ನಯನತಾರಾ- ವಿಘ್ನೇಶ್ ಶಿವನ್ ಮದುವೆ ಆಗಲು ಕಾರಣ ಧನುಷ್: ವಿಘ್ನೇಶ್ ಬಿಚ್ಚಿಟ್ಟ ಗುಟ್ಟೇನು?
ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ನಯನತಾರಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಿಂದ ಪತಿ ವಿಘ್ನೇಶ್ ಶಿವನ್‌ರನ್ನು ಅನ್‌ಫಾಲೋ ಮಾಡಿದ್ದರು. ಇಲ್ಲಿಂದ ನಯನತಾರಾ ಹಾಗೂ ಪತಿ ವಿಘ್ನೇಶ್ ಶಿವನ್ ವಿಚ್ಛೇದನದ ಬಗ್ಗೆ ಗಾಳಿ ಸುದ್ದಿ ಹಬ್ಬಿತ್ತು. ಬಳಿಕ ನಯನತಾರಾ ಮತ್ತೆ ಪತಿಯನ್ನು ಫಾಲೋ ಮಾಡಿದ ಬಳಿಕ ಈ ಸುದ್ದಿಗೆ ತೆರೆಬಿದ್ದಿತ್ತು.
ನಯನತಾರಾ ಹಾಗೂ ವಿಘ್ನೇಶ್ ಶಿವನ್ ಇಬ್ಬರೂ ಇತ್ತೀಚೆಗೆ ಖಾಸಗಿ ಮ್ಯಾಗಜೀನ್ ಒಂದಕ್ಕೆ ಸಂದರ್ಶನ ನೀಡಿದ್ದರು. ಈ ವೇಳೆ ತಮ್ಮ ಲವ್ ಸ್ಟೋರಿ, ಮದುವೆ ಬಗ್ಗೆ ಸಾಕಷ್ಟು ಇಂಟ್ರೆಸ್ಟಿಂಗ್ ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ. ಅದರಲ್ಲಿ ಈ ಸೆಲೆಬ್ರೆಟಿ ಜೋಡಿಯ ಮದುವೆಗೆ ಅಸಲಿಗೆ ಕಾರಣ ಸ್ಟಾರ್ ನಟ ಧನುಷ್ ಎಂದು ವಿಘ್ನೇಶ್ ಶಿವನ್ ಹೇಳಿಕೊಂಡಿದ್ದಾರೆ.

ಹಲವು ದಿನಗಳಿಂದ ಪ್ರೀತಿಸುತ್ತಿದ್ದ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಇಬ್ಬರೂ 2021ರಲ್ಲಿ ನಿಶ್ವಿತಾರ್ಥ ಮಾಡಿಕೊಂಡಿದ್ದರು. 2022ರ ಜೂನ್ ತಿಂಗಳಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿಗೀಗ ಇಬ್ಬರು ಗಂಡು ಮಕ್ಕಳಿದ್ದಾರೆ. ಆದ್ರೀಗ ಈ ಜೋಡಿ ಮದುವೆಗೆ ಕಾರಣವಾಗಿದ್ದು ತಮಿಳಿನ ಸ್ಟಾರ್ ನಟ ಧನುಷ್ ಸ್ವತ: ವಿಘ್ನೇಶ್ ಹಾಗೂ ನಯನತಾರಾ ಒಪ್ಪಿಕೊಂಡಿದ್ದಾರೆ.
ನಮ್ಮ ಮದುವೆಗೆ ಧನುಷ್ ಕಾರಣ
ಮ್ಯಾಗಜೀನ್ ಒಂದರ ಸಂದರ್ಶನದಲ್ಲಿ ಭಾಗಿಯಾಗಿದ್ದ ನಯನತಾರಾ- ವಿಘ್ನೇಶ್ ಶಿವನ್ ತಮ್ಮ ಲವ್ ಸ್ಟೋರಿ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ. ಇಬ್ಬರೂ ಒಂದಾಗುವುದಕ್ಕೆ ಧನುಷ್ ಕಾರಣವೆಂದು ಆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. 2015ರಲ್ಲಿ ವಿಘ್ನೇಶ್ ಶಿವನ್ 'ನಾನುಂ ರೌಡಿ ದಾನ್' ಸಿನಿಮಾ ನಿರ್ದೇಶಿಸುತ್ತಿದ್ದರು. ಧನುಷ್ ಈ ಸಿನಿಮಾ ನಿರ್ಮಾಪಕರು. ಈ ವೇಳೆ ವಿಘ್ನೇಶ್‌ಗೆ ನಯನತಾರಾ ಪರಿಚಯ ಆಗಿತ್ತು.
ಸಿನಿಮಾ ಮುಗಿಯುವುದರೊಳಗೆ ಲವ್
ವಿಘ್ನೇಶ್ ಶಿವನ್ 'ನಾನುಂ ರೌಡಿ ದಾನ್' ಕಥೆಯನ್ನು ನಯನತಾರಾಗೆ ಹೇಳಿದ್ದರು. ಅವರಿಗೆ ಕಥೆ ಇಷ್ಟ ಆಗಿತ್ತು. ಆದರೆ, ಈ ಮೊದಲು ವಿಜಯ್ ಸೇತುಪತಿಗೆ ಇದೇ ಕಥೆ ಇಷ್ಟ ಆಗಿರಲಿಲ್ಲ. ನಯನತಾರಾ ಒಪ್ಪಿದ್ದಾರೆ ಅನ್ನೋ ಕಾರಣಕ್ಕೆ ಕೊನೆಗೆ ವಿಜಯ್ ಸೇತುಪತಿ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಸುಮಾರು ಒಂದು ವರ್ಷ ಈ ಸಿನಿಮಾದ ಶೂಟಿಂಗ್ ನಡೆದಿತ್ತು. ಈ ವೇಳೆ ವಿಘ್ನೇಶ್ ಹಾಗೂ ನಯನತಾರಾ ಉತ್ತಮ ಸ್ನೇಹಿತರಾಗಿದ್ದರು.

