'PS- 2' ಟ್ರೈಲರ್ & ಆಡಿಯೋ ಲಾಂಚ್ ಈವೆಂಟ್‌ಗೆ ಕ್ಷಣಗಣನೆ: ಮುಖ್ಯ ಅತಿಥಿ, ಸ್ಥಳ ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್
ತಮಿಳಿನ ಬಹುನಿರೀಕ್ಷಿತ ಐತಿಹಾಸಿಕ ದೃಶ್ಯಕಾವ್ಯ 'ಪೊನ್ನಿಯಿನ್ ಸೆಲ್ವನ್'- 2 ಮುಂದಿನ ತಿಂಗಳು ತೆರೆಗಪ್ಪಳಿಸಲಿದೆ. ಇಂದು(ಮಾರ್ಚ್ 29) ಸಂಜೆ ಚೆನ್ನೈನಲ್ಲಿ ಚಿತ್ರದ ಟ್ರೈಲರ್ ಹಾಗೂ ಆಡಿಯೋ ಲಾಂಚ್ ಈವೆಂಟ್ ನಡೆಯಲಿದೆ. ಈ ಅದ್ಧೂರಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಉಳಗ ನಾಯಗನ್ ಕಮಲ್ ಹಾಸನ್ ಆಗಮಿಸಲಿದ್ದಾರೆ. ಮಣಿರತ್ನಂ ಕನಸಿನ ಚಿತ್ರದ 2ನೇ ಭಾಗ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ.
ಕಳೆದ ವರ್ಷ ಚಿತ್ರದ ಮೊದಲ ಭಾಗ ತೆರೆಕಂಡು ಬಾಕ್ಸಾಫೀಸ್ ಶೇಕ್ ಮಾಡಿತ್ತು. ಬಹುಕೋಟಿ ವೆಚ್ಚದ ಈ ಚಿತ್ರದಲ್ಲಿ ಚಿಯಾನ್ ವಿಕ್ರಂ, ಐಶ್ವರ್ಯ ರೈ, ಕಾರ್ತಿ, ಜಯಂ ರವಿ, ತ್ರಿಷಾ, ಪ್ರಕಾಶ್ ರೈ, ಶರತ್‌ಕುಮಾರ್‌ರಂತಹ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಕಲ್ಕಿ ಕೃಷ್ಣಮೂರ್ತಿ ಬರೆದ 'ಪೊನ್ನಿಯಿನ್ ಸೆಲ್ವನ್' ಕಾದಂಬರಿ ಆಧರಿಸಿ ಮಣಿರತ್ನಂ 2 ಭಾಗಗಳಾಗಿ ಚಿತ್ರವನ್ನು ತೆರೆಗೆ ತರ್ತಿದ್ದಾರೆ. ಸೆಪ್ಟೆಂಬರ್ 30ಕ್ಕೆ ತೆರೆಕಂಡಿದ್ದ ಸಿನಿಮಾ 500 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು.

ತಮಿಳು ಚಿತ್ರರಂಗದಲ್ಲಿ ನಿರ್ಮಾಣವಾಗಿರುವ ಬಹುಕೋಟಿ ವೆಚ್ಚದ ಸಿನಿಮಾಗಳಲ್ಲಿ 'ಪೊನ್ನಿಯಿನ್ ಸೆಲ್ವನ್' ಕೂಡ ಇದೆ. ಲೈಕಾ ಪ್ರೊಡಕ್ಷನ್ಸ್ ಜೊತೆ ಸೇರಿ ಸ್ವತಃ ಮಣಿರತ್ನಂ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಚೋಳ ಹಾಗೂ ಪಾಂಡ್ಯ ರಾಜರುಗಳ ನಡುವಿನ ಯುದ್ಧ, ತಂತ್ರ ಕುತಂತ್ರಗಳನ್ನು ಕೇಂದ್ರವಾಗಿಟ್ಟುಕೊಂಡು ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಚೆನ್ನೈನ ನೆಹರೂ ಇಂಡೋರ್ ಸ್ಟೇಡಿಯಂನಲ್ಲಿ ಸಂಜೆ 6 ಗಂಟೆಗೆ ಚಿತ್ರದ ಟ್ರೈಲರ್ ಹಾಗೂ ಸಾಂಗ್ಸ್ ಅನಾವರಣವಾಗಲಿದೆ. ತಮಿಳು ಚಿತ್ರರಂಗದ ತಾರೆಯರು ಕಾರ್ಯಕ್ರಮಕ್ಕೆ ಸಾಕ್ಷಿ ಆಗಲಿದ್ದಾರೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಈ ಸರಣಿ ಸಿನಿಮಾಗಳನ್ನು ತೆರೆಗೆ ತರಲಾಗ್ತಿದೆ. ಮೊದಲ ಭಾಗ ತಮಿಳುನಾಡಿನಲ್ಲಿ ಸೂಪರ್ ಹಿಟ್ ಆಗಿತ್ತು. ಆದರೆ ಬೇರೆ ಭಾಷೆಗಳಲ್ಲಿ ಅಷ್ಟಾಗಿ ಸದ್ದು ಮಾಡಲಿಲ್ಲ. ಆದರೆ ಸೀಕ್ವೆಲ್‌ನ ದೊಡ್ಡಮಟ್ಟದಲ್ಲಿ ಪ್ರಚಾರ ಮಾಡಿ ರಿಲೀಸ್ ಮಾಡುವ ಪ್ಲ್ಯಾನ್ ಇದೆ. ಟ್ರೈಲರ್ ಲಾಂಚ್ ಮಾಡಿ ಅಧಿಕೃತವಾಗಿ ಚಿತ್ರಕ್ಕೆ ಚಾಲನೆ ಕೊಡಲಾಗುತ್ತಿದೆ. ಮೊಲದ ಭಾಗದ ಸಿನಿಮಾ ಆಡಿಯೋ ಲಾಂಚ್‌ಗೆ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಕಮಲ್ ಹಾಸನ್ ಇಬ್ಬರೂ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಇದೀಗ ಮತ್ತೆ ಕಮಲ್ ತಂಡಕ್ಕೆ ಸಾಥ್ ಕೊಡ್ತಿದ್ದಾರೆ.

