"ನಾನು ಏಕಪತ್ನಿವ್ರತಸ್ಥ ರಾಮನನ್ನು ಅನುಸರಿಸಲ್ಲ.. ಆದ್ರೆ"; ಕಮಲ್ ಹಾಸನ್
ತಮಿಳು ನಟ ಕಮಲ್ ಹಾಸನ್ ತಮ್ಮ ವಿಭಿನ್ನ ಸಿನಿಮಾಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಾ ಬರ್ತಿದ್ದಾರೆ. ಅದ್ಭುತ ಪಾತ್ರಗಳಲ್ಲಿ ನಟಿಸಿ ಮೋಡಿ ಮಾಡುತ್ತಿದ್ದಾರೆ. 'ವಿಕ್ರಂ' ಸಿನಿಮಾ ಬ್ಲಾಕ್‌ಬಸ್ಟರ್ ಆಗಿ ಭರ್ಜರಿ ಕಂಬ್ಯಾಕ್ ಮಾಡಿದ್ದರು.
ಚಿತ್ರರಂಗ ಮಾತ್ರವಲ್ಲದೇ ರಾಜಕೀಯರಂಗದಲ್ಲಿ ಕೂಡ ಕಮಲ್ ಹಾಸನ್ ಗುರ್ತಿಸಿಕೊಂಡಿದ್ದಾರೆ. ವಿಚಾರವಾದಿ ಎಂದು ಗುರ್ತಿಸಿಕೊಂಡಿರುವ ಕಮಲ್ ನಾಸ್ತಿಕರು ಕೂಡ ಹೌದು. ಕೆಲವೊಮ್ಮೆ ವಿವಾದಾತ್ಮಕ ಹೇಳಿಕೆಗಳಿಂದ ಕಮಲ್ ಹಾಸನ್ ಸುದ್ದಿ ಆಗಿದ್ದು ಇದೆ. ಸದ್ಯ ಮಣಿರತ್ನಂ ನಿರ್ದೇಶನದ 'ಥಗ್ ಲೈಫ್' ಚಿತ್ರದಲ್ಲಿ ಅವರು ಬಣ್ಣ ಹಚ್ಚಿದ್ದಾರೆ.

ತ್ರಿಶಾ, ಸಿಂಬು, ಅಭಿರಾಮಿ, ನಾಸರ್, ಪಂಕಜ್ ತ್ರಿಪಾಠಿ ಸೇರಿ ದೊಡ್ಡ ತಾರಾಗಣ ಈ ಗ್ಯಾಂಗ್‌ಸ್ಟರ್ ಚಿತ್ರದಲ್ಲಿದೆ. ಎ. ಆರ್ ರಹಮಾನ್ ಸಂಗೀತ ಚಿತ್ರಕ್ಕಿದ್ದು ಸಾಂಗ್ಸ್ ಈಗಾಗಲೇ ಬಿಡುಗಡೆ ಆಗಿ ಸದ್ದು ಮಾಡ್ತಿದೆ. ಇತ್ತೀಚೆಗೆ ಚೆನ್ನೈನಲ್ಲಿ ಸುದ್ದಿಗೋಷ್ಠಿ ನಡೆಸಿ 'ಥಗ್ ಲೈಫ್' ಚಿತ್ರದ ಬಗ್ಗೆ ಚಿತ್ರತಂಡ ಮಾಹಿತಿ ನೀಡಿದೆ. ಜೂನ್ 5ಕ್ಕೆ ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರಲಿದೆ.
ಸುದ್ದಿಗೋಷ್ಠಿಯಲ್ಲಿ ವೇದಿಕೆ ಮೇಲೆ ಕುಳಿತು ಪತ್ರಕರ್ತರ ಪ್ರಶ್ನೆಗಳಿಗೆ ಕಮಲ್ ಹಾಸನ್, ತ್ರಿಶಾ ಹಾಗೂ ಸಿಂಬು ಉತ್ತರಿಸಿದ್ದಾರೆ. ಈ ವೇಳೆ ತ್ರಿಶಾ ಮದುವೆ ವಿಚಾರ ಪ್ರಸ್ತಾಪವಾಗಿದೆ. ಈ ವೇಳೆ ಮದುವೆ ಬಗ್ಗೆ ಕಮಲ್ ಹಾಸನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸದ್ಯ ಅವರ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ. ಆ ವೀಡಿಯೋ ವೈರಲ್ ಆಗುತ್ತಿದೆ.
