ಮತ್ತೆ ಗೆದ್ದು ಬೀಗಿದ ಕೇಜ್ರಿವಾಲ್ ಗೆ ಅಭಿನಂದನೆ ಸಲ್ಲಿಸಿದ ನಟ ಕಮಲ್ ಹಾಸನ್
ದೇಶದಲ್ಲಿ ಭಾರಿ ಕುತೂಹಲ ಮೂಡಿಸಿದ್ದ ದೆಹಲಿ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಭರ್ಜರಿ ಗೆಲುವು ದಾಖಲಿಸಿದೆ. ದೆಹಲಿ ವಿಧಾನಸಭೆ ಚುನಾವಣೆ 2020ರಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಪ್ರಾದೇಶಿಕ ಪಕ್ಷ ಎಎಪಿ ಎದುರು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಮಂಕಾಗಿವೆ.
ಸತತ ಮೂರನೆ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಕೇಜ್ರಿವಾಲ್ ಸಜ್ಜಾಗಿದ್ದಾರೆ. ಅಭೂತಪೂರ್ವ ಗೆಲುವು ದಾಖಲಿಸಿರುವ ಎಎಪಿಗೆ ಅಭಿನಂದನೆಗಳ ಮಹಾಪೂರವೆ ಹರಿದುಬರುತ್ತಿವೆ. ಸಿನಿರಂಗದ ಗಣ್ಯರು ಸಹ ಕೇಜ್ರಿವಾಲ್ ಗೆ ಶುಭಾಶಯ ತಿಳಿಸುತ್ತಿದ್ದಾರೆ.
ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟ ಮತ್ತು ರಾಜಕಾರಣಿ ಕಮಲ್ ಹಾಸನ್, ಕೇಜ್ರಿವಾಲ್ ಗೆ ಫೋನ್ ಮಾಡಿ ಅಭಿನಂದನೆ ತಿಳಿಸಿದ್ದಾರೆ. ಈ ಬಗ್ಗೆ ಸಿನಿ ವಿಶ್ಲೇಷಕ ರಮೇಶ್ ಬಾಲ ಟ್ವಿಟ್ಟರ್ ನಲ್ಲಿ ಬಹಿರಂಗ ಪಡಿಸಿದ್ದು, ಕಮಲ್ ಹಾಸನ್ ಕರೆ ಮಾಡಿ ಅಭಿನಂದನೆ ಸಲ್ಲಿಸಿರುವ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಕಮಲ್ ಹಾಸನ್ ಮತ್ತು ಕೇಜ್ರಿವಾಲ್ ನಡುವೆ ಉತ್ತಮವಾದ ಬಾಂಧವ್ಯವಿದೆ. ಸಕಲಕಲಾವಲ್ಲಭ ರಾಜಕೀಯಕ್ಕೆ ಎಂಟ್ರಿ ಕೊಡುವ ಮೊದಲು ಕೇಜ್ರಿವಾಲ್ ಜೊತೆ ಮಾತುಕತೆ ನಡೆಸಿದ್ದರು. ಸ್ವತಃ ಕೇಜ್ರಿವಾಲ್, ಕಮಲ್ ಹಾಸನ್ ಮನೆಗೆ ಭೇಟಿ ನೀಡಿದ್ದರು. ಆ ನಂತರ ಕಮಲ್ ಮಕ್ಕಳ್ ನೀಧಿ ಮಯಮ್ ಪಕ್ಷ ಸ್ಥಾಪಿಸುವ ಮೂಲಕ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದಾರೆ. ಇಬ್ಬರ ನಡುವಿನ ಸ್ನೇಹ ಸಂಬಂಧ ಈಗಲು ಹಾಗೆ ಮುಂದುವರೆದಿದೆ.
ಇನ್ನು ನಟಿ ಸ್ವರಾ ಭಾಸ್ಕರ್ ಕೂಡ ಕೇಜ್ರಿವಾಲ್ ಗೆ ಅಭಿನಂದನೆ ತಿಳಿಸಿದ್ದಾರೆ. "ದಿಲ್ಲಿ ನನ್ನ ಪ್ರಾಣ. ಮತ್ತೆ ನಿನ್ನ ಮೇಲೆ ಪ್ರೀತಿ ಹುಟ್ಟಿದೆ" ಎಂದು ಬರೆದುಕೊಂಡಿದ್ದಾರೆ. ಸಾಕಷ್ಟು ಮಂದಿ ಶುಭಕೋರಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











