63ನೇ ಬರ್ತ್‌ಡೇ ಅನೌನ್ಸ್ ಆಯ್ತು ಬಯೋಪಿಕ್: ಸಿಲ್ಕ್ ಸ್ಮಿತಾ ಅವತಾರವೆತ್ತಿದ ಈ ನಟಿ ಯಾರು ಗೊತ್ತಾ?
ಸಿಲ್ಮ್ ಸ್ಮಿತಾ 80ರ ದಶಕದಲ್ಲಿ ಸಂಚಲನ ಸೃಷ್ಟಿಸಿದ ಬೋಲ್ಡ್ ನಟಿ. ಈಕೆ ಇನ್ನೂ ಬದುಕಿದ್ದರೆ ನಿನ್ನೆ (ಡಿಸೆಂಬರ್ 2) 63ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ದಕ್ಷಿಣ ಭಾರತೀಯ ಸಿನಿಮಾಗಳಲ್ಲಿ ಸ್ಟಾರ್ ಪಟ್ಟಕ್ಕೇರಿದ್ದ ಈ ನಟಿ ಅಗಲಿ 27 ವರ್ಷಗಳಾಗಿವೆ. ಇಂದಿಗೂ ಈ ನಟಿಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸುವವರು ಇದ್ದಾರೆ.
ಸಿಲ್ಕ್ ಸ್ಮಿತಾ ತಮ್ಮ 35ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದರು. ಅತೀ ಕಡಿಮೆ ಅವಧಿಯಲ್ಲಿ ಸುಮಾರು 450ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. ಬೋಲ್ಡ್ ಡ್ಯಾನ್ಸ್ ನಂಬರ್‌ಗಳಿಂದ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿದ್ದವರು ಇದೇ ಸಿಲ್ಕ್ ಸ್ಮಿತಾ. ಈಕೆಯ ಬದುಕು, ಸಿನಿಮಾ ಜರ್ನಿ, ಸೋಲು, ಸಾವು ಎಲ್ಲದರ ಹಿಂದೊಂದು ನೂರೆಂಟು ಕಥೆಗಳಿವೆ. ಇಲ್ಲೊಂದು ತಂಡ ಅವುಗಳನ್ನೇ ಹೇಳುವುದಕ್ಕೆ ಹೊರಟಿದೆ.

63ನೇ ಹುಟ್ಟುಹಬ್ಬದಂದು (ಡಿಸೆಂಬರ್ 2) ಸಿಲ್ಕ್ ಸ್ಮಿತಾ ಬಯೋಪಿಕ್ ಅನೌನ್ಸ್ ಆಗಿದೆ. ಥೇಟ್ ಆಕೆಯ ಮಾದಕ ನೋಟ ಬೀರಿದಂತೆ ಪೋಸ್ಟರ್ ಅನ್ನು ರಿ-ಕ್ರಿಯೇಟ್ ಮಾಡಲಾಗಿದೆ. ಈ ಪೋಸ್ಟರ್ ರಿಲೀಸ್ ಆದಲ್ಲಿಂದ ಸಿಲ್ಕ್ ಸ್ಮಿತಾ ಪಾತ್ರದಲ್ಲಿ ನಟಿಸುತ್ತಿರುವ ನಟಿಯ ಬಗ್ಗೆ ಮಾಹಿತಿ ಹುಡುಕುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಅಷ್ಟಕ್ಕೂ ಸಿಲ್ಮ್ ಅವತಾರದಲ್ಲಿ ಕಾಣಿಸಿಕೊಳ್ಳಲಿರುವ ಈ ನಟಿ ಯಾರು? ಈಕೆಯ ಹಿನ್ನೆಲೆಯೇನು? ತಿಳಿಯಲು ಮುಂದೆ ಓದಿ..
ಸಿಲ್ಕ್ ಸ್ಮಿತಾ ಬಯೋಪಿಕ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ಈ ನಟಿಯ ಹೆಸರು ಚಂದ್ರಿಕಾ ರವಿ. ನಿನ್ನೆ (ಡಿಸೆಂಬರ್ 2) ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸಿಲ್ಮ್ ಸ್ಮಿತಾ ಬಯೋಪಿಕ್ ಪೋಸ್ಟರ್ ಅನ್ನು ಶೇರ್ ಮಾಡಿಕೊಂಡಿದ್ದಾರೆ. ಅಂದ್ಹಾಗೆ ಸಿನಿಮಾ ಹೆಸರು 'ಸಿಲ್ಕ್ ಸ್ಮಿತಾ: ಅನ್‌ಟೋಲ್ಡ್ ಸ್ಟೋರಿ'. ಈ ಸಿನಿಮಾ ವೈಟ್ ಅಂಡ್ ಬ್ಯಾಕ್ ಪೋಸ್ಟರ್ ಸಿನಿಪ್ರಿಯರಿಗೆ, ಸಿಲ್ಮ್ ಸ್ಮಿತಾ ಫ್ಯಾನ್ಸ್‌ಗೆ ಸಿಕ್ಕಾಪಟ್ಟೆ ಇಷ್ಟ ಆಗಿದೆ. ಈ ಕಾರಣಕ್ಕೆ ಚಂದ್ರಿಕಾ ರವಿ ಹಿನ್ನೆಲೆ ಹುಡುಕುತ್ತಿದ್ದಾರೆ.
ಸಿಲ್ಕ್ ಅವತಾರವೆತ್ತಿರೋ ಈ ನಟಿ ಆಸ್ಟ್ರೇಲಿಯಾದ ಪ್ರಜೆ. ಸಿನಿಮಾವನ್ನೇ ವೃತ್ತಿಯನ್ನಾಗಿ ಮಾಡಿಕೊಳ್ಳುವ ದೃಷ್ಟಿಯೊಂದ ಅಮೆರಿಕಾದ ಲಾಸ್ ಎಂಜಲೀಸ್‌ಗೆ ಕೆಲವು ವರ್ಷಗಳ ಹಿಂದಷ್ಟೇ ಶಿಫ್ಟ್ ಆಗಿದ್ದರು. ಇತ್ತೀಚೆಗೆ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನೋಡೋಕೆ ಥೇಟ್ ಸಿಲ್ಕ್ ಸ್ಮಿತಾ ಹಾಗೇನೂ ಇಲ್ಲ. ಆದರೆ, ಆಕೆಯ ಮಾದಕ ನೋಟ, ಬೋಲ್ಡ್‌ನೆಸ್ ಈಕೆಯ ಬಳಿಯಿದೆ.

