ಕಿಡಿಗೇಡಿಗಳು 'ಜನ ನಾಯಗನ್' ಲೀಕ್ ಮಾಡಿದ್ದೇಗೆ? ₹500 ಕೋಟಿ ಸಿನಿಮಾದಿಂದ ಕೆವಿಎನ್‌ಗಾದ ನಷ್ಟವೆಷ್ಟು?
ದಳಪತಿ ವಿಜಯ್ ನಟನೆಯ 'ಜನ ನಾಯಗನ್' ಸಿನಿಮಾ ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗಾಗಲೇ ರಿಲೀಸ್ ಆಗಬೇಕಿತ್ತು. ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆ ಪ್ಲಾನ್ ಮಾಡಿದ್ದ ಕೆವಿಎನ್ ಪ್ರೊಡಕ್ಷನ್‌ಗೆ ಸೆನ್ಸಾರ್ ಸಮಸ್ಯೆ ಆಗಿದ್ದು ಗೊತ್ತೇ ಇದೆ. ಸಿನಿಮಾ ಸೆನ್ಸಾರ್‌ಗೆ ಕೋರ್ಟ್ ಮೆಟ್ಟಿಲೇರಿದ್ದ ನಿರ್ಮಾಣ ಸಂಸ್ಥೆ ಒಂದಿಷ್ಟು ಹೋರಾಟದ ಮಾಡಿದರೂ, ಕೇಸ್ ಅನ್ನು ಹಿಂಪಡೆದು ಮರು ಸೆನ್ಸಾರ್‌ಗೆ ಸಲ್ಲಿಸಿತ್ತು.
ತಮಿಳುನಾಡು ಚುನಾವಣೆಗೂ ಮುನ್ನವೇ ಸಿನಿಮಾ ರಿಲೀಸ್ ಮಾಡಬೇಕು ಅಂತ ಹಠಕ್ಕೆ ಬಿದ್ದಿದ್ದರೂ ಅದು ಸಾಧ್ಯವಾಗಿಲ್ಲ. ತಮಿಳುನಾಡು ಚುನಾವಣಾ ಡೇಟ್ ಅನೌನ್ಸ್ ಆಗುತ್ತಿದ್ದಂತೆ ಸೆನ್ಸಾರ್ ಕ್ಲಿಯರ್ ಆಗಿತ್ತು. ಹೀಗಾಗಿ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಸಿನಿಮಾವನ್ನು ಬಿಡುಗಡೆ ಮಾಡುವುದಕ್ಕೆ ಮುಂದಾಗಿತ್ತು. ಅಷ್ಟಲ್ಲೇ ಇಡೀ ಸಿನಿಮಾ ಅನ್‌ಲೈನ್‌ನಲ್ಲಿ ಲೀಕ್ ಆಗಿದೆ.

ಕಿಡಿಗೇಡಿಗಳು ಇಡೀ ಸಿನಿಮಾವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ. ಸುಮಾರು 500 ಕೋಟಿ ರೂಪಾಯಿ ವೆಚ್ಚದಲ್ಲಿ ಕೆವಿಎನ್ ಪ್ರೊಡಕ್ಷನ್ ಈ ಸಿನಿಮಾವನ್ನು ನಿರ್ಮಾಣ ಮಾಡಿತ್ತು. ಕಿಡಿಗೇಡಿಗಳ ಈ ಕೃತ್ಯದಿಂದ ಕೆವಿಎನ್ ಪ್ರೊಡಕ್ಷನ್‌ಗೆ ಅಷ್ಟೇ ಅಲ್ಲದೆ ಸರ್ಕಾರಕ್ಕೂ ಸಿಕ್ಕಾಪಟ್ಟೆ ನಷ್ಟ ಆಗಿದೆ. ಸದ್ಯ ಸಿನಿಮಾ ಲೀಕ್ ಆಗಿದ್ದಕ್ಕೆ ತಮಿಳು ಚಿತ್ರರಂಗದ ಗಣ್ಯರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈಗಾಗಲೇ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರನ್ನು ದಾಖಲಿಸಲಾಗಿದೆ.
