ದಳಪತಿ ವಿಜಯ್ 67ನೇ ಸಿನಿಮಾ ಟೈಟಲ್ 'ಲಿಯೋ': ಕನ್ನಡದಲ್ಲೂ ಸಿಂಹ ಘರ್ಜನೆ
ಒಂದ್ಕಡೆ 'ವಿಕ್ರಮ್' ನಿರ್ದೇಶಕ ಲೋಕೇಶ್ ಕನಗರಾಜ್. ಇನ್ನೊಂದು ಟಾಲಿವುಡ್ ದಳಪತಿ ವಿಜಯ್. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ಮತ್ತೊಂದು ಸಿನಿಮಾ ಸೆಟ್ಟೇರಿದೆ. ಸಿನಿಮಾ ಟೇಕಾಫ್ ಆಗಿದ್ದರೂ, ಟೈಟಲ್ ಬಿಟ್ಟುಕೊಟ್ಟಿರದ ತಂಡ ಅದನ್ನೂ ರಿವೀಲ್ ಮಾಡಿದೆ.
ಟಾಲಿವುಡ್‌ನ ಮೋಸ್ಟ್ ಸಕ್ಸಸ್‌ಫುಲ್ ಡೈರೆಕ್ಟರ್ ಲಿಸ್ಟ್‌ನಲ್ಲಿ ಲೋಕೇಶ್ ಕನಗರಾಜ್ ಹೆಸರಿದೆ. ಬ್ಯಾಕ್ ಟು ಬ್ಯಾಕ್ ಯಶಸ್ವಿ ಸಿನಿಮಾಗಳನ್ನು ನಿರ್ದೇಶಿಸಿರೋ ಲೋಕೇಶ್ ಮತ್ತೊಂದು ಸಿನಿಮಾವನ್ನು ಕೈಗೆತ್ತಿಕೊಂಡಿದ್ದು, ಎಲ್ಲರ ಕುತೂಹಲ ಈ ಸಿನಿಮಾ ಮೇಲಿದೆ.
ಅಂದ್ಹಾಗೆ, ದಳಪತಿ ವಿಜಯ್ ಹಾಗೂ ಲೋಕೇಶ್ ಕಾಂಬಿನೇಷನ್‌ನಲ್ಲಿ ಈಗಾಗಲೇ ಒಂದು ಸಿನಿಮಾ ರಿಲೀಸ್ ಆಗಿದೆ. ಅದುವೇ 'ಮಾಸ್ಟರ್'. ಈ ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿತ್ತು. ಈಗ ಅದೇ ಜೋಡಿ ಮತ್ತೆ ತೆರೆಮೇಲೆ ಬರೋದಕ್ಕೆ ಸಜ್ಜಾಗಿದೆ. ಹಾಗೇ ಟೈಟಲ್ ಕೂಡ ರಿವೀಲ್ ಮಾಡಿದೆ.

ವಿಜಯ್ 67ನೇ ಸಿನಿಮಾ ಟೈಟಲ್ 'ಲಿಯೋ'
ಇತ್ತೀಚೆಗೆ ತೆರೆಕಂಡಿದ್ದ ದಳಪತಿ ವಿಜಯ್ ಸಿನಿಮಾ 'ವಾರಿಸು' ಬಾಕ್ಸಾಫೀಸ್‌ನಲ್ಲಿ ಹೇಳಿಕೊಳ್ಳುವಂತಹ ಮೋಡಿ ಮಾಡಿಲ್ಲ. ಗಲ್ಲಾಪಟ್ಟಿಗೆಯಲ್ಲಿ ಸಾಧಾರಾಣ ಕಲೆಕ್ಷನ್ ಮಾಡಿತ್ತು. ಈ ಬೆನ್ನಲ್ಲೇ ಸಕ್ಸಸ್‌ಫುಲ್ ನಿರ್ದೇಶಕರ ಜೊತೆ ಸಿನಿಮಾ ಅನೌನ್ಸ್ ಮಾಡಿದ್ದರು. ಲೋಕೇಶ್ ಹಾಗೂ ವಿಜಯ್ ಸಿನಿಮಾ ಅನೌನ್ಸ್ ಆಗಿದ್ದೇನೋ ನಿಜ. ಆದರೆ, ಟೈಟಲ್ ಮಾತ್ರ ಅನೌನ್ಸ್ ಆಗಿರಲಿಲ್ಲ. ಈಗ ಸಿನಿಮಾ ಮುಹೂರ್ತ ಕಂಡ ಬೆನ್ನಲ್ಲೇ ಟೈಟಲ್ ಕೂಡ ರಿವೀಲ್ ಆಗಿದೆ. ಅದುವೇ 'ಲಿಯೋ'.

