ಕಿಕ್ಕಿರಿದ ಅಭಿಮಾನಿಗಳ ನಡುವೆ ಚೆನ್ನೈ ಏರ್‌ಪೋರ್ಟ್‌ನಲ್ಲಿ ಮುಗ್ಗಿರಿಸಿದ ದಳಪತಿ ವಿಜಯ್; ಏನಾಯ್ತು?
ದಳಪತಿ ವಿಜಯ್ ತಮ್ಮ ಕೊನೆಯ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೊಂದು ಕಡೆ ರಾಜಕೀಯಕ್ಕೂ ಎಂಟ್ರಿ ಕೊಟ್ಟಿರುವುದರಿಂದ ಆ ಕಡೆಗೂ ಗಮನ ಹರಿಸುತ್ತಿದ್ದಾರೆ. ಇಷ್ಟು ದಿನ ನಟನಾಗಿದ್ದ ವಿಜಯ್, ಈಗ ರಾಜಕಾರಣಿಯಾಗಿಯೂ ಗುರುತಿಸಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ವಿಜಯ್ ವೃತ್ತಿ ಬದುಕಿಗೆ 'ಜನ ನಾಯಗನ್' ತುಂಬಾನೇ ಇಂಪಾರ್ಟೆಂಟ್.
ಈ ಕಾರಣಕ್ಕೆ 'ಜನ ನಾಯಗನ್' ಸಿನಿಮಾದ ಆಡಿಯೋ ಲಾಂಚ್ ಅನ್ನು ಮಲೇಷ್ಯಾದಲ್ಲಿ ಅದ್ಧೂರಿಯಾಗಿ ನೆರವೇರಿಸಿದ್ದರು. ಅಲ್ಲಿ ಅಭಿಮಾನಿಗಳ ಜೊತೆ ಬೆರೆತಿದ್ದರು. ತಮಿಳು ನಾಡು ಹಿಂದೆಂದೂ ಕಾಣದಿದ್ದ ಇವೆಂಟ್ ಮುಗಿಸಿ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದು ಇಳಿದಿದ್ದರು. ಈ ವೇಳೆ ವಿಜಯ್ ಅವರನ್ನು ನೋಡುವುದಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು.

'ತಮಿಳು ವೆಟ್ರಿ ಕಳಗಂ' (TVK) ಮುಖ್ಯಸ್ಥನಾಗಿರುವ ದಳಪತಿ ವಿಜಯ್ ಚೆನ್ನೈ ಏರ್‌ಪೋರ್ಟ್‌ಗೆ ಇಳಿಯುತ್ತಿದ್ದಂತೆ ನೂಕುನುಗ್ಗಲು ಉಂಟಾಗಿತ್ತು. ಈ ವೇಳೆ ವಿಜಯ್ ಏರ್‌ಪೋರ್ಟ್‌ನಲ್ಲಿ ಮುಗ್ಗರಿಸಿ ಬಿದ್ದಿದ್ದರು. ತಕ್ಷಣವೇ ಅವರನ್ನು ಭದ್ರತಾ ಸಿಬ್ಬಂದಿಗಳು ರಕ್ಷಿಸಿ ವಾಹನದವರೆಗೂ ಕರೆದುಕೊಂಡು ಹೋದರು.
ಮಲೇಷ್ಯಾದಿಂದ ಪ್ರಯಾಣಿಸಿ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದ ನಂತರ, ನಟ-ರಾಜಕಾರಣಿ ವಿಜಯ್ ಅವರು ಡಿಸೆಂಬರ್ 28ರ ರಾತ್ರಿ ತಮ್ಮ ಕಾರು ಹತ್ತಲು ಯತ್ನಿಸುವಾಗ ಜಾರಿ ಬಿದ್ದು ಸಣ್ಣದಾಗಿ ಬೀಳುವ ಘಟನೆ ನಡೆಯಿತು. ಈ ಅನಿರೀಕ್ಷಿತ ಘಟನೆಯು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಅದೃಷ್ಟವಶಾತ್, ಈ ಅವಘಡದಿಂದ ವಿಜಯ್‌ಗೆ ಯಾವುದೇ ಗಾಯವಾಗಿಲ್ಲ ಎಂದು ವರದಿಯಾಗಿದೆ.
