Kamal Haasan: ಕಮಲ್ ಹಾಸನ್ ಹುಟ್ಟುಹಬ್ಬ ಹಿನ್ನೆಲೆ ಮತ್ತೊಂದು ಸೂಪರ್ ಹಿಟ್ ಚಿತ್ರ ಗ್ರ್ಯಾಂಡ್ ರೀ-ರಿಲೀಸ್!
ಲೆಜೆಂಡರಿ ನಟ ಕಮಲ್ ಹಾಸನ್ ಅವರು 69 ನೇ ಹುಟ್ಟುಹಬ್ಬದ ಹಿನ್ನೆಲೆ ಮಣಿರತ್ನಂ ಅವರ 'ನಾಯಕನ್' ಮರು ಬಿಡುಗಡೆಯಾಗಲಿದೆ. 1987 ರಲ್ಲಿ ಬಿಡುಗಡೆಯಾದ ನಾಯಕನ್ ಸಾರ್ವಕಾಲಿಕ ಶ್ರೇಷ್ಠ ಚಿತ್ರಗಳಲ್ಲಿ ಒಂದು. ಇದು ನಟನ ಹುಟ್ಟುಹಬ್ಬದ ಹಿನ್ನೆಲೆ ಮತ್ತೆ ಬಿಡುಗಡೆಗೆ ಸಜ್ಜಾಗಿದೆ.
ನಾಯಕನ್ ಸಿನಿಮಾವು ಹಾಲಿವುಡ್ ಕ್ಲಾಸಿಕ್ 'ದಿ ಗಾಡ್‌ಫಾದರ್' ನಿಂದ ಪ್ರೇರಿತವಾಗಿದ್ದು, ಬಾಂಬೆ ಮೂಲದ ಭೂಗತ ಜಗತ್ತಿನ ಡಾನ್ ವರದರಾಜನ್ ಮುದಲೀರ್ ಅವರ ಜೀವನವನ್ನು ಆಧರಿಸಿದೆ. ಇದೀಗ, 'ನಾಯಕನ್' ಬಿಡುಗಡೆಯಾಗಿ 36 ವರ್ಷಗಳ ನಂತರ 4ಕೆ ರೂಪದಲ್ಲಿ ಮರು ಬಿಡುಗಡೆಗೆ ಸಿದ್ಧವಾಗಿದೆ ಎಂದು ಘೋಷಿಸಲಾಗಿದೆ.