ಮೂರು ತಿಂಗಳಲ್ಲೇ ಪ್ರೀತಿ
"ನಯನತಾರಾ ಬಳಿ ಧನುಷ್ ಅವರು ನನ್ನನ್ನು ಕರೆದುಕೊಂಡು ಹೋಗದೇ ಇದ್ದಿದ್ದರೆ ಭೇಟಿಯಾಗಿತ್ತಿರಲಿಲ್ಲ. ಅವರಿಂದಲೇ ನಮ್ಮ ಮದುವೆ ಆಯ್ತು" ಎಂದು ವಿಘ್ನೇಶ್ ಶಿವನ್ ಮ್ಯಾಗಜೀನ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ನಯನತಾರಾ ಕೂಡ ಸಿನಿಮಾ ಶುರುವಾದ ಕೇವಲ ಮೂರು ತಿಂಗಳಲ್ಲಿ ಒತ್ತಮ ಭಾಂಧವ್ಯ ಏರ್ಪಟ್ಟಿತ್ತು ಎಂದು ಹೇಳಿಕೊಂಡಿದ್ದಾರೆ.
7 ವರ್ಷ ಪ್ರೀತಿ.. ಬಳಿಕ ಮದುವೆ
2015ರಲ್ಲಿ 'ನಾನುಂ ರೌಡಿ ದಾನ್' ಸಿನಿಮಾ ತೆರೆಕಂಡಿತ್ತು. ಇಲ್ಲಿಂದ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಇಬ್ಬರೂ ಲವ್ ಸ್ಟೋರಿ ಶುರುವಾಗಿತ್ತು. ಸುಮಾರು 7 ವರ್ಷಗಳ ಕಾಲ ಈ ಜೋಡಿ ಪ್ರೀತಿ ಮಾಡಿತ್ತು. 2021ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡು ಬಹಿರಂಗವಾಗಿ ತಮ್ಮ ಪ್ರೀತಿಯ ಬಗ್ಗೆ ಹೇಳಿಕೊಂಡರು. ಬಳಿಕ ಜೂನ್ 9, 2022ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾಗಿ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದು ಖುಷಿಯಾಗಿದ್ದಾರೆ. ಈಗ ವೇಳೆ ತಮ್ಮ ಮದುವೆಗೆ ಧನುಷ್ ಕಾರಣ ಅನ್ನೋದನ್ನು ಬಹಿರಂಗಪಡಿಸಿದ್ದಾರೆ.


Click it and Unblock the Notifications