'ಜೈಲರ್ 2'ಗೆ ಎಂಟ್ರಿ ಕೊಟ್ಟ ಹ್ಯಾಂಡ್ಸಮ್ ಹಂಕ್; 40 ವರ್ಷಗಳ ಹಿಂದೆ ರಜನಿ ಜೊತೆ ಹೃತಿಕ್ ನಟಿಸಿದ ಸಿನಿಮಾ ಬಗ್ಗೆ ಗೊತ್ತೇ?
ಸೂಪರ್‌ಸ್ಟಾರ್ ರಜನಿಕಾಂತ್ ನಟಿಸುತ್ತಿರುವ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಜೈಲರ್ 2' ಶೂಟಿಂಗ್ ಬಿರುಸಿನಿಂದ ಸಾಗುತ್ತಿದೆ. ಇದೇ ವರ್ಷ ಸಿನಿಮಾ ರಿಲೀಸ್ ಆಗಬೇಕಿದ್ದರಿಂದ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ವೇಗವಾಗಿ ಶೂಟಿಂಗ್ ಮುಗಿಸುತ್ತಿದ್ದಾರೆ. ಸಿನಿಮಾದಲ್ಲಿ ದೊಡ್ಡ ಸ್ಟಾರ್‌ಕಾಸ್ಟ್ ಇರುವುದರಿಂದ ಅವರು ಅಂದುಕೊಂಡಿದ್ದಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ಈ ಸಿನಿಮಾಗೀಗ ಬಾಲಿವುಡ್‌ನ ಹ್ಯಾಂಡ್‌ಸಮ್ ಹಂಕ್ ಹೃತಿಕ್ ರೋಷನ್ ಸೇರ್ಪಡೆಯಾಗಿದ್ದಾರೆ.
ಒಂದ್ಕಡೆ ತಮಿಳಿನ ಸೂಪರ್‌ಸ್ಟಾರ್.. ಇನ್ನೊಂದು ಕಡೆ ಬಾಲಿವುಡ್‌ನ ಸೂಪರ್‌ಸ್ಟಾರ್. ಇಬ್ಬರೂ ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಂಡರೇ ಅಭಿಮಾನಿಗಳ ಪರಿಸ್ಥಿತಿ ಏನಿರಬೇಡ. ಹೌದು, ಕಳೆದ ಕೆಲವು ದಿನಗಳಿಂದ 'ಜೈಲರ್ 2' ಸಿನಿಮಾದಲ್ಲಿ ಹೃತಿಕ್ ರೋಷನ್ ನಟಿಸುತ್ತಿದ್ದಾರೆಂಬ ಸುದ್ದಿ ಓಡಾಡುತ್ತಲೇ ಇತ್ತು. ಈಗ ಅದು ನಿಜವಾಗಿದೆ. ಎನ್‌ಡಿ ಟಿವಿ ಎಕ್ಸ್‌ಕ್ಲೂಸಿವ್ ವರದಿ ಪ್ರಕಾರ ಹೃತಿಕ್ ರೋಷನ್ ಈಗಾಗಲೇ 'ಜೈಲರ್ 2' ತಂಡವನ್ನು ಸೇರಿಕೊಂಡಿದ್ದಾರೆ. ಶೀಘ್ರದಲ್ಲಿ 'ಜೈಲರ್ 2' ಸೆಟ್ಟಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಹಾಗಂತ ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾದಲ್ಲಿ ಹೃತಿಕ್ ರೋಷನ್ ನಟಿಸುತ್ತಿರುವುದು ಇದೇ ಮೊದಲೇನು ಅಲ್ಲ. 40 ವರ್ಷಗಳ ಹಿಂದೇನೆ ಇವರಿಬ್ಬರೂ ಒಟ್ಟಿಗೆ ಒಂದು ಸಿನಿಮಾದಲ್ಲಿ ನಟಿಸಿದ್ದಾರೆ. ಹಾಗಿದ್ದರೆ, ಆ ಸಿನಿಮಾ ಯಾವುದು? ಹೃತಿಕ್ ರೋಷನ್ ಮಾಡಿದ ಪಾತ್ರ ಯಾವುದು? 'ಜೈಲರ್ 2' ತಂಡವನ್ನು ಯಾವಾಗ ಸೇರಿಕೊಳ್ಳುತ್ತಾರೆ? ಎಷ್ಟು ದಿನ ಶೂಟಿಂಗ್ ಮಾಡುತ್ತಾರೆ? ಅನ್ನೋ ಮಾಹಿತಿ ಇಲ್ಲಿದೆ.
ಹೃತಿಕ್ ಎಂಟ್ರಿಗೆ ವಿಶೇಷ ಬಿಜಿಎಂ
'ಜೈಲರ್ 2' ಸಿನಿಮಾಗೆ ಹೃತಿಕ್ ರೋಷನ್ ಎಂಟ್ರಿ ಕೊಡೋದು ಪಕ್ಕಾ ಆಗುತ್ತಿದ್ದಂತೆ ಸಂಗೀತ ನಿರ್ದೇಶಕ ಅನಿರುದ್ದ್ ರವಿಚಂದರ್ ವಿಶೇಷವಾಗಿ ಬಿಜಿಎಂ ಅನ್ನು ಸಿದ್ಧಪಡಿಸುತ್ತಿದ್ದಾರಂತೆ. ಸಿನಿಮಾದಲ್ಲಿ ಹೃತಿಕ್ ರೋಷನ್ ಎಂಟ್ರಿ ಸಿನಿಮಾದಲ್ಲಿ ದೃಶ್ಯ ವೈಭವವನ್ನು ನೀಡಲಿದೆ. ಹೀಗಾಗಿ ಹೃತಿಕ್ ರೋಷನ್ ಮಾಸ್ ಎಂಟ್ರಿಗೆ ಅನಿರುದ್ಧ್ ತಲೆ ಕೆಡಿಸಿಕೊಂಡು ಬಿಜಿಎಂ ಅನ್ನು ಕಂಪೋಸ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಅಂದ್ಹಾಗೆ ಹೃತಿಕ್ ಎಂಟ್ರಿ ಸಿನಿಮಾದ ಕಥೆ ಪ್ರಮುಖ ತಿರುವು ನೀಡಲಿದೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ.
