ನೀಡಿದ್ದಾರೆ.

ಮಕ್ಕಳ ಭವಿಷ್ಯ ಕಟ್ಟಲು ಐಶ್ವರ್ಯಾ ಸಜ್ಜು
"ಇನ್ನೊಂದು ಕಡೆ ಧನುಷ್ ಪತ್ನಿ ಐಶ್ವರ್ಯಾ ಕೂಡ ಫಿಟ್ನೆಸ್ ಬಗ್ಗೆ ಗಮನ ಹರಿಸಿದ್ದರು. ಚಾರಿಟಿ ಕೆಲಸಗಳು, ಸ್ರೀ ಸಬಲೀಕರಣ ಯೋಜನೆಗಳ ಮೇಲೆ ಕೆಲಸ ಮಾಡುತ್ತಿದ್ದರು. ಹಾಗೇ ಇಬ್ಬರು ಗಂಡು ಮಕ್ಕಳು ಯಾತ್ರ ಹಾಗೂ ಲಿಂಗ ಭವಿಷ್ಯ ರೂಪಿಸುವ ಕೆಲಸಕ್ಕೆ ಮುಂದಾಗಿದ್ದರು. ಇಬ್ಬರೂ ಮಕ್ಕಳಿಗೆ ಸಹ ಪೋಷಕರಾಗಿ ಇರುತ್ತಾರೆ. ಮುಂದಿನ ದಿನಗಳಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದರೂ ಅಚ್ಚರಿಯಿಲ್ಲ." ಎಂದು ಧನುಷ್ ಹಾಗೂ ಐಶ್ವರ್ಯಾ ಆಪ್ತ ಮಾಧ್ಯಮಕ್ಕೆ ತಿಳಿಸಿದ್ದಾರೆ.


Click it and Unblock the Notifications