ಮಣಿರತ್ನಂ ಏಕಕಾಲಕ್ಕೆ 2 ಭಾಗಗಳ ಸಿನಿಮಾ ಚಿತ್ರೀಕರಣ ಮಾಡಿ ಮುಗಿಸಿದ್ದರು. ಮೊದಲ ಭಾಗ ರಿಲೀಸ್ ಆದ ನಂತರ ಉಳಿದ ಕೆಲ ಸನ್ನಿವೇಶಗಳನ್ನು ಸೆರೆಹಿಡಿದು ಪೋಸ್ಟ್ ಪ್ರೊಡಕ್ಷನ್ ಆರಂಭಿಸಿದ್ದರು. ಸಾಮಾನ್ಯವಾಗಿ ಸೀಕ್ವೆಲ್ ಸಿನಿಮಾಗಳು ತಡವಾಗಿ ತೆರೆಗೆ ಬರುತ್ತವೆ. ಆದರೆ 6 ತಿಂಗಳ ಅಂತರದಲ್ಲಿ 'ಪೊನ್ನಿಯಿನ್ ಸೆಲ್ವನ್' ಸಿನಿಮಾ 2 ಭಾಗಗಳಾಗಿ ಪ್ರೇಕ್ಷಕರ ಮುಂದೆ ಬರ್ತಿರೋದು ವಿಶೇಷ. ಮೊದಲ ಭಾಗದಲ್ಲಿ ಅರುಲ್‌ಮೊಳಿ ವರ್ಮನ್ ಆಗಿ ಜಯಂ ರವಿ ಕೆಲ ಹೊತ್ತು ಕಾಣಿಸಿಕೊಂಡಿದ್ದರು.
ಸೀಕ್ವೆಲ್‌ನಲ್ಲಿ ಜಯಂ ರವಿ ನಿಜವಾದ ಹೀರೋ ಆಗಿ ಅಬ್ಬರಿಸಲಿದ್ದಾರೆ. ಯಾಕಂದರೆ ಇದು ಅರುಲ್‌ಮೊಳಿ ವರ್ಮನ್ ಅಂದರೆ ಪೊನ್ನಿಯಿನ್ ಸೆಲ್ವನ್ ಕಥೆ. ಇನ್ನು ಕಾರ್ತಿ(ವಲ್ಲವರಾಯನ್)- ತ್ರಿಷಾ(ಕುಂದವೈ) ಎಪಿಸೋಡ್ ಕೂಡ ಇರಲಿದೆ. ಸದ್ಯ ಚಿತ್ರದ ಟ್ರೈಲರ್ ಹಾಗೂ ಆಡಿಯೋ ಲಾಂಚ್ ಈವೆಂಟ್‌ಗೆ ಭರದ ಸಿದ್ಧತೆ ನಡೀತಿದೆ. ಈವೆಂಟ್ ನಂತರ ತಂಡ ಸುದ್ದಿಗೋಷ್ಠಿ ನಡೆಸಲಿದ್ದು ಸಿನಿಮಾ ಬಗ್ಗೆ ಮಾಧ್ಯಮಗಳ ಜೊತೆ ಮಾಹಿತಿ ಹಂಚಿಕೊಳ್ಳಲಿದ್ದಾರೆ. ಏಪ್ರಿನ್ 28ಕ್ಕೆ ಸಿನಿಮಾ ರಿಲೀಸ್ ಆಗಲಿದೆ.


Click it and Unblock the Notifications