ತಮಿಳಿನ ನಟ ಹಾಗೂ ನಿರ್ದೇಶಕ ಬೋಸ್ ವೆಂಕಟ್ ತಮ್ಮ ಎಕ್ಸ್ ಖಾತೆಯಲ್ಲಿ ಆಕ್ರೋಶ ಹೊರ ಹಾಕಿದ್ದಾರೆ. ನಿರ್ಮಾಣ ಸಂಸ್ಥೆಯ ಪರವಾಗಿ ನಿಂತಿದ್ದಾರೆ. "ಜನ ನಾಯಕನ್ ಇಡೀ ಸಿನಿಮಾ ಅಂತರಜಾಲದಲ್ಲಿ ಲೀಕ್ ಆಗಿರುವುದ ಅತ್ಯಂತ ಖಂಡನೀಯ. ಇಂತಹ ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆ ನೀಡಬೇಕು. ಸೆನ್ಸಾರ್ ಅಡಿಯಲ್ಲಿರುವ ಈ ಸಿನಿಮಾ ಲೀಕ್ ಆಗುವುದಕ್ಕೆ ಹೇಗೆ ಸಾಧ್ಯ? ಇಡೀ ಚಿತ್ರರಂಗ ಈ ಕೃತ್ಯವನ್ನು ಖಂಡಿಸಬೇಕು. ತಪ್ಪು ನಡೆದಿದ್ದು ಎಲ್ಲಿ ಅನ್ನೋದನ್ನು ಕಂಡುಕೊಂಡು ಸೂಕ್ತ ಶಿಕ್ಷೆ ನೀಡಬೇಕು" ಎಂದು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.
'ಜನ ನಾಯಗನ್' ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾ ಎಂದು ಹೇಳಲಾಗುತ್ತಿದೆ. ಎಚ್. ವಿನೋದ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಸಿನಿಮಾ ಹಲವು ರೈಟ್ಸ್‌ಗಳು ದೊಡ್ಡ ಮೊತ್ತಕ್ಕೆ ಮಾರಾಟ ಆಗಿದೆ. ವಿತರಣೆ ಹಕ್ಕು, ಓಟಿಟಿ ಹಕ್ಕು ಹಾಗೂ ಓವರ್‌ಸೀಸ್ ಹಕ್ಕು ಸೇರಿದಂತೆ ಪ್ರೀ-ರಿಲೀಸ್ ಬ್ಯುಸಿನೆಸ್ ಮಾಡಿತ್ತು. ಮೊದಲ ಸಿನಿಮಾ ಅಂದುಕೊಂಡಿದ್ದಕ್ಕಿಂತ ತಡವಾಗಿ ರಿಲೀಸ್ ಆಗುತ್ತಿದೆ. ಈ ಕಾರಣಕ್ಕೆ ಹಕ್ಕು ಪಡೆದವರು ಅಸಮಧಾನ ಹೊರ ಹಾಕಿದ್ದರು ಎನ್ನಲಾಗಿದೆ. ಈಗ ಸಿನಿಮಾ ಸೋರಿಕೆಯಾಗಿದ್ದರಿಂದ ವಿತರಕರಿಗೆ ಅಷ್ಟೇ ಅಲ್ಲ, ಓಟಿಟಿಗೆ ಪ್ಲಾಟ್‌ಫಾರ್ಮ್ ಸೇರಿದಂತೆ ದೊಡ್ಡ ಮೊತ್ತದ ಹಕ್ಕು ಪಡೆದವರಿಗೆ ನಷ್ಟ ಆಗಲಿದೆ.

ಹೀಗಾಗಿ ಕೆವಿಎನ್ ಪ್ರೊಡಕ್ಷನ್ ಮೇಲೆ ಮತ್ತಷ್ಟು ಒತ್ತಡ ಹೆಚ್ಚಾಗುವ ಸಾಧ್ಯತೆಯಿದೆ. ಏಕಕಾಲಕ್ಕೆ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿರುವ ಕೆವಿಎನ್ ಸಂಸ್ಥೆ 'ಜನ ನಾಯಗನ್' ಮೇಲೆ ನಿರೀಕ್ಷೆಗಳನ್ನು ಇಟ್ಟುಕೊಂಡಿತ್ತು. ಆದ್ರೀಗ ಸಿನಿಮಾ ಸೋರಿಕೆಯಾಗಿದ್ದು, ದೊಡ್ಡ ಮೊತ್ತದ ನಷ್ಟವನ್ನು ಅನುಭವಿಸಬೇಕಾಗಬಹುದು. ವಿಜಯ್ ಕೊನೆಯ ಸಿನಿಮಾ ಆಗಿದ್ದರಿಂದ ಬಾಕ್ಸಾಫೀಸ್‌ನಲ್ಲಿ ಸಾವಿರ ಕೋಟಿ ಕಲೆಕ್ಷನ್ ಮಾಡುವ ನಿರೀಕ್ಷೆಯಲ್ಲಿತ್ತು. ಆದ್ರೀಗ ಭಾರೀ ನಷ್ಟವನ್ನು ಎದುರಿಸಬೇಕಾಗಬಹುದು.