ಕಮಲ್ ಹಾಸನ್ ಅವರ 'ನಾಯಕನ್' ಮರು ಬಿಡುಗಡೆ
ನಟ ಕಮಲ್ ಹಾಸನ್ ಈ ವರ್ಷದ ನವೆಂಬರ್ 7 ರಂದು 69 ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಈ ಹಿನ್ನೆಲೆ ನಿರ್ದೇಶಕ ಮಣಿರತ್ನಂ ಅವರ ಕ್ಲಾಸಿಕ್ ಚಿತ್ರ 'ನಾಯಕನ್' ನವೆಂಬರ್ 3 ರಂದು ಕಮಲ್ ಹಾಸನ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ 4ಕೆ ಸ್ವರೂಪದಲ್ಲಿ ಗ್ರ್ಯಾಂಡ್ ರೀ-ರಿಲೀಸ್ ಆಗಲಿದೆ.
'ನಾಯಕನ್' ಸಿನಿಮಾ ವಿತರಕರು ಇತ್ತೀಚೆಗೆ ಚಿತ್ರದ ಪೋಸ್ಟರ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದ್ದಾರೆ. ಸಿನಿಮಾವನ್ನು ತಮಿಳುನಾಡು, ಕರ್ನಾಟಕ ಮತ್ತು ಕೇರಳದಾದ್ಯಂತ ಎಲ್ಲಾ ಪ್ರಮುಖ ನಗರಗಳಲ್ಲಿ ಬಿಡುಗಡೆ ಮಾಡುವುದಾಗಿ ಮಾಹಿತಿ ನೀಡಿದ್ದಾರೆ.
ಸೂಪರ್ ಹಿಟ್ ನಾಯಕನ್ ಮರು ಬಿಡುಗಡೆ ಸುದ್ದಿ ತಮಿಳು ಸಿನಿಪ್ರೇಮಿಗಳು ಮತ್ತು ಕಮಲ್ ಹಾಸನ್ ಅವರ ಅಭಿಮಾನಿಗಳಿಗೆ ಹುಟ್ಟುಹಬ್ಬಕ್ಕೆ ಸಿಗುತ್ತಿರುವ ರಸದೌತಣ ಎಂದರೆ ತಪ್ಪಿಲ್ಲ. ಈ ವರ್ಷ ಬಿಡುಗಡೆಯಾಗಿ ತಮಿಳು ಸಿನಿಮಾರಂಗದಲ್ಲಿ ಭರ್ಜರಿ ಹಿಟ್ ಆಗಿರುವ ವಿಕ್ರಮ್ ಬಳಿಕ ಕಮಲ್ ಹಾಸನ್ ಅವರ ಸಾಲು ಸಾಲು ಹಳೆಯ ಸಿನಿಮಾಗಳು ರಿ ರೀಲಿಸ್‌ಗೆ ತಯಾರಾಗುತ್ತಿವೆ.
ಕ್ಲಾಸಿಕ್ ಫಿಲಂ 'ನಾಯಕನ್'
1987 ರ ಕ್ರೈಮ್ ಥ್ರಿಲರ್ 'ನಾಯಕನ್' ನಲ್ಲಿ ಕಮಲ್ ಹಾಸನ್ ಜೊತೆಗೆ ಜನಗರಾಜ್ ಶರಣ್ಯ ಪೊನ್ವಣ್ಣನ್, ಗಣೇಶ್, ನಾಸರ್, ಕಾರ್ತಿಕ ಮತ್ತು ನಿಜಲ್ಗಲ್ ರವಿ ಸೇರಿದಂತೆ ಇತರರು ಸಾಥ್ ನೀಡಿದ್ದರು. ಇದು ಮಣಿರತ್ನಂ ಮತ್ತು ಕಮಲ್ ಹಾಸನ್ ಅವರ ಮೊದಲ ಸಿನಿಮಾವಾಗಿತ್ತು. ಇನ್ನು ಈ ಜೋಡಿ ಮುಂಬರುವ ಚಿತ್ರ 'KH234' ರಲ್ಲಿ ಒಂದಾಗಲಿದ್ದಾರೆ. ಹೊಸ ಸಿನಿಮಾ ಶೀರ್ಷಿಕೆ ಇನ್ನೂ ಘೋಷಣೆಯಾಗಿಲ್ಲ.
ಸೂಪರ್ ಹಿಟ್ ಚಿತ್ರ 'ನಾಯಕನ್' ಮೂರು ರಾಷ್ಟ್ರೀಯ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದೆ. ಕಮಲ್ ಹಾಸನ್ ಅತ್ಯುತ್ತಮ ನಟ, ಪಿಸಿ ಶ್ರೀರಾಮ್ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿ ಪಡೆದರು. ಇದು 1988 ರ ಅತ್ಯುತ್ತಮ ವಿದೇಶಿ ಭಾಷೆಯ ಚಲನಚಿತ್ರಕ್ಕಾಗಿ ಆಸ್ಕರ್ ಪ್ರಶಸ್ತಿಗಳಿಗಾಗಿ ನಾಮೀನೇಟ್ ಆಗಿತ್ತು.

ಕ್ಲಾಸಿಕ್ ಚಿತ್ರಗಳನ್ನು ರೀ ರಿಲೀಸ್ ಮಾಡುವುದು ಪ್ರಸ್ತುತ ತಮಿಳು ಚಿತ್ರರಂಗದಲ್ಲಿ ಟ್ರೆಂಡ್ ಆಗಿದೆ. ಈ ಹಿಂದೆ, ಕಮಲ್ ಹಾಸನ್ ಅವರ ಅನ್ಬೆ ಶಿವಂ (2003) ಮತ್ತು ರಜನಿಕಾಂತ್ ಅವರ ಬಾಬಾ (2002) ಬಿಡುಗಡೆಯಾಗಿದ್ದವು. ನಾಯಕನ್ ಹೊರತುಪಡಿಸಿ, ಕಮಲ್ ಹಾಸನ್ ಅವರ ಮೂಕಿ ಚಿತ್ರ ಪುಷ್ಪಕ ವಿಮಾನ (1987) ಸಹ ಮರು ಬಿಡುಗಡೆಯಾಗುತ್ತಿದೆ ಎಂದು ಕಮಲ್ ಹಾಸನ್ ಅವರ ಹೋಮ್ ಬ್ಯಾನರ್ ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ತಿಳಿಸಿದೆ.


Click it and Unblock the Notifications