ಎಂದಿನಿಂದ ಶೂಟಿಂಗ್
ಹೃತಿಕ್ ರೋಷನ್‌ಗೂ ಮುನ್ನ ಶಾರುಖ್ ಖಾನ್‌ಗೆ 'ಜೈಲರ್ 2' ತಂಡ ಅಪ್ರೋಚ್ ಮಾಡಿತ್ತು. ಆದರೆ, ಶಾರುಖ್ ಬ್ಯುಸಿಯಿದ್ದ ಕಾರಣ, ಹೃತಿಕ್ ರೋಷನ್‌ಗೆ ವಿಶೇಷ ಪಾತ್ರದಲ್ಲಿ ನಟಿಸುವಂತೆ ಕೇಳಿಕೊಳ್ಳಲಾಗಿತ್ತು. ಹಲವು ಸುತ್ತಿನ ಮಾತುಕತೆಗಳ ನಂತರ ಹೃತಿಕ್ ರೋಷನ್ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇದೇ ಜೂನ್ 22 ಮತ್ತು 23 ರಂದು ಚೆನ್ನೈನಲ್ಲಿ ತಮ್ಮ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ಸದ್ಯ ಅವರ ಪಾತ್ರಕ್ಕಾಗಿ ಹಲವು ಲುಕ್ ಟೆಸ್ಟ್‌ಗಳು ನಡೆಯುತ್ತಿವೆ ಎಂದು ವರದಿಯಾಗಿವೆ.

ರಜನಿ ಜೊತೆ ಮೊದಲ ಸಿನಿಮಾ ಅಲ್ಲ
ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾದಲ್ಲಿ ಹೃತಿಕ್ ರೋಷನ್ ನಟಿಸುತ್ತಿರೋದು ಇದೇ ಮೊದಲೇನು ಅಲ್ಲ. ಆದರೆ, ಹೀರೋ ಆಗಿ ನಟಿಸುವುದಕ್ಕೆ ಶುರು ಮಾಡಿದ ಮೇಲೆ 'ಜೈಲರ್ 2' ಮೊದಲ ಸಿನಿಮಾ ಎನ್ನಬಹುದು. ಸುಮಾರು 40 ವರ್ಷಗಳ ಹಿಂದೆ ರಜನಿಕಾಂತ್ ಸಿನಿಮಾದಲ್ಲಿ ಹೃತಿಕ್ ರೋಷನ್ ಬಾಲ ನಟನಾಗಿ ನಟಿಸಿದ್ದರು. ಅದಾದ ಬಳಿಕ ಮತ್ತೆ ಒಟ್ಟಿಗೆ ನಟಿಸುತ್ತಿರೋದೇ ಈಗ.
ಯಾವುದು ಆ ಸಿನಿಮಾ?
1986ರಲ್ಲಿ 'ಭಗವಾನ್ ದಾದಾ' ಎಂಬ ಆಕ್ಷನ್-ಡ್ರಾಮಾ ಸಿನಿಮಾ ತೆರೆಕಂಡಿತ್ತು. ಈ ಸಿನಿಮಾದಲ್ಲಿ ಇವರಿಬ್ಬರೂ ಒಟ್ಟಿಗೆ ನಟಿಸಿದ್ದರು. ಬಾಲನಟನಾಗಿದ್ದ ಹೃತಿಕ್ ರೋಷನ್, ರಜನಿಕಾಂತ್ ಅವರ ಸಾಕು ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹೃತಿಕ್ ರೋಷನ್ ಬಾಲಿವುಡ್‌ನ ಸೂಪರ್ ಸ್ಟಾರ್ ಆಗುವ ಮುನ್ನ ಬಾಲ ನಟನಾಗಿ ನಟಿಸಿದ್ದ ಸಿನಿಮಾವಿದು. ಈಗ ರಜನಿ ಜೊತೆ ಅದೇ ಹೃತಿಕ್ ರೋಷನ್ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋದನ್ನು ನೋಡಬೇಕಿದೆ. 2026, ಸೆಪ್ಟೆಂಬರ್ ತಿಂಗಳಲ್ಲಿ 'ಜೈಲರ್ 2' ಬಿಡುಗಡೆಯಾಗುವ ಸಾಧ್ಯತೆಯಿದೆ. ಆದರೆ, ಹೃತಿಕ್ ರೋಷನ್ ಕುರಿತು ಚಿತ್ರತಂಡದಿಂದ ಅಧಿಕೃತ ಪ್ರಕಟಣೆ ಇನ್ನಷ್ಟೇ ಹೊರಬೀಳಬೇಕಿದೆ.


Click it and Unblock the Notifications