ಚಂದ್ರಿಕಾ ರವಿ ಮಾಡಲ್ ಕೂಡ ಹೌದು. ತನ್ನ ನಟನೆ ಹಾಗೂ ಮಾಡಲಿಂಗ್ ಕರಿಯರ್‌ಗಾಗಿ ಚಂದ್ರಿಕಾ ಲಾಸ್ ಏಂಜಲೀಸ್‌ನಲ್ಲಿ ಸೆಟ್ ಆಗಿದ್ದರು. ಆದರೆ, 2018ರಲ್ಲಿ ತೆರೆಕಂಡ 'ಇರುಟ್ಟು ಅರೆಯಿಲ್ ಮುರಟ್ಟು ಕುತ್ತು' ಸಿನಿಮಾದಲ್ಲಿ ಘೋಸ್ಟ್ ಆಗಿ ಕಾಣಿಸಿಕೊಂಡಿದ್ದರು. 2019ರಲ್ಲಿ 'ಚಿಕಡಿ ಗಾಡಿಲೋ ಚಿತ್ತಕೊತುಡು' ಅನ್ನೋ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದರು. ಆದರೆ, ಬಾಲಯ್ಯನ ಜೊತೆ 'ವೀರ ಸಿಂಹ ರೆಡ್ಡಿ' ಸಿನಿಮಾದಲ್ಲಿ "ಮಾ ಬಾವ ಮನೋಬಾವಲು.." ಅನ್ನೋ ಹಾಡಿನಲ್ಲಿ ಹೆಜ್ಜೆ ಹಾಕಿದ್ದರು. ಆ ಹಾಡಿನಿಂದ ದಕ್ಷಿಣ ಭಾರತದಲ್ಲಿ ಫೇಮಸ್ ಆಗಿದ್ದಾರೆ.
ಈಗ ಸಿಲ್ಮ್ ಸ್ಮಿತಾ ಬಯೋಪಿಕ್‌ನಲ್ಲಿ ಚಂದ್ರಿಕಾ ರವಿ ಕಾಣಿಸಿಕೊಳ್ಳುತ್ತಿದ್ದಾರೆ. ಜಯರಾಮ್ ಶಂಕರನ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಿಲ್ಮ್ ಸ್ಮಿತಾ ಸಿನಿಮಾ ಪೋಸ್ಟರ್ ರಿಲೀಸ್ ಮಾಡಿ " ಅವರ ಕುಟುಂಬದ ಆಶೀರ್ವಾದದ ಮೇರೆಗೆ ಅವರ ಬಗ್ಗೆ ಎಲ್ಲೂ ಹೇಳದ ಕಥೆಯನ್ನು ಹೇಳುವುದಕ್ಕೆ ಹೊರಟಿರುವುದು ಹೆಮ್ಮೆ ಎನಿಸುತ್ತಿದೆ" ಎಂದು ಚಂದ್ರಕಾ ರವಿ ಬರೆದುಕೊಂಡಿದ್ದಾರೆ.
'ಸಿಲ್ಕ್ ಸ್ಮಿತಾ: ಅನ್‌ಟೋಲ್ಡ್ ಸ್ಟೋರಿ' ತಮಿಳು, ತೆಲುಗು, ಕನ್ನಡ, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಸಿಲ್ಕ್ ಅಂತಹ ಪಾತ್ರಕ್ಕೆ ಚಂದ್ರಕಾ ರವಿ ಸೂಟ್ ಆಗುತ್ತಾರೆ. ಅವರ ಬೋಲ್ಡ್‌ನೆಸ್, ಮಾದಕ ನೋಟ ಎಲ್ಲವೂ ಹೋಲಿಕೆಯಾಗುತ್ತೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.


Click it and Unblock the Notifications