ಮದುವೆ ಬಗ್ಗೆ ಕಮಲ್ ಅಭಿಪ್ರಾಯ ಕೇಳಿದಾಗ ಅವರು ಹಳೆಯ ಘಟನೆ ನೆನಪಿಸಿಕೊಂಡಿದ್ದಾರೆ. ಎಂಪಿ ಜಾನ್ ಬ್ರಿಟಾಸ್ ಒಮ್ಮೆ ಸಂದರ್ಶನದಲ್ಲಿ ನನಗೆ ಒಂದು ಪ್ರಶ್ನೆ ಕೇಳಿದ್ದರು ಎಂದು ಅದನ್ನು ಮೆಲುಕು ಹಾಕಿದ್ದಾರೆ. ಇದು 10-15 ವರ್ಷಗಳ ಹಿಂದೆ ನಡೆದ ಘಟನೆ. ಜಾನ್ ಬ್ರಿಟಾಸ್ ನನಗೆ ಒಳ್ಳೆ ಸ್ನೇಹಿತರು. ಒಂದಷ್ಟು ಕಾಲೇಜು ವಿದ್ಯಾರ್ಥಿಗಳ ಮುಂದೆ ನಡೆದ ಸಂವಾದ ಕಾರ್ಯಕ್ರಮ ಅದು. ಅಂದು ಅವರು ನನಗೆ ಒಂದು ಪ್ರಶ್ನೆ ಕೇಳಿದ್ದರು.
ನೀವು ಒಳ್ಳೆಯ ಬ್ರಾಹ್ಮಣ ಕುಟುಂಬದಿಂದ ಬಂದವರು. ನೀವು ಹೇಗೆ 2 ಮದುವೆ ಮಾಡಿಕೊಂಡಿದ್ದೀರಾ ಹೇಗೆ? ಎಂದು ಜಾನ್ ನನ್ನನ್ನು ಪ್ರಶ್ನಿಸಿದ್ದರು. "ಆ ಪ್ರಶ್ನೆಗೆ ನಾನು ಉತ್ತರಿಸಿ, ಬ್ರಾಹ್ಮಣ ಕುಟುಂಬದಿಂದ ಬರುವುದಕ್ಕೂ 2 ಮದುವೆಗೂ ಏನ್ ಸಂಬಂಧ ಎಂದೆ ಹೇಳಿದ್ದೆ", ಅದಕ್ಕೆ ಅವರು, "ನೀವು ಪೂಜಿಸುವುದು ಏಕಪತ್ನಿವ್ರತಸ್ಥ ರಾಮನನ್ನು ಅಲ್ಲವೇ? ಅವರನ್ನು ಅನುಸರಿಸಬೇಕಲ್ಲವೇ?" ಎಂದು ಮರುಪ್ರಶ್ನೆ ಹಾಕಿದ್ದರು.
ಬಳಿಕ ನಾನು ಮಾತನಾಡಿ "ನಾನು ದೇವರನ್ನು ಪೂಜಿಸುವುದಿಲ್ಲ. ಒಂದು ವೇಳೆ ಆ ರೀತಿ ನೋಡಿದ್ರು, ನಾನು ರಾಮನನ್ನು ಅನುಸರಿಸುವುದಿಲ್ಲ, ಬದಲಿಗೆ ಅವರಪ್ಪ, ದಶರಥನನ್ನು ಅನುಸರಿಸುತ್ತೇನೆ" ಎಂದು ಹೇಳಿದ್ದಾಗಿ ಕಮಲ್ ಹಾಸನ್ ವಿವರಿಸಿದ್ದಾರೆ. ಅವರ ಮಾತು ಕೇಳಿ ಕೆಲವರು ಕೇಕೆ ಹಾಕಿ ಸಂಭ್ರಮಿಸಿದ್ದಾರೆ. ಆ ವೀಡಿಯೋ ಈಗ ಸಖತ್ ವೈರಲ್ ಆಗುತ್ತಿದೆ.
ಕಮಲ್ ಹಾಸನ್ ನಟನೆಯ 'ವಿಕ್ರಂ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಆದರೆ 'ಇಂಡಿಯನ್- 2' ಸಿನಿಮಾ ಹೀನಾಯವಾಗಿ ಸೋತು ಸುಣ್ಣವಾಗಿತ್ತು. 'ಇಂಡಿಯನ್- 3' ಸಿನಿಮಾ ಬಿಡುಗಡೆ ಮಾಡುವುದಕ್ಕೂ ಮೀನಾ ಮೇಷ ಎಣಿಸುವಂತಾಗಿದೆ. ಹಾಗಾಗಿ 'ಥಗ್ ಲೈಫ್' ಸಿನಿಮಾ ಮೂಲಕ ಮತ್ತೆ ಎದ್ದು ಲೆಕ್ಕಾಚಾರದಲ್ಲಿದ್ದಾರೆ. ಬಹಳ ವರ್ಷಗಳ ಬಳಿಕ ಕಮಲ್ ಹಾಗೂ ಮಣಿರತ್ನಂ ಒಟ್ಟಿಗೆ ಕೈ ಜೋಡಿಸಿರುವುದು ಸಹಜವಾಗಿಯೇ ನಿರೀಕ್ಷೆ ಹೆಚ್ಚಿಸಿದೆ. ಟೀಸರ್, ಸಾಂಗ್ಸ್ ಮೂಲಕ ಸಿನಿಮಾ ಸದ್ದು ಮಾಡ್ತಿದೆ. ಓಟಿಟಿಗೂ ಸಿನಿಮಾ ರೈಟ್ಸ್ ಭರ್ಜರಿ ಬೆಲೆಗೆ ಮಾರಾಟವಾಗಿದೆ.


Click it and Unblock the Notifications