ವಿಜಯ್ 'ಜನ ನಾಯಗನ್' ಈವೆಂಟ್ ಮುಗಿಸಿಕೊಂಡು ಚೆನ್ನೈ ಏರ್‌ಪೋರ್ಟ್‌ಗೆ ಬಂದಿಳಿದು ಹೊರ ಬಂದರು. ಈ ವೇಳೆ ಬೆಂಗಾವಲು ವಾಹನದ ಬಳಿ ಧಾವಿಸಿದಾಗ ಸ್ವಲ್ಪ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದರಿಂದ ನೂಕುನುಗ್ಗಲು ಏರ್ಪಟ್ಟಿತ್ತು. 'ಜನಾ ನಾಯಗನ್' ಆಡಿಯೋ ಬಿಡುಗಡೆ ಸಂಭ್ರಮದ ಬಳಿಕ ವಿಜಯ್ ಡಿಸೆಂಬರ್ 28ರ ರಾತ್ರಿ ಕೌಲಾಲಂಪುರದಿಂದ ಚೆನ್ನೈಗೆ ವಾಪಾಸಾಗಿದ್ದರು. ಟರ್ಮಿನಲ್‌ನಿಂದ ಹೊರಬಂದು ಕಾಯುತ್ತಿದ್ದ ಕಾರಿನ ಕಡೆಗೆ ಹೆಜ್ಜೆ ಹಾಕುತ್ತಿದ್ದಂತೆ, ಅಭಿಮಾನಿಗಳು ಅವರನ್ನು ನೋಡಲು ನೂಕುನುಗ್ಗಲು ಶುರು ಮಾಡಿದರು. ಈ ಸಂದರ್ಭದಲ್ಲಿ ವಾಹನದ ಹತ್ತಿರವಿದ್ದ ಭದ್ರತಾ ಸಿಬ್ಬಂದಿ ಮೇಲೆ ಒತ್ತಡ ಹೆಚ್ಚಾಗಿತ್ತು. ಈ ವೇಳೆ ವಿಜಯ್ ಕಾರು ಪ್ರವೇಶ ಮಾಡುವ ಮುನ್ನ ಸಮತೋಲನ ಕಳೆದುಕೊಂಡು ಮುಗ್ಗರಿಸಿದ್ದರು. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಪೂಜಾ ಹೆಗ್ಡೆ, ಪ್ರಿಯಾಮಣಿ, ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್, ಗೀತರಚನೆಕಾರ ವಿವೇಕ್, ನೃತ್ಯ ಸಂಯೋಜಕರಾದ ಶೋಬಿ ಮಾಸ್ಟರ್ ಮತ್ತು ಶೇಖರ್ ಮಾಸ್ಟರ್ ಸೇರಿದಂತೆ ಅನೇಕ ತಾರೆಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 'ಜನಾ ನಾಯಕನ್' ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ವಿಜಯ್ ತನ್ನ 33 ವರ್ಷಗಳ ಸಿನಿ ಜರ್ನಿಯಿಂದ ನಿವೃತ್ತರಾಗುವ ತಮ್ಮ ನಿರ್ಧಾರವನ್ನು ಫ್ಯಾನ್ಸ್‌ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಈ ವೇಳೆ ವಿಜಯ್ ತಾನೇಕೆ ರಾಜಕೀಯಕ್ಕೆ ಪ್ರವೇಶ ಮಾಡಿದೆ ಅನ್ನೋದನ್ನು ರಿವೀಲ್ ಮಾಡಿದ್ದಾರೆ. "ನಾನು ಮೊದಲ ದಿನದಿಂದಲೂ ಟೀಕೆಗಳನ್ನು ಎದುರಿಸುತ್ತಾ ಬಂದಿದ್ದೇನೆ. ಆದರೆ ನನ್ನ ಅಭಿಮಾನಿಗಳು ಮೊದಲ ದಿನದಿಂದಲೂ ನನ್ನೊಂದಿಗೆ ನಿಂತಿದ್ದಾರೆ. 33 ವರ್ಷಗಳಿಂದ ನಿರಂತರ ಬೆಂಬಲ ಕೊಟ್ಟಿದ್ದಾರೆ. ಚಿಕ್ಕದೊಂದು ಮರಳಿನ ಮನೆ ಕಟ್ಟುವ ಆಸೆಯಿಂದ ಚಿತ್ರರಂಗಕ್ಕೆ ಕಾಲಿಟ್ಟಿದ್ದೆ, ಆದರೆ ನೀವು ನನಗೆ ಅರಮನೆ ಕೊಟ್ಟಿದ್ದೀರಿ. ಹೀಗಾಗಿ ಅಭಿಮಾನಿಗಳಿಗಾಗಿ ನಾನು ನಿಲ್ಲುತ್ತೇನೆ." ಎಂದು ದಳಪತಿ ವಿಜಯ್ ಹೇಳಿದ್ದಾರೆ.


Click it and Unblock the Notifications