ವಿಜಯ್ ಸಿನಿಮಾ ಟಾಲಿವುಡ್ ದಿಗ್ಗಜರು
ನಿನ್ನೆ(ಫೆಬ್ರವರಿ 02) ದಳಪತಿ ವಿಜಯ್ 67ನೇ ಸಿನಿಮಾ ಮುಹೂರ್ತ ಆಗಿತ್ತು. 'ಲಿಯೋ' ಸಿನಿಮಾದಲ್ಲಿ ದಳಪತಿ ವಿಜಯ್ ಜೊತೆಗೆ ತ್ರಿಶಾ ಕೃಷ್ಣನ್, ಅರ್ಜುನ್ ಅರ್ಜಾ, ಜಗದೀಶ್, ಪ್ರಿಯಾ ಆನಂದ್, ಮನ್ಸೂರ್ ಅಲಿಖಾನ್ ಸೇರಿದಂತೆ ದಕ್ಷಿಣ ಭಾರತದ ದಿಗ್ಗಜರು ನಟಿಸುತ್ತಿದ್ದಾರೆ. ಈ ತಂಡಕ್ಕೆ ಮತ್ತಷ್ಟು ಜನಪ್ರಿಯ ಕಲಾವಿದರು ಸೇರಿಕೊಳ್ಳುವ ಸಾಧ್ಯತೆಯಿದೆ.

14 ವರ್ಷಗಳ ಬಳಿಕ ವಿಜಯ್–ತ್ರಿಶಾ ಸಿನಿಮಾ
ತಮಿಳು ಚಿತ್ರರಂಗದ ಹಿಟ್ ಜೋಡಿಗಳಲ್ಲಿ ವಿಜಯ್ ಹಾಗೂ ತ್ರಿಶಾ ಜೋಡಿ ಕೂಡ ಒಂದು. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಬಂದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗೆದ್ದು ಬೀಗಿವೆ. 2005ರಲ್ಲಿ ತೆರೆಕಂಡಿದ್ದ 'ಗಿಲ್ಲಿ' ಸಿನಿಮಾ ಇವರಿಬ್ಬರ ಕಾಂಬಿನೇಷನ್‌ನಲ್ಲಿ ಬಂದ ಮೊದಲ ಸಿನಿಮಾ. ಆ ಬಳಿಕ 'ಕುರುವಿ', 'ತಿರುಪಾಚಿ' ಮತ್ತು 'ಆಟಿ' ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. 2008ರಲ್ಲಿ ತೆರೆಕಂಡಿದ್ದ 'ಕುರುವಿ' ಈ ಜೋಡಿಯ ಕೊನೆಯ ಸಿನಿಮಾ ಆಗಿತ್ತು.

4 ಭಾಷೆಗಳಲ್ಲಿ 'ಲಿಯೋ' ರಿಲೀಸ್
ದಳಪತಿ ವಿಜಯ್ 67ನೇ ಸಿನಿಮಾ 'ಲಿಯೋ' ನಾಲ್ಕು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ತಮಿಳು, ತೆಲುಗು, ಹಿಂದಿ ಸೇರಿದಂತೆ ಕನ್ನಡ ಭಾಷೆಯಲ್ಲೂ ಬಿಡುಗಡೆಯಾಗುತ್ತಿದೆ. ವಿಜಯ್ ಸಿನಿಮಾಗೆ ಕರ್ನಾಟಕದಲ್ಲೂ ಅಭಿಮಾನಿಗಳಿರೋದ್ರಿಂದ ಕನ್ನಡದಲ್ಲೇ ಸಿನಿಮಾ ರಿಲೀಸ್ ಮಾಡುವುದಕ್ಕೆ ಮೊದಲೇ ಚಿತ್ರತಂಡ ನಿರ್ಧರಿಸಿದೆ.


Click it and Unblock the Notifications