ಹೀಗಾಗಿ ತಮಿಳು ಚಲನಚಿತ್ರ ನಿರ್ಮಾಪಕರ ಸಂಘ ಹಾಗೂ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಕೆ.ಆರ್. ಕೋದಂಡರಾಮಯ್ಯ, ತಮಿಳುನಾಡು ಡಿಜಿಪಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ "ಪೊಲೀಸ್ ಇಲಾಖೆಯು ತಕ್ಷಣವೇ ಪ್ರಕರಣ ದಾಖಲಿಸಿಕೊಂಡು ಇಂಟರ್ನೆಟ್ ಸೇರಿದಂತೆ ಯಾವುದೇ ಮಾಧ್ಯಮಗಳಲ್ಲಿ ಈ ಸಿನಿಮಾವನ್ನು ಯಾರೂ ಹಂಚಿಕೊಳ್ಳದಂತೆ ತಡೆಯಬೇಕು. ಅಲ್ಲದೆ, ಈ ಸಿನಿಮಾವನ್ನು ಲೀಕ್ ಮಾಡಿದವರನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕು ಎಂದು ತಮಿಳು ಚಲನಚಿತ್ರೋದ್ಯಮದ ಪರವಾಗಿ ವಿನಂತಿಸುತ್ತೇನೆ" ಎಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.
'ಜನ ನಾಯಗನ್' ಇಡೀ ಸಿನಿಮಾ ಲೀಕ್ ಆಗಿದ್ದು ನಿರ್ಮಾಪಕರ ಆತಂಕವನ್ನು ಹೆಚ್ಚಿಸಿದೆ. ಅದರಲ್ಲೀ ಇಡೀ ಸಿನಿಮಾ ಎಚ್‌ಡಿಯಲ್ಲಿ ಲೀಕ್ ಮಾಡಲಾಗಿದೆ. ಈಗಾಗಲೇ ಈ ಸಿನಿಮಾವನ್ನು ಡಿಲೀಟ್ ಮಾಡುವ ಕೆಲಸಕ್ಕೆ ಮುಂದಾಗಿದ್ದರೂ, ಸಾವಿರಾರು ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇದರಿಂದ ಚಿತ್ರರಂಗಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಈ ಸಿನಿಮಾ ವಿಜಯ್ ಅವರ ಕೊನೆಯ ಸಿನಿಮಾ ಆಗಿದ್ದರಿಂದ ಅಭಿಮಾನಿಗಳು ಥಿಯೇಟರ್‌ನಲ್ಲಿ ಸಂಭ್ರಮದಿಂದ ವೀಕ್ಷಣೆ ಮಾಡಲಿದ್ದಾರೆ. ಹೀಗಿದ್ದರೂ, ನಿರ್ಮಾಪಕರಿಗೆ ನಷ್ಟ ಕಟ್ಟಿಟ್ಟ ಬುತ್ತಿ ಎಂದು ಹೇಳಲಾಗುತ್ತಿದೆ. ಹಾಗಂತ ನಿರ್ಮಾಪಕರಿಗೆ ಕಮ್ಮಿ ಅಂದರೂ ₹100 ಕೋಟಿ ಮೇಲೆ ನಷ್ಟ ಆಗಬಹುದು. ಅಲ್ಲಷ್ಟೇ ಅಲ್ಲದೆ ಸರ್ಕಾರಕ್ಕೂ ಭಾರೀ ಮೊತ್ತದಲ್ಲಿ ತೆರಿಗೆ ನಷ್ಟ ಆಗಲಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಅಂದಾಜು ಮಾಡುತ್ತಿದ್ದಾರೆ.


Click it and Unblock the Notifications











